ಫ್ಯಾಕ್ಟ್‌ಚೆಕ್‌: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ

ಬುರ್ಖಾ 

ಬುರ್ಖಾ ಧರಿಸಿದ್ದ ಮುಸ್ಲಿಂ ಯುವಕ ಮಹಿಳಾ ವಾಶ್‌ರೂಮ್‌ಗೆ ತೆರಳಿ ರಹಸ್ಯವಾಗಿ ಮೊಬೈಲ್ ಚಿತ್ರೀಕರಣ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಹಲವಾರು ಜನರು ಬುರ್ಖಾ ಧರಿಸಿದ್ದ ಯುವಕನೊಬ್ಬನನ್ನು ಹಿಡಿದು ಪ್ರಶ್ನಿಸುತ್ತಿರುವುದು ದಾಖಲಾಗಿದೆ.

ಟ್ವಿಟರ್‌ ಬಳಕೆದಾರ @raviagrawal3 ಎಂಬವರು, ಹಿಂದಿ ಸುದ್ದಿ ಮಾಧ್ಯಮ ಆಜ್‌ತಕ್‌ನ ಸ್ಕ್ರೀನ್‌ ಶಾರ್ಟ್‌ ಹಂಚಿಕೊಂಡು, “ಇದು ತುಂಬಾ ಆಘಾತಕಾರಿಯಾಗಿದ್ದು, ಕೇರಳದ ಕೊಚ್ಚಿಯಲ್ಲಿ, ಬುರ್ಖಾ ಧರಿಸಿದ ಮುಸ್ಲಿಂ ಯುವಕ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ರಹಸ್ಯವಾಗಿ ಮಹಿಳೆಯರ ವೀಡಿಯೊಗಳನ್ನು ಮಾಡಿದ್ದಾನೆ. ಈ ವೇಳೆ ಮಾಲ್ ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದು ಗಲಾಟೆ ನಡೆದಿದೆ” ಎಂದು ಬರೆದಿದ್ದಾರೆ.

ಹಲವಾರು ಜನರು ಇದನ್ನು ಹಂಚಿಕೊಂಡಿದ್ದು ಕೋಮುದ್ವೇಷಕ್ಕಾಗಿ ಬಳಸುತ್ತಿದ್ದಾರೆ. ಆದರೆ ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ಗೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ವ್ಯಕ್ತಿ ಮುಸ್ಲಿಂ ಧರ್ಮಿಯನಲ್ಲ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಬುರ್ಖಾ ಧರಿಸಿ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟ ಆರೋಪಿ ಅಭಿಮನ್ಯು ಬಂಧನ

ಫ್ಯಾಕ್ಟ್‌ಚೆಕ್

2023ರ ಆಗಸ್ಟ್ 17 ರಂದು ಕೊಚ್ಚಿಯ ಲುಲು ಮಾಲ್‌ನಲ್ಲಿರುವ ಮಹಿಳಾ ವಾಶ್‌ರೂಮ್‌ಗೆ ಬುರ್ಖಾ ಧರಿಸಿದ್ದ ಟೆಕ್ಕಿಯೊಬ್ಬನನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿತ್ತು. ಈ ವೇಳೆ ಆತ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್‌ ಅನ್ನು ಆನ್‌ ಮಾಡಿ ವಿಡಿಯೊ ಮಾಡಿಕೊಂಡಿದ್ದನು. ಘಟನೆಯ ಬಗ್ಗೆ ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು, ಜೊತೆಗೆ ಬಂಧಿತ ವ್ಯಕ್ತಿಯ ಬಗ್ಗೆ ಕೊಚ್ಚಿ ನಗರ ಪೊಲೀಸರು ಫೇಸ್‌ಬುಕ್ ಪೋಸ್ಟ್‌ ಮೂಲಕ ಮಾಹಿತಿ ಕೂಡಾ ನೀಡಿದ್ದರು.

ವರದಿಗಳ ಪ್ರಕಾರ, ಬುರ್ಖಾ ಧರಿಸಿ ಮಹಿಳೆಯರ ವಾಶ್ ರೂಂನಿಂದ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ 23 ವರ್ಷದ ಅಭಿಮನ್ಯು ಎಂಬ ಯುವಕನನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಿ.ಟೆಕ್ ಪದವೀಧರನಾಗಿದ್ದು, ಕೊಚ್ಚಿಯ ಇನ್ಫೋಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದನು.

ಆಗಸ್ಟ್ 16 ರಂದು ಅಭಿಮನ್ಯು ಬುರ್ಖಾ ಧರಿಸಿ ಕೊಚ್ಚಿಯ ಲುಲು ಮಾಲ್‌ಗೆ ಪ್ರವೇಶಿಸಿದ್ದನು. ಬಾಕ್ಸ್‌ನೊಳಗೆ ಕ್ಯಾಮೆರಾ ಅಡಗಿಸಿಟ್ಟುಕೊಂಡು ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿ, ಕ್ಯಾಮೆರಾದ ಲೆನ್ಸ್‌ಗೆ ಕಾಣಲು ಪೆಟ್ಟಿಗೆಗೆ ರಂಧ್ರವನ್ನು ಕೊರೆದಿದ್ದನು ಎಂದು ಆರೋಪಿಸಲಾಗಿದೆ. ಪೊಲೀಸರು ಅಭಿಮನ್ಯು ಫೋನ್ ಮತ್ತು ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಗ್ಗೆ ಮಾಹಿತಿ ನೀಡಿರುವ ಕಲಮಸ್ಸೆರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ವಿಪಿನ್‌ ದಾಸ್, “ಅಭಿಮನ್ಯು ಮುಸ್ಲಿಂ ಅಲ್ಲ, ಜೊತೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಘಟನೆ ನಡೆದ ಅದೇ ದಿನ ಆತನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ 354 (ಸಿ), 419, ಸೆಕ್ಷನ್ 66(E)  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕೊಚ್ಚಿಯ ಮಾಲ್‌ನಲ್ಲಿ ಮಹಿಳಾ ವಾಶ್ ರೂಂನಲ್ಲಿ ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿ ಮುಸ್ಲಿಂ ಅಲ್ಲ ಜೊತೆಗೆ ಯಾವುದೆ ಪಕ್ಷದ ಜೊತೆಗೆ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *