ಬೆಂಗಳೂರು : ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದೊಡ್ಡ ದುರಂತ ಸಂಭವಿಸಿದ್ದು, ಫೈಟ್ ಅಸಿಸ್ಟೆಂಟರ್ ವಿವೇಕ್(35) ಮೃತಪಟ್ಟಿದ್ದಾರೆ.
ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ ‘ಲವ್ ಯೂ ರಚ್ಚು’ ಕನ್ನಡ ಸಿನಿಮಾ ಶೂಟಿಂಗ್ ಸೋಮವಾರ ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್ ತಮಿಳುನಾಡು ಮೂಲದ ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಚಿತ್ರೀಕರಣ ವೇಳೆ ಮೆಟಲ್ ರೋಪ್ ಬಳಸಿದ್ದೇ ಅವಘಡಕ್ಕೆ ಕಾರಣ. ಹೈ ಟೆನ್ಶನ್ ತಂತಿಗೆ ತಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡ ಸಂಭವಿಸುತ್ತದ್ದಂತೆ ಚಿತ್ರೀಕರಣ ನಿಲ್ಲಿಸಲಾಗಿದೆ.
ಕನ್ನಡ ಸಿನಿಮಾಗಳಲ್ಲಿನ ಚಿತ್ರತಂಡ
ಹಳೆಯ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ನಡೆದ ಅವಘಡದಲ್ಲಿ ಇಂದು ಅಮೂಲ್ಯ ಜೀವವೊಂದು ಪ್ರಾಣ ಬಿಡುವಂತಾಗಿದೆ.
ಫೈಟ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಅಪಘಾತಗಳಾಗುತ್ತಿರುವುದು ಕನ್ನಡದಲ್ಲಿ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಕೆಲವು ಇಂಥಹುವೇ ಅಹಿತಕರ ಘಟನೆಗಳು ನಡೆದು ಅಮೂಲ್ಯ ಜೀವಗಳು ನಷ್ಟವಾಗಿವೆ. ಕನ್ನಡದ ಜನಪ್ರಿಯ ವಿಲನ್‌ಗಳಾಗಿದ್ದ ಉದಯ್, ಅನಿಲ್ ಸಾವು ಮರೆತುಬಿಡುವಷ್ಟು ಹಳೆಯದಲ್ಲ. ‘ಮಾಸ್ತಿಗುಡಿ’ ಸಿನಿಮಾ ದುರಂತ ಸಂಭವಿಸಿ ಐದು ವರ್ಷ ಇನ್ನೂ ಪೂರ್ಣಗೊಂಡಿಲ್ಲ.
ಘಟನೆ ನಡೆದಾಗ ಚರ್ಚೆಗಳ ಮೇಲೆ ಚರ್ಚೆಗಳು ನಡೆದು ಚಿತ್ರೀಕರಣಗಳು ಇನ್ನಷ್ಟು ಸುರಕ್ಷಿತಗೊಳ್ಳಬೇಕು, ಫೈಟ್ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುರಿಸಬೇಕು ಎಂದು ಭಾಷಣಗಳನ್ನು ಮಾಡಲಾಗುತ್ತದೆ. ನಂತರ ಅದೇ ಹಳೆ ಚಾಳಿಯೇ ಮುಂದುವರೆಯುತ್ತದೆ. ಇಂದು ನಡೆದಿರುವ ಘಟನೆಯೂ ಸಹ ಚಿತ್ರತಂಡದಿಂದ ನಿರ್ಲ್ಕಕ್ಷ್ಯದಿಂದಲೇ ಆಗಿದ್ದು ಎಂದು ಕೆಲವು ಸ್ಥಳೀಯರೇ ಹೇಳುತ್ತಿದ್ದಾರೆ.
ತಾಯಿಯ ಆಕ್ರಂದನ : ಮಗನ ಸಾವಿನ ಸುದ್ದಿ ಕೇಳಿ ವಿವೇಕ್ರ ತಾಯಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಆಕ್ರಂದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ‘ನಾನು ನಿನ್ನೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಮನೆಗೆ ಬಂದೆ. ಇಂದು ಬೆಳಗ್ಗೆ ನಾನಿನ್ನೂ ಮಲಗಿದ್ದೆ, ನನ್ನ ಮಗ ನನ್ನನ್ನು ನಿದ್ರೆಯಿಂದ ಎದ್ದೇಳಿಸೋದು ಬೇಡ ಅಂತ ಹೇಳದೆ ಶೂಟಿಂಗ್ಗೆ ಹೋಗಿದ್ದ. ಅವನು ಬದುಕಿದ್ದಾಗ ‘ಅಮ್ಮ ನಿನ್ನನ್ನು ಚೆನ್ನಾಗಿ ಸಾಕ್ತೀನಿ’ ಅಂತಿದ್ದ.
ಈಗ ಅವನೇ ಇಲ್ಲ! ನಾನು ಯಾರನ್ನ ಕೇಳಲಿ? ಬೆಳಗ್ಗೆ ಇದ್ದ ಮಗ, ಈಗ ಇಲ್ಲ… ಮಗನೇ ನಿನಗೆ ಶೂಟಿಂಗ್ ಸಹವಾಸ ಬೇಡಪ್ಪ… ಎಂದು ಸಾಕಷ್ಟು ಸಲ ಹೇಳಿದ್ದೆ. ರಾಗಿ ಗಂಜಿಯಾದ್ರೂ ಕುಡಿದು ಬದುಕೋಣ, ಆ ಫೀಲ್ಡ್ ಬೇಡ ಅಂದಿದ್ದೆ. ಆದ್ರೆ ಅವನು ಚಿತ್ರೋದ್ಯಮದಲ್ಲೇ ಹೆಸರು ಮಾಡಬೇಕು ಅಂತ ಆಸೆ ಪಟ್ಟಿದ್ದ. ನನ್ನ ಮಾತು ಕೇಳದೆ ನನ್ನನ್ನ ಅನಾಥ ಮಾಡಿ ಹೋಗಿಬಿಟ್ಟ…’ ಎಂದು ಮೃತನ ತಾಯಿ ಸೆಲ್ವಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇಡೀ ಕುಟುಂಬದ ಜವಾಬ್ದಾರಿಯನ್ನ ಮಗ ವಿವೇಕ್ ನೋಡ್ಕೋತಾ ಇದ್ದ. ಆತನ ದುಡಿಮೆಯಿಂದಲೇ ಸಂಸಾರ ನಡೀತಾ ಇತ್ತು. ಈಗ ನಮಗೆ ಅನ್ನ ಹಾಕೋರು ಯಾರು? ಎಂದು ತಾಯಿ ಸೆಲ್ವಿ ರೋಧಿಸುತ್ತಿದ್ದರು.
ನನ್ನ ಮಗ ಸತ್ತಿದ್ದಾನೆ ಎಂದು ವಿವೇಕ್ರ ಚಿಕ್ಕಪ್ಪ ನಮಗೆ ಫೋನ್ ಮಾಡಿ ಹೇಳಿದ್ರು. ಈ ಘಟನೆಗೆ ಸಿನಿಮಾ ತಂಡವೇ ಕಾರಣ. ಯಾವುದೇ ರಕ್ಷಣೆ ಇಲ್ಲದೆ ಹೇಗೆ ಸಿನಿಮಾ ಮಾಡಲು ಹೋದ್ರು? ಅಮಾಯಕರ ಜೀವದ ಜತೆ ಚೆಲ್ಲಾಟವಾಡ್ತಿದ್ದಾರೆ. ವಿವೇಕ್ ಅವರ ಚಿಕ್ಕಪ್ಪ ಶೂಟಿಂಗ್ನಲ್ಲಿ ಕೆಲಸ ಮಾಡ್ತಾರೆ. ಈ ಘಟನೆ ಆದಾಗ ಅವರು ಅಲ್ಲೇ ಇದ್ರು… ಎಂದು ಕಣ್ಣೀರಿಟ್ಟರು.