ಪ್ರಜ್ಞಾ ಠಾಕುರ್ ಅವರೇ, ಈ ದೇಶ “ನಾವು, ಭಾರತದ ಜನತೆ” ಎನ್ನುವವರಿಗೆ ಸೇರಿದ್ದು….

ಬೃಂದಾ ಕಾರಟ್

ಯಾವುದೇ ಒಂದು ಧರ್ಮವನ್ನು ನಂಬುವವರಿಗೆ ಸೇರಿದ್ದಲ್ಲ, “ಸನಾತನ ಧರ್ಮ” ಖಂಡಿತವಾಗಿಯೂ  ಮುತ್ತಿಗೆಗೆ ಒಳಗಾಗಿಲ್ಲ, ಅದನ್ನು “ಜೀವಂತವಾಗಿ” ಇಟ್ಟಿರುವುದು ಕೋಟ್ಯಂತರ ಶಾಂತಿ-ಪ್ರಿಯ ಹಿಂದೂಗಳ ಬಹುತ್ವದ ನಂಬಿಕೆಗಳು, ಆಚರಣೆಗಳು ಮತ್ತು ಸಂಸ್ಕೃತಿಗಳೇ ವಿನಃ ಹಿಂದುತ್ವ ಸಿದ್ಧಾಂತವು ಸೃಷ್ಟಿಸುವ ಮತ್ತು ಭಾರತದಲ್ಲೆಲ್ಲಾ ಹೇರಬಯಸುವ ಶ್ರೇಣಿವ್ಯವಸ್ಥೆ ಅಲ್ಲ. ಪ್ರಬಲವಾದ ಕೇಂದ್ರ ಸರ್ಕಾರವು ವಾರಗಟ್ಟಲೇ ತಾನೇ ‘ಫ್ರಿಂಜ್ ಎಲಿಮೆಂಟ್ಸ್’ ಅಂದರೆ  “ಹುಲು ಜೀವಿ”ಗಳೆಂದು ವರ್ಣಿಸಿದ ವಕ್ತಾರದ್ವಯರನ್ನು  ಕಾನೂನಿನ ವ್ಯಾಪ್ತಿಯನ್ನೂ  ಮೀರಿದ ಸ್ಥಾನಕ್ಕೆ ಏರಿಸಿದೆ ಎಂಬುದು ಭಾರತದ ಜಾಗತಿಕ ಇಮೇಜಿಗೆ  ವಿಶ್ವಾಸಾರ್ಹತೆಯನ್ನೇನೂ  ನೀಡುವುದಿಲ್ಲ.

ಭಾರತದಾದ್ಯಂತ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೇನೇ ಮುಸ್ಲಿಮರನ್ನು ‘ಗಲಭೆಕೋರರು’ ಎಂದು ಆರೋಪಿಸಿ ನಡೆಸುತ್ತಿರುವ ಅವರ ಮನೆಗಳ ಬುಲ್‍ಡೋಜರ್ ಧ್ವಂಸ ಕಾರ್ಯವನ್ನು ಹೋಲುವ ಕೆಲವು ನಿದರ್ಶನಗಳು ಚರಿತ್ರೆಯಲ್ಲಿ ಕಾಣಸಿಗುತ್ತವೆ.  ನವಂಬರ್ ‍9-10, 1938ರಂದು ನಾಝೀ ಜರ್ಮನಿಯಲ್ಲಿ ಹಿಟ್ಲರನ ಪಕ್ಷದ ಫ್ಯಾಸಿಸ್ಟ್ ಗ್ಯಾಂಗುಗಳು ಚಮ್ಮಟಿಗೆಗಳನ್ನು ಹಿಡಿದು ಯೆಹೂದಿಗಳ ಸೊತ್ತುಗಳನ್ನು ಹಾಳುಹೆಡಹುವ ರಂಪಾಟ ನಡೆಸಿದರು, ‘ಕೃಪಾಳು’ ಪೋಲೀಸ್‍ ಪಡೆ ನೋಡುತ್ತ ನಿಂತಿತ್ತು. ಆ ಭೀಕರ ದಿನಗಳನ್ನು ‘ಕ್ರಿಸ್ಟಲ್ನಾಖ್ಟ್’(ಅಂದರೆ ಒಡೆದ ಗಾಜುಗಳ ರಾತ್ರಿ) ಎಂದು ಕರೆಯಲಾಗುತ್ತದೆ. ಯೆಹೂದಿಯರ ಒಡೆತನದ ಅಂಗಡಿಗಳು, ಕಟ್ಟಡಗಳು, ಪ್ರಾರ್ಥನಾ ಮಂದಿರಗಳ ಕಿಟಕಿ, ಬಾಗಿಲುಗಳ ಗಾಜುಗಳು ಪುಡಿ-ಪುಡಿಯಾಗಿ  ಬೀದಿಗಳಲ್ಲಿ ಹರಡಿ ಹೋಗಿದ್ದ ದಿನಗಳವು.

ಇಲ್ಲಿ, ಭಾರತದಲ್ಲಿ, ಗಲಭೆಕೋರರಲ್ಲ, ಪ್ರಭುತ್ವವೇ ಫಿರ್ಯಾದಿ, ವಕೀಲ, ನ್ಯಾಯಾಧೀಶ ಮತ್ತು ಗಲ್ಲಿಗೇರಿಸುವವನಾಗುವ ಹಕ್ಕನ್ನು ತಾನೇ ಆವಾಹಿಸಿಕೊಂಡಿದೆ, ಈ ದೇಶದ ಆಳ್ವಿಕೆ ಕಾಯ್ದೆ ಕಾನೂನುಗಳು ಅಥವ ಸಂವಿಧಾನದ ಮೂಲಕ ನಡೆಯದೆ, ದೈವಿಕ ಶಕ್ತಿಗಳುಳ್ಳ ಒಬ್ಬ ಸಾಮ್ರಾಟನಿಂದ ನಡೆಯುತ್ತಿದೆಯೋ ಎಂದನಿಸುವಂತಾಗಿದೆ. ಇದು ಅತ್ಯಂತ ಖಂಡನೀಯ.

ರಾಂಚಿ, ಹೌರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶುಕ್ರವಾರ ನಮಾಜ್ ನಂತರ ನಡೆದ ಪ್ರತಿಭಟನೆಯ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರವು ಹೆಚ್ಚು ಕಡಿಮೆ ನಿಯಂತ್ರಣಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಕನಿಷ್ಠ ಮೂರು ಸಾವುಗಳು  ಹಾಗೂ ಪೊಲೀಸರಿಗೆ ಮತ್ತು ಅನೇಕರಿಗೆ ಗಾಯಗಳಾಗಿರುವುದು ದುರದೃಷ್ಟಕರ. ಪ್ರವಾದಿ ಮೊಹಮ್ಮದ್ ವಿರುದ್ಧದ ಕೋಮುವಾದಿ, ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಬಿಜೆಪಿಯ ಮಾಜಿ ವಕ್ತಾರರುಗಳನ್ನು ಬಂಧಿಸದಿರುವುದರ ವಿರುದ್ಧದ ಪ್ರತಿಭಟನೆಗಳು ನ್ಯಾಯಸಮ್ಮತವಾಗಿವೆ ಮತ್ತು ಸಮುದಾಯದಲ್ಲಿನ  ಕೋಪವನ್ನು ಪ್ರತಿಬಿಂಬಿಸುತ್ತವೆಯಾದರೂ, ಹಿಂಸಾಚಾರದ ಘಟನೆಗಳು ಕೆಲವೆಡೆಗಳಲ್ಲಿ ಮಾತ್ರ ನಡೆದಿದ್ದರೂ ಸಹ, ಧ್ರುವೀಕರಣ ಮತ್ತು ವಿಭಜನೆಯಲ್ಲಿಯೇ ತಮ್ಮ ಏಳಿಗೆ ಕಾಣುವ  ಬಹುಸಂಖ್ಯಾತವಾದೀ ಕೋಮುವಾದಿ ಶಕ್ತಿಗಳ ಆಟದಲ್ಲಿ ಗೊಂಬೆಯಾಗಿ ಬಿಡುತ್ತದೆ. ಇಲ್ಲಿಯವರೆಗೆ ಸಮುದಾಯದೊಳಗಿನ ವಿವೇಕಯುತ ಧ್ವನಿಗಳು ಮೇಲುಗೈ ಪಡೆದಿದ್ದು ಮೂಲಭೂತವಾದಿ ಉಗ್ರಗಾಮಿ ಗುಂಪುಗಳು ದುಷ್ಚೇಷ್ಟೆ ನಡೆಸದಂತೆ ತಡೆದಿವೆ.

ನೋಡಿ, ಹುಲು ಜೀವಿಗಳು! – ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ಸುಮಾರು ಎರಡು ವಾರ ಕಳೆದರೂ ಆ ಮಾಜಿ ವಕ್ತಾರರುಗಳನ್ನು ಬಂಧಿಸದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ವ್ಯತಿರಿಕ್ತವಾಗಿ, ನೇರವಾಗಿ ಗೃಹ ಸಚಿವಾಲಯದ ಅಡಿಯಲ್ಲಿರುವ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಇದರಲ್ಲಿ ಈ ವಿಷಯಕ್ಕೆ ಯಾವುದೇ ಸಂಬಂಧವಿಲ್ಲದ ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ 32 ವ್ಯಕ್ತಿಗಳ ಹೆಸರುಗಳನ್ನು ಕೂಡ ಸೇರಿಸಿದ್ದಾರೆ. ಪೊಲೀಸರ ಈ  ಖಂಡನೀಯ ಪಕ್ಷಪಾತವು ಬಿಜೆಪಿಯ ವಕ್ತಾರರುಗಳು ಮಾಡಿದ ಅಪರಾಧದ ಅಗಾಧತೆಯನ್ನು ಕ್ಷುಲ್ಲಕಗೊಳಿಸಲು ಮತ್ತು  ಅವರಿಗೆ ಹೆಚ್ಚುತ್ತಿರುವ ‘ಸಂಘ’ದ ಬೆಂಬಲದ ಸಮೂಹಗಾನವನ್ನು  ತುಷ್ಟೀಕರಿಸುವ ಪ್ರಯತ್ನ ಎಂಬುದು ಸ್ಪಷ್ಟ. ಇನ್ನಷ್ಟು ವಿಳಂಬ ಮಾಡದೆ ಈ ವಕ್ತಾರ ದ್ವಯರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನಖ್ವಿ ಮತ್ತು ಇತರರ ವಿರುದ್ಧದ ಸುಳ್ಳು ಎಫ್‌ಐಆರ್ ನ್ನು ಹಿಂಪಡೆಯಬೇಕು.

ಬಿಜೆಪಿ ನಾಯಕರು ಭಾರತದ ಮುಸ್ಲಿಮರ ಸಮಾನ ಪೌರತ್ವವನ್ನು ಕಸಿದುಕೊಳ್ಳಬೇಕೆಂದು ಭಂಡತನದಿಂದ ಅತ್ಯಂತ ಅಸಹ್ಯಕರ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೇ ಇರುವುದು ಅವರಿಗೆ ಪ್ರಭುತ್ವದ, ಸರಕಾರದ ಮತ್ತು ಆಳುವ ಪಕ್ಷದ ಅಭಯ ಹಸ್ತ ಇದೆ ಎಂಬುದನ್ನು ತೋರಿಸುತ್ತದೆ. ಮಾಲೆಗಾಂವ್ ಭಯೋತ್ಪಾದಕ ಬಾಂಬ್ ದಾಳಿ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ನೂಪುರ್ ಶರ್ಮಾ ಅವರ ಕೋಮುವಾದಿ  ಆಕ್ರಮಣಕಾರಿ ಆರ್ಭಟವನ್ನು ಬೆಂಬಲಿಸಿದ್ದಲ್ಲದೆ, “ಕಮ್ಯುನಿಸ್ಟರು” ಮತ್ತು “ನಾಸ್ತಿಕರು” ಹಿಂದೂ ದೇವ-ದೇವತೆಗಳನ್ನು  ಅವಮಾನಿಸುತ್ತಾರೆ ಎಂಬ ಅತ್ಯಂತ ವಿಲಕ್ಷಣವಾದ ಹೇಳಿಕೆ ನೀಡಿದ್ದಾರೆ. “ಈ ನಾಸ್ತಿಕರು ಯಾವಾಗಲೂ ಹೀಗೇಯೆ. ಅವರಿಗೆ ಕಮ್ಯುನಿಸ್ಟ್ ಇತಿಹಾಸವಿದೆ … ಇದು ಭಾರತ, ಇದು ಹಿಂದೂಗಳಿಗೆ ಸೇರಿದ್ದು, ಮತ್ತು ಸನಾತನ ಧರ್ಮ ಮಾತ್ರ ಇಲ್ಲಿ ಉಳಿಯುತ್ತದೆ. ಅದನ್ನು ಜೀವಂತವಾಗಿಡುವುದು ನಮ್ಮ ಜವಾಬ್ದಾರಿ, ಅದನ್ನು ನಾವು ಖಂಡಿತವಾಗಿ ನಿಭಾಯಿಸುತ್ತೇವೆ”  ಎಂದು ಈಕೆ ಹೇಳಿರುವುದಾಗಿ ವರದಿಯಾಗಿದೆ.

ಇಲ್ಲ, ಪ್ರಜ್ಞಾ ಠಾಕೂರ್ ಅವರೇ, ಭಾರತವು ಯಾವುದೇ ಒಂದು ಧರ್ಮವನ್ನು ನಂಬುವವರಿಗೆ ಸೇರಿಲ್ಲ. ಇದು ನಮ್ಮ ಸಂವಿಧಾನ ಸೂಕ್ತವಾಗಿ ಹೇಳಿರುವಂತೆ “ನಾವು, ಭಾರತದ ಜನರು” ಇವರಿಗೆ ಸೇರಿದ್ದು. ಮತ್ತು ಪ್ರಜ್ಞಾ ಠಾಕುರ್ ಅವರೇ, , “ಸನಾತನ ಧರ್ಮ” ಖಂಡಿತವಾಗಿಯೂ  ಮುತ್ತಿಗೆಗೆ ಒಳಗಾಗಿಲ್ಲ. ಅದನ್ನು “ಜೀವಂತವಾಗಿ” ಇರಿಸಿಕೊಳ್ಳಲು ನಿಮ್ಮ ಮತ್ತು ನಿಮ್ಮ ಸಹವರ್ತಿಗಳ ಅಗತ್ಯವೇನೂ ಇಲ್ಲ. ಅದು ತಂತಮ್ಮಆಯ್ಕೆಯ ದೇವ- ದೇವತೆಗಳನ್ನು ಪೂಜಿಸುವ ಕೋಟ್ಯಂತರ ಶಾಂತಿ-ಪ್ರಿಯ ಹಿಂದೂಗಳ ಬಹುತ್ವದ ನಂಬಿಕೆಗಳು, ಆಚರಣೆಗಳು ಮತ್ತು ಸಂಸ್ಕೃತಿಗಳಲ್ಲಿ ಜೀವಂತವಾಗಿದೆಯೇ ವಿನಃ  ನಿಮ್ಮ ಸಿದ್ಧಾಂತವು ಸೃಷ್ಟಿಸುವ ಮತ್ತು ನೀವು ಭಾರತದಲ್ಲೆಲ್ಲಾ ಹೇರಬಯಸುವ ಶ್ರೇಣಿವ್ಯವಸ್ಥೆಯ ಪ್ರಕಾರ ಅಲ್ಲ.  ಸಾವರ್ಕರ್ ಪ್ರತಿಪಾದಿಸಿದ “ಹಿಂದುತ್ವವನ್ನು ಮಿಲಿಟರೀಕರಣಗೊಳಿಸುವುದು” ಮತ್ತು ” “ರಾಜಕೀಯವನ್ನು ಹಿಂದೂಕರಣಗೊಳಿಸುವುದು” ಎಂಬ ನಿಮ್ಮ ಸಿದ್ಧಾಂತದ ಅನುಷ್ಠಾನವೇ  ಹಿಂದೂ ದೇವ- ದೇವತೆಗಳಿಗೆ ಮಾಡುತ್ತಿರುವ ಅತ್ಯಂತ  ದೊಡ್ಡ ಅವಮಾನ. ಅವರಿಗೆ ಅವಮಾನವಾಗುವುದು, ಕ್ಷುಲ್ಲಕಗೊಳಿಸುವುದು ನಿಮ್ಮಂತಹ ನಾಯಕರಿಂದ ಪ್ರೇರಿತರಾದ ಭಂಡರು ಬೀದಿಬದಿ ವ್ಯಾಪಾರಿಗಳು, ಫಕೀರರು, ಕೊಳೆಗೇರಿ ನಿವಾಸಿಗಳಂತಹ ಬಡ ಮುಸ್ಲಿಮರ ಮೇಲೆ ಹೇಡಿತನದಿಂದ ಹಲ್ಲೆ ನಡೆಸಿ “ಜೈ ಶ್ರೀ ರಾಮ್” ಎಂದು  ಯುದ್ಧವೊಂದರ ವಿಜೇತರು ಬಂಧಿಗಳನ್ನು ಬಡಿದು ಹೇಳುವಂತೆ ಮಾಡುವಾಗ.

ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ

ನೀವು ಪ್ರತಿದಿನವೂ ಅವಮಾನಿಸುತ್ತಿರುವ ಧರ್ಮದ ರಕ್ಷಣೆಯ ಭಾರವನ್ನು ಹೊತ್ತಿದ್ದೇವೆ ಎಂದು ಅಹಂಕಾರ ಪಡುವುದನ್ನು ನಿಲ್ಲಿಸಿ. ಭಾರತದಲ್ಲಿ ಒಂದು ಮತೀಯ ಪ್ರಭುತ್ವವನ್ನು ಸಾಧಿಸುವ ನಿಮ್ಮ ಸಂವಿಧಾನ ವಿರೋಧಿ ಗುರಿಯನ್ನು ಸಾಧಿಸಲು ಅದನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳುತ್ತಿದ್ದೀರಿ ಅಷ್ಟೇ. ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ನೀವು ದ್ವೇಷಪೂರಿತ ಘೋಷಣೆಗಳನ್ನು ಹಾಕುತ್ತಿರುವುದು  ಮತೀಯ ಗ್ರಂಥಗಳ ಮೇಲಿಂದ  ಆಳುತ್ತಿರುವ ಅಂತಹ ಒಂದು ಸಮಾಜದ ಪ್ರತಿಬಿಂಬವನ್ನು ಇಲ್ಲಿ  ಸೃಷ್ಟಿಸಲು ನೀವು ಬಯಸುತ್ತಿರುವುದರಿಂದಲೇ . ನೀವು, ನಮ್ಮ ಸಂವಿಧಾನದ ಮೂಲಕ ಸ್ವಲ್ಪ ಮಟ್ಟಿಗೆ ಸಾಕಾರಗೊಂಡಿರುವ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದವರ ಆಶಯಗಳನ್ನು ಇಲ್ಲವಾಗಿಸ ಬಯಸುತ್ತಿದ್ದೀರಿ. ನೀವು ಮತ್ತು ನಿಮ್ಮ ಸೈದ್ಧಾಂತಿಕ ಪೂರ್ವಜರು ಭಾರತದ ಸ್ವಾತಂತ್ರ್ಯ ಸಮರದ ಸಮಯದಲ್ಲಿ  ಭಾರತವನ್ನು ಯಾವ ಮನುಸ್ಮೃತಿಯ ಆಧಾರದ  ರಾಷ್ಟ್ರವನ್ನಾಗಿ ಮಾಡುವಲ್ಲಿ ವಿಫಲರಾಗಿದ್ದೀರೋ, ಅದನ್ನು ಈಗ ಅನುಷ್ಠಾನಗೊಳಿಸ ಬಯಸುತ್ತಿದ್ದೀರಿ.. ದಯವಿಟ್ಟು, ಒಂದು ಧರ್ಮವನ್ನು ರಾಕ್ಷಸೀಕರಿಸುವ ಬದಲು, ಸತಿ ಪದ್ಧತಿ, ಬಾಲ್ಯವಿವಾಹ,  ವಿಧವೆಯರಿಗೆ ಕ್ರೌರ್ಯ, ಸಾಮಾಜಿಕ ಬಹಿಷ್ಕಾರದಂತಹ ಇನ್ನೂ ಎಷ್ಟೋ ಆಚರಣೆಗಳನ್ನು ಅನೇಕ ನಾಯಕರು ಧರ್ಮದ ಹೆಸರಿನಲ್ಲಿ, ಎಲ್ಲ ಧರ್ಮಗಳಲ್ಲೂ  ಹೇಗೆ ನಡೆಸಲಾಗುತ್ತಿತ್ತು ಮತ್ತು ಸಮರ್ಥಿಸಲಾಗುತ್ತಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇತಿಹಾಸವನ್ನು ಅಧ್ಯಯನ ಮಾಡಿ.

ಕಮ್ಯುನಿಸ್ಟರು  ಧಾರ್ಮಿಕ ನಂಬಿಕೆಯ ಆಯ್ಕೆಯ ಸ್ವಾತಂತ್ರ್ಯದ ಸಾಂವಿಧಾನಿಕ  ಖಾತ್ರಿಯನ್ನು ಗೌರವಿಸಬೇಕೆಂಬ ನಂಬಿಕೆಯುಳ್ಳವರು. ಪ್ರಜ್ಞಾ ಠಾಕೂರ್ ಅವರಂತಹವರಿಗೆ ಇದು ಪರಕೀಯವಾದ ಸಂಗತಿ. ಹೌದು, ಕಮ್ಯುನಿಸ್ಟರು ಕಾನೂನು ಮತ್ತು  ವಾಕ್‍ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಚೌಕಟ್ಟಿನೊಳಗೆ   ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುತ್ತಾರೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಗುರಿಸಾಧನೆಗೆ ಅಸಹ್ಯವಾದ ಅತ್ಯಂತ ಪ್ರತಿಗಾಮಿ ಮತ್ತು ಅಮಾನವೀಯ ಆಚರಣೆಗಳಿಗೆ ಧಾರ್ಮಿಕ ಸಂಹಿತೆಗಳ ಅನುಮೋದನೆಯನ್ನು ಪಡೆದಿರುವ ಜಾತಿಯಂತಹ ಸಾಮಾಜಿಕ ಸಂಸ್ಥೆಗಳನ್ನು ಟೀಕಿಸುತ್ತಾರೆ. ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಬೇಕು ಎಂದು ಕಮ್ಯುನಿಸ್ಟರು ನಂಬುತ್ತಾರೆ ಎಂಬ ಕಾರಣದಿಂದಾಗಿ ಅವರು ಎಲ್ಲ ರೀತಿಗಳ ಉಗ್ರಗಾಮಿ ರಾಜಕೀಯವನ್ನು, ಅದು ಯಾವುದೇ ಧಾರ್ಮಿಕ ವೇಷ ತೊಟ್ಟಿದ್ದರೂ ಲೆಕ್ಕಿಸದೆ ವಿರೋಧಿಸುವ ಹೆಮ್ಮೆಯ ದಾಖಲೆಯನ್ನು ಹೊಂದಿದ್ದಾರೆ.

ಕೇರಳದ ಪಿ.ಎಫ್‍.ಐ ಮತ್ತು ಎಸ್‍.ಡಿ.ಪಿ.ಐ. ಯಂತಹ ಮೂಲಭೂತವಾದಿ ಸಂಘಟನೆಗಳು ಕಮ್ಯುನಿಸ್ಟರ ವಿರುದ್ಧ ವಿಷವನ್ನು ಉಗುಳಲು ಇದು ಒಂದು ಕಾರಣವಾಗಿದೆ. ಜಾತ್ಯತೀತ ತತ್ವಗಳು ಮತ್ತು ಮೌಲ್ಯಗಳಿಗೆ ಹಾನಿಯನ್ನುಂಟುಮಾಡುವುದಷ್ಟೇ ಅಲ್ಲ,, ಸಂಘ ಪರಿವಾರವು ನಡೆಸುತ್ತಿರುವ ಬಹುಸಂಖ್ಯಾತವಾದೀ ಕೋಮುವಾದಕ್ಕೆ ಸಹಾಯ ಮಾಡುವ ಅವರ ಬ್ರಾಂಡಿನ ರಾಜಕೀಯದೊಂದಿಗೆ ಕಮ್ಯುನಿಸ್ಟರು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಅವರಿಗೆ ತಿಳಿದಿದೆ

ಪ್ರಯಾಗ್‌ರಾಜ್‌ನಲ್ಲಿ ಧ್ವಂಸ ಕಾರ್ಯ

ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ಒಂದು ಜಾತ್ಯತೀತ ದೇಶದ ಶಕ್ತಿ ಮತ್ತು  ವೈವಿಧ್ಯಮಯ ಜನತೆಯ ಸಾವಯವ ಏಕತೆಯನ್ನು ಪ್ರದರ್ಶಿಸಲು ಸಾಧ್ಯವಾಗುವ ಬದಲು, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತೇಜಿಸಿರುವ ಇಸ್ಲಾಮೋಭಯ ರೋಗಕ್ಕೆ ಮತ್ತು ಧರ್ಮಾಂಧತೆಯ ಸಿದ್ಧಾಂತ ಮತ್ತು ಸಂಸ್ಕೃತಿಗಳಿಗೆ ಭಾರತವು ಬಹಳಷ್ಟು ಬೆಲೆ ತೆರಬೇಕಾಗಿ ಬಂದಿದೆ. ಇದರಲ್ಲಿ  ಅಧಿಕಾರದಲ್ಲಿರುವವರಿಂದ ಇತಿಹಾಸದ  ಉತ್ಪಾದನೆ ಮತ್ತು ಅಳಿಸುವಿಕೆ ಕೂಡ ಸೇರಿದೆ. ನೂಪುರ್ ಶರ್ಮಾ ಅವರನ್ನು ಅಧಿಕೃತವಾಗಿ “ಫ್ರಿಂಜ್ ಎಲಿಮೆಂಟ್”(ಹುಲು ಜೀವಿ) ಎಂದು ವರ್ಣಿಸಲಾಗಿದೆ. ನಾಳೆ ಪ್ರಜ್ಞಾ ಠಾಕೂರ್ ಕೂಡ ಅದೇ ಆಗಬಹುದು. ಆದರೆ ಪ್ರಬಲವಾದ ಕೇಂದ್ರ ಸರ್ಕಾರವು ವಾರಗಟ್ಟಲೇ ಈ “ಹುಲು ಜೀವಿ”ಗಳನ್ನು ಕಾನೂನಿನ ವ್ಯಾಪ್ತಿಯನ್ನೂ  ಮೀರಿದ ಸ್ಥಾನಕ್ಕೆ ಏರಿಸಿದೆ ಎಂಬುದು ಭಾರತದ ಜಾಗತಿಕ ಬಿಂಬಕ್ಕೆ  ವಿಶ್ವಾಸಾರ್ಹತೆಯನ್ನೇನೂ  ನೀಡುವುದಿಲ್ಲ.

ಬೃಂದಾ ಕಾರಟ್, ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರು, ‘ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆ(ಜೂನ್ 13-19, 2022) ಯಲ್ಲಿ ಪ್ರಕಟವಾದ ಲೇಖನವನ್ನು ಅನುವಾದಿಸಿದವರು  ಲವಿತ್ರ ವಸ್ತ್ರದ

Donate Janashakthi Media

Leave a Reply

Your email address will not be published. Required fields are marked *