ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಜನರ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿ(ಎಸ್) ಪಕ್ಷದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಿತು.
ಹೆಚ್.ಡಿ. ಕುಮಾರಸ್ವಾಮಿ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಗ್ಯಾಸ್ ಸಿಲಿಂಡರ್ ಹಿಡಿದುಕೊಂಡು ಸಾಂಕೇತಿಕವಾಗಿ ಚಾಲನೆ ನೀಡಿದರು.
ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ತೈಲ ಬೆಲೆಗಳನ್ನು ನಿರಂತರ ಏರಿಕೆಯಾಗುತ್ತಲೇ ಇವೆ. ಪ್ರತಿದಿನ ಮಾರುಕಟ್ಟೆಯ ಶೇರು ದರದ ಏರಿಕೆ ಮಾದರಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿ ಜನರಿಗೆ ಹೊರೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 112 ರೂ.ನಷ್ಟು ಆಗಿದೆ ಎಂದು ಹೇಳಿದರು.
ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರವೇ ಈಗ ಸಿಲಿಂಡರ್ ಬೆಲೆಯನ್ನು ಸಾವಿರ ರೂಪಾಯಿಗೆ ಏರಿಸಿದೆ. ನಿತ್ಯ ಕೂಲಿ ಮಾಡಿ ಜೀವನ ಮಾಡುವ, ಶ್ರಮಿಕರು, ಕಾರ್ಮಿಕರು, ರೈತರ ಕುಟುಂಬಗಳು ಇಷ್ಟು ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಜನರ ಭಾವನೆ ಬೇರೆಡೆಗೆ ಸೆಳೆಯಲು ಧರ್ಮಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಿಸಲಾಗಿದೆ. ಅಣ್ಣ-ತಮ್ಮಂದಿರಂತೆ ಇದ್ದ ರಾಜ್ಯದಲ್ಲಿ ಬೆಂಕಿಯ ಅಲೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಹಿಜಾಬ್ ಪ್ರಾರಂಭಿಕ ಹಂತದಲ್ಲಿ ನಿಲ್ಲಿಸಬಹುದಿತ್ತು. ಆದರೆ, ಜಾಣ ಮೌನಕ್ಕೆ ತೆರಳಿತ್ತು. ಈಗ ಅಲ್‍ಖೈದಾ ಬೆಂಬಲ ವಿಚಾರ ತನಿಖೆಗೆ ಆದೇಶ ಮಾಡುತ್ತಾರೆ. ಹಿಜಾಬ್ ಸಮಸ್ಯೆಯನ್ನು ಆರಂಭದಲ್ಲಿ ನಿರ್ವಹಣೆ ಮಾಡಿದ್ದರೆ ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಇದನ್ನು ಓದಿ: ಸಾಹಿತಿ ಕುಂವೀ, ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿಕೆ, ಸಿದ್ದರಾಮಯ್ಯ ಸೇರಿ 61+ ಜನರಿಗೆ ಕೊಲೆ ಬೆದರಿಕೆ
ಅವತ್ತಿನ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದಿದ್ದರು. ಇವತ್ತು ಮೋದಿ, ಬೊಮ್ಮಯಿ ಮೌನಿಯಾಗಿದ್ದಾರೆ. ಮಂಕಿಬಾತ್ನಲ್ಲಿ ಬರೀ ಭಾಷಣ ಮಾಡುವುದಾಯ್ತು ಜನಪರ ಕೆಲಸ ಮಾಡಲಿಲ್ಲ. ಧರ್ಮದ ಗಲಾಟೆ ಮಾಡಿದ್ದೀರಿ, ತಿನ್ನುವ ಆಹಾರದ ವಿಷಯದಲ್ಲಿ ರಾಜಕೀಯ ಮಾಡಬಾರದು. ನೀತಿಗೆಟ್ಟ ಸರ್ಕಾರ ಇದು ಎಂದು ಕುಮಾರಸ್ವಾಮಿ ಹೇಳಿದರು.
ಹಿಂದಿನ ಮೈತ್ರಿ ಸರ್ಕಾರ ಪತನ ಮಾಡಿದರು. ಅವತ್ತು ಕಾಂಗ್ರೆಸ್ ನಾಯಕರು ಸರಿಯಾಗಿ ನಡೆದುಕೊಂಡಿದ್ದರೆ ಇಂತಹ ಸರ್ಕಾರ ಬರುತ್ತಿರಲಿಲ್ಲ. ಇಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ನಾನು ಹೋಟೆಲಿನಲ್ಲಿ ಇದ್ದೆ ಎಂದು ಹೇಳುತ್ತಿದ್ದರು. ನಾನು ಬೆಳಗ್ಗೆ 9 ರಿಂದ 12 ಗಂಟೆವರೆಗೂ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ನೀವು ಈ ರೀತಿಯಲ್ಲಿ ಮಾಡಿರುವ ಉದಾಹರಣೆ ತೋರಿಸಲಿ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಎನ್.ಎಂ. ನಭಿ, ಶಾಸಕರಾದ ರಮೇಶ್‍ಗೌಡ, ರವೀಂದ್ರ ಶ್ರೀಕಂಠಯ್ಯ, ತಿಪ್ಪೇಸ್ವಾಮಿ, ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಕೃಷ್ಣಪ್ಪ, ಎಂ.ಕೃಷ್ಣಪ್ಪ, ಟಿ.ಎ.ಶರವಣ ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.