ಬೆಂಗಳೂರು: ಧಾರವಾಡ ಲೋಕಸಭಾ ಕ್ಷೇತ್ರದಿಂದ ಒತ್ತಾಯ ಕೇಳಿಬಂದ ಹಿನ್ನಲೆಯಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಅರಮನೆ ಮೈದಾನದ ರಸ್ತೆಯಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಎರಡೂ ಪಕ್ಷದಲ್ಲಿ ಎಲೆಕ್ಷನ್ ಫಿಕ್ಸಿಂಗ್ ಆಗಿದೆ ಎಂದು ಧಾರವಾಡ ಜನರು ಮಾತನಾಡುತ್ತಿದ್ದಾರೆ.ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದುರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ನೊಂದ ಜನರು ನಮ್ಮ ಜೊತೆಗೆ ನೋವು ತೊಡಗಿಕೊಂಡರು.ಹೀಗಾಗಿ ಚುನಾವಣಾ ಸ್ಪರ್ಧೆಗೆ ನಿರ್ಧರಿಸಿದ್ದೇನೆ ಎಂದರು.
ಇದನ್ನೂ ಓದಿ: ಚುನಾವಣಾ ಬಾಂಡ್: ಕೋಟಕ್ ನಿಂದ ಬಿಜೆಪಿಗೆ ರೂ.60 ಕೋಟಿ ದೇಣಿಗೆ
ಕರ್ನಾಟಕದಲ್ಲಿ ಗೌಡ, ಲಿಂಗಾಯತ ಸಮುದಾಯದ ಹೊರತುಪಡಿಸಿರೆ, ಕುರುಬ ಸಮುದಾಯ ಸಹ ದೊಡ್ಡದಾಗಿದೆ. ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಲಿಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ.ಈಶ್ವರಪ್ಪ ಪುತ್ರ ಒಂದುವರೆ ವರ್ಷದಿಂದ ಹಾವೇರಿಯಲ್ಲಿ ಓಡಾಡಿದ್ದಾರೆ ಆದರೂ ಟಿಕೆಟ್ ಕೊಡಲಿಲ್ಲ. ಬಿಜೆಪಿ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. 2% ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರವಾಗಿ 16 ದಿನಗಳಿಂದ ನಮ್ಮ ನಿರ್ಧಾರ ಮಾಧ್ಯಮದ ಮೂಲಕ ಪ್ರಕಟ ಮಾಡುತ್ತಾ ಬಂದಿದ್ದೇವೆ. ಅಂತಿಮ ನಿರ್ಧಾರ ಬೆಂಗಳೂರಿನಲ್ಲಿ ಘೋಷಣೆ ಮಾಡಲು ತೀರ್ಮಾನ ಮಾಡಿದ್ದೇನೆ, ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ದಿಂಗಾಲೇಶ್ವರಸ್ವಾಮೀಜಿ ಸ್ಪಷ್ಟಪಡಿಸಿದರು.
ದಿಂಗಾಲೇಶ್ವರ ಸ್ವಾಮಿ ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿ, ಕೇಂದ್ರ ಬಿಜೆಪಿ ಸಚಿವ ಪ್ರಲ್ಹಾದ್ ಜೋಶಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು. ಪ್ರಲ್ಹಾದ್ ಜೋಶಿಯವರಿಂದ ದಲಿತರು, ಹಿಂದುಳಿದವರು ಹೀಗೆ ಎಲ್ಲ ಸಮಾಜದವರೂ ನೊಂದಿದ್ದಾರೆ, ತುಳಿತಕ್ಕೊಳಗಾಗಿದ್ದಾರೆ ಆದ್ಧರಿಂದ ಅವರನ್ನು ಬದಲಾಯಿಸುವುದೇ ನಮ್ಮ ಅಂತಿಮ ತೀರ್ಮಾನವಾಗಿದೆ ಎಂದಿದ್ದರು. ಜೋಶಿಯವರಿಗೆ ಚುನಾವಣೆ ಬಂದಾಗ ಕ್ಷಮೆ ಕೇಳುವುದು, ತದನಂತರ ಎಲ್ಲರನ್ನು ತುಳಿಯುವುದು ರೂಢಿಗತವಾಗಿದೆ ಎಂದು ಗುಡುಗಿದ್ದರು. ಈಗ ಅವರೇ ಸ್ಪರ್ಧೆ ಮಾಡುವ ಮೂಲಕ ಸಚಿವ ಜೋಷಿಗೆ ಸಡ್ಡು ಹೊಡೆದಿದ್ದಾರೆ.