ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮಾಡಿದ ಮೊದಲ ಚಿತ್ರ ರಷ್ಯಾದಲ್ಲಿ ಬಿಡುಗಡೆ

ಮಾಸ್ಕೊ: ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರವು ಗುರುವಾರ ರಷ್ಯಾದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು. ಪಾಶ್ಚಿಮಾತ್ಯರೊಂದಿಗಿನ ತಿಕ್ಕಾಟದ ನಡುವೆ ಪ್ರತಿಸ್ಪರ್ಧಿ ಹಾಲಿವುಡ್ ಯೋಜನೆಗೂ ಮುನ್ನವೇ ಚಿತ್ರ ತೆರೆಗೆ ತರುವಲ್ಲಿ ರಷ್ಯಾ ಯಶಸ್ವಿಯಾಗಿದೆ.

ಗಾಯಗೊಂಡ ಗಗನಯಾತ್ರಿಯನ್ನು ರಕ್ಷಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ವೈದ್ಯರನ್ನು ಕಳುಹಿಸುವ ಕಥಾಹಂದರವನ್ನು ಚಿತ್ರ ‘ದಿ ಚಾಲೆಂಜ್’ ಒಳಗೊಂಡಿದೆ.

ಐಎಸ್‌ಎಸ್‌ನ ಕಕ್ಷೆಯ ಪ್ರಯೋಗಾಲಯದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಅಕ್ಟೋಬರ್ 2021ರಲ್ಲಿ 12 ದಿನಗಳ ಅವಧಿಗೆ ನಟಿ ಮತ್ತು ಚಲನಚಿತ್ರ ನಿರ್ದೇಶಕರನ್ನು ರಷ್ಯಾ ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

ಇದನ್ನೂ ಓದಿ : 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊದ LVM3

2020ರಲ್ಲಿ ಮಿಷನ್ ಇಂಪಾಸಿಬಲ್ ಸ್ಟಾರ್ ಟಾಮ್ ಕ್ರೂಸ್ ಅವರು ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ನೊಂದಿಗೆ ಘೋಷಿಸಿದ ಹಾಲಿವುಡ್ ಸಿನಿಮಾಗೂ ಮುನ್ನವೇ ರಷ್ಯಾ ಸಿನಿಮಾ ತೆರೆಗೆ ಬರುವ ಮೂಲಕ ಹೊಸ ದಾಖಲೆ ಬರೆದಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚಲನಚಿತ್ರವನ್ನು ಶ್ಲಾಘಿಸಿದ್ದಾರೆ: ‘ನಾವು ಬಾಹ್ಯಾಕಾಶದ ಕಕ್ಷೆಯಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಿದ ಮೊದಲಿಗರು. ಮತ್ತೊಮ್ಮೆ ನಾವು ಮೊದಲಿಗರು’ ಎಂದು ಹೇಳಿದ್ದಾರೆ.

ದಿ ಚಾಲೆಂಜ್‌ನಲ್ಲಿ ರಷ್ಯಾದ ಅತ್ಯಂತ ಮನಮೋಹಕ ನಟಿಯರಲ್ಲಿ ಒಬ್ಬರಾದ 38 ವರ್ಷದ ಯುಲಿಯಾ ಪೆರೆಸಿಲ್ಡ್ ವೈದ್ಯೆ ಪಾತ್ರ ನಿರ್ವಹಿಸಿದ್ದಾರೆ. ಕ್ಯಾಮೆರಾ, ಲೈಟಿಂಗ್ ಮತ್ತು ಸೌಂಡ್ ಉಸ್ತುವಾರಿ ವಹಿಸಿದ್ದ ನಿರ್ದೇಶಕ ಕ್ಲಿಮ್ ಶಿಪೆಂಕೊ, 30 ಗಂಟೆಗಳ ಚಿತ್ರೀಕರಣದ ಫೊಟೇಜ್ ತಂದಿದ್ದರು. ಅದರಲ್ಲಿ 50 ನಿಮಿಷಗಳ ದೃಶ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಪೆರೆಸಿಲ್ಡ್ ಮತ್ತು ಶಿಪೆಂಕೊ ಅವರು ಗಗನಯಾತ್ರಿಯೊಂದಿಗೆ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗುವ ಮೊದಲು ನಾಲ್ಕು ತಿಂಗಳ ಕಾಲ ತರಬೇತಿ ಪಡೆದಿದ್ದರು.

Donate Janashakthi Media

Leave a Reply

Your email address will not be published. Required fields are marked *