ನವದೆಹಲಿ: ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ನಂತರ ಬಿಡುಗಡೆಗೊಂಡಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆಯು ಯಾವುದೇ ಪ್ರಗತಿಯನ್ನು ಕಂಡುಕೊಂಡಿಲ್ಲ.
ಟೂಲ್ ಕಿಟ್ ಪ್ರಕರಣದ ತನಿಖೆಯಲ್ಲಿ ಯಾವುದೆ ಪ್ರಗತಿ ಇಲ್ಲದಿರುವುದರಿಂದ, ಗೂಗಲ್ ಅಥವಾ ಜೂಮ್‌ನ ಸಹಕಾರದ ಕೊರತೆಯಿಂದಾಗಿ ದಿಶಾ ರವಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯವಿಲ್ಲದಿರುವುದರಿಂದ ಪ್ರಕರಣವನ್ನು ಕೈಬಿಡಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿ: ದಿಶಾ ರವಿ ಕಸ್ಟಡಿಗೆ ವ್ಯಾಪಕ ಅಸಮ್ಮತಿ “ಟೂಲ್ ಕಿಟ್’ ನಲ್ಲಿ ಅಪರಾಧವೆನಿಸುವ ಒಂದು ಸಾಲನ್ನು ತೋರಿಸಬಲ್ಲಿರಾ?”
ಈ ಕಾರಣದಿಂದ ದೇಶದ್ರೋಹ, ಕ್ರಿಮಿನಲ್ ಸಂಚು ಆರೋಪದಡಿ ಐಪಿಸಿ ಅನ್ವಯ ಪ್ರಕರಣ ಎದುರಿಸುತ್ತಿರುವ ದಿಶಾ ರವಿ ವಿರುದ್ಧ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಲು ಸಾಧ್ಯವಿಲ್ಲ.
ರೈತರ ಪ್ರತಿಭಟನೆಗಳ ಕುರಿತು ‘ಟೂಲ್‌ಕಿಟ್’ ತಯಾರಿಸಿದ್ದರು. ಈ ಟೂಲ್‌ಕಿಟ್ ಅನ್ನು ಸ್ವೀಡನ್‍ನ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಕೂಡ ಶೇರ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ದೇಶದ ವಿರುದ್ದ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರು ಪ್ರಮುಖ ಸಂಚುಕೋರ ಎಂದು ಆರೋಪಿಸಿ ದೆಹಲಿ ಪೊಲೀಸರು ಫೆಬ್ರವರಿ 13 ರಂದು ಬೆಂಗಳೂರಿನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು. ಫೆಬ್ರವರಿ 23ರಂದು ಅವರಿಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ದಿಶಾ ರವಿ ಅವರ ಜೊತೆಗೆ, ಮುಂಬೈ ಮೂಲದ ವಕೀಲೆ ನಿಕಿತಾ ಜಾಕೋಬ್ ಮತ್ತು ಇಂಜಿನಿಯರ್ ಶಾಂತನು ಕೂಡ ಆಪಾದಿತರಾಗಿದ್ದು, ಟೂಲ್‌ಕಿಟ್ ತಯಾರಿಕೆಯಲ್ಲಿ ದಿಶಾ ರವಿ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು. ದಿಶಾ ರವಿ ನಂತರ ನಿಕಿತಾ ಮತ್ತು ಶಾಂತನು ಕೂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದನ್ನು ಓದಿ: ದಿಶಾ ರವಿ ಜಾಮೀನು : ನ್ಯಾಯಾಧೀಶರು ಹೇಳಿದ್ದೇನು ?
ಜನವರಿ 26ರಂದು ನಡೆದ ಕೆಂಪು ಕೋಟೆ ಹಿಂಸಾಚಾರ ಪ್ರಕರಣಕ್ಕಿಂತ ಮುನ್ನ ದಿಶಾ ಮತ್ತು ನಿಕಿತಾ ಅವರು ಕೆನಡಾದ ಪಿಎಫ್‍ಜೆ ಸಂಸ್ಥೆಯ ಮೋ ಧಲಿವಾಲ್ ಜತೆ ಝೂಮ್ ಕಾಲ್ ನಡೆಸಿದ್ದರು. ಹಾಗೆಯೇ ಭಾರತದ ವಿರುದ್ಧ ಅಸಮಾಧಾನ ಹರಡಲು ಖಲಿಸ್ತಾನಿ ಪರ ಖಲಿಸ್ತಾನಿ ಗುಂಪಾದ ‘‘ಪೊಯೆಟಿಕ್ ಜಸ್ಟೀಸ್ ಫೌಂಡೇಶನ್” ನೊಂದಿಗೆ ಸಹಕರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಎಂದು ಆರೋಪಿಸಲಾಗಿತ್ತು.
ತನಿಖಾಧಿಕಾರಿಗಳು ಅಮೆರಿಕಾದ ಝೂಮ್ ಸಂಸ್ಥೆಗೆ ಫೆಬ್ರವರಿಯಲ್ಲಿಯೇ ಮಾಹಿತಿ ಕೋರಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ. ಈ ನಡುವೆ ಗೂಗಲ್‍ನಿಂದ ಮಾಹಿತಿ ಕೋರಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ ಎಂದು ವರದಿ ಮಾಡಿದೆ.