ಪತ್ತನಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ 18 ಪವಿತ್ರ ಮೆಟ್ಟಿಲುಗಳ ಪಕ್ಕದಲ್ಲಿ ಇಬ್ಬರು ಯುವತಿಯರಿರುವ “ನಕಲಿ ಸೆಲ್ಫಿ ವಿಡಿಯೋ”ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇರಳ ಪೊಲೀಸರು ಈ ವಿಡಿಯೋದ ಮೂಲ ಮತ್ತು ಪ್ರಸಾರದ ಬಗ್ಗೆ ಶುಕ್ರವಾರ ತನಿಖೆ ಆರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸಂಪ್ರದಾಯದ ಪ್ರಕಾರ, ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ 10-50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ.
ಪೊಲೀಸರ ಪ್ರಕಾರ, “ನಕಲಿ” ವೀಡಿಯೊವನ್ನು ಸಾಮಾಜಿಕ ವೇದಿಕೆಗಳ ಮೂಲಕ ಪ್ರಸಾರ ಮಾಡಲಾಗಿದ್ದು, ಮಹಿಳೆಯರು ಪವಿತ್ರ ಮೆಟ್ಟಿಲುಗಳ ಪಕ್ಕದಲ್ಲಿ ಇರುಮುಡಿಕ್ಕೆಟ್ಟು (ಪವಿತ್ರ ಕಟ್ಟು) ಹೊತ್ತಿರುವುದನ್ನು ಚಿತ್ರಿಸಲಾಗಿದೆ. “ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕಂಡುಬಂದ ನಂತರ ಸೈಬರ್ ವಿಭಾಗವು ತನ್ನದೇ ಆದ ಪ್ರಕರಣವನ್ನು ದಾಖಲಿಸಿದೆ” ಎಂದು ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ಗಾಜಾದ ಅನ್ಯಾಯದ ಯುದ್ಧ ನಿಲ್ಲಿಸಿ’ | ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಆಫ್ರಿಕಾ ನಾಯಕರ ಒತ್ತಾಯ
ಗುರುವಾರ ಸಂಜೆ 5 ಗಂಟೆಯ ನಂತರ ರಾಜೇಶ್ ಎಂಬ ಯುವಕನ ಇನ್‌ಸ್ಟಾಗ್ರಾಂ ಪ್ರೊಫೈಲ್ ಪೇಜ್‌ನಲ್ಲಿ ‘ಎಡಿಟ್ ಮಾಡಿದ ನಕಲಿ ವಿಡಿಯೋ’ ಕಾಣಿಸಿಕೊಂಡಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ವರದಿಯಾಗಿದೆ. “ಅವನು ಇರುಮುಡಿಕ್ಕೆಟ್ಟು ಹೊತ್ತಿರುವ ಯುವತಿಯರ ಚಿತ್ರಗಳನ್ನು ಎಡಿಟ್ ಮಾಡಿ, ಪವಿತ್ರ ಮೆಟ್ಟಿಲುಗಳ ಬಳಿ ಚಿತ್ರೀಕರಿಸಿದ ನಿಜವಾದ ಸೆಲ್ಫಿ ವೀಡಿಯೋ ಎಂದು ತಪ್ಪಾದ ವಿಷಯವನ್ನು ಪ್ರಸಾರ ಮಾಡಿರುವುದು ಕಂಡುಬಂದಿದೆ” ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಳಿಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಉದ್ದೇಶಪೂರ್ವಕವಾಗಿ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media