ಇದೊಂದು ಕಣ್ಣಾಮುಚ್ಚಾಲೆ ಬಜೆಟ್ – ಬೋಗಸ್ ಬಜೆಟ್ : ಡಿ.ಕೆ.ಶಿವಕುಮಾರ್‌

ಬೆಂಗಳೂರು : ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿ.ಎಚ್.ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿ.ಎಸ್.ಟಿ. ಸಾಲದ ಮೊರೆ ಅನಿವಾರ್ಯವಾಗಿದೆ ಎಂಬುದನ್ನು ಸಿ.ಎಂ ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ರವರು ಹೇಳಿದರು.

ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ಇನ್ನು ತೀರಿಸಲು ಆಗಿಲ್ಲ. ಈಗ ಹೊಸದಾಗಿ 70 ಸಾವಿರ ಕೋಟಿ ರೂ. ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ. “ಸಾಲ ಮಾಡಿ ತುಪ್ಪ ತಿನ್ನು” ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ ಈ ಸರಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ. ಎಂದು ಆರೋಪಿಸಿದರು.

ರಾಜ್ಯಗಳ ಜಿ.ಎಸ್.ಟಿ. ಪಾಲು ಹಂಚುವಾಗ ಗುಜರಾತ್, ಅಸ್ಸಾಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರದ ಬಿಜೆಪಿ ಸರಕಾರ, ರಾಜ್ಯದಲ್ಲಿ ಬಿಜೆಪಿ ರಾಜ್ಯ ಸರಕಾರ ಇದ್ದರೂ ಸಹ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರಕಾರವಾಗಲಿ, ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್‌ಡೌನ್ ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಘೋಷಣೆಗಳ ಮೇಲೆ ಘೋಷಣೆಗಳನ್ನು ಸಿ.ಎಂ. ಪ್ರಕಟಿಸಿದ್ದಾರೆ. ಆದರೆ ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಎಲ್ಲಿಂದ‌ ದುಡ್ಡು ತರುತ್ತಾರೆ ಎಂಬುದನ್ನೇ ಹೇಳಿಲ್ಲ. ಹೀಗಾಗಿ ಈ ಘೋಷಣೆಗಳೆಲ್ಲ ಘೋಷಣೆಯಾಗಿಯೇ ಉಳಿದುಕೊಳ್ಳುವ ಅಪಾಯವಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಪ್ರತಿ ಬಾರಿ ಬಜೆಟ್ ಅನ್ನು ಮಂಡಿಸುವಾಗ ಇಲಾಖೆವಾರು ಅನುದಾನ  ಹಂಚಿಕೆ ಮಾಡಲಾಗುತ್ತದೆ. ಆಗ ಯಾವ ಇಲಾಖೆಗೆ ಏನು, ಎಷ್ಟು ಎಂಬುದು ತಿಳಿಯುತ್ತದೆ. ಆದರೆ ಈಗ ಸರ್ಕಾರ ವಲಯವಾರು ಘೋಷಣೆ ಮಾಡಿ “ಗುಂಪಲ್ಲಿ ಗೋವಿಂದಾ” ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚಿದೆ.

ಕೃಷಿಗೆ 31,028 ಕೋಟಿ ಘೋಷಿಸಿ,  ಇದು ರೈತರಿಗೆ  ಬಂಪರ್ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ.‌ ಅದಕ್ಕೆ‌ ಪೂರಕವಾಗಿರುವ ನೀರಾವರಿ ಯೋಜನೆಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ ಹೀಗೆ ಹಲವು ವಲಯಗಳು ಒಳಗೊಂಡಿದೆ ಎಂದು ಹೇಳಿದರು.

ಸರಕಾರದ ಕಣ್ ಕಟ್ ಆಟಕ್ಕೆ ಇದೊಂದು ಸ್ಯಾಂಪಲ್‌ ಅಷ್ಟೇ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 61 ಸಾವಿರ ಕೋಟಿ ರುಪಾಯಿ ಎಂದು ಬಿಂಬಿಸುತ್ತಿರುವ ಸರ್ಕಾರ, ಇದರಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ವಸತಿ, ಕಾರ್ಮಿಕ, ಮಾನವ ಸಂಪನ್ಮೂಲ, ಗ್ರಾಮೀಣಭಿವೃದ್ಧಿ ಇಲಾಖೆಯನ್ನೂ ಸೇರಿಸಿದೆ.

ಇನ್ನು ಒಂದು ರೂಪಾಯಿ ಹೊರೆ ಹಾಕದ ಬಜೆಟ್ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಸರಕಾರ ಪೆಟ್ರೋಲ್ ಮೇಲೆ 33 ರೂ., ಡೀಸೆಲ್ ಮೇಲೆ 20 ರೂ. ಸುಂಕ ವಸೂಲಿ ಮಾಡುತ್ತಿರುವುದು ಜನರ ಮೇಲಿನ ತೆರಿಗೆ ಹೊರೆ ಅಲ್ಲವೇ ಎಂದು ಪ್ರಶ್ನಿಸಿದರು.

ಬಜೆಟ್ ಮುನ್ನವೇ ಆಸ್ತಿ ತೆರಿಗೆ ಹೆಚ್ಚಿಸಿದೆ. ವಿದ್ಯುತ್, ನೀರಿನ ದರ ಏರಿಕೆ ಮಾಡಿದೆ. ಈಗಾಗಲೇ ಸುಲಿಗೆ ಮಾಡಲು ಆರಂಭಿಸಿರುವ ಬಿಜೆಪಿ ಈಗ ತಾನು ಜನರ ಮೇಲೆ ಹೊರೆ ಹಾಕಿಲ್ಲ ಎಂದು ಸುಳ್ಳು ಹೇಳುತ್ತಿದೆ.

ಹೀಗೆ ರಾಜ್ಯ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಬಜೆಟ್ ನಲ್ಲಿ ಸುಳ್ಳಿನ ಹೊಳೆ ಹರಿಸಿದೆ. ಇನ್ನು ಈ ಬಾರಿ ಬಜೆಟ್ ನಲ್ಲಿ ನಿಗಮಗಳ ಉದ್ದದ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಬೇಕು. ಎಲ್ಲ ಜಾತಿ, ಧರ್ಮದ ಜನರ ಹಿತ ಚಿಂತಿಸಬೇಕಾಗಿತ್ತು. ಆದರೆ ಈ ಸರ್ಕಾರ ಜಾತಿ, ಧರ್ಮದ ಹೆಸರಲ್ಲಿ ಸಮಾಜ  ಒಡೆದು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ನಿಗಮಗಳಿಂದಲೇ ಆಯಾ ಸಮುದಾಯದ ಏಳಿಗೆಯಾಗುವುದಾದರೆ, ನಿಗಮಗಳೇ ಇಲ್ಲದ‌ ಬೇರೆ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿಲ್ಲ ಎಂದು ಅರ್ಥವೇ?

ಈ ನಿಗಮಗಳ ಹೆಸರಲ್ಲೂ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಭೋವಿ, ತಾಂಡ, ಸಫಾಯಿ ಕರ್ಮಚಾರಿ, ಬಾಬು ಜಗಜೀವನ್ ರಾಮ್, ಮಡಿವಾಳ ಮಾಚಿದೇವ, ಉಪ್ಪಾರ, ಆರ್ಯಶೈವ, ವಿಶ್ವಕರ್ಮ, ಕಾಡುಗೊಲ್ಲ, ಅಂಬಿಗರ ಚೌಡಯ್ಯ, ಸವಿತಾ ಸಮಾಜ – ಹೀಗೆ ಎಲ್ಲ ನಿಗಮಗಳಿಗೂ ಒಟ್ಟಾರೆ ಸರ್ಕಾರ ಕೊಟ್ಟಿರೋದು ಕೇವಲ 500 ಕೋಟಿ ರೂಪಾಯಿಗಳು ಮಾತ್ರ.

ಅನುದಾನ ಯಾರಿಗೆ ಎಷ್ಟು, ಇದಕ್ಕೆ ಮಾನದಂಡವೇನು ಎಂಬುದನ್ನೂ ವಿವರಿಸಿಲ್ಲ. ಇದು ಜನರಿಗೆ ಟೋಪಿ ಹಾಕುವ ಹುನ್ನಾರವಲ್ಲದೇ ಮತ್ತೇನು? ಒಟ್ಟಿನಲ್ಲಿ ಈ ಬಜೆಟ್ ನಲ್ಲಿ ರಾಜ್ಯದ ಜನರ ಪರವಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಇದು ಜನರಿಗೆ ಗಾಳಿ ಗೋಪುರ ತೋರಿಸಿ ದಾರಿ ತಪ್ಪಿಸುವ ಬಜೆಟ್ ಆಗಿದೆ.

Donate Janashakthi Media

Leave a Reply

Your email address will not be published. Required fields are marked *