ಬಿಜೆಪಿ ನಾಯಕರ ನಿವಾಸದ ಬಳಿ ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ದೇಶವ್ಯಾಪಿ ಹೋರಾಟ ನಡೆಸಿದ ರೈತರು

ಚಂಡೀಗಡ: ಕಳೆದ ವರ್ಷ ಇದೇ ದಿನ ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿದ ಕೃಷಿ ಕಾನೂನುಗಳ ಸುಗ್ರೀವಾಜ್ಞೆಯು ರೈತ ವಿರೋಧಿಯಾಗಿದ್ದು ಇದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಇಂದು ‘ಸಂಪೂರ್ಣ ಕ್ರಾಂತಿ ದಿವಸ್’ ಆಚರಿಸಿದ ರೈತ ಪ್ರತಿಭಟನಾಕಾರರು ಚಂಡೀಗಢದ ಬಿಜೆಪಿ ನಾಯಕರ ಮನೆಗಳ ಮುಂಭಾಗ ಹಾಗೂ  ಪಂಜಾಬ್‌ನ ಇತರ ಸ್ಥಳಗಳಲ್ಲಿ ಮೂರು ಕೃಷಿ ಕಾಯ್ದೆಯ ಪ್ರತಿಗಳನ್ನು ಸುಟ್ಟುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳಿನಿಂದ ನಿರಂತರವಾಗಿ ವಿವಿಧ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದ ನೂರಕ್ಕೂ ಹೆಚ್ಚಿನ ಜಂಟಿ ರೈತ ಸಂಘಟನೆಯ ನೇತೃತ್ವದಲ್ಲಿ ಈ ಧೀರೋಧಾತ ಹೋರಾಟವು ನಡೆದಿದೆ.

ಇದನ್ನು ಓದಿ: ಮೇ 26: “ಕರಾಳ ದಿನ” ಆಚರಣೆಗೆ ಐತಿಹಾಸಿಕ ಜನಸ್ಪಂದನೆ

ಕಪ್ಪು ಬಾವುಟಗಳನ್ನು ಹಿಡಿದುಕೊಂಡು ಬಿಜೆಪಿ ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರೈತರು ಕೃಷಿ ಕಾನೂನುಗಳನ್ನು ರದ್ದುಗೊಸಬೇಕೆಂದು ಆಗ್ರಹಿಸಿದರು. ಇದು ಕೃಷಿ ಸಮುದಾಯವನ್ನು ‘ನಾಶಪಡಿಸುತ್ತದೆ’ ಎಂದು ಅವರು ಹೇಳಿದರು.

ರೈತರ ಪ್ರತಿಭಟನೆ-ಹೋರಾಟದ ನಡುವೆಯೂ ಕೇಂದ್ರದ ಬಿಜೆಪಿ ಸರ್ಕಾರ ಕಳೆದ ವರ್ಷ ಕೃಷಿ ಕಾಯ್ದೆಯನ್ನು ಸಂಸತ್​ನಲ್ಲಿ ಮಂಡಿಸಿತ್ತು. ಕೊರೊನಾ ಸಾಂಕ್ರಾಮಿಕ ರೋಗವನ್ನೂ ಲೆಕ್ಕಿಸದೆ, ಕಳೆದ ವರ್ಷ ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ಸಮಯದ ಪರಿಸ್ಥಿತಿಯ ಲಾಭ ಪಡೆದ ಕೇಂದ್ರ ಸರ್ಕಾರ, ಜೂನ್ 5ರಂದು ಸುಗ್ರೀವಾಜ್ಞೆಗಳ ಮೂಲಕ ಹೊಸ ಕೃಷಿ ಕಾನೂನುಗಳನ್ನು ಜಾರಿ ಮಾಡಿತ್ತು. ಅದಕ್ಕೆ ಒಂದು ವರ್ಷ ತುಂಬುತ್ತಿದ್ದು, ಇದೇ ಜೂನ್ 5 ರಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು ಮತ್ತು ಶಾಸಕರ ಕಚೇರಿಗಳ ಮುಂದೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು ‘ಸಂಪೂರ್ಣ ಕ್ರಾಂತಿ ದಿನ’ವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿತು.

ಸಂಪೂರ್ಣ ಕ್ರಾಂತಿಯ ಮಹತ್ವದ ದಿನ ಇಂದು:

1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಎಂದು ಘೋಷಿಸಿ ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಆಂದೋಲನವನ್ನು ಪ್ರಾರಂಭಿಸಿದ್ದರು. ಅದೇ ನೆನಪಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ. 1974ರ ಜೂನ್ 5ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಬಿಹಾರದ ಜನರಿಗೆ ಸಂಪೂರ್ಣ ಕ್ರಾಂತಿ ದಿವಸ್’ ಎಂದು ಆಚರಿಸಿಲು ಕರೆ ನೀಡಿದ್ದರು. ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರತಿ ಹಳ್ಳಿಯಲ್ಲೂ `ಜನತಾ ಸರ್ಕಾರ್’ ರಚಿಸಿದ್ದರು.

ಇದನ್ನು ಓದಿ: ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ರೈತರ ಎಚ್ಚರಿಕೆ

ದೇಶವ್ಯಾಪಿ ವಿವಿದೆಡೆ ಪ್ರತಿಭಟನೆ

ಇಂದು ನಡೆದ ಪ್ರತಿಭಟೆಯು ದೇಶವ್ಯಾಪ್ತಿ ಹಲವು ರಾಜ್ಯಗಳಲ್ಲಿ ಪ್ರಮುಖ ಭಾಗಗಳಲ್ಲಿ ಹಾಗೂ ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ಹೋರಾಟವನ್ನು ಹಮ್ಮಿಕೊಂಡಿದ್ದರು.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಶೋಷಣೆಗೆ ಒಳಪಡಿಸಲಿದೆ. ಈ ಮೂಲಕ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲಿದೆ  ಎಂದು ರೈತರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ರೈತರು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಹರಿಯಾಣ, ಪಂಜಾಬ್ ರೈತರು ಸತತವಾಗಿ  6 ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಫಾಗ್ವಾರಾದ ಅರ್ಬನ್ ಎಸ್ಟೇಟ್‌ನಲ್ಲಿ ಕೇಂದ್ರ ಸಚಿವ ಸೋಮಪ್ರಕಾಶ್ ಅವರ ನಿವಾಸದ ಬಳಿ ರೈತರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟರು, ಜಿಟಿ ರಸ್ತೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಅಲ್ಲಿಗೆ ಬರದಂತೆ ತಡೆಯಲು ಪೊಲೀಸರು ಸಚಿವರ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದರು.

ಆಕ್ರೋಶಗೊಂಡ ರೈತರು ಮೊಹಾಲಿ ಜಿಲ್ಲೆಯ ಪ್ರಕಾಶ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕರ್ನಾಟಕದಲ್ಲಿಯೂ ವಿವಿಧ ಜಿಲ್ಲೆಗಳು ಹಾಗೂ ತಾಲ್ಲೂಕುಗಳಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗಳು ನಡೆಸಿವೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *