ಬೆಂಗಳೂರು: ವೈದ್ಯರು ತಮ್ಮ ಮೇಲೆ ಹಲ್ಲೆ ವಿವಿದೆಡೆ ನಡೆಯುತ್ತಿರುವ ಹಲ್ಲೆಯ ವಿರುದ್ಧ ಗಂಭೀರವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಒತ್ತಾಯಿಸಿ ಇಂದು ದೇಶವ್ಯಾಪಿಯಾಗಿ ಪ್ರತಿಭಟನೆ ನಡೆಸಿದರು. ಕೊರೊನಾ ಸಂಕಷ್ಟದ ಸಮಯದಲ್ಲಿಯೂ ದೇಶದ ವಿವಿಧ ಭಾಗಗಳಲ್ಲಿ ವೈದ್ಯರು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಈ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ನೀಡಿತ್ತು.
ಇದನ್ನು ಓದಿ: ಜೂನ್ 18ರಂದು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆಗೆ ಐಎಂಎ ಕರೆ
ಭಾರತೀಯ ವೈದ್ಯಕೀಯ ಸಂಘ(ಐಎಂಎ) ಈ ದಿನವನ್ನು ‘ರಾಷ್ಟ್ರೀಯ ಪ್ರತಿಭಟನಾ ದಿನ’ವಾಗಿ ಆಚರಿಸುತ್ತಿದೆ. ಇಡೀ ದೇಶಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಈ ಹಿಂಸೆಯ ಘಟನೆಗಳನ್ನು ನೋಡಿ ನಮಗೆಲ್ಲಾ ತುಂಬಾ ನೋವಾಗಿದೆ. ಅಸ್ಸಾಂನಲ್ಲಿ ನಮ್ಮ ಯುವ ವೈದ್ಯರ ಮೇಲೆ ಕ್ರೂರ ಹತ್ಯೆಯಾಗಿದೆ ಮತ್ತು ಮಹಿಳಾ ವೈದ್ಯರ ಮೇಲೆ ಅನುಭವಿ ವೈದ್ಯರ ಮೇಲೆ ಕ್ರೂರ ಹಲ್ಲೆಗಳು ವೃತ್ತಿ ನಿರತ ವೈದ್ಯರಲ್ಲಿ ಮಾನಸಿಕ ಆಘಾತವನ್ನು ಉಂಟುಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೊರೊನಾ ಚಿಕಿತ್ಸೆಯ ಸಂದರ್ಭದಲ್ಲಿ ಮೃತಪಟ್ಟಂತಹ ೧೪೦೦ ವೈದ್ಯರನ್ನು ಹುತಾತ್ಮರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ವೈದ್ಯರು ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ಸೇವೆ ನಿರ್ವಹಿಸುತ್ತಾರೆ. ಆದರೂ ವೈದ್ಯರ ಮೇಲೆ ಹಲ್ಲೆ ಮತ್ತು ಒತ್ತಡ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆ ನಿಯಂತ್ರಿಸುವಂತೆ ನಿರಂತರವಾಗಿ ಸರ್ಕಾರಕ್ಕೆ ಮನವಿ ನೀಡುತ್ತಲೇ ಬಂದಿದ್ದೇವೆ. ಅಲ್ಲದೆ, ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ವೈಜ್ಞಾನಿಕ ವೈದ್ಯಕೀಕ ಕ್ಷೇತ್ರವನ್ನು ಅಪಮಾನಕ್ಕೆ ಈಡುಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಶಾಸನಗಳ ಮೂಲಕ ವೈದ್ಯರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಸುಳ್ಳು ಸುದ್ದಿ ಹಾಗೂ ವೈದ್ಯರ ಮೇಲೆ ಹಲ್ಲೆ: ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಐಎಂಎ ಆಗ್ರಹ
ಸ್ಥಳೀಯ ಮಟ್ಟದಲ್ಲಿ ಕಾರ್ಯನಿರತರಾಗಿರುವ ವೈದ್ಯರು ತಮ್ಮ ತಮ್ಮ ಸ್ಥಳಗಳಲ್ಲೇ ಪ್ರತಿಭಟನೆಗೆ ಐಎಂಎ ಸಂಘಟನೆಯೂ ಸೂಚನೆ ನೀಡಿತ್ತು. ಕಪ್ಪು ಬ್ಯಾಡ್ಜ್, ಮಾಸ್ಕ್, ರಿಬ್ಬನ್ ಧರಿಸಿ ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಯ ಬಗ್ಗೆ ಅರಿವು ಮೂಡಿಸುವಂತೆ ಕರೆ ನೀಡಲಾಗಿತ್ತು.
ಇನ್ನು ಪ್ರತಿಭಟನೆಗೆ ಖಾಸಗಿ ಆಸ್ಪತ್ರೆ ಒಕ್ಕೂಟವೂ ಬೆಂಬಲ ಸೂಚಿಸಿತ್ತು. ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಆಸ್ಪತ್ರೆಗಳನ್ನ ಸಂರಕ್ಷಿತ ವಲಯ ಅಂತ ಘೋಷಿಸಬೇಕು. ಆಸ್ಪತ್ರೆ ಹಾಗೂ ಆರೋಗ್ಯ ಸೇವೆ ವೃತ್ತಿಪರ ಸಂರಕ್ಷಣಾ ಕಾಯ್ದೆ ಐಪಿಸಿ ಮತ್ತು ಸಿ ಆರ್ ಪಿ ಸಿ ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಐಎಂಎ ಮಾಹಿತಿಯ ಪ್ರಕಾರ ವಿವಿಧ ಸಂಸ್ಥೆಗಳಾದ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ, ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ, ಮೆಡಿಕಲ್ ಸ್ಟೂಡೆಂಟ್ಸ್ ನೆಟ್ವರ್ಕ್, ಜೂನಿಯರ್ ಡಾಕ್ಟರ್ಸ್ ನೆಟ್ವರ್ಕ್ (ಜೆಡಿಎನ್) ಪ್ರತಿಭಟನೆಯಲ್ಲಿ ಪಾಲ್ಗೊಂಡಿರುತ್ತಾರೆ.
ಇಂದು ಬೆಳಿಗ್ಗೆ 9 ಗಂಟೆಯಿಂದ ಪ್ರತಿಭಟನೆಗಳು ಆರಂಭವಾದವು. ಜೆಡಿಎನ್ ಮತ್ತು ನಿವಾಸ ವೈದ್ಯರ ಸಂಘ (ಆರ್ಡಿಎ) ಆಯೋಜಿಸಿದ ಪ್ರತಿಭಟನೆ ಏಮ್ಸ್ ಮತ್ತು ದೆಹಲಿ ವೈದ್ಯಕೀಯ ಸಂಘದ ಎದುರು ಮೂರು ಸ್ಥಳಗಳಲ್ಲಿ ನಡೆದಿದೆ.
ಬಿಹಾರ ಮತ್ತು ಕೇರಳದ ಮಧ್ಯ ಭಾಗದಲ್ಲಿ ವೈದ್ಯರು ಬೆಳಿಗ್ಗೆ ತಮ್ಮ ಚಿಕಿತ್ಸಾಲಯಗಳನ್ನು ಮುಚ್ಚ ಪ್ರತಿಭಟಿಸಿರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಕೇಂದ್ರ ಸರಕಾರದ ಹಿರಿಯ ಮಂತ್ರಿಗಳಿಗೆ ಮನವಿಯನ್ನು ಕಳುಹಿಸಿದ್ದಾರೆ ಎಂದು ವೈದ್ಯಕೀಯ ಸಂಸ್ಥೆ ತಿಳಿಸಿದೆ.
ದೇಶದ ವಿವಿದೆಡೆ ನಡೆದ ಪ್ರತಿಭಟನೆಯಲ್ಲಿ ಎಲ್ಲಾ 1,700 ಶಾಖೆಗಳ ಸುಮಾರು 3,00,000 ಹೆಚ್ಚಿನ ವೈದ್ಯರು ಭಾಗವಹಿಸಿರುವ ಅಂದಾಜು ಇದೆ. ರಾಜ್ಯದಲ್ಲಿಯೂ ಸಹ ಶಿವಮೊಗ್ಗ ಮತ್ತು ರಾಯಚೂರು ಜಿಲ್ಲೆ ಒಳಗೊಂಡು ವಿವಿದೆಡೆ ಪ್ರತಿಭಟನೆಗಳು ನಡೆದಿವೆ.