ಫಿಡೆಲ್ ನಿನ್ನ ಹೆಸರದು ಸಿಡಿಲ್ ಸದ್ದು ಸಾಮ್ರಾಜ್ಯಕ್ಕೆ …

 

ಇದು 2017 ರಲ್ಲಿ ಪ್ರಕಟವಾದ ‘ಕ್ಯಾಸ್ಟ್ರೋ ಕಥೆ’ ಪುಸ್ತಕಕ್ಕೆ ಡಾ,ಕೆ,ಪ್ರಕಾಶ್ ಅವರು ಬರೆದ ದೀಘ್ ಮುನ್ನುಡಿ. ‘ಕ್ಯಾಸ್ಟ್ರೋ ಕಥೆ’ ಪತ್ರಕರ್ತರೂ ಮತ್ತು ಜಾಗತಿಕ ಪರ್ಯಾಯಗಳ ಚಿಂತಕರೂ ಆದ ಇಗ್ನೇಷಿಯೊ ರಮೋನೆಟ್. ಇವರು ನಡೆಸಿದ “ಫಿಡೆಲ್ ಜೊತೆ ನೂರು ಗಂಟೆಗಳು” ಸಂದರ್ಶನದ ಪುಸ್ತಕ ಆವೃತ್ತಿಯ (“ಮೈ ಲೈಫ್: ಫಿಡೆಲ್ ಕ್ಯಾಸ್ಟ್ರೋ”) ಕನ್ನಡ ಸಂಗ್ರಹಾನುವಾದ. ಫಿಡೆಲ್, ಈ ಪುಸ್ತಕ ಎರಡನ್ನೂ ಪರಿಚಯಿಸುವ, ಅದರ ಮಹತ್ವ ಸಾರುವ ಈ ಬರಹ ಸಾರ್ವಕಾಲಿಕ ಪ್ರಸ್ತುತತೆ ಉಳ್ಳದ್ದು. ಫಿಡೆಲ್ ಕ್ಯಾಸ್ಟ್ರೋ ಅವರ ಶತಮಾನೋತ್ಸವದ ಸಂದರ್ಭದಲ್ಲಂತೂ ಜರೂರಿನ ಓದು. ಜತೆಗೆ ಈ ಪುಸ್ತಕದ ಓದು ಸಹ ಇಂದಿನ ಜರೂರಿನ ಓದು.
– ಡಾ.ಕೆ.ಪ್ರಕಾಶ್

“ಲೆನಿನ್ ನಿನ್ನ ಹೆಸರದು ಸಿಡಿಲ್ ಸದ್ದು ದೊರೆಗಿವಿಗೆ” ಎಂದು ಕುವೆಂಪು ಲೆನಿನ್ ಕುರಿತು ಬರೆದರು. ಈಗಾಗಿದ್ದರೆ “ಫಿಡೆಲ್ ನಿನ್ನ ಹೆಸರದು ಸಿಡಿಲ್ ಸದ್ದು ಸಾಮ್ರಾಜ್ಯಕ್ಕೆ” ಎಂದು ಬರೆಯದೆ ಇರುತ್ತಿರಲಿಲ್ಲ. ರಷ್ಯನ್ ಕ್ರಾಂತಿಯ ಆಳ ಅಗಲ ವಿಸ್ತಾರಗಳನ್ನು ಕ್ಯೂಬನ್ ಕ್ರಾಂತಿ ಹೊಂದಿಲ್ಲದಿದ್ದರೇನAತೆ? ಜಗತ್ತಿನ ಕ್ರಾಂತಿಕಾರಿ ಶಕ್ತಿಗಳಿಗೆ ನಿಸ್ಸಂದೇಹವಾಗಿ ಫಿಡೆಲ್ ಮತ್ತು ಕ್ಯೂಬಾ ಒಂದು ಅಂತಃಚೇತನವಲ್ಲ ಎನ್ನಲಾದೀತೆ?

ಫಿಡೆಲ್ ಅಲೆಜಾಂಡ್ರೋ ಕ್ಯಾಸ್ಟ್ರೋ (Fidel Alejandro Castro Ruz)  ಸಕ್ಕರೆ ಬಟ್ಟಲಿನ ಪುಟ್ಟ ಕ್ಯೂಬಾವನ್ನು ಜಗತ್ತಿನ ರಾಷ್ಟ್ರಗಳ  ಸಾಲಿನಲ್ಲಿ ನಿಲ್ಲಿಸಿದ್ದು ಮಾತ್ರವಲ್ಲ, ಏನೆಲ್ಲಾ ಕಷ್ಟಗಳು ಮತ್ತು ಕಿರುಕುಳಗಳ ನಡುವೆಯೂ ಒಂದು ಪರ್ಯಾಯ ಸಾಮಾಜಿಕ ಮಾದರಿ ಸಾಧ್ಯವಿದೆ ಎಂಬುದನ್ನು ನಿರೂಪಿಸಿ ತೋರಿಸಿದರು. ಒಂದು ಪುಟ್ಟ ರಾಷ್ಟ್ರ ಜಗತ್ತಿನ ಬೃಹತ್ ಶಕ್ತಿಯ ಎದುರು ಎದೆಯೆತ್ತಿ ನಿಂತ ಕಥೆಯೇ ಸೋಜಿಗ. ಇದರ ಹಿಂದಿನ ಬಂಡೆಗಲ್ಲು ಫಿಡೆಲ್. ಹಾಗೆಯೇ ಅಲ್ಲಿನ ಎಚ್ಚೆತ್ತ ಕ್ರಾಂತಿಕಾರಿ ಜನತೆ.

ಫಿಡೆಲ್ ಕುರಿತು ಮತ್ತು ಕ್ಯೂಬಾದ ಸಮಾಜವಾದಿ ವ್ಯವಸ್ಥೆ ಕುರಿತು ಕ್ರಾಂತಿಕಾರಿ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ನಡುವೆ ಎಷ್ಟೊಂದು ದಂತಕತೆಗಳು, ರೋಮಾಂಚನಕಾರಿ ಸಂಗತಿಗಳು ಮತ್ತು ಹೆಮ್ಮೆ ಪಡುವ ವಿಚಾರಗಳು ಅಸ್ತಿತ್ವದಲ್ಲಿವೆಯೋ, ಅಷ್ಟೇ ಪ್ರಮಾಣದಲ್ಲಿ ಅಮೇರಿಕನ್ ಸಾಮ್ರಾಜ್ಯ ಹರಿಬಿಟ್ಟಿರುವ ಸುಳ್ಳುಗಳು, ಅಪಪ್ರಚಾರಗಳು ಮತ್ತು ವಿಕೃತ ವಿಚಾರಗಳು ಚಾಲ್ತಿಯಲ್ಲಿವೆ. ಫಿಡೆಲ್ ಒಬ್ಬ ಸರ್ವಾಧಿಕಾರಿ, ಜನತೆಯ ಪೀಡಕ, ಕ್ರೂರಿ ಹೀಗೆ, ಹೇಗೆಲ್ಲಾ ನಕಾರಾತ್ಮಕವಾಗಿ ಬಿಂಬಿಸಲು ಸಾಧ್ಯವೋ ಹಾಗೆಲ್ಲಾ ಬಿಂಬಿಸಲಾಗಿದೆ. ಈ ಮಿಥ್ಯೆಗಳನ್ನು, ಅಪಪ್ರಚಾರಗಳನ್ನು ಕಿತ್ತು ಬಿಸಾಡಲು ಮತ್ತು ಹೊರಜಗತ್ತಿಗೆ ಫಿಡೆಲ್‌ರನ್ನು ಮತ್ತು ಕ್ಯೂಬಾವನ್ನು ಸರಿಯಾಗಿ ಕಟ್ಟಿಕೊಡುವ ಪ್ರಯತ್ನಗಳನ್ನು ಸಾಕಷ್ಟು ಮಾಡಲಾಗಿದೆ. ಆದರೆ ಅದನ್ನು ಸಮಗ್ರವಾಗಿ ಮಾಡಿದ್ದೆಂದರೆ ಪತ್ರಕರ್ತರೂ ಮತ್ತು ಜಾಗತಿಕ ಪರ್ಯಾಯಗಳ ಚಿಂತಕರೂ ಆದ ಇಗ್ನೇಷಿಯೊ ರಮೋನೆಟ್. ಇವರು ನಡೆಸಿದ “ಫಿಡೆಲ್ ಜೊತೆ ನೂರು ಗಂಟೆಗಳು” ಫಿಡೆಲ್ ಜೊತೆಗಿನ ಅತ್ಯಂತ ವಿಸ್ತೃತವಾದ ಸಂದರ್ಶನವಾಗಿದೆ.

ಒಮ್ಮೆ 2002 ರಲ್ಲಿ ಹವಾನಾ ಬುಕ್ ಫೇರ್‌ನಲ್ಲಿ ಭಾಷಣ ಮಾಡಲು ರಮೊನೆಟ್ ಹೋಗಿದ್ದಾಗ, ಅದೇ ಕಾರ್ಯಕ್ರಮಕ್ಕೆ ಬಂದಿದ್ದ ಅರ್ಥಶಾಸ್ತçದಲ್ಲಿ ನೊಬೆಲ್ ಪುರಸ್ಕೃತರಾದ ಜೋಸೆಫ್ ಸ್ಟಿಗ್ಲಿಟ್ಸ್’ರನ್ನು ಫಿಡೆಲ್ ಇವರಿಗೆ ಪರಿಚಯಿಸಿದರು. ಪೋರ್ಟೊ ಅಲೆಗ್ರೆಯಲ್ಲಿ ನಡೆದ  ಮೊದಲ ವಿಶ್ವ ಸಾಮಾಜಿಕ ವೇದಿಕೆಯ ಸಮ್ಮೇಳನವನ್ನು ಆಗಷ್ಟೇ ಮುಗಿಸಿಕೊಂಡು ರಮೊನೆಟ್ ಇಲ್ಲಿಗೆ ಬಂದಿದ್ದರು. ಫಿಡೆಲ್ ನವ-ಉದಾರವಾದಿ ಜಾಗತೀಕರಣದ ಬಗ್ಗೆ ಮತ್ತು ವಿಶ್ವ ಸಾಮಾಜಿಕ ವೇದಿಕೆಯ ಸಮ್ಮೇಳನದಲ್ಲಿ ನಡೆದ ವಿಚಾರಗಳ ಬಗ್ಗೆ ಚರ್ಚಿಸಲು ಶುರು ಮಾಡಿದರು. ಸಾಮ್ರಾಜ್ಯವಾದಕ್ಕೆ, ಜಾಗತೀಕರಣಕ್ಕೆ ಪರ್ಯಾಯವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು: “ಹೊಸ ತಲೆಮಾರಿನ ಬಂಡಾಯಗಾರರು ಹೊರಬರುತ್ತಿದ್ದಾರೆ, ಅವರಲ್ಲಿ ಸಾಕಷ್ಟು ಜನರು ಅಮೇರಿಕನ್ನರಿದ್ದಾರೆ, ಅವರು ಪ್ರತಿಭಟನೆಯ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಜಗತ್ತಿನ ದೊರೆಗಳು ಕುಸಿಯುವಂತೆ ಮಾಡುತ್ತಿದ್ದಾರೆ. ಶಸ್ತ್ರಾಗಳಿಗಿಂತ ಚಿಂತನೆಗಳು ಹೆಚ್ಚು ಮುಖ್ಯ. ಹಿಂಸೆಯನ್ನು ಹೊರತುಪಡಿಸಿ, ಜಾಗತೀಕರಣವನ್ನು ಸೋಲಿಸಲು ಎಲ್ಲಾ ವಾದಗಳನ್ನು ಬಳಸಬೇಕು” ಎಂದರು. ಈ ರೀತಿ ಮಾತನಾಡುವಾಗ ಫಿಡೆಲ್, ಜಾಗತೀಕರಣ, ಅದರ ಪರಿಣಾಮಗಳು, ಅದನ್ನು ಎದುರಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಸುಶ್ರಾವ್ಯ ಸಂಗೀತದ ಹಾಗೆ ಅತ್ಯಂತ ಸಹಜವಾಗಿ ವಿವರಿಸತೊಡಗಿದರು. ಇದು ಬಹುಶಃ ಸಮಕಾಲೀನ ಜಗತ್ತಿನ ಬೇರಾವ ನಾಯಕರಿಗೂ ಇರದಿದ್ದ ಗುಣ ಎಂದರೆ ತಪ್ಪಾಗಲಿಕ್ಕಿಲ್ಲ.

ಫಿಡೆಲ್‌ರ ಈ ಅಸಾಧಾರಣ ಪ್ರತಿಭೆ, ಯಾವುದೇ ವಿಚಾರದ ಬಗ್ಗೆ ಸ್ಪಷ್ಟತೆ, ಬದಲಾವಣೆ ಮಾಡಲು ಬೇಕಾದ ಬದ್ಧತೆ, ಮುಪ್ಪಾದರೂ ಕಡಿಮೆಯಾಗದ ಉತ್ಸಾಹ, ಮಾದರಿಯಾದ ಬದುಕು, ಇವಾವುವೂ ಜಗತ್ತಿಗೆ ಸಮಗ್ರವಾಗಿ ಗೊತ್ತಿಲ್ಲವಲ್ಲ. ಅಮೇರಿಕ ಹರಡಿರುವ ಅಪಪ್ರಚಾರಗಳು ಮತ್ತು ಸುಳ್ಳುಗಳಿಂದ ದೊಡ್ಡ ಸಂಖ್ಯೆಯ ಜನ ಫಿಡೆಲ್ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿರುವರಲ್ಲಾ ಎಂಬ ಪ್ರಶ್ನೆಗಳು ರಮೊನೆಟ್ ಅವರಿಗೆ ಕಾಡತೊಡಗಿದವು. ಆಗ ರಮೊನೆಟ್ ಅವರಿಗೆ ಹೊಳೆದದ್ದೇ, ಫಿಡೆಲ್‌ರನ್ನು ಸಮಗ್ರವಾಗಿ ಚಿತ್ರಿಸಬೇಕೆಂಬ ಯೋಚನೆ. ಅದನ್ನೇ ಫಿಡೆಲ್ ಮುಂದೆ ಪ್ರಸ್ತಾಪಿಸಿದರು. ಇದನ್ನು ಕೇಳಿ ವಿನೋದವೆಂಬಂತೆ ನಕ್ಕು, ಅದೇ ಕ್ಷಣದಲ್ಲಿ ಗಂಭೀರವಾಗಿ, “ನನ್ನೊಂದಿಗೆ ಮಾತನಾಡಿ ನಿಜವಾಗಿಯೂ ನಿನ್ನ ಸಮಯವನ್ನು ಹಾಳು ಮಾಡಿಕೊಳ್ಳಲು ಬಯಸುವೆಯಾ? ಇನ್ನೂ ಹೆಚ್ಚು ಮುಖ್ಯವಾದದ್ದನ್ನು ಮಾಡಲು ನಿನಗೇನೂ ಇಲ್ಲವೇನು?” ಎಂದು ರಮೊನೆಟ್ ಅವರನ್ನು ಕೇಳಿದರು. ಜಗತ್ತಿನ ಅತ್ಯಂತ ಶ್ರೇಷ್ಟ ಮತ್ತು ಹೆಸರಾಂತ ಪತ್ರಕರ್ತರು ಫಿಡೆಲ್ ಜೊತೆ ಮಾತನಾಡುವ ಅವಕಾಶಕ್ಕಾಗಿ ವರ್ಷಗಳ ಕಾಲ ಕಾದಿರುವುದನ್ನು ಕಂಡಿದ್ದ ರಮೊನೆಟ್, ಒಬ್ಬ ವೃತ್ತಿಪರ ಪತ್ರಕರ್ತನಿಗೆ ಇದಕ್ಕಿಂತಲೂ ಮುಖ್ಯವಾದದ್ದು ಇನ್ನೇನಿರಲು ಸಾಧ್ಯ ಎಂಬ ಪ್ರಶ್ನೆಯನ್ನು ಸ್ವತಃ ಹಾಕಿಕೊಂಡರು. ಈ ರೀತಿ ಚರ್ಚೆಗಳಲ್ಲಿ ರೂಪುಗೊಂಡ ಒಮ್ಮತದ ಭಾಗವಾಗಿ ರಮೊನೆಟ್ ಮತ್ತು ಫಿಡೆಲ್ ನಡುವಿನ ದೀರ್ಘ ಸಂದರ್ಶನಗಳು ಸಂಭವಿಸಿದವು. ಹಾಗೆ ನೋಡಿದರೆ 50 ವರ್ಷಗಳಲ್ಲಿ, ತಮ್ಮ ದೀರ್ಘ ಭಾಷಣಗಳಿಗೆ ಹೆಸರುವಾಸಿಯಾದ ಫಿಡೆಲ್‌ರ ಇಂತಹ ಕೇವಲ ನಾಲ್ಕು ಸಂಭಾಷಣೆಗಳು ಮಾತ್ರ ಪ್ರಕಟವಾಗಿವೆ. ಗಿಯಾನ್ನಿ ಮಿನಾ’ರೊಂದಿಗೆ ಎರಡು, ಪ್ರೆಂಯಿ ಬ್ರೆಟ್ಟೊ’ರೊಂದಿಗೆ ಒಂದು ಮತ್ತು ನಿಕರಾಗುವಾದ ಮಾಜಿ ಸಚಿವ ಮತ್ತು ಲೇಖಕ ಟೋಮಸ್ ಬೋರ್ಜ್’ರೊಂದಿಗೆ ಒಂದು ಪ್ರಕಟವಾದ ಸಂಭಾಷಣೆಗಳಾಗಿವೆ. ರಮೊನೆಟ್‌ರೊಂದಿಗಿನ ಸಂಭಾಷಣೆ, ಫಿಡೆಲ್ ಹೇಳುವಂತೆ, ಐದನೆಯ ಮತ್ತು ಬಹುಶಃ ಅತ್ಯಂತ ದೀರ್ಘ ಮತ್ತು ಸಮಗ್ರವಾದ ಸಂಭಾಷಣೆಯಾಗಿದೆ. 2003 ಜನವರಿಯಿಂದ ಪ್ರಾರಂಭಗೊಂಡು 2005 ಡಿಸೆಂಬರ್‌ವರೆಗೆ ಮೂರು ವರ್ಷಗಳ ಕಾಲ ಹಲವು ಸುತ್ತುಗಳಲ್ಲಿ “ಫಿಡೆಲ್ ಜೊತೆ ನೂರು ಗಂಟೆಗಳು” ಸಂದರ್ಶನ ನಡೆಯಿತು. ರೆಮೊನೆಟ್ ಸಂದರ್ಶನಕ್ಕಾಗಿ ಅಪಾರವಾದ ಅಭ್ಯಾಸ ಮತ್ತು ತಯಾರಿಯನ್ನು ಮಾಡಿಕೊಂಡಿದ್ದರು. ಇದರ ಫಲವಾಗಿ “ಮೈ ಲೈಫ್: ಫಿಡೆಲ್ ” ಕ್ಯಾಸ್ಟ್ರೋ ಎಂಬ ಕೃತಿ ಹೊರ ಬಂದಿತು.

ಈ ಪುಸ್ತಕದಲ್ಲಿ, 1930 ರಿಂದ 2005 ರವರೆಗೆ ಫಿಡೆಲ್ ತಮ್ಮ ಜೀವನವನ್ನು ವಿವರಿಸಿದ್ದಾರೆ. ತಮ್ಮ ಪೋಷಕರು, ಆರಂಭಿಕ ಪ್ರಭಾವಗಳು, ಕ್ರಾಂತಿಯ ಆರಂಭದ ವಿವರಗಳು, ಚೆ ಜೊತೆ ಇವರ ಸಂಬಂಧ, ಬೇ ಆಫ್ ಫಿಗ್ಸ್, ಕ್ಷಿಪಣಿ ಬಿಕ್ಕಟ್ಟು, ಜಿಮ್ಮಿ ಕಾರ್ಟರ್ ವರ್ಷಗಳು, ಕ್ಯೂಬನ್ ವಲಸೆ ಬಿಕ್ಕಟ್ಟು, ಹೀಗೆ ಹಲವು ವಿಚಾರಗಳನ್ನು ಹಂಚಿಕೊಡಿಂದ್ದಾರೆ. ಜೊತೆಗೆ, ಕ್ಯೂಬಾದಲ್ಲಿ ಮಾನವ ಹಕ್ಕುಗಳ ಪ್ರಶ್ನೆ, ಪತ್ರಿಕಾ ಸ್ವಾತಂತ್ರ್ಯದ ಪ್ರಶ್ನೆ, ಸಲಿಂಗ ಕಾಮ, ಮರಣ ದಂಡನೆ, ಇತರೆ ನಾಯಕರ ಬಗ್ಗೆ ಮುಕ್ತ ಅಭಿಪ್ರಾಯಗಳು, ಹೀಗೆ ವಿವಾದಾತ್ಮಕವೆಂದು ಪರಿಗಣಿಸುವ ಎಲ್ಲಾ ವಿಚಾರಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ಫಿಡೆಲ್‌ರ ಸಮಗ್ರ ಚಿತ್ರಣವನ್ನು ಈ ಕೃತಿ ಒದಗಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಈ ಸಾಹಸವನ್ನು ರಮೊನೆಟ್ ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ.

ತಮ್ಮ 90 ನೆಯ ವರ್ಷದಲ್ಲಿ ವಯೋಮಾನ ಸಹಜ ಸಾವನ್ನು ಕಂಡ ಫಿಡೆಲ್ ಕ್ಯಾಸ್ಟ್ರೋ ಚರಿತ್ರೆಯ ಪುಟಗಳಲ್ಲಿ ಚಿರಸ್ಥಾಯಿಯಾದ ಮತ್ತು ದಂತಕಥೆಯಾದ ಜಗತ್ತಿನ ಕೆಲವೇ ಕೆಲವು ಕ್ರಾಂತಿಕಾರಿಗಳಲ್ಲಿ ಒಬ್ಬರು. ಎರಡನೇ ಮಹಾಯುದ್ಧದ ನಂತರ ಜಗತ್ತಿನೆಲ್ಲೆಡೆ ಅಲೆ ಅಲೆಯಾಗಿ ಎದ್ದು ಬಂದ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿನ ರಣೋತ್ಸಾಹದಲ್ಲಿ ಹೋರಾಟ ನಡೆಸಿದ ನೆಲ್ಸನ್ ಮಂಡೇಲ, ಹೋ ಚಿ ಮಿನ್ಹ್, ಪ್ಯಾಟ್ರಿಸ್ ಲುಮುಂಬಾ, ಚೆ ಗೆವಾರ ಮುಂತಾದ ದಂತಕತೆಗಳಾದ ಬಂಡಾಯಗಾರರ ಸಾಲಿನಲ್ಲಿ ಫಿಡೆಲ್ ನಿಂತಿದ್ದಾರೆ.

ಉಜ್ವಲ ಭವಿಷ್ಯದ ಕನಸುಗಳೊಂದಿಗೆ, ಅನ್ಯಾಯಕ್ಕೆ ಸಮಾಧಿಯನ್ನು ಕಟ್ಟಬೇಕೆಂಬ ಛಲದೊಂದಿಗೆ, ಬಡತನ, ಅಸಮಾನತೆ, ಶೋಷಣೆಯನ್ನು ಜಗದ ನೊಗದಿಂದ ಕಿತ್ತೆಸೆಯಬೇಕೆಂಬ ಧೃಡತೆಯೊಂದಿಗೆ, ಅದನ್ನು ಸಾಧಿಸಲು ಕಮ್ಯುನಿಸಂನಿಂದ ಮಾತ್ರ ಸಾಧ್ಯ ಎಂದು ಪ್ರಾಮಾಣಿಕವಾಗಿ ನಂಬಿದ ಅಸಂಖ್ಯಾತ ಪ್ರಗತಿಪರರು ಮತ್ತು ಬುದ್ದಿಜೀವಿಗಳು, ಅತ್ಯಂತ ಶ್ರೇಷ್ಟ ಮಹಿಳೆಯರು ಮತ್ತು ಪುರುಷರ ಜಾತಿಗೆ ಸೇರಿದವರು ಫಿಡೆಲ್. ಅಂದಿಗೆ ಲ್ಯಾಟಿನ್ ಅಮೇರಿಕದ ಹಲವಾರು ದೇಶಗಳಲ್ಲಿ ಅಮೇರಿಕದ ಬೆಂಬಲ ಮತ್ತು ಪಿತೂರಿಗಳಿಂದ ಸ್ಥಾಪನೆಗೊಂಡಿದ್ದ ಸರ್ವಾಧಿಕಾರಿ ನಾಯಕರಿದ್ದರು. ಕ್ಯೂಬಾದಲ್ಲಿ ಬಟಿಸ್ಟಾ, ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಟ್ರೂಜಿಲ್ಲೋ, ಹೈಟಿಯಲ್ಲಿ ಡುವೆಲಿಯರ್, ನಿಕರಾಗುವಾದಲ್ಲಿ ಸೊಮೊಜ಼, ವೆನಿಜುವೆಲಾದಲ್ಲಿ ಪೆರೆಯಿ ಜಿಮೆನಿಯಾ , ಪರಾಗ್ವೆಯಲ್ಲಿ ಸ್ಟೊಸ್ನರ್, ಮುಂತಾಗಿ ಕ್ರೂರ ಸರ್ವಾಧಿಕಾರಿಗಳು ವಸಾಹತುಶಾಹಿ ಮತ್ತು ಬಂಡವಾಳಶಾಹಿಗಳ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಫಿಡೆಲ್ ತನ್ನ23 ನೇ ವಯಸ್ಸಿನಲ್ಲಿ 1959 ಜನವರಿಯಲ್ಲಿ ಕ್ಯೂಬಾ ಕ್ರಾಂತಿಯನ್ನು ಯಶಸ್ವಿಯಾಗಿ ಸಂಘಟಿಸಿದರು. ಪಶ್ವಿಮ ಭೂಗೋಳದಲ್ಲಿ ನಡೆದ ಮೊದಲ ಸಮಾಜವಾದಿ ಕ್ರಾಂತಿಯಿದು.
ಫಿಡೆಲ್ ತಂದೆ ಏಂಜಲೋ ಕ್ಯಾಸ್ಟ್ರೋ ಮೂಲತಃ ಸ್ಪೆನ್ ದೇಶದವರು. ಒಂದು ಸಾಮಾನ್ಯ ಬಡಕುಟುಂಬದ ಹಿನ್ನೆಲೆಯಿಂದ ಬಂದು, ಕ್ಯೂಬಾದ ಪೂರ್ವ ಓರಿಯಂಟೆ ಪ್ರಾಂತದ ಬೈರನ್ ಪ್ರದೇಶದಲ್ಲಿ ನೆಲೆಸಿ, ಅಪಾರ ಪ್ರಮಾಣದ ಭೂಮಿಯನ್ನು ಗಳಿಸಿದ್ದರು. ಫಿಡೆಲ್ ಕುಟುಂಬ ಅತ್ಯಂತ ಶ್ರೀಮಂತವಾದರೂ ಸುತ್ತಲ ವಾತಾವರಣ ತೀರಾ ಬಡತನದಿಂದ ಕೂಡಿತ್ತು. ಫಿಡೆಲ್‌ಗೆ ಬಂಡಾಯ ಮತ್ತು ಸಾಹಸದ ಪ್ರವೃತ್ತಿ ಬಾಲ್ಯದಿಂದಲೂ ಬಂದಿತ್ತು. ಹವಾನಾ ವಿಶ್ವವಿದ್ಯಾಲಯದಲ್ಲಿ ಓದುವಾಗ ಈ ಪ್ರವೃತ್ತಿಗೆ ಒಂದು ಸ್ಪಷ್ಟವಾದ ದಾರಿಯನ್ನು ಕಂಡುಕೊಂಡರು. ಬಟಿಸ್ಟಾನ ಸರ್ವಾಧಿಕಾರದ ವಿರುದ್ಧ ಅಲ್ಲಿಂದಲೇ ಸಂಘಟನೆ ಆರಂಭಿಸಿದರು. ಕ್ಯೂಬಾದ ಪರಿಸ್ಥಿತಿಯನ್ನು ಅನುಸರಿಸಿ ಗೆರಿಲ್ಲಾ ಮಾದರಿ ಪ್ರತಿರೋಧವನ್ನು ರೂಪಿಸಿದರು. ಅದನ್ನು ಮೊದಲು ಪ್ರಯೋಗಿಸಿದ್ದು ಮೊಂಕಾಡಾ ಬ್ಯಾರಕ್ ದಾಳಿಯಲ್ಲಿ. ಆದರೆ ಲೆಕ್ಕಾಚಾರಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿ ದಾಳಿ ವಿಫಲವಾಯಿತು. ಸೆರೆ ಸಿಕ್ಕ ಫಿಡೆಲ್ ಮತ್ತು ಗೆಳೆಯರನ್ನು ಬಟಿಸ್ಟಾ ಸರ್ಕಾರ ಜೈಲಿಗೆ ಹಾಕಿತು. ಕೋರ್ಟಿನಲ್ಲಿ ಸ್ವತಃ ವಾದ ಮಾಡಿದ ಫಿಡೆಲ್ ಕೊನೆಯಲ್ಲಿ ಲಿಖಿತ ಭಾಷಣವನ್ನು ಮಂಡಿಸಿದರು. ಕ್ಯೂಬಾದ ಭೂತ, ವರ್ತಮಾನ ಮತ್ತು ಭವಿಷ್ಯತ್ ಬಗ್ಗೆಗಿನ ಮಾರ್ಗದರ್ಶಿಯಾದ ಇದು ಚರಿತ್ರೆಯಲ್ಲಿ “ಇತಿಹಾಸ ನನ್ನನ್ನು ದೋಷಮುಕ್ತಗೊಳಿಸುತ್ತದೆ” ಎಂದು ಹೆಸರಾಗಿದೆ. ಬಟಿಸ್ಟಾ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆಯಿಂದ ಮಧ್ಯದಲ್ಲೇ ಬಿಡುಗಡೆಯಾಗಿ, ಮೆಕ್ಸಿಕೋಗೆ ತಲೆಮರೆಸಿಕೊಂಡು ಹೋದರು.
ಮೆಕ್ಸಿಕೋದಲ್ಲಿ ಒಂದು ಗೆರಿಲ್ಲಾ ಸೈನ್ಯವನ್ನು ಸಂಘಟಿಸಿದರು. ಫಿಡೆಲ್‌ನ ಆತ್ಮೀಯ ಸಂಗಾತಿ ಚೆ’ ಗೆವಾರ ಜೊತೆಯಾದದ್ದು ಅಲ್ಲಿಯೇ. ತೀವ್ರವಾದ ಸಂಕಷ್ಟಗಳನ್ನು ಎದುರಿಸಿ ‘ಗ್ರಾನ್ಮಾ’ದಲ್ಲಿ ಕ್ರಾಂತಿಯನ್ನು ಮಾಡಲು ಹೊರಟದ್ದು ರೋಚಕ ಕಥೆ. ಕೇವಲ 12 ಜನರನ್ನು ಕೊಂಡೊಯ್ಯಬಹುದಾದ ದೋಣಿಯಲ್ಲಿ 82 ಜನ ಗೆರಿಲ್ಲಾ ಸೈನಿಕರನ್ನು ತುಂಬಿಕೊಂಡು ಸಮುದ್ರ ದಾಟುವ ಕೆಲಸ ಮಾಡುವುದಕ್ಕೆ ಬರೀ ಧೈರ್ಯವಿದ್ದರೆ ಸಾಕೇ? ಕ್ರಾಂತಿ ಮಾಡಲೇಬೇಕೆಂಬ ಬದ್ಧತೆ ಮತ್ತು ತುಡಿತ – ಅದು ಫಿಡೆಲ್‌ಗಿತ್ತು. ಸಿಯರ‍್ರಾ ಮೇಸ್ತಾದ  ಬೆಟ್ಟಗುಡ್ಡಗಳಲ್ಲಿ ನಡೆದ ಬಟಿಸ್ಟಾ ಸೈನ್ಯದ ವಿರುದ್ಧ ಸಂಕ್ಲಿಷ್ಟ ದಾಳಿ ಪ್ರತಿದಾಳಿಗಳಲ್ಲಿ ಬದುಕುಳಿದವರು 12 ಜನ. ಆಗಲೂ ‘ನಾವು ಕ್ರಾಂತಿ ಗೆಲ್ಲುತ್ತೇವೆ’ ಎಂಬ ಅದಮ್ಯ ವಿಶ್ವಾಸ. ಅವರು ಅಂದುಕೊಂಡ ಹಾಗೆ ಕ್ಯೂಬನ್ ಜನತೆಯ ಬೆಂಬಲದೊಂದಿಗೆ, ಅಮೇರಿಕದ ಏಜೆಂಟ್ ಸರ್ವಾಧಿಕಾರಿ ಫಲ್ಗೆನ್ಶಿಯೋ ಬಟಿಸ್ಟಾನ ಪಲಾಯನದೊಂದಿಗೆ, ಕ್ರಾಂತಿ ಸಂಭವಿಸಿತು. ಕ್ಯೂಬಾ ಸಮಾಜವಾದದ ನವ ಮನ್ವಂತರಕ್ಕೆ ಕಾಲಿಟ್ಟಿತು.

ಜಗತ್ತಿನ ಬೃಹತ್ ಸಾಮ್ರಾಜ್ಯಶಾಹಿ ಸಂ.ರಾ.ಅಮೇರಿಕ, ತನ್ನ ದಕ್ಷಿಣದ ತುದಿಯಿಂದ ಕೇವಲ 80 ಮೈಲುಗಳ ಕೂಗಳತೆಯ ದೂರದಲ್ಲಿ ಸಮಾಜವಾದಿ ರಾಷ್ಟçವೊಂದರ ಅಸ್ತಿತ್ವವನ್ನು ಸಹಿಸಿಕೊಂಡೀತಾದರೂ ಹೇಗೆ? ಕೇವಲ1 ಲಕ್ಷ ಚದರ ಕಿ.ಮೀ. ವಿಸ್ತಾರದ, ಕೇವಲ1  ಕೋಟಿ ಜನಸಂಖ್ಯೆಯ ಪುಟ್ಟ ಕ್ಯೂಬಾ ಜಗತ್ತಿನ ಬ್ರಹ್ಮರಾಕ್ಷಸನನ್ನು ಎದುರು ಹಾಕಿಕೊಂಡ ಪರಿಯ ಸೈದ್ಧಾಂತಿಕ ಸೊಬಗನ್ನು ಬಣ್ಣಿಸುವುದು ಹೇಗೆ? ಹೇಗಾದರೂ ಫಿಡೆಲ್‌ರ ಕ್ಯೂಬಾವನ್ನು ಮಣಿಸಲೇಬೇಕೆಂದು ಅಮೇರಿಕ ನಡೆಸಿದ ದಾಳಿ, ದಬ್ಬಾಳಿಕೆ, ತಂತ್ರ-ಕುತಂತ್ರಗಳಿಗೆ ಲೆಕ್ಕವೇ ಇಲ್ಲ.1959  ರಿಂದ ಇದುವರೆಗೂ ಆಗಿಹೋದ ಅಮೇರಿಕದ ಅಧ್ಯಕ್ಷರೆಲ್ಲರೂ ಕ್ಯೂಬಾದಲ್ಲಿ ಸಮಾಜವಾದವನ್ನು ಮುಗಿಸಬೇಕೆಂದು ಮತ್ತು ಫಿಡೆಲ್‌ರನ್ನು ಕೊಲ್ಲಬೇಕೆಂದು ನಡೆಸಿದ ಪ್ರಯತ್ನಗಳಿಗೆ ಲೆಕ್ಕವಿಲ್ಲ. ಐಸೆನ್‌ಹೋವರ್, ಕೆನ್ನೆಡಿ, ಜಾನ್ಸ್ಸನ್, ನಿಕ್ಸನ್, ಫೋರ್ಡ್, ಕಾರ್ಟರ್, ರೇಗನ್, ಹಿರಿಯ ಬುಷ್, ಕ್ಲಿಂಟನ್, ಕಿರಿಯ ಬುಷ್, ಹೀಗೆ ಅಮೇರಿಕದ ಹತ್ತು ಅಧ್ಯಕ್ಷರುಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಫಿಡೆಲ್ ಎದುರಿಸಿದರು. ಇವರುಗಳು ಸಿಐಎ ಮುಖಾಂತರ ಫಿಡೆಲ್‌ರನ್ನು ಕೊಲ್ಲಲು ನಡೆಸಿದ 634  ವಿಫಲ ಪ್ರಯತ್ನಗಳು ಜಾಗತಿಕ ದಾಖಲೆಯೇ ಸರಿ!
1945  ರಿಂದ ಪ್ರಾರಂಭವಾಗಿ ವಿಶ್ವದ ಅತ್ಯಂತ ಪ್ರಮುಖ ನಾಯಕರಾದ, ನೆಹರೂ, ನಾಸೆರ್, ಟಿಟೋ, ಕ್ರುಶ್ಚೇವ್, ಒಲೋಫ್ ಪಾಮೆ, ವಿಲ್ಲೀ ಬ್ರಾಂಡ್ಟ್, ಬೆನ್ ಬೆಲ್ಲಾ, ಬೊಮೇದಿಯನ್, ಅರಾಫತ್, ಇಂದಿರಾಗಾಂಧಿ, ಸಾಲ್ವಡೊರ್ ಅಲೆಂಡೆ, ಬ್ರಜ್ನೇವ್, ಗೋರ್ಬಚೇವ್, ಮಿತ್ತರಾಂಡ್, ಜಿಯಾಂಗ್ ಜೆಮಿನ್, ಎರಡನೇ ಪೋಪ್ ಜಾನ್ ಪಾಲ್ ಸ್ಪೆನ್‌  ರಾಜ ಜುವಾನ್ ಕಾರ್ಲೋಸ್, ನೆಲ್ಸನ್ ಮಂಡೇಲಾ, ಮುಂತಾದವರ ಜೊತೆ ಫಿಡೆಲ್‌ಗೆ ಆತ್ಮೀಯ ಮತ್ತು ಸ್ನೇಹ ಸಂಬಂಧಗಳಿದ್ದವು. ಇವರ ಸಮಕಾಲೀನ ಶ್ರೇಷ್ಟ ಬುದ್ಧಿಜೀವಿಗಳು, ಕಲಾವಿದರು ಮತ್ತು ವ್ಯಕ್ತಿಗಳಾದ, ಜೀನ್ ಪಾಲ್ ಸಾರ್ತ್ರೆ, ಸಿಮೋನ್ ದಿ ಬೋವಾ, ಅರ್ನೆಸ್ಟ್ ಹೆಮಿಂಗ್ವೇ, ಗ್ರಹಾಂ ಗ್ರೀನ್, ಅರ್ಥರ್ ಮಿಲ್ಲರ್, ಪಾಬ್ಲೋ ನೆರೂಡ, ಜಾರ್ಜ್ ಅಮಾಡೋ, ಓಸ್ವಾಲ್ಡೋ ಗ್ವಯಾಸಾಮಿನ್, ಹೆನ್ರಿ ಕಾರ್ಟಿಯರ್-ಬ್ರಸ್ಸನ್, ಆಸ್ಕರ್ ನೇಮೆಯರ್, ಜೋಸ್ ಸರಮಾಗೊ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ಕ್ಲಾಡಿಯೋ ಅಬ್ಬಾಡೊ, ಹೆನ್ರಿ ಬೆಲಫಾಂಟೆ ಏಂಜೆಲಾ ಡೇವಿಸ್, ಜೆಸ್ಸೀ ಜಾಕ್ಸನ್, ಜೆರಾರ್ಡ್ ಡೆಪಾರ್ಡ್ಯೂ, ಡ್ಯಾನಿ ಗ್ಲೋವರ್, ರಾಬರ್ಟ್ ರೆಡ್‌ಫೋರ್ಡ್, ಜಾಕ್ ನಿಕಲ್ಸನ್, ಸ್ಟೀವೆನ್ ಸ್ಪೀಲ್‌ಬರ್ಗ್, ಎಡ್ವರ್ಡೋ ಗೆಲಿಯಾನೋ, ಡೀಗೋ ಮರಡೊನಾ, ಆಲಿವರ್ ಸ್ಟೋನ್, ನೋಮ್ ಚಾಮ್‌ಸ್ಕಿ, ಇನ್ನೂ ಇನ್ನೂ ಹಲವಾರು ಜನ ಫಿಡೆಲ್ ಜೊತೆ ನೇರ ಸ್ನೇಹ ಅಥವಾ ಪರಿಚಯ ಹೊಂದಿದ್ದರು.

ಕ್ರಾಂತಿಯಾದ ಎರಡೇ ವರ್ಷಗಳಲ್ಲಿ ಕ್ಯೂಬವನ್ನು ವಶಪಡಿಸಿಕೊಳ್ಳಲು ಅಮೇರಿಕದ ಮಿಲಿಟರಿ 1961 ರಲ್ಲಿ ‘ಬೇ ಆಫ್ ಪಿಗ್ಸ್’ನಲ್ಲಿ ಪ್ರಯತ್ನ ನಡೆಸಿತು. ಇದಕ್ಕೆ ಪ್ರತಿರೋಧವಾಗಿ ಅಂದಿನ ಸಮಾಜವಾದಿ ರಷ್ಯಾ ಕ್ಯೂಬಾದ ಪರವಾಗಿ ಕ್ಷಿಪಣಿಗಳನ್ನು ತಂದು ನಿಲ್ಲಿಸಿತು. ಇನ್ನೇನು ಮೂರನೇ ಪ್ರಪಂಚ ಯುದ್ಧ ನಡೆದೇ ಬಿಡುತ್ತದೆ ಎನ್ನುವಂತಾಗಿತ್ತು. ವಿಶ್ವಸಂಸ್ಥೆಯಲ್ಲಿ ಸಂ.ರಾ.ಅಮೇರಿಕದ ವಿರುದ್ಧ ಸತತವಾಗಿ ತೀರ್ಮಾನಗಳಾಗುತ್ತಿದ್ದರೂ, ತೊಂಬತ್ತರ ದಶಕದಲ್ಲಿ ಜಾರಿ ಮಾಡಿದ ‘ಹೆಲ್ಮ್-ಬರ್ಟನ್ ಆಕ್ಟ್’ ಹೆಸರಲ್ಲಿ ಅದು ಆರ್ಥಿಕ ದಿಗ್ಭಂಧನಗಳನ್ನು ವಿಧಿಸಿದೆ. 2004 ರಲ್ಲಿ ‘ಟೊರಿಸೆಲ್ಲಿ ತಿದ್ದುಪಡಿ’ ಮೂಲಕ ಕಿರುಕುಳಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ದಿಗ್ಭಂಧನವು ದೇಶದ ಬೆಳವಣಿಗೆಗೆ ಅಡ್ಡಿಯಾದದ್ದು ಮಾತ್ರವಲ್ಲ, ಹಣಕಾಸು ಮತ್ತು ಆರ್ಥಿಕ ಸ್ಥಿತಿಯನ್ನು ಹಿಂಡಿಹಾಕಿದೆ. ಪರಿಣಾಮವಾಗಿ ಕ್ಯೂಬನ್ ಜನತೆ ಅಪಾರ ಕಷ್ಟಗಳನ್ನು ಅನುಭವಿಸುವಂತಾಗಿದೆ. ಕನಿಷ್ಟ ಜೀವ ರಕ್ಷಕ ಔಷಧಿಗಳನ್ನೂ ಸಿಗದ ಹಾಗೆ ಮಾಡಲಾಗಿದೆ.

ಅಮೇರಿಕವು ಕ್ಯೂಬಾದ ವಿರುದ್ಧ ಶಾಶ್ವತವಾದ ಸೈದ್ಧಾಂತಿಕ ದಾಳಿಯನ್ನು ನಡೆಸುತ್ತಿದೆ. ಫ್ಲಾರಿಡಾದಿಂದ ರೇಡಿಯೋ ಮಾರ್ತಿ ಮತ್ತು ಟಿವಿ ಮಾರ್ತಿ ಮೂಲಕ ಮಾಧ್ಯಮ ಯುದ್ಧವನ್ನು ನಡೆಸುತ್ತಿದೆ. ಕ್ಯೂಬಾ ವಿರೋಧಿ ಶಕ್ತಿಗಳಿಗೆ ಪ್ರತಿಕ್ರಾಂತಿ ನಡೆಸಲು ‘ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ’ (ಓಇಆ) ಮೂಲಕ ಹಣ ಸಹಾಯ ಮಾಡುತ್ತಿದೆ. ಕ್ಯೂಬಾ ಮತ್ತು ಕ್ಯಾಸ್ಟ್ರೋ ಬಗ್ಗೆ ಜಗತ್ತಿನಾದ್ಯಂತ ಸುಳ್ಳು ಸುದ್ದಿಗಳನ್ನು ಹರಡಲು USIಆ ಮೂಲಕ ಹಲವಾರು ಪತ್ರಕರ್ತರಿಗೆ ಹಣ ನೀಡುತ್ತಿದೆ. ಫ್ಲಾರಿಡಾವನ್ನು ನೆಲೆ ಮಾಡಿಕೊಂಡು ಕ್ಯೂಬಾದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು – ಆಲ್ಫಾ 99 ಮತ್ತು ಒಮೇಗಾ 7  ಎಂಬ ಸಂಘಟನೆಗಳಿಗೆ ಹಣ ನೀಡುತ್ತಿದೆ. ಕಳೆದ 50 ವರ್ಷಗಳಲ್ಲಿ ಸುಮಾರು 3500 ಕ್ಕೂ ಹೆಚ್ಚು ಕ್ಯೂಬನ್ನರನ್ನು ಭಯೋತ್ಪಾದಕ ಕೃತ್ಯಗಳ ಮೂಲಕ ಕೊಲೆ ಮಾಡಲಾಗಿದೆ. ಇದಕ್ಕಿಂತಲೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಂತಹ ಎಲ್ಲಾ ಸಂದರ್ಭಗಳಲ್ಲಿ ಕ್ಯಾಸ್ಟ್ರೋ ಪ್ರತಿಯಾಗಿ ಅಮೇರಿಕದ ಯಾವ ಪ್ರದೇಶದ ಮೇಲೂ, ಯಾವ ಜನರ ಮೇಲೂ ಹಿಂಸೆಯನ್ನಾಗಲೀ, ದಾಳಿಗಳನ್ನಾಗಲೀ ಸಂಘಟಿಸಿಲ್ಲ ಎಂಬುದು ಅವರ ಧೋರಣೆಗೆ ಸಾಕ್ಷಿಯಾಗಿದೆ. ಫಿಡೆಲ್ ತಮ್ಮ ತಾಯ್ನೆಲವನ್ನು ರಕ್ಷಿಸಿಕೊಳ್ಳುವುದರ ಜೊತೆಯಲ್ಲೇ ಅಮೇರಿಕದ ಜನತೆಯನ್ನು ಪ್ರೀತಿಸಿದ್ದರು. ‘ನಮ್ಮದೇನಿದ್ದರೂ ಅಮೇರಿಕನ್ ಪ್ರಭುತ್ವದ ನೀತಿಗಳ ವಿರುದ್ಧವೇ ಹೊರತು ಅಮೇರಿಕನ್ ಜನತೆಯ ವಿರುದ್ಧವಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು.

ಫಿಡೆಲ್ ನಾಯಕತ್ವದಲ್ಲಿ ಕ್ಯೂಬಾ ಎಲ್ಲರೂ ಗೌರವದಿಂದ ಬಾಳುವಂತಹ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿತು. ಅನಕ್ಷರತೆಯನ್ನು ತೊಡೆದುಹಾಕಲಾಯಿತು, ಸಾರ್ವತ್ರಿಕ ಉಚಿತ ಶಿಕ್ಷಣವನ್ನು ಜಾರಿಗೊಳಿಸಲಾಯಿತು, ಜಗತ್ತಿನ ಯಾವುದೇ ಮುಂದುವರಿದ ದೇಶಗಳಿಗೆ ಸವಾಲೆನಿಸುವಂತಹ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲಾಯಿತು, ಜನಾಂಗೀಯ ಸಮಾನತೆಯನ್ನು ಸಾಧಿಸಲಾಯಿತು. ತನ್ನ ಸಾರ್ವಭೌಮತೆಯನ್ನು ಎತ್ತಿ ಹಿಡಿಯುತ್ತಾ, ಸಾಮ್ರಾಜ್ಯಶಾಹಿಯ ಮುಂದೆ ಮಂಡಿಯೂರದೆ, ಮಾನವ ಅಭಿವೃದ್ಧಿ, ಹೆಚ್ಚಿನ ಮಟ್ಟದ ಸಾಮಾನ್ಯ ಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ, ಜೈವಿಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಸಂಶೋಧನೆ, ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ, … ಮುಂತಾದ ಕ್ಷೇತ್ರಗಳಲ್ಲಿ ಮುಂದುವರಿದ ದೇಶಗಳೂ ನಾಚಿಕೆ ಪಡುವಂತೆ ಕ್ಯೂಬಾ ಹೆಜ್ಜೆಗಳನ್ನಿಟ್ಟಿದೆ. ಅಮೇರಿಕ ಒಂದಲ್ಲ ಒಂದು ರೀತಿಯಲ್ಲಿ ತನ್ನ ಹಿಡಿತವನ್ನು ಹೊಂದಿರುವ ಜಗತ್ತಿನ ಬಹುತೇಕ ಸಣ್ಣ ಮತ್ತು ಬಡ ದೇಶಗಳಲ್ಲಿ ಸಾಮಾನ್ಯವಾಗಿ ಕಾಣುವ ಖಾಯಿಲೆಗಳು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ನಿರಂತರ ಉಲ್ಲಂಘನೆ, ಅತಿ ಹೆಚ್ಚಿನ ಶಿಶು ಮರಣ ಪ್ರಮಾಣಗಳು, ಹಸಿವು, ಅನಕ್ಷರತೆ, ವಸತಿಹೀನತೆ, ನಿರುದ್ಯೋಗ, ಭಿಕ್ಷಾಟನೆ, ಬೀದಿ ಮಕ್ಕಳು, ಡ್ರಗ್ ವ್ಯಸನಿಗಳು, ಡ್ರಗ್ ಮಾಫಿಯಾ, ಹೆಚ್ಚಿನ ಅಪರಾಧ ಪ್ರಮಾಣ, … ಇವಾವುವೂ ಕ್ಯೂಬಾದಲ್ಲಿ ಇಲ್ಲ ಎಂಬುದರ ಹಿಂದೆ ಫಿಡೆಲ್‌ರ ಅಪಾರವಾದ ಶ್ರಮವಿದೆ.

ಕ್ಯೂಬಾ ಕ್ರಾಂತಿಯು ಲ್ಯಾಟಿನ್ ಅಮೇರಿಕ ದೇಶಗಳ ಎಡ ಚಳುವಳಿಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದೆ. ಫಿಡೆಲ್ ಮತ್ತು ಚೆ ಗೆವಾರ ಕ್ಯೂಬಾದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಅಮೇರಿಕದ ಕ್ರಾಂತಿಕಾರಿ ಚಳುವಳಿಯ ಸ್ಫೂರ್ತಿದಾಯಕ ಸಂಕೇತಗಳಾಗಿದ್ದಾರೆ. ವಿಶೇಷವೆಂದರೆ ಇಂದಿಗೂ ಫಿಡೆಲ್ ಅಥವಾ ಕ್ಯೂಬಾ ಕ್ರಾಂತಿಯ ಯಾವುದೇ ಜೀವಂತ ನಾಯಕರ ಅಧಿಕೃತ ಭಾವಚಿತ್ರ, ವಿಗ್ರಹ, ನಾಣ್ಯ, ರಸ್ತೆ ಹೆಸರು, ಕಟ್ಟಡ, ಸ್ಮಾರಕ ಯಾವುದನ್ನೂ ಮಾಡಲಿಲ್ಲ. ಫಿಡೆಲ್ ಒಬ್ಬ ದೈತ್ಯ ವ್ಯಕ್ತಿತ್ವವಾದರೂ ವ್ಯಕ್ತಿಪೂಜೆಯನ್ನು ಬೆಳೆಸಲಿಲ್ಲ.

ಫಿಡೆಲ್ ಹೇಗೆ ರಾಷ್ಟ್ರೀಯವಾದಿಯೋ ಅಷ್ಟೇ ಅಂತರರಾಷ್ಟ್ರೀಯವಾದಿಯೂ ಹೌದು. 60’ ಮತ್ತು 70ರ ದಶಕಗಳಲ್ಲಿ ಮಧ್ಯ ಮತ್ತು ದಕ್ಷಿಣ ಅಮೇರಿಕದ – ಎಲ್ ಸಾಲ್ವಡೊರ್, ಗ್ವಾಟೆಮಾಲ, ನಿಕರಾಗುವಾ, ಕೊಲಂಬಿಯ, ವೆನಿಜುವೆಲಾ, ಬಿಲಿವಿಯಾ, ಅಜೆಂಟೈನಾ – ಮುಂತಾದ ದೇಶಗಳ ಸಶಸ್ತ ಬಂಡಾಯ ಹೋರಾಟಗಳಿಗೆ ಫಿಡೆಲ್ ಸಹಾಯ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಜನಾಂಗೀಯ ಬಿಳಿ ಸರ್ಕಾರದ ಮಧ್ಯಪ್ರವೇಶದ ವಿರುದ್ಧ ಅಂಗೋಲದಲ್ಲಿ ಕ್ಯೂಬನ್ ಸೈನ್ಯವನ್ನು ಕಳುಹಿಸಿದ್ದರು. ವರ್ಣಬೇಧ ನೀತಿಯ ವಿರುದ್ಧ ನೆಲ್ಸನ್ ಮಂಡೇಲರ ಹೋರಾಟಕ್ಕೆ ಫಿಡೆಲ್‌ರದು ಸಂಪೂರ್ಣ ಬೆಂಬಲ. ಕ್ಯೂಬ ತನ್ನ ಡಾಕ್ಟರ್‌ಗಳನ್ನು ಮತ್ತು ಶಿಕ್ಷಕರನ್ನು ಜಗತ್ತಿನೆಲ್ಲೆಡೆ ಜನರಿಗೆ ಸೇವೆ ಸಲ್ಲಿಸಲು ಕಳುಹಿಸಿರುವ ಮಾದರಿ ವಿಶಿಷ್ಟವಾದದ್ದು. ಇದರ ಹಿಂದೆ ಫಿಡೆಲ್ ಇದ್ದರು. 80’ರ ದಶಕದಲ್ಲಿ ಅಲಿಪ್ತ ಚಳುವಳಿಯ ಮುಂಚೂಣಿಯಲ್ಲಿದ್ದು, ಲ್ಯಾಟಿನ್ ಅಮೇರಿಕ ದೇಶಗಳ ವಿದೇಶೀ ಸಾಲಗಳ ರದ್ಧತಿಗಾಗಿ ಫಿಡೆಲ್ ಕೆಲಸ ಮಾಡಿದರು. 90’ರ ದಶಕದಲ್ಲಿ ಸಮಾಜವಾದಿ ಸೋವಿಯತ್ ರಷ್ಯಾದ ಕುಸಿತದಿಂದ ಕ್ಯೂಬನ್ ಕ್ರಾಂತಿ ಸಂಕಷ್ಟಗಳಿಗೆ ಸಿಲುಕಿತು. ಅದನ್ನು ‘ವಿಶೇಷ ಅವಧಿ’ ಎನ್ನಲಾಗಿದೆ. ವಿರೋಧಿಗಳೂ ಆಶ್ಚರ್ಯ ಪಡುವಂತೆ ಫಿಡೆಲ್ ನೇತೃತ್ವದಲ್ಲಿ ಆ ಸಂದರ್ಭವನ್ನು ನಿಭಾಯಿಸಿದರು.

 

ಇದನ್ನೂ ಓದಿ : ‘ಪ್ರೀತಿಯ ಫಿಡೆಲ್: ಹೋರಾಟಗಳ ಸ್ಫೂರ್ತಿ ಫಿಡೆಲ್ ಕ್ಯಾಸ್ಟ್ರೋ

ಫಿಡೆಲ್ ಸತ್ತರೆ ಏನಾಗಬಹುದೆಂಬ ಲೆಕ್ಕಾಚಾರ ಸಾಮ್ರಾಜ್ಯಕ್ಕೆ ತುಂಬಾ ಅಪ್ಯಾಯಮಾನವಾಗಿತ್ತು. ಫಿಡೆಲ್ ನಂತರ ಅಧಿಕಾರದ ಏಣಿಯಲ್ಲಿ ಅಷ್ಟೇ ಸಮರ್ಥರಾದ ನಾಯಕರು ಯಾರೂ ಇಲ್ಲ ಎಂದು ಭಾವಿಸಿದರು. ಪೂರ್ವ ಯೂರೋಪಿನಲ್ಲಾದಂತೆ, ಬರ್ಲಿನ್ ಗೋಡೆಯನ್ನು ಕೆಡವಿ ಹಾಕಿದಂತೆ ಕ್ಯೂಬನ್ ವ್ಯವಸ್ಥೆ ಕುಸಿದು ಬೀಳುತ್ತದೆ ಅಥವಾ ಅದನ್ನು ಕೆಡವಿ ಹಾಕಲಾಗುತ್ತದೆ ಎಂದು ಕೆಲವು ಚಿಂತಕರು ಮತ್ತು ವಿಮರ್ಶಕರು ವಿಶ್ಲೇಷಣೆ ಮಾಡಿದರು. ಆದರೆ ಅದು ಅವರ ಆಶಾ ಗೋಪುರವಾಗಿತ್ತು. ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕ್ಯೂಬಾದಲ್ಲಿ ನಡೆದಿದ್ದನ್ನು ಗುರುತಿಸಲು ಅಮೇರಿಕದ ನೂತನ ಪ್ರತಿಗಾಮಿಗಳು ವಿಫಲರಾಗಿದ್ದರು. ಕ್ಯೂಬಾದ ವ್ಯವಸ್ಥೆ ಪೂರ್ವ ಯೂರೋಪಿನ ರೀತಿಯಲ್ಲಿ ಹೊರಗಿನಿಂದ ಹೇರಲ್ಪಟ್ಟಿದ್ದಲ್ಲ, ಬದಲಿಗೆ ಜನತೆಯ ಚಳುವಳಿಯ ಮೂಲಕ ರೂಪಿಸಲ್ಪಟ್ಟಿತ್ತು ಎಂಬುದನ್ನು ಅವರು ಗುರುತಿಸದಾದರು. ತಮ್ಮ ದೈಹಿಕ ಸಮಸ್ಯೆಯಿಂದಾಗ ಜುಲೈ ೨೦೦೬ ರಲ್ಲಿ ಫಿಡೆಲ್ ಪ್ರಭುತ್ವದ ಎಲ್ಲಾ ಅಧಿಕಾರವನ್ನು ರಾಲ್ ಕ್ಯಾಸ್ಟೊçà ನೇತೃತ್ವದ ಏಳು ಜನರ ಕೈಗೆ ಹಸ್ತಾಂತರಿಸಿದಾಗ ಅಮೇರಿಕದ ಪ್ರತಿಗಾಮಿ ಶಕ್ತಿಗಳು ಕ್ಯೂಬಾ ಕುಸಿತದ ಭ್ರಮೆಯಲ್ಲಿ ಮುಳುಗಿದ್ದರು. ಕೆಲವರಂತೂ ಕೂಡಲೇ ಕ್ಯೂಬಾದಲ್ಲಿ ಪ್ರತಿಕ್ರಾಂತಿಯನ್ನು ಸಂಘಟಿಸಿ ಅಧಿಕಾರ ಹಿಡಿಯುವಂತೆ ಕರೆ ನೀಡಿದರೂ ಕೂಡಾ! ಸಮಾಜವಾದಿ “ಪ್ರಭುತ್ವವನ್ನು ಉರುಳಿಸಲು, ಮಿಲಿಟರಿ ಮತ್ತು ನಾಗರಿಕ ದಂಗೆ ನಡೆಸಬೇಕೆಂದು” ಕ್ಯೂಬನ್-ಅಮೇರಿಕನ್ ನ್ಯಾಷನಲ್ ಫೌಂಡೇಷನ್ ಕರೆ ನೀಡಿತು. ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ ಕ್ಯೂಬನ್ ಜನತೆಗೆ ಸಂದೇಶವನ್ನು ಕಳುಹಿಸಿ ರಾಷ್ಟಿçÃಯ ದಂಗೆಯನ್ನು ನಡೆಸಲು ಕರೆ ನೀಡಿದರು: “ಪ್ರಜಾಪ್ರಭುತ್ವ ಪಥಕ್ಕೆ ಬದ್ಧವಾದ ಒಂದು ಸ್ಥಿತ್ಯಂತರ ಸರ್ಕಾರವನ್ನು … ಸ್ಥಾಪಿಸುವ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಹೇಳಿದರು. “ಮುಕ್ತ ಕ್ಯೂಬಾ”ವನ್ನು ವಿರೋಧಿಸುವ ಕ್ರಾಂತಿಯ ಬೆಂಬಲಿಗರನ್ನು ತೀವ್ರವಾಗಿ ಪರಿಗಣಿಸುತ್ತೇವೆ ಎಂದು ಎಚ್ಚರಿಸಿದರು. ಆದರೆ ಕಾಲ ಕಳೆದಂತೆ ಕ್ಯೂಬಾದಲ್ಲಿ ಅಂತಹ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಕ್ಯೂಬನ್ ಕ್ರಾಂತಿ ಹೊರಗಿನಿಂದ ಹೇರಿದ್ದಲ್ಲ, ಆ ಸಮಾಜದೊಳಗಿಂದ ಅಲ್ಲಿನ ಜನತೆ ಕಟ್ಟಿದ್ದು ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಅಮೇರಿಕದ ಆಕ್ರಮಣದ ವಿರುದ್ಧ ಕ್ಯೂಬನ್ ಜನತೆಯ ಚಾರಿತ್ರಿಕವಾದ ಹೋರಾಟದ ಪರಂಪರೆಯಲ್ಲಿ ಬೇರುಬಿಟ್ಟ ದೇಶಪ್ರೇಮದ ಕ್ರಾಂತಿಯದು. ಹೀಗಾಗಿ ಕ್ಯೂಬನ್ನರ ವಿಚಾರಗಳಲ್ಲಿ ಕ್ರಾಂತಿ ಬೆರೆತು ಹೋಗಿದೆ. ಎಲ್ಲಿವರೆಗೆ ಬಹುಸಂಖ್ಯಾತ ಕ್ಯೂಬನ್ನರು ಸಮಾಜವಾದಿ ವಿಚಾರಗಳ ಆಧಾರದಲ್ಲಿ ಪ್ರೇರಿತರಾಗಿರುತ್ತಾರೋ, ಅಲ್ಲಿಯವರೆಗೆ ಅಮೇರಿಕದ ಪ್ರತಿಗಾಮಿ ಶಕ್ತಿಗಳ ಕನಸು ನನಸಾಗುವುದಿಲ್ಲ.

ರಷ್ಯನ್ ಕ್ರಾಂತಿಯ ಮೂಲಕ ಜಗತ್ತಿನ ಮೇಲೆ ಪ್ರಭಾವ ಬೀರಿದ ಲೆನಿನ್ ನಂತರ ಅಂತಹುದೊಂದು ಪ್ರಭಾವ ಬೀರಿದ್ದು ಫಿಡೆಲ್ ಎಂದರೆ ತಪ್ಪಾಗಲಿಕ್ಕಿಲ್ಲ. ಮೂರನೇ ಜಗತ್ತಿನ ಎಡ ಮತ್ತು ಪ್ರಗತಿಪರ ಚಳುವಳಿಗಳ ಮೇಲೆ ಅಪಾರ ಪರಿಣಾಮವನ್ನು ಬೀರಿದ ಕ್ಯೂಬಾದ ಸಮಾಜವಾದಿ ಕ್ರಾಂತಿಯು, ಫಿಡೆಲ್‌ರ ಮಾರ್ಕ್ಸ್ವಾದಿ ಸಿದ್ದಾಂತ ಮತ್ತು ಆಚರಣೆಯ ಒಂದು ಕಾಣಿಕೆಯಾಗಿದೆ. ಚೀನಾದಲ್ಲಿ ಮಾವೋ ಮತ್ತು ವಿಯೆಟ್ನಾಂನಲ್ಲಿ ಹೊ ಚಿ ಮಿನ್ಹ್ ಅವರಂತೆ ಫಿಡೆಲ್ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಕ್ಷಣ ಕ್ಷಣವೂ ಅಮೇರಿಕದ ಸಾಮ್ರಾಜ್ಯಶಾಹಿಗಳ ಕುತಂತ್ರಗಳನ್ನು ಎದುರಿಸುತ್ತಾ ಇಡೀ ಜೀವನವನ್ನು ಜನತೆಗಾಗಿ ಮುಡಿಪಿಟ್ಟ ಫಿಡೆಲ್‌ರದು ತೆರದಿಟ್ಟ ಬದುಕು. ತಮ್ಮ ತಂದೆ ಸಂಪಾದಿಸಿದ್ದ ಸುಮಾರು ೨೫,೦೦೦ ಎಕರೆ ಭೂಮಿಯನ್ನು ಕ್ರಾಂತಿಯಾಗುತ್ತಲೇ ಜನರಿಗೆÀ ಫಿಡೆಲ್ ಹಂಚಿಕೆ ಮಾಡಿದರು. ವಾರದ ಏಳೂ ದಿನವೂ ಕೆಲಸ ಮಾಡುತ್ತಿದ್ದ ಫಿಡೆಲ್‌ಗೆ ದಿನ ಕೊನೆಯಾಗುತ್ತಿದ್ದುದು ಮುಂಜಾನೆ ೪ ಅಥವಾ ೫ ಗಂಟೆಗೆ. ದಿನವೊಂದಕ್ಕೆ ಸರಾಸರಿ ೪ ಗಂಟೆ ನಿದ್ರೆ ಮಾಡುತ್ತಿದ್ದ ಫಿಡೆಲ್ ಅತ್ಯಂತ ಕ್ರಿಯಾಶೀಲ ಮತ್ತು ಅಪಾರ ಜ್ಞಾನ ಸಂಪತ್ತಿನ ಕಣಜ. ಭವಿಷ್ಯದ ಬಗ್ಗೆ ಅಂದಾಜು ಮಾಡುವುದು ಮತ್ತು ಇತಿಹಾಸದ ಬಗ್ಗೆ ಆಸಕ್ತಿ ಫಿಡೆಲ್‌ರ ವಿಶೇಷ. ಅವರ ದಣಿವರಿಯದ ದುಡಿತದ ವೇಗಕ್ಕೆ ಯಾರೂ ಸಾಟಿಯಿಲ್ಲ. ಜಾಗತೀಕರಣದ ಅಪಾಯಗಳ ಬಗ್ಗೆ ಯುವಜನತೆಯನ್ನು ಸಜ್ಜುಗೊಳಿಸಲು ತುಂಬಾ ಮಹತ್ವ ನೀಡುತ್ತಿದ್ದರು. ಫಿಡೆಲ್ ನಿಖರತೆ, ಖಚಿತತೆ, ನಿಷ್ಕೃಷ್ಟತೆ, ಶಿಸ್ತು ಇವುಗಳನ್ನು ತುಂಬಾ ಪಾಲಿಸುತ್ತಿದ್ದರು. ಯಾವುದೇ ವಿಚಾರದಲ್ಲಿ ಗಣಿತದ ರೀತಿಯ ಖಚಿತತೆ ಬಯಸುತ್ತಿದ್ದರು. ಅಂದಾಜು ಮಾಡಿ ಹೇಳುವುದನ್ನು ಅವರು ಒಪ್ಪುತ್ತಿರಲಿಲ್ಲ. ಜ್ಞಾಪಕ ಶಕ್ತಿಗೆ ಮತ್ತೊಂದು ಹೆಸರನ್ನು ಏನಾದರೂ ಕೊಡುವುದಿದ್ದರೆ ಅದನ್ನು ಫಿಡೆಲ್ ಎನ್ನಬೇಕು. ಕ್ಯೂಬಾದ ಜನಮನವೆಲ್ಲವನ್ನೂ ಆವರಿಸಿಕೊಂಡಿದ್ದ ಫಿಡೆಲ್ ಭೌತಿಕವಾಗಿ ಇಲ್ಲವೆನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಾಲ ಹಿಡಿಯುತ್ತದೆ. ಆದರೆ ಹೆಚ್ಚುತ್ತಿರುವ ಬಂಡವಾಳಶಾಹಿ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಫಿಡೆಲ್‌ರ ವಿಚಾರಗಳು ಜೀವಂತವಾಗಿವೆ. ಭಾರತದಲ್ಲಿನ ಜನಪರ ಮತ್ತು ಕ್ರಾಂತಿಕಾರಿ ಹೋರಾಟಗಳಿಗೆ ಒಂದು ಸಮೃದ್ಧ ಅನುಭವವಾಗಿ ಫಿಡೆಲ್ ಮತ್ತು ಕ್ಯೂಬಾ ನಮ್ಮ ಮುಂದಿದ್ದಾರೆ.

ಒಬ್ಬ ಕ್ರಾಂತಿಕಾರಿಗೆ ಮಾರ್ಕ್ಸ್ವಾದ ಮತ್ತು ಲೆನಿನ್‌ವಾದ ಕಾಂಪಾಸ್ ಇದ್ದ ಹಾಗೆ, ಅದಿಲ್ಲದೆ ಮುನ್ನಡೆಯಲಾಗದು ಎಂಬುದು ಫಿಡೆಲ್ ವಾದ. ‘ಸಮಾಜವಾದ ಇಲ್ಲವೇ ಸಾವು’ ಎನ್ನುವ ಫಿಡೆಲ್‌ರ ಘೋಷಣೆಗಳು ಹತಾಶೆಯ ಮಾತುಗಳಲ್ಲ, ಬದಲಿಗೆ ಅವು ‘ವೈಚಾರಿಕ ಸಂಘರ್ಷ’ದ ಪ್ರತೀಕವಾಗಿವೆ. ‘ವ್ಯಕ್ತಿಗಳನ್ನು ಕೊಲ್ಲಬಹುದು, ಚಿಂತನೆಗಳನ್ನು ಕೊಲ್ಲಲಾಗದು’ ಎಂದು ಬಲವಾಗಿ ಪ್ರತಿಪಾದಿಸಿದ ಫಿಡೆಲ್, ಜಾಗತೀಕರಣವನ್ನು ಎದುರಿಸಲು ಜಗತ್ತಿನ ತುಂಬೆಲ್ಲಾ ಸಮಾಜವಾದಿ ಚಿಂತನೆಗಳನ್ನು ಜಾಗತೀಕರಿಸಬೇಕು ಎನ್ನುತ್ತಾರೆ.

ಈ ರೀತಿಯಾಗಿ ಫಿಡೆಲ್‌ರನ್ನು ಸಮಗ್ರವಾಗಿ ಜಗತ್ತಿಗೆ ತೆರೆದಿಟ್ಟ ಇಗ್ನೇಷಿಯೊ ರಮೊನೆಟ್‌ರವರು (Ignacio Ramonet)  ಜಿಯೋಪೊಲಿಟಿಕ್ಸ್, ಆರ್ಥಶಾಸ್ತç, ಸಂಸ್ಕೃತಿ ಇತಿಹಾಸದ ತಜ್ಞರು. ಪ್ಯಾರಿಸ್‌ನಲ್ಲಿರುವ ಡೆನಿಸ್ ಡಿದೆರಾಟ್ ವಿಶ್ವವಿದ್ಯಾಲಯದಲ್ಲಿ ಸಂವಹನ ಸಿದ್ಧಾಂತದ ಪ್ರಾಧ್ಯಾಪಕರು. ಫ್ರೆಂಚ್ ಮ್ಯಾಗಜೈನ್ ಲೆ ಮಾಂಡೆ ಡಿಪ್ಲೊಮ್ಯಾಟಿಕ್‌ನ (Le Monde Diplomatique) ದೀರ್ಘಕಾಲದ ಸಂಪಾದಕರು. ಪೋರ್ಟ್ ಅಲೆಗ್ರೆಯಲ್ಲಿ ನಡೆದ ಮೊದಲ ವಿಶ್ವ ಸಾಮಾಜಿಕ ವೇದಿಕೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮೀಡಿಯಾ ವಾಚ್ ಗ್ಲೋಬಲ್ ಎಂಬ ಎನ್‌ಜಿಓ ನಡೆಸುತ್ತಾರೆ. ನಿಯಮಿತವಾಗಿ ಎಲ್ ಪಾಯ್ಸ್ಗೆ (El Pais) ಬರೆಯುತ್ತಾರೆ. ಅಮೇರಿಕದ ಟಿವಿ ಸಾಮ್ರಾಜ್ಯಶಾಹಿ ಹಿಡಿತದ ವಿರುದ್ಧವಾಗಿ ಚಾವೇಜ್, ಫಿಡೆಲ್ ಮತ್ತಿತರರ ಮುತುವರ್ಜಿಯಿಂದ ಆರಂಭವಾದ ದಕ್ಷಿಣ ಅಮೇರಿಕದ ಪರ್ಯಾಯ ದೂರದರ್ಶನ ಜಾಲ ಟೆಲಿಸೂರ್‌ನ (TeleSUR) ಸಲಹಾ ಮಂಡಳಿಯಲ್ಲಿದ್ದಾರೆ.

ಹೀಗಿರುವಾಗ, ಸಂಗಾತಿ ವಸಂತರಾಜ್ ಅವರು ಈ ಪುಸ್ತಕವನ್ನು ಒಮ್ಮೆ ತೋರಿಸಿ ಇದನ್ನು ಕನ್ನಡಕ್ಕೆ ತಂದರೆ ಹೇಗೆ ಎಂದು ಕೇಳಿದರು. ನಾನು ಕೂಡಲೇ ಹೌದು ಎಂದು ಹೇಳಿದೆ. ನನ್ನ ತಕ್ಷಣದ ಒಪ್ಪಿಗೆಗೆ ಎರಡು ಕಾರಣಗಳಿದ್ದವು. ಫಿಡೆಲ್ ಬಗ್ಗೆ ಮತ್ತು ಪುಟ್ಟ ರಾಷ್ಟçದ ಸಾಹಸಗಳ ಬಗ್ಗೆ ನನಗಿದ್ದ ಆಸಕ್ತಿ, ಮತ್ತು ನಾನು ೧೯೯೭ ರಲ್ಲಿ ಹವಾನಾದಲ್ಲಿ ನಡೆದ ‘ವಿಶ್ವ ವಿದ್ಯಾರ್ಥಿ ಮತ್ತು ಯುವಜನ ಉತ್ಸವ’ದಲ್ಲಿ ಭಾಗವಹಿಸಿದ್ದೆ. ಅಲ್ಲಿ ಫಿಡೆಲ್‌ರನ್ನು ನೋಡಿದ್ದೆ, ರೋಮಾಂಚಿತನಾಗಿದ್ದೆ ಎಂಬ ಕಾರಣಕ್ಕೆ. ರಮೊನೆಟ್ ಯಾವ ಸದುದ್ದೇಶದಿಂದ ಇಂತಹ ಒಂದು ಸಾಹಸ ಯಾತ್ರೆಯನ್ನು ಕೈಗೊಂಡರೋ ಅದನ್ನು ಕನ್ನಡದ ಓದುಗರಿಗೆ ತಲುಪಿಸುವ ಮಹದಾಸೆಯನ್ನು ನಾವು ಹೊಂದಿದೆವು. ರಮೊನೆಟ್‌ರ ನೂರು ಗಂಟೆಗಳ ಸಂದರ್ಶನ ಪುಸ್ತಕ ಫಿಡೆಲ್‌ರ ಪ್ರಾರಂಭದ ದಿನಗಳಿಂದ ಸುಮಾರು ೨೦೦೫ ಇಸವಿಯವರೆಗೆ ಒಳಗೊಳ್ಳುತ್ತದೆ. ಸುಮಾರು ೭೦೦ ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ಇದನ್ನು ಯಥಾವತ್ತಾಗಿ ಭಾಷಾಂತರ ಮಾಡಿದರೆ ಕನ್ನಡದ ಸಾಮಾನ್ಯ ಓದುಗರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ಕಷ್ಟಸಾಧ್ಯವಾಗುತ್ತದೆ ಎಂದು ಭಾವಿಸಿದೆವು. ಓದುಗರ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಅದರ ಮೂರನೇ ಒಂದು ಭಾಗದಷ್ಟು ಕನ್ನಡದ ಪುಸ್ತಕವನ್ನು ತರಬೇಕೆಂದು ಯೋಚಿಸಿದೆವು. ಇದನ್ನು ಯೋಜಿಸಿ ಮೂರು ವರ್ಷಗಳೇ ಕಳೆದಿತ್ತು. ನಡುವೆ ಜನಶಕ್ತಿ ಪತ್ರಿಕೆಯಲ್ಲಿ ಧಾರವಾಹಿಯಾಗಿ ಬರುತ್ತಿತ್ತು. ಫಿಡೆಲ್‌ರದು ನೂರಕ್ಕೆ ಮುಂಚೆ ಸಾಯುವ ಭೌತಿಕ ದೇಹವಲ್ಲ ಎಂಬ ನನ್ನ ವಿಚಿತ್ರ ನಂಬಿಕೆಯೂ ಈ ನಿಧಾನಗತಿಗೆ ಕಾರಣವಾಗಿತ್ತು. ಈ ನಡುವೆ ಈ ಕಥಾನಕದ ಕೇಂದ್ರ ಬಿಂದು ಫಿಡೆಲ್ ತಮ್ಮ ಇಳಿ ವಯಸ್ಸಿನಲ್ಲಿ ತೀರಿಕೊಂಡರು. ಬದುಕಿರುವಾಗ ಫಿಡೆಲ್‌ರನ್ನು ಹೆಚ್ಚು ಓದುವಂತೆ ಮಾಡಲಾಗದಿದ್ದರೂ, ಅವರ ಚಿಂತನೆಗಳ ಮೂಲಕ ಹೆಚ್ಚು ಓದುವಂತೆ ಮಾಡಬೇಕೆಂಬ ಆಶಯದಿಂದ ಈ ಪುಸ್ತಕವನ್ನು ಈಗ ನಿಮ್ಮ ಕೈಗಿಡಲಾಗುತ್ತಿದೆ. ಕನ್ನಡದ ಈ ಕೃತಿ ಇಗ್ನೇಷಿಯೋ ರಮೊನೆಟ್ ಅವರ ಕೃತಿಯ ಯಥಾವತ್ ಭಾಷಾಂತರವಲ್ಲ. ಕೆಲವು ಮಾಹಿತಿಗಳನ್ನು ಬೇರೆ ಮೂಲಗಳಿಂದಲೂ ಪಡೆದು ಇದರಲ್ಲಿ ಬಳಸಲಾಗಿದೆ. ಆದರೆ ತಿರುಳು ರಮೊನೆಟ್‌ರದೇ ಆಗಿದೆ.

ಸಮಾಜವಾದಿ ಬಣ ಕುಸಿದು, ಸೋವಿಯತ್ ರಷ್ಯಾ ವಿಘಟನೆಯಾಗಿ, ಕ್ಯೂಬಾ “ವಿಶೇಷ ಅವಧಿ”ಗೆ ಒಳಗಾದಾಗ, ಭಾರತದಾದ್ಯಂತ ಬೀದಿ ಬೀದಿಗಳಲ್ಲಿ ಆಹಾರವನ್ನು ಮತ್ತು ಔಷಧಿಗಳನ್ನು ಸಂಗ್ರಹ ಮಾಡಿ ಕ್ಯೂಬಾಕ್ಕೆ ಕಳುಹಿಸಲಾಗಿತ್ತು. “ಕ್ಯೂಬಾ ಸೌಹಾರ್ದತಾ ಸಮಿತಿ”ಗಳನ್ನು ರಚಿಸಲಾಗಿತ್ತು. ಬೆಂಗಳೂರಿನಲ್ಲಿ ಕಮ್ಯುನಿಸ್ಟ್ ಪಕ್ಷಗಳ ಕಾರ್ಯಕರ್ತರು, ಸಮಾಜವಾದಿಗಳು, ಸಾಹಿತಿಗಳು, ಬರಹಗಾರರು, ಕವಿಗಳು, ಬುದ್ದಿಜೀವಿಗಳು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಹೀಗೆ ವಿವಿಧ ವಿಭಾಗಗಳ ಜನರನ್ನು ಇದರಲ್ಲಿ ಒಳಗೊಳ್ಳಲಾಗಿತ್ತು. ಈ ರೀತಿ ದೇಶಾದ್ಯಂತ ಸಂಗ್ರಹ ಮಾಡಿದ 10,105  ಟನ್ ಆಹಾರವನ್ನು ಮತ್ತು ಔಷಧಿಯನ್ನು ಹೊತ್ತ ಸೌಹಾರ್ದತಾ ಹಡಗು, ಅಂದಿನ ಭಾರತದ ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಂ.ಹರ್ಕಿಷನ್‌ಸಿಂಗ್ ಸುರ್ಜಿತ್ ಮತ್ತು ಭಾರತದ ‘ಕ್ಯೂಬಾ ಸೌಹಾರ್ದತಾ ಸಮಿತಿ’ಯ ಸಂಚಾಲಕರಾಗಿದ್ದ ಕಾಂ.ಎA.ಎ.ಬೇಬಿ ಅವರ ನೇತೃತ್ವದಲ್ಲಿ ಹವಾನಾ ಬಂದರು ತಲುಪಿದಾಗ ಸ್ವತಃ ಫಿಡೆಲ್ ಬಂದು ಅದನ್ನು ಸ್ವಾಗತಿಸಿದರು. “10,105 ಟನ್ ಗೋಧಿ ಮತ್ತು ಔಷಧಿಗಳು ಕೇವಲ ಸಾಂಕೇತಿಕವಲ್ಲ, ಅದಕ್ಕಿಂತಲೂ ಹೆಚ್ಚು, ಇವು 10,105 ಟನ್‌ಗಳಷ್ಟು ಸೌಹಾರ್ದತೆ ಮತ್ತು ನೈತಿಕ ಬೆಂಬಲ. ಇವು ನಮ್ಮನ್ನು ಹೆಚ್ಚು ಅತರಾಷ್ಟ್ರೀಯಗೊಳಿಸುತ್ತವೆ, ಮಾತ್ರವಲ್ಲ ಹೆಚ್ಚು ದೇಶಪ್ರೇಮಿಗಳನ್ನಾಗಿ, ಹೆಚ್ಚೆಚ್ಚು ಕ್ರಾಂತಿಕಾರಿಗಳನ್ನಾಗಿ ಮತ್ತು ನಮ್ಮ ವೈಭವದ ಉದ್ದೇಶವನ್ನು ರಕ್ಷಿಸಿಕೊಳ್ಳಲು ಹೆಚ್ಚು ದೃಢತೆಯುಳ್ಳವರನ್ನಾಗಿ ಮಾಡುತ್ತದೆ” ಎಂದು ಘೋಷಿಸಿದರು.

ಭಾರತದ ಜೊತೆಗಿನ ಕ್ಯೂಬನ್ ಭಾಂಧವ್ಯ ಕೇವಲ ಸಾಂಕೇತಿಕವಾದುದಲ್ಲ. 1997 ರಲ್ಲಿ ವಿಶ್ವ ವಿದ್ಯಾರ್ಥಿ ಯುವಜನ ಉತ್ಸವದಲ್ಲಿ ಭಾರತದ ನಿಯೋಗಕ್ಕೆ ಕ್ಯೂಬನ್ ಜನರು ನೀಡಿದ ಅಭೂತಪೂರ್ವ ಕರತಾಡನವನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಹತ್ತಾರು ಸಹಸ್ರ ಕಿ.ಮೀ.ದೂರವಿರುವ ಭಾರತದ ಬಗೆಗ್ಯಾಕೆ ಈ ಕ್ಯೂಬನ್ನರಿಗೆ ಇಷ್ಟೊಂದು ಪ್ರೀತಿ ಎಂಬುದು ಆಗ ಕೇವಲ ರೋಮಾಂಚನದ ವಿಷಯವಾಗಿತ್ತು. ವಸಾಹತುಶಾಹಿಯ ವಿರುದ್ಧ, ಸಾಮ್ರಾಜ್ಯವಾದದ ವಿರುದ್ಧ, ನವ-ಉದಾರವಾದದ ವಿರುದ್ಧ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ನೀನು ಸಿಡಿದೆದ್ದರೆ ಆಗ ನೀನು ನನ್ನ ಸಂಗಾತಿ ಎಂದ ಚೆ ಗೆವಾರನ ಆಶಯದಂತೆ ಧ್ವನಿಯೆತ್ತುತ್ತಿದ್ದ ಭವ್ಯ ಭಾರತದ ಜನತೆಗೆ ನೀಡಿದ ಕರತಾಡನವದು ಎಂದು ನಂತರ ತಿಳಿದಿತ್ತು.

ಬದಲಾವಣೆಯಲ್ಲಿ ಅಚಲ ನಂಬಿಕೆ ಹೊಂದಿದ್ದ ಫಿಡೆಲ್‌ರ ಭೌತಿಕ ದೇಹ ನಮ್ಮೊಂದಿಗಿಲ್ಲ. ಫಿಡೆಲ್‌ರ ನಂತರ ಕ್ಯೂಬಾವನ್ನು ಮುಗಿಸಿಬಿಡಬಹುದೆಂಬ ಅಮೇರಿಕನ್ ಸಾಮ್ರಾಜ್ಯದ ಕನಸು ನನಸಾಗದಂತೆ ಕ್ಯೂಬನ್ ಜನತೆ ತಡೆಯುತ್ತಾರೆ. ಯಾಕೆಂದರೆ ಅವರು ನಡೆಸುವ ಯುದ್ಧದಲ್ಲಿ ಶಸ್ತಾçಸ್ತçಗಳಿಲ್ಲ. ವಿಚಾರಗಳೆಂಬುದು ಕ್ಯೂಬನ್ನರ ತಲೆಯನ್ನು ಹೊಕ್ಕು ಆಯುಧಗಳಾಗಿವೆ. ಕೇವಲ ಒಂದು ಕೋಟಿ ಜನತೆಯ ವೈಚಾರಿಕ ಸಾಮರ್ಥ್ಯ ಜಗತ್ತಿನ ಸಾಮ್ರಾಜ್ಯವನ್ನು ನಿದ್ದೆಗೆಡಿಸಿದೆ. ಸಾಮ್ರಾಜ್ಯದ ಮೂರು ಪಟ್ಟು ಜನಸಂಖ್ಯೆಯನ್ನು ಹೊಂದಿರುವ ಬೃಹತ್ ಭಾರತದ ೧೩೦ ಕೋಟಿ ಜನತೆ ಸಮಾಜವಾದವೆಂಬ ವೈಚಾರಿಕ ಅಸ್ತ್ರಗಳನ್ನು ಹಿಡಿದರೆ? ಬದಲಾಗುತ್ತಿರುವ ಭಾರತದಿಂದ ಫಿಡೆಲ್, ಕ್ಯೂಬಾ, ಇಡೀ ಜಗತ್ತು ಬಯಸುತ್ತಿರುವುದು ಇದನ್ನೇ ಎಂದೆನಿಸುತ್ತದೆ.

ಇದನ್ನೂ ನೋಡಿ : ಅಮೆರಿಕಾದ ಎದೆ ನಡುಗಿಸಿದ್ದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ Janashakthi Media

Donate Janashakthi Media

Leave a Reply

Your email address will not be published. Required fields are marked *