ಬೆಂಘಳೂರು: 2012ರಲ್ಲಿ ಇಡೀ ರಾಜ್ಯವೇ ಬೆಚ್ಚಿಬಿದ್ದ, ಧರ್ಮಸ್ಥಳದ ಸಮೀಪದ ಉಜಿರೆಯ ಸುತ್ತಮುತ್ತ ನೂರಾರು ಅಸಹಜ ಸಾವುಗಳು ಸಂಭವಿಸುತ್ತಿರುವ ಕುರಿತು ವರದಿಗಳಾಗಿದ್ದವು. ಅದರಲ್ಲಿ ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ, ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳು ಎಂದು ಸಿಪಿಐ(ಎಂ) ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ. ಧರ್ಮಸ್ಥಳ
ಅಮಾಯಕನೊಬ್ಬನನ್ನು ಆರೋಪಿಯೆಂದು ಹೆಸರಿಸಿ ಜೈಲಿಗೆ ಹಾಕಿದ್ದು, ದುರುದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಿದ್ದರ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ನಂತರ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿ, ತನಿಖೆ ನಡೆದು ಸಿ.ಬಿ.ಐ ನ್ಯಾಯಾಲಯದ ತೀರ್ಪು ಕೂಡ ಬಂದಿದೆ. ತೀರ್ಪಿನ ಅನುಸಾರವಾಗಿ ಅಮಾಯಕನೆಂದು ಇಡೀ ರಾಜ್ಯ ಗಟ್ಟಿ ಧ್ವನಿಯಲ್ಲಿ ಹೇಳಿದ ವ್ಯಕ್ತಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ ಎಂದರು. ಧರ್ಮಸ್ಥಳ
ಅದೇ ವೇಳೆಗೆ ಪ್ರಾಥಮಿಕ ಹಂತದಲ್ಲಿ ತನಿಖಾಧಿಕಾರಿಗಳು, ಶವಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳು ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶಮಾಡಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದೂ ಸಿ.ಬಿ.ಐ.ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ ಸರಕಾರ ಈ ಬಗ್ಗೆ ಹೆಚ್ಚೇನು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಅನುಮಾನಗಳನ್ನು ಮೂಡಿಸುತ್ತದೆ.
ಇದನ್ನೂ ಓದಿ: ಇ-ಸ್ವತ್ತು ಮಾಡಿಕೊಡಲು ರೂ. 3000 ಲಂಚ ತೆಗೆದುಕೊಳ್ಳುವ ವೇಳೆ ಇಡಿ ದಾಳಿ
ಈಗ ಧರ್ಮಸ್ಥಳ ಮಂಜುನಾಥ ದೇವಾಲಯದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರು ಪೋಲಿಸರಿಗೆ ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಈ ಮೊದಲೇ ಸಾಮಾಜಿಕ ಕಳಕಳಿಯ ಸಂಘಟನೆಗಳು, ವ್ಯಕ್ತಿಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರವಾಗಿದೆ.
ಆದರೆ, ಸಾಕ್ಷಿ ದೂರುದಾರನ ಹೇಳಿಕೆಯ ನಂತರ ಕ್ಷಿಪ್ರಗತಿಯಲ್ಲಿ ಸರಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇದೇ ವೇಳೆಗೆ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕಾಣೆಯಾಗಿದ್ದ ಪ್ರಕರಣದ ಸಂತ್ರಸ್ಥ ತಾಯಿಯೊಬ್ಬಳು ಹೂತ ಹೆಣಗಳಲ್ಲಿ ತನ್ನ ಮಗಳ ದೇಹವೂ ಇರಬಹುದಾಗಿದ್ದು ಎತ್ತಿದ ಹೆಣಗಳ ಡಿ.ಎನ್.ಎ. ಪರೀಕ್ಷೆ ನಡೆಸಿ ಖಚಿತವಾದಲ್ಲಿ ತಮ್ಮ ಸಂಪ್ರದಾಯದಂತೆ ಸಂಸ್ಕಾರ ಮಾಡಿಸುವುದಾಗಿ ಪ್ರಕರಣ ದಾಖಲಿಸಿದ ಘಟನೆಯೂ ನಡೆದಿದೆ ಎಂದರು.
ಇದೇ ಸಮಯದಲ್ಲಿ ತಾನೇ ಸ್ವತಃ ಹೂಳಿರುವುದಾಗಿ ದೂರು ನೀಡಿರುವ ಸಾಕ್ಷಿ ಫಿರ್ಯಾದುದಾರರು ಹೂತಿರುವ ಕಳೇಬರವನ್ನು ತೆಗೆಯುವುದಾಗಿ ಹೇಳಿದ್ದರೂ ಅವುಗಳ ಬಗ್ಗೆ ಪೋಲೀಸರು ಆಸಕ್ತಿ ತೋರಿಸುತ್ತಿಲ್ಲ ಎಂಬುದಾಗಿ ವರದಿಗಳು ಬರುತ್ತಿವೆ.
ಪ್ರಕರಣದ ಸರಿಯಾದ ತನಿಖೆಗೆ ಆಸಕ್ತಿ ತೋರಿಸದೇ, ದೂರುದಾರರ ಮಂಪರು ಪರೀಕ್ಷೆ ಮಾಡಲು ಅನುಮತಿ ಕೋರುವುದಾಗಿ ಜಿಲ್ಲಾ ಪೋಲೀಸರು ಹೇಳುತ್ತಿರುವುದು ನಮಗೆ ಸಖೇದಾಶ್ಚರ್ಯ ಉಂಟು ಮಾಡಿದೆ. ಇವು ಪ್ರಾರಂಭದಿAದಲೂ ಯಾರನ್ನೋ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎದ್ದಿರುವ ಅನುಮಾನಗಳನ್ನು ದೃಢಪಡಿಸುತ್ತಿವೆ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ –
• ಸಾಕ್ಷಿ ದೂರುದಾರರ ದೂರಿನನ್ವಯ ಸೌಜನ್ಯ ಪ್ರಕರಣವೂ ಸೇರಿದಂತೆ ಅಸಹಜವೆಂದು ಪರಿಗಣಿಸಿ ಮೂಲೆಗೆ ತಳ್ಳಲ್ಪಟ್ಟ ಎಲ್ಲ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು. ತನಿಖೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ವಿಶೇಷ ತನಿಖಾ ದಳದ ಮೂಲಕ ತನಿಖೆಗೆ ಆದೇಶಿಸಬೇಕು.
• ತಾನೇ ಸ್ವತಃ ಹೂಳಿರುವ ಕಳೆಬರವನ್ನು ತೆಗೆಯುವುದಾಗಿ ಸಾಕ್ಷಿ ದೂರುದಾರ ಹೇಳಿದ್ದಾರಾದ್ದರಿಂದ ಕೂಡಲೇ ಕಳೆಬರವನ್ನು ಹೊರತೆಗೆದು ಸತ್ಯವನ್ನು ಹೊರಗೆಳೆಯಲು ಕ್ರಮ ಕೈಗೊಳ್ಳಬೇಕು.
• ಸಿ.ಬಿ.ಐ. ನ್ಯಾಯಾಲಯದ ಆದೇಶದಂತೆ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿನಾಶಕ್ಕೆ ಕಾರಣರಾದ ಮತ್ತು ತನಿಖೆಯನ್ನು ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
• ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಅನಿಯಂತ್ರಿತವಾಗಿ ಲೈಂಗಿಕ ದೌರ್ಜನ್ಯ,ಅತ್ಯಾಚಾರ ಕೊಲೆಗಳು ನಡೆಯುತ್ತಿದ್ದು ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳನ್ನು ನಿಯಂತ್ರಿಸಲು ಗಂಭೀರವಾದ ಕ್ರಮಕೈಗೊಳ್ಳುವ ಅಗತ್ಯವಿದೆ.
ಈ ಮೇಲಿನ ಎಲ್ಲ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇದನ್ನೂ ನೋಡಿ: 17 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿರುವ ವರದಿಯ ನೈಜತೆಯೇನು?
