- ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
- ಪಶ್ಚಿಮ ಬಂಗಾಳದ ಮೂರು
- ಒರಿಸ್ಸಾದ ಒಂದು ವಿಧಾನಸಭಾ ಕ್ಷೇತ್ರ
- ಸೆ.30ರಂದು ಮತದಾನ – ಅ.3ರಂದು ಫಲಿತಾಂಶ
- ಸೆ.6ರಿಂದ ಚುನಾವಣಾ ಪ್ರಕ್ರಿಯೆಗಳು ಆರಂಭ
ಕೊಲ್ಕತ್ತಾ: ಕೇಂದ್ರ ಚುನಾವಣಾ ಆಯೋಗ ನಾಲ್ಕು ವಿಧಾನಸಭೆಗಳಿಗೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ. ಸೆಪ್ಟೆಂಬರ್ 30ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 3ರಂದು ಫಲಿತಾಂಶ ಹೊರಬೀಳಲಿದೆ.
ಪಶ್ಚಿಮ ಬಂಗಾಳದ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒರಿಸ್ಸಾದ 1 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದ ಬಾಬಿನೀಪುರ, ಸಂಸೇರ್ನಗರ್, ಜಾಂಗೀಪುರ್ ಹಾಗೂ ಒರಿಸ್ಸಾದ ಪಿಪ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇದನ್ನು ಓದಿ: ನಂದಿಗ್ರಾಮ ಚುನಾವಣೆ: ಮಮತಾ ಅರ್ಜಿ ವಿಚಾರಣೆಗೆ ಒಪ್ಪಿಗೆ-ಇವಿಎಂಗಳನ್ನು ಸಂರಕ್ಷಿಸಿಡಲು ಹೈಕೋರ್ಟ್ ಆದೇಶ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬೇಕಾಗಿದೆ. ಅದರಂತೆ, ಪಶ್ಚಿಮ ಬಂಗಾಳದ ಬಾಬಿನೀಪುರ ವಿಧಾನಸಭಾ ಕ್ಷೇತ್ರದ ಸ್ಪರ್ಧೆಸಲಿರುವುದು ಖಚಿತವಾಗಿದೆ.
ಬಂಗಾಳದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸದ್ದ ಮಮತಾ ಬ್ಯಾನರ್ಜಿ ಆ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದರು. ಮಮತಾ ಬ್ಯಾನರ್ಜಿ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕೆಂದರೆ ಬಾಬಿನೀಪುರ ಕ್ಷೇತ್ರದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಇದನ್ನು ಓದಿ: ಚುನಾವಣೆಗೂ ಮೊದಲು ಅಭ್ಯರ್ಥಿಗಳ ಅಪರಾಧ ಮಾಹಿತಿ ಬಹಿರಂಗಗೊಳ್ಳಬೇಕು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ನಂದಿಗ್ರಾಮ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದ ಸುವೇಂದು ಅಧಿಕಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಮತಾ ಬ್ಯಾನರ್ಜಿ ಸೋಲನ್ನು ಅನುಭವಿಸಿದ್ದರು. ಮೇ 2ರ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 13 ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 14ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಾಸ್ ಪಡೆಯಲು ಸೆಪ್ಟೆಂಬರ್ 16 ಕೊನೆಯ ದಿನವಾಗಿದೆ. ಅಕ್ಟೋಬರ್ 5ರಂದು ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ.