ಭಾರತದಲ್ಲಿ ರೈತ ಚಳುವಳಿ ಭಿನ್ನ ಆಯಾಮಗಳು – ಭಾಗ 2

(ಭಾಗ -1 ರಲ್ಲಿ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಬದುಕು ಕಳೆದುಕೊಳ್ಳುತ್ತಿರುವ ಸನ್ನಿವೇಶಗಳ ಕುರಿತು ವಿವರಗಳನ್ನು ತಿಳಿದಿದ್ದೆವು )

-ನಾ ದಿವಾಕರ

ಪರಾವಲಂಬನೆಯ ಸ್ಥಿತ್ಯಂತರಗಳು

ಅಖಿಲ ಭಾರತ ಮಟ್ಟದಲ್ಲಿ ಒಟ್ಟು ಸಾಲದ ಶೇಕಡಾ 40ರಷ್ಟು ಭಾಗವನ್ನು ಅನೌಪಚಾರಿಕ ವಲಯದ ಖಾಸಗಿ ಲೇವಾದೇವಿಗಾರರೇ ಒದಗಿಸಿದ್ದಾರೆ. ಈ ಸಾಲಗಳಿಗೆ ವಿಧಿಸುವ ಬಡ್ಡಿ ದರವೇ ರೈತನ ಬದುಕನ್ನು ಹಿಂಡಿ ಹಿಪ್ಪೇಕಾಯಿ ಮಾಡುತ್ತದೆ. ಅಧಿಕೃತ ಮಾಹಿತಿಯ ಅನುಸಾರ ಶೇಕಡಾ 36ರಷ್ಟು ಅನೌಪಚಾರಿಕ ಸಾಲಗಳಿಗೆ ಸರಾಸರಿ ಬಡ್ಡಿ ವಾರ್ಷಿಕ ಶೇಕಡಾ 20-25ರಷ್ಟಿರುತ್ತದೆ. ಇನ್ನುಳಿದ ಶೇಕಡಾ 38ರಷ್ಟು ಸಾಲಗಳಿಗೆ ಬಡ್ಡಿ ದರಗಳು ಶೇಕಡಾ 30ಕ್ಕಿಂತಲೂ ಹೆಚ್ಚಾಗಿರುತ್ತವೆ. ಅಂದರೆ ಸಣ್ಣ ರೈತನ ನೂರು ರೂಗಳ ಆದಾಯದಲ್ಲಿ ಮೂವತ್ತು ರೂಗಳಷ್ಟು ಬಡ್ಡಿ ತೆತ್ತಬೇಕಾಗುತ್ತದೆ. ಅತಿವೃಷ್ಟಿಯಿಂದಲೋ, ಅನಾವೃಷ್ಟಿಯಿಂದಲೋ ಫಸಲು ನಷ್ಟವಾದರೆ ಜೀವನೋಪಾಯಕ್ಕೇ ಕುತ್ತು ಬರುವುದರಿಂದ, ಸಾಲದ ಹೊರೆ ತಾಳಲಾರದೆ ರೈತನು ಆತ್ಮಹತ್ಯೆಗೆ ಮೊರೆ ಹೋಗುತ್ತಾನೆ. ಭಾರತ

ಬ್ಯಾಂಕ್‌ ರಾಷ್ಟ್ರೀಕರಣವಾಗಿ ಐದು ದಶಕಗಳು ಕಳೆದಿದ್ದರೂ ಇಂದಿಗೂ ಖಾಸಗಿ ಲೇವಾದೇವಿಯನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯ ಎನ್ನುವುದು ವಾಸ್ತವವಾದರೂ ಅದು ಅರ್ಧಸತ್ಯ. ಏಕೆಂದರೆ ಗ್ರಾಮೀಣ ಭಾರತದಲ್ಲಿ ಬೇರುಬಿಟ್ಟಿರುವ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು ಇಂದು ರೂಪಾಂತರಗೊಂಡಿದ್ದು ಇಂದಿಗೂ ಸಕ್ರಿಯವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಸಾಲ ಪಡೆದು ಅದನ್ನು ಸಾಲವಂಚಿತ ರೈತರಿಗೆ ಮಾರುಕಟ್ಟೆ ದರದಲ್ಲಿ ಸಾಲ ನೀಡುವ ಒಂದು ವ್ಯವಸ್ಥೆಯೂ ಸುಪ್ತವಾಗಿ ಚಾಲ್ತಿಯಲ್ಲಿದೆ. ಭಾರತ

ಸರ್ಕಾರಿ ಬ್ಯಾಂಕುಗಳು, ಸಹಕಾರ ಸಂಘಗಳು ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳು ಒದಗಿಸುವ ಸಾಲಗಳ ಬಹುಪಾಲು ಮೊತ್ತ ದೊಡ್ಡ ರೈತರನ್ನೇ ತಲುಪುತ್ತವೆ. ಕೆಲವೇ ಗುಂಟೆಗಳಷ್ಟು ಭೂಮಿ ಹೊಂದಿರುವ ಲಕ್ಷಾಂತರ ರೈತರಿಗೆ ಅಗತ್ಯವಾದ ಕೃಷಿ ಸೌಲಭ್ಯವನ್ನು ಬ್ಯಾಂಕುಗಳಿಂದಲೂ ಒದಗಿಸಲಾಗುತ್ತಿಲ್ಲ. ರೈತಾಪಿ ಜನರ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ ಮತ್ತಿತರ ಕಸುಬುಗಳಿಗೆ ಅವಶ್ಯಕತೆ ಇರುವಷ್ಟು ಸಾಲಗಳು ದೊರೆಯುತ್ತಿಲ್ಲ. ಈ ಬೃಹತ್‌ ಸಮೂಹ ಖಾಸಗಿ ಲೇವಾದೇವಿಗಾರರನ್ನು ಅವಲಂಬಿಸುತ್ತದೆ. ಭಾರತ

ಇದನ್ನೂ ಓದಿ: ಭಾರತದಲ್ಲಿ ರೈತ ಚಳುವಳಿ ಭಿನ್ನ ಆಯಾಮಗಳು – ಭಾಗ 1

ನೀರಾವರಿ ಇಲ್ಲದ ಜಿಲ್ಲೆಗಳಲ್ಲಿ ಮಳೆಯಾಧಾರಿತ ಕೃಷಿ ನಡೆಸುವ ರೈತರು ಇನ್ನೂ ಹೆಚ್ಚಿನ ಸಂಕಷ್ಟಗಳನ್ನು ಎದುರಿಸುತ್ತಾರೆ. ಉದಾಹರಣೆಗೆ ಕೋಲಾರ ಜಿಲ್ಲೆಯನ್ನು ಗಮನಿಸಬಹುದು. ಇಲ್ಲಿ ಮಳೆ ವಿಫಲವಾದರೆ ಅಲ್ಪಸ್ವಲ್ಪ ಭೂಮಿ ಇರುವ ರೈತರೂ ಸಹ ಜೀವನೋಪಾಯಕ್ಕಾಗಿ ಕೃಷಿ ಕಾರ್ಮಿಕರಾಗಿ, ನಗರಗಳ ಕಟ್ಟಡ ಕಾರ್ಮಿಕರಾಗಿ ದುಡಿಯಬೇಕಾಗುತ್ತದೆ. ಮಳೆ ಇದ್ದರೂ ಸಹ ವರ್ಷದಲ್ಲಿ ಆರು ತಿಂಗಳು ಈ ರೀತಿಯ ಕಾಯಕದ ಮೂಲಕವೇ ತಮ್ಮ ಜೀವನ ನಿರ್ವಹಣೆ ಮಾಡಬೇಕಾಗುತ್ತದೆ. ಈ ಒಣ ಪ್ರದೇಶಗಳಲ್ಲಿರುವ ಕೃಷಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗುವುದು ಅಲ್ಲಿ ಅನೌಪಚಾರಿಕ ವಲಯದಲ್ಲಿ ದುಡಿಯುವುದು ಅನಿವಾರ್ಯವಾಗುತ್ತದೆ. ಹೀಗೆ ರೈತನಾಗಿ, ಕೃಷಿ ಕಾರ್ಮಿಕನಾಗಿ, ನಗರದ ವಲಸೆ ಕಾರ್ಮಿಕನಾಗಿ ಜೀವನ ಸವೆಸುವ ಲಕ್ಷಾಂತರ ರೈತರು ಸಮರ್ಥವಾದ ಸಂಘಟನೆಯೂ ಇಲ್ಲದೆ ಪರದಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಭಾರತ

ಶ್ರಮ ಉತ್ಪಾದನೆ ವರಮಾನ ಬದುಕು

ಒಂದು ಮಾಹಿತಿಯ ಪ್ರಕಾರ ದೇಶದ ಒಟ್ಟು ದುಡಿಮೆಗಾರರ ಪೈಕಿ ಶೇಕಡಾ 43.96ರಷ್ಟು, ಅಂದರೆ ಸುಮಾರು 15 ಕೋಟಿ ಜನರು,  ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದಾರೆ. ಇವರ ಪೈಕಿ ಅರ್ಧಕ್ಕೂ ಹೆಚ್ಚು ಜನರು ಕೃಷಿ ಕೂಲಿ ಅಥವಾ ಕೃಷಿ ಆಧಾರಿತ ದುಡಿಮೆಯನ್ನೇ ಅವಲಂಬಿಸಿದ್ದಾರೆ.  ಕೋವಿದ್‌ ಸಂದರ್ಭದ 2020-22ರ ಅವಧಿಯಲ್ಲಿ 5.6 ಕೋಟಿ ಜನರು ನಗರಗಳ ಇತರ ಉದ್ಯೋಗಗಳನ್ನು ತೊರೆದು ಕೃಷಿ ಆಧಾರಿತ ದುಡಿಮೆಗಾಗಿ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಸದಾ ಅನಿಶ್ಚಿತ ಭವಿಷ್ಯವನ್ನೇ ಎದುರಿಸುವ ಸಾಧಾರಣ ರೈತಾಪಿ ಸಮುದಾಯ ಹಾಗೂ ಇವರೊಡನೆ ಬದುಕು ಸವೆಸುವ ಲಕ್ಷಾಂತರ ಕೃಷಿ ಕಾರ್ಮಿಕರು, ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಭಾರತದಲ್ಲಿ ಶಿಕ್ಷಣ, ಆರೋಗ್ಯ, ವಿಮೆ ಮತ್ತಿತರ ಸವಲತ್ತುಗಳಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ದೇಶಾದ್ಯಂತ ರೈತ ಸಂಘಟನೆಗಳು ಹಮ್ಮಿಕೊಂಡಿರುವ ರೈತ ಮುಷ್ಕರದ ಅಂಗಳದಲ್ಲಿ ಬೆಂಬಲ ಬೆಲೆ ಇತ್ಯಾದಿ ವಾಣಿಜ್ಯ ವಿಷಯಗಳನ್ನು ಹೊರತುಪಡಿಸಿ, ಸಾಮಾನ್ಯ ರೈತನ ಬದುಕು ಮತ್ತು ಭವಿಷ್ಯ ಒಂದು ಮುಖ್ಯ ಪ್ರಶ್ನೆಯಾಗಿ ಚರ್ಚೆಗೊಳಗಾಗಬೇಕಿದೆ. ಭಾರತದ ರೈತ ಚಳುವಳಿ ಮತ್ತು ಹೋರಾಟಗಳ ಪರಂಪರೆಯನ್ನು ಗಮನಿಸಿದಾಗ ಇಂದಿಗೂ ಗುರುತಿಸಬಹುದಾದ ಲಕ್ಷಣ ಎಂದರೆ ಭೂ ಸುಧಾರಣಾ ಕ್ರಮಗಳನ್ನು ಯಶಸ್ವಿಯಾಗಿ ಕಂಡು, ರೈತ ಸಮುದಾಯದ ಒಂದು ವರ್ಗಕ್ಕಾದರೂ ಅಲ್ಪ ಸ್ವಲ್ಪ ಭೂಮಿಯನ್ನು ಪಡೆದುಕೊಳ್ಳಲು ಸಾಧ್ಯವಾದ ರಾಜ್ಯಗಳಲ್ಲಿ ಮಾತ್ರ ರೈತ ಚಳುವಳಿಗಳು ಸಕ್ರಿಯವಾಗಿಯೂ, ಪ್ರಬಲವಾಗಿಯೂ ಇವೆ. ಉದಾಹರಣೆಗಾಗಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣ, ತಮಿಳುನಾಡು ರಾಜ್ಯಗಳತ್ತ ನೋಡಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನೀರಾವರಿ ಪ್ರದೇಶಗಳಲ್ಲಿರುವಷ್ಟು ಪ್ರಬಲವಾಗಿ ರೈತ ಚಳುವಳಿಗಳು ಒಣಬೇಸಾಯದ ಪ್ರದೇಶಗಳಲ್ಲಿ ಕಾಣಲಾಗುವುದಿಲ್ಲ.

ಸಣ್ಣ-ಅತಿ ಸಣ್ಣ ಹಾಗೂ ದೊಡ್ಡ ರೈತರನ್ನು ಪ್ರತಿನಿಧಿಸುವ ರೈತ ಚಳುವಳಿಗಳಲ್ಲೂ ಸಹ ಹಲವು ಗುಂಪುಗಳಿರುವುದು ಏಕತಾ ಚಳುವಳಿಗೆ ಭಂಗ ಉಂಟುಮಾಡುವ ಸಂದರ್ಭಗಳನ್ನೂ ನೋಡಿದ್ದೇವೆ. ಕಬ್ಬು ಮತ್ತು ಭತ್ತ ಬೆಳೆಯುವ ಹಿತವಲಯದ ರೈತರನ್ನು ಪ್ರತಿನಿಧಿಸುವ ರೈತ ಸಂಘಗಳ ಹೋರಾಟಗಳು ಜೀವನಾವಶ್ಯ ಮೂಲ ಸೌಕರ್ಯಗಳಿಗಿಂತಲೂ ಹೆಚ್ಚಾಗಿ ಮಾರುಕಟ್ಟೆ ಸಂಬಂಧಿತ ಬೇಡಿಕೆಗಳಿಂದ ನಿರ್ದೇಶಿಸಲ್ಪಡುತ್ತವೆ. ಉಳಿದಂತೆ ರೈತ ಸಂಘಟನೆಗಳು ಸಾಮಾಜಿಕ ನ್ಯಾಯ ಮತ್ತು ಬಹುತ್ವದ ಚಿಂತನೆಗಳಿಗಾಗಿ ಲೋಹಿಯಾ ಸಮಾಜವಾದವನ್ನೇ ಅನುಸರಿಸುವುದರಿಂದ ಕರ್ನಾಟಕದಲ್ಲಿ ರೈತ ಹೋರಾಟಗಳು ಪ್ರಗತಿಪರ ಸ್ವರೂಪವನ್ನು ಪಡೆದುಕೊಂಡಿವೆ. ಆದರೆ ಕೃಷಿ ಕ್ಷೇತ್ರದಲ್ಲೇ ಅತ್ಯಂತ ನಿಕೃಷ್ಟ ಬದುಕು ಸವೆಸುತ್ತಿರುವ, ನಾಳಿನ ಬದುಕಿಗಾಗಿ ಕಾತರದಿಂದಿರುವ ಲಕ್ಷಾಂತರ ಕೃಷಿ ಕಾರ್ಮಿಕರು, ಭೂ ಹೀನ ಕೃಷಿಕರು ಈ ಹೋರಾಟಗಳಲ್ಲಿ ಹೆಚ್ಚಾಗಿ  ಧ್ವನಿಸುವುದಿಲ್ಲ. ರೈತ ಸಂಘಟನೆಗಳಿಗೆ ಒಂದು ಸ್ಪಷ್ಟ ಸೈದ್ಧಾಂತಿಕ ಚಿಂತನಾಧಾರೆ ಇಲ್ಲದಿರುವುದರಿಂದ, ತಳಮಟ್ಟದ ಭೂಹೀನರು ಮತ್ತು ಕಾರ್ಮಿಕರು ಪ್ರಾತಿನಿಧಿತ್ವದಿಂದ ವಂಚಿತರಾಗಿರುತ್ತಾರೆ. ಭಾರತ

ಹಾಗೆಂದ ಮಾತ್ರಕ್ಕೆ ರೈತ ಚಳುವಳಿಗಳನ್ನು ಉಳ್ಳವರ ಪರ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಸಾಧಾರಣ ರೈತರು, ಭೂಮಿ ಹೊಂದಿರುವವರೂ ಸಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ನವ ಉದಾರವಾದಿ ಆರ್ಥಿಕತೆಯಲ್ಲಿ ಸರ್ಕಾರಗಳು ಕೃಷಿ ಕ್ಷೇತ್ರದಿಂದ ಹಿಂದಕ್ಕೆ ಸರಿದಿರುವುದರಿಂದ, ಕೃಷಿ ಬಂಡವಾಳ ಹೂಡಿಕೆ ಕಾರ್ಪೋರೇಟ್‌ ಮಾರುಕಟ್ಟೆಯ ಜವಾಬ್ದಾರಿಯಾಗಿದೆ. ಈ ಮಾರುಕಟ್ಟೆ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಸರ್ಕಾರದ ಆರ್ಥಿಕ ನೀತಿಗಳು ಕಲ್ಪಿಸುತ್ತಲೇ ಬಂದಿವೆ. ಮತ್ತೊಂದೆಡೆ ಕೃಷಿ ಭೂಮಿಯನ್ನು ಇತರ ವಾಣಿಜ್ಯ ಅಥವಾ ಕೈಗಾರಿಕಾ ಚಟುವಟಿಕೆಗಳಿಗಾಗಿ ಖರೀದಿಸಲು ಇದ್ದಂತಹ ಹಲವು ನಿಬಂಧನೆಗಳನ್ನು ಈಗ ಸಡಿಲಗೊಳಿಸಲಾಗಿದೆ. ಹಾಲಿ ಕಾಂಗ್ರೆಸ್‌ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ಮತ್ತೊಂದು ತಿದ್ದುಪಡಿ ಮಾಡಿದ್ದು ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಇಲ್ಲದೆಯೇ ಕೈಗಾರಿಕಾ ಪ್ರದೇಶಕ್ಕೆ ಬಳಸಲು ಅವಕಾಶ ನೀಡಲು ಮುಂದಾಗಿದೆ. ಭಾರತ

ಮಾರುಕಟ್ಟೆ ಆರ್ಥಿಕತೆಯ ಪ್ರಹಾರ

ಇದು ಅಲ್ಪ ಪ್ರಮಾಣದ ಕೃಷಿ ಭೂಮಿ ಹೊಂದಿರುವ ರೈತರನ್ನು ಮತ್ತಷ್ಟು ನಿರ್ಗತಿಕರನ್ನಾಗಿ ಮಾಡುವ ಒಂದು ಪ್ರಕ್ರಿಯೆಯಾಗಿ ಪರಿಣಮಿಸಬಹುದು. ಈಗಾಗಲೇ ರಿಯಲ್‌ ಎಸ್ಟೇಟ್‌ ಉದ್ಯಮದ ಮೂಲಕ ಕೃಷಿ ಭೂಮಿಯನ್ನು ಖರೀದಿಸಿ, ಬಡಾವಣೆಗಳನ್ನು ನಿರ್ಮಿಸುವ ಮೂಲಕ ರೈತನನ್ನು ತನ್ನ ಭೂಮಿಯಲ್ಲಿ ತಾನೇ ಕಾರ್ಮಿಕನಾಗಿ ದುಡಿಯುವ ಹಂತಕ್ಕೆ ನೂಕಿರುವ ಕಾರ್ಪೋರೇಟ್‌ ಆರ್ಥಿಕತೆ, ಈ ಪ್ರಕ್ರಿಯೆಯನ್ನು ಈಗ ತಳಮಟ್ಟಕ್ಕೆ ವಿಸ್ತರಿಸಲು ಸಾಧ್ಯವಾಗುತ್ತದೆ. ಹೆದ್ದಾರಿ, ಮೇಲ್ಸೇತುವೆ, ಚತುಷ್ಪತ-ದಶಪಥಗಳಿಗೆ ಭೂಮಿ ಕಳೆದುಕೊಂಡಿರುವ ಸಾವಿರಾರು ರೈತರು ಈಗಾಗಲೇ ನಗರಗಳ ಅನೌಪಚಾರಿಕ ವಲಯದ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಅನ್ಯ ಕೌಶಲಗಳೇ ಇಲ್ಲದ ರೈತಾಪಿ ಜನರು ನಗರಗಳಲ್ಲಿ ಅತ್ಯಂತ ನಿಕೃಷ್ಟ ಕೆಲಸಗಳಲ್ಲಿ ತೊಡಗಿ ಜೀವನ ಸವೆಸಬೇಕಾಗುತ್ತದೆ.

ಮತ್ತೊಂದೆಡೆ ಕೃಷಿಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳಲ್ಲಿ ಆಗುವ ಪಲ್ಲಟಗಳು ಮುಂದಿನ ತಲೆಮಾರಿನ ಯುವಕರನ್ನು ಬಲಾತ್ಕಾರದಿಂದ ನಗರ ಜೀವನಕ್ಕೆ ದೂಡುವಂತೆ ಮಾಡುತ್ತದೆ. ಉನ್ನತ ಶಿಕ್ಷಣ ಪಡೆದಿದ್ದರೂ ಉತ್ತಮ ನೌಕರಿ ಗಳಿಸಲಾಗದ ಈ ಯುವ ಸಮೂಹವು ಓಲಾ, ಊಬರ್‌, ಅಮೆಜಾನ್‌ ನಂತನ ಗಿಗ್‌ ಆರ್ಥಿಕತೆಯಲ್ಲಿ ಅಥವಾ ಹೋಟೆಲ್‌ ಉದ್ಯಮಗಳಲ್ಲಿ ದುಡಿಮೆ ಮಾಡಿ  ತಮ್ಮ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ.

ಭೂಹೀನ ಕೃಷಿಕರ ಪಾಡು ಇನ್ನೂ ಹೇಳತೀರದಾಗಿದ್ದು, ಕೃಷಿ ಬೇಸಾಯ ಮತ್ತಿತರ ಸಂಬಂಧಿತ ದುಡಿಮೆಯ ಕೌಶಲಗಳನ್ನು ಹೊಂದಿರದ ಈ ಜನಸಮೂಹ ನಗರಗಳಿಗೆ ವಲಸೆ ಹೋದಾಗ ಅಲ್ಲಿ ಕಟ್ಟಡ ಕಾರ್ಮಿಕರಾಗಿ, ರಸ್ತೆ/ಹೆದ್ದಾರಿ/ಮೆಟ್ರೋ/ಸುರಂಗಗಳ ನಿರ್ಮಾಣ ಕಾರ್ಯದಲ್ಲಿ ಅಥವಾ ಬೆಳೆಯುತ್ತಿರುವ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಕೂಲಿಗಳಾಗಿ ಬದುಕು ಸವೆಸಬೇಕಾಗುತ್ತದೆ. ತಮ್ಮ ಸ್ವಂತ ಶ್ರಮದ ದುಡಿಮೆಯಿಂದ ಬದುಕು-ಸಂಸಾರ ಕಟ್ಟಿಕೊಳ್ಳುತ್ತಿರುವ ವ್ಯಕ್ತಿ ಹಠಾತ್ತನೆ ಆ ಸ್ವಂತಿಕೆಯನ್ನು ಕಳೆದುಕೊಂಡು, ಪರಾವಲಂಬಿಯಾಗಿ ಬದುಕುವುದು ಊಹಿಸಲಾಗದಷ್ಟು ಕಷ್ಟಕರ. ಆದರೆ ಈ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಕ್ರಮೇಣ ಕಳೆದುಕೊಳ್ಳುತ್ತಿದೆ.

ರೈತರ ಆತ್ಮಹತ್ಯೆಗಳ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ ಮತ್ತು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳನ್ನು ಈವರೆಗೂ ಜಾರಿಗೊಳಿಸದಿರುವುದು ನಮ್ಮ ಸಮಾಜದ ಅಸಂವೇದನೆ ಮತ್ತು ಅಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡ ರೈತರೂ ಸಹ ಇಂತಹುದೇ ಯಾತನೆಯನ್ನು ಅನುಭವಿಸುತ್ತಾರೆ. ಇವರಿಗೆ ಸರ್ಕಾರವು ನೀಡುವ ಕನಿಷ್ಠ ಪರಿಹಾರದ ನೂರುಪಟ್ಟು ಹೆಚ್ಚಿನ ದರಕ್ಕೆ ಈ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಉದ್ಯಮಿಗಳಿಗೆ, ಕಾರ್ಪೋರೇಟ್‌ಗಳಿಗೆ ವಿಕ್ರಯ ಮಾಡಲಾಗುತ್ತದೆ. ಮೈಸೂರಿನ ಬಳಿ ಇರುವ ಕೋಚನಹಳ್ಳಿ ರೈತರ ಒಂದು ನಿರ್ದಿಷ್ಟ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬಹುದು. ಹೆದ್ದಾರಿಗಳ ನಿರ್ಮಾಣದಿಂದ ತಮ್ಮ ವಸತಿ ಮತ್ತು ಭೂಮಿಯ ನಡುವೆ ದೊಡ್ಡ ಗೋಡೆಗಳು ಏಳುವುದನ್ನು ಮೌನವಾಗಿ ಸಹಿಸಿಕೊಳ್ಳುವ ಗ್ರಾಮೀಣ ರೈತರು, ತಮ್ಮದೇ ಭೂಮಿಯನ್ನು ತಲುಪಲು ಕೆಲವು ಕಿಲೋಮೀಟರ್‌ಗಳಷ್ಟು ಕ್ರಮಿಸಬೇಕಾದ ವಿಕೃತ ಸನ್ನಿವೇಶವನ್ನೂ ನಾವು ನೋಡುತ್ತಿದ್ದೇವೆ.

ಭವಿಷ್ಯದತ್ತ ಮುಖಮಾಡಿ

ವರ್ತಮಾನ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ರೈತ ಚಳುವಳಿಗಳು ಪ್ರಬಲವಾಗಿದ್ದರೂ, ಈಗ ತಾವೇ ನಿರ್ಮಿಸಿಕೊಂಡಿರುವ ತಾತ್ವಿಕ-ಸಾಂಘಿಕ ಮಿತಿಗಳನ್ನು, ಗೋಡೆಗಳನ್ನು ದಾಟಿ ಮುನ್ನಡೆಯಬೇಕಿದೆ. ಕೋಲಾರ ಜಿಲ್ಲೆಯ ಒಣಭೂಮಿ ರೈತನಿಂದ  ಉತ್ತರ ಕರ್ನಾಟಕದ ಕೃಷಿ ಕಾರ್ಮಿಕನವರೆಗೆ ತಮ್ಮ ಹೋರಾಟಗಳನ್ನು ವಿಸ್ತರಿಸುವ ಮೂಲಕ ರೈತ ಚಳುವಳಿಗೆ ಹೊಸ ಆಯಾಮವನ್ನು ನೀಡಬೇಕಿದೆ. ಹಾಗೆಯೇ ಭೂಮಿ ಕಳೆದುಕೊಂಡ ರೈತರು, ತಮ್ಮ ಮೂಲ ಕೃಷಿನೆಲೆ ಕಳೆದುಕೊಳ್ಳುವ ಭೂಹೀನ ಕೃಷಿಕರು ಹಾಗೂ ನಗರಗಳಲ್ಲಿ ಕೂಲಿಗಳಾಗಿ ದುಡಿಯಬೇಕಾದ ರೈತರು-ರೈತರ ಮಕ್ಕಳು, ಮರಳಿ ಕೃಷಿಗೆ ಹಿಂದಿರುಗುತ್ತಿರುವ ಕಾರ್ಮಿಕರು ವರ್ತಮಾನದ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದಾರೆ. ಈ ಜನಸಮೂಹದ ಜೀವನ, ಜೀವನೋಪಾಯ ಮತ್ತು ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ರೈತ ಹೋರಾಟಗಳು ತಮ್ಮ ಕಾರ್ಯತಂತ್ರಗಳನ್ನು ವಿಸ್ತರಿಸಬೇಕಿದೆ.

ಹಾಗೆಯೇ ಈ ಕೃಷಿ ಬಿಕ್ಕಟ್ಟಿನಿಂದ ಹೆಚ್ಚಿನ ಸಂಕಷ್ಟಕ್ಕೀಡಾಗುವ ಗ್ರಾಮೀಣ ಮಹಿಳೆಯರು ಮತ್ತು ಅರೆ ಶಿಕ್ಷಿತ ಹೆಣ್ಣು ಮಕ್ಕಳು ರೈತ ಹೋರಾಟಗಳ ಪ್ರಧಾನ ಗುರಿ ಆಗಬೇಕಿದೆ. ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳಿಂದ ಇನ್ನೂ ಹೊರಬರದ ಭಾರತೀಯ ಸಮಾಜವನ್ನು ಪ್ರತಿನಿಧಿಸುವ ರೈತ ಸಮುದಾಯ ತನ್ನ ಈ ಪ್ರಾಚೀನ ಲಕ್ಷಣಗಳಿಂದ ವಿಮುಖವಾಗಬೇಕಿದೆ. ರೈತ ಹೋರಾಟಗಳು ಈ ನಿಟ್ಟಿನಲ್ಲಿ ತಾತ್ವಿಕ ಚಿಂತನೆಗಳಿಗೆ ತೆರೆದುಕೊಳ್ಳುವುದು ಮತ್ತು ಸಾಮಾಜಿಕ ಜಾಗೃತಿಯ ವಾಹಕಗಳಾಗುವುದು ವರ್ತಮಾನದ ಅನಿವಾರ್ಯತೆ. ರೈತ ಹೋರಾಟಗಳು ಈ ರೀತಿಯ ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಲ್ಲಿ ಹಾಸನದ ಲೈಂಗಿಕ ದೌರ್ಜನ್ಯಗಳು, ಮಂಡ್ಯದ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹಗಳು ಈ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಈ ಸೈದ್ಧಾಂತಿಕ ಕೊರತೆಯನ್ನು ನೀಗಿಸಿಕೊಂಡು, ರೈತ ಹೋರಾಟಗಳು ತಮ್ಮ ಸಾಮಾಜಿಕ ಹರವನ್ನು ವಿಸ್ತರಿಸಿಕೊಳ್ಳಬೇಕಿದೆ.

ಅಂತಿಮವಾಗಿ ಈ ಬದುಕು ಕಟ್ಟಿಕೊಳ್ಳುವ ಹೋರಾಟಗಳೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಅರಿತು ಕಾರ್ಮಿಕರ ಬದುಕನ್ನು ದುಸ್ತರಗೊಳಿಸುತ್ತಿರುವ ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳ ವಿರುದ್ಧ, ಸಮಾಜವನ್ನು ವಿಭಜಿಸುತ್ತಲೇ ಇರುವ ಮತೀಯವಾದ-ಕೋಮುವಾದದ ವಿರುದ್ಧ, ಹೆಚ್ಚಾಗುತ್ತಲೇ ಇರುವ ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮಹಿಳಾ ದೌರ್ಜನ್ಯಗಳ ವಿರುದ್ಧ ಗ್ರಾಮೀಣ ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರೈತ ಹೋರಾಟಗಳು ರೂಪಾಂತರ ಹೊಂದಬೇಕಿದೆ. ಇದು ಕಾಲದ ಅನಿವಾರ್ಯತೆ. ಈ ಜವಾಬ್ದಾರಿಯಿಂದ ನುಣುಚಿಕೊಂಡರೆ ಅಥವಾ ನಿರ್ವಹಿಸುವಲ್ಲಿ ವಿಫಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸಲಾರದು ಎಂಬ ಪ್ರಜ್ಞೆ ರೈತ ಚಳುವಳಿಯಲ್ಲಿ ಮೂಡಬೇಕಿದೆ.

ಚಾರಿತ್ರಿಕ ರೈತ ಮುಷ್ಕರದ ನಾಲ್ಕನೆ ವಾರ್ಷಿಕೋತ್ಸವ ಈ ನಿಟ್ಟಿನಲ್ಲಿ ಅರಿವಿನ ಪಯಣದತ್ತ ಸಾಗಿಸುವುದೆಂಬ ಆಶಯದೊಂದಿಗೆ, ರೈತ ಚಳುವಳಿಯ ಹೊಸ ರೂಪಾಂತರಿ ಆಯಾಮಕ್ಕಾಗಿ ಎದುರುನೋಡೋಣ.

ಇದನ್ನೂ ನೋಡಿ: ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು…

Donate Janashakthi Media

Leave a Reply

Your email address will not be published. Required fields are marked *