ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಕೈಬಿಡಿ – ಸಿಪಿಐ(ಎಂ) ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಕೊಪ್ಪಳ, ಹಾಸನ, ಹಾವೇರಿ ಮಂಡ್ಯ, ಚಾಮರಾಜನಗರ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿರುವ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು. ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌ ಪ್ರಕಟಣೆ ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರವು ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮುನ್ನ ಯಾವುದೇ ಪೂರ್ವ ತಯಾರಿ ನಡೆಸಿರಲಿಲ್ಲ. ಇದರಿಂದ ಸ್ವಂತ ಜಾಗ ಮತ್ತು ಖಾಯಂ ಬೋಧಕರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಅವು ಬಳಲುತ್ತಿದ್ದವು. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಿಂದ ಬೇರ್ಪಡಿಸಿ ಈ ಜಿಲ್ಲಾ ಮಟ್ಟದ ವಿ.ವಿ.ಗಳನ್ನು ಸ್ಥಾಪಿಸಿ ಕಾಲೇಜುಗಳನ್ನು ಸಂಯೋಜಿಸಲಾಗಿತ್ತು. ಇಂತಹ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. ಹೀಗೆ ತರಾತುರಿಯಲ್ಲಿ ಈ ವಿಶ್ವವಿದ್ಯಾಲಯಗಳನ್ನು ಆರಂಬಿಸಿದ್ದ ಬಿಜೆಪಿ ಅದಕ್ಕೆ ಯಾವುದೇ ಹಣಕಾಸಿನ ನೆರವನ್ನು ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಈಗಾಗಲೇ ಸ್ಥಾಪನೆಯಾಗಿ ತಳವೂರಿದ್ದ ವಿಶ್ವವಿದ್ಯಾಲಯಗಳನ್ನು ವಿಭಜಿಸಲಾಗಿತ್ತು. ಇದರಿಂದಾಗಿ ಅವುಗಳಿಗೆ ಅಧ್ಯಯನಕ್ಕೆಂದು ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೂ ಇಳಿಮುಖವಾಯಿತು. ಇದರ ಪರಿಣಾಮವಾಗಿ ಆ ವಿಶ್ವವಿದ್ಯಾಲಯಗಳ ಆರ್ಥಿಕ ಸಂಪನ್ಮೂಲಕ್ಕೆ ಪೆಟ್ಟು ಬಿದ್ದು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ವೇತನ ಪಾವತಿಸುವುದೇ ಕಷ್ಟ ಎಂಬ ಸ್ಥಿತಿಗೆ ಬಂದು ಮುಟ್ಟಿತು ಎಂದಿದ್ದಾರೆ.ಒಂಬತ್ತು

ಇದನ್ನೂ ಓದಿ: ಕನ್ನಡ ಅಲ್ಲ, ಮರಾಠಿ ಮಾತಾಡು; KSRTC ಕಂಡಕ್ಟರ್ ಗೆ ಥಳಿಸಿದ ಯುವಕರು, ನಿರ್ವಾಹಕ ಕಣ್ಣೀರು!

ಈ ನಡುವೆ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಅನುದಾನವನ್ನೇ ನೀಡದೆ ಸ್ವಂತ ಹಣಕಾಸು ಮೂಲವನ್ನು ಸೃಷ್ಟಿಸಿಕೊಳ್ಳಲು ವಿಶ್ವವಿದ್ಯಾಲಯಗಳ ಮೇಲೆ ಒತ್ತಡ ಹೇರಲಾಯಿತು. ಇದರಿಂದ ವಿವಿಧ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಹಣ ಕಕ್ಕಿಸುವ ಕೆಲಸಕ್ಕೆ ವಿಶ್ವವಿದ್ಯಾಲಯಗಳು ಮುಂದಾದವು. ಉನ್ನತ ಶಿಕ್ಷಣವನ್ನು ಖಾಸಗೀಕರಿಸುವ ಭಾಗವಾಗಿಯೇ ಕೇಂದ್ರದ ಒತ್ತಡಕ್ಕೆ ಮಣಿದ ಅಂದಿನ ಬಿಜೆಪಿ ಈ ಕ್ರಮ ಕೈಗೊಂಡಿತ್ತು. ಒಂಬತ್ತು

ಆದರೆ ಇದೀಗ ಅದಕ್ಕೆ ಅಗತ್ಯವಿರುವ ಹಣಕಾಸು ನೆರವು ನೀಡಿ ಅವುಗಳನ್ನು ಬಲಪಡಿಸಬೇಕಾದ ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕ ನೆಪವನ್ನು ಮುಂದುಮಾಡಿ ಆ ವಿ.ವಿ.ಗಳನ್ನು ಮುಚ್ಚುವ ನಿರ್ಧಾರಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಒಟ್ಟಾರೆ ರಾಜ್ಯದ ಒಂಬತ್ತು ವಿವಿಗಳ ನೂರಾರು ಕಾಲೇಜುಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನೂರಾರು ಅದ್ಯಾಪಕರು ಇತರೆ ಸಿಬ್ಬಂದಿಗಳು ಇದರಿಂದ ಆತಂತ್ರಗೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದಿದ್ದಾರೆ.ಒಂಬತ್ತು

ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರತಿಷ್ಟೆಗಾಗಿ ಆಡುವ ಆಟಗಳು ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿವೆ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ವೈರತ್ವದ ಪೈಪೋಟಿಗೆ ಸಿಕ್ಕಿ ಒಟ್ಟು ಶಿಕ್ಷಣ ವ್ಯವಸ್ಥೆ ಅಧ್ವಾನವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

9 ವಿವಿಗಳನ್ನು ಮುಚ್ಚುವ ಸರ್ಕಾರದ ಈ ಅವೈಜ್ಞಾನಿಕ ನಡೆಯಿಂದ ಹಿಂದೆ ಸರಿಯಬೇಕು. 9 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿಗಳ ಹೊಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನವಾಗಿ ಹೊತ್ತುಕೊಳ್ಳಬೇಕು ಮತ್ತು ರಾಜ್ಯದ ಈ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಜಮೀನಿನ ವೆಚ್ಚ ಬಿಟ್ಟು (100ರಿಂದ 200 ಎಕರೆ ಅಗತ್ಯ) 342 ಕೋಟಿ ರೂ. ಮೊತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲ ಸೌಕರ್ಯ, ಸಲಕರಣೆಗಳು, ವಾಹನಗಳು, ಪೀಠೋಪಕರಣ ಮತ್ತು ಇತರೆ ವಸ್ತುಗಳ ಖರೀದಿಸಲು ಅಗತ್ಯವಿರುವ ಹಣಕಾಸಿನ ನೆರವನ್ನು ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಬೇಕು. ಆ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮತ್ತು ಅಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಸಂರಕ್ಷಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಇದನ್ನೂ ನೋಡಿ: ಉಳಿಮೆ ಮಾಡುತ್ತಿದ್ದ ಭೂಮಿಯಲ್ಲಿ ಗುಂಡಿ ತೋಡಿದ ಅರಣ್ಯ ಇಲಾಖೆ : ಗುಂಡಿ ಮುಚ್ಚಿ ಆಕ್ರೋಶ ವ್ಯಕ್ತ ಪಡಿಸಿದ ರೈತರು

Donate Janashakthi Media

Leave a Reply

Your email address will not be published. Required fields are marked *