ಧಾರವಾಡ : ಧಾರವಾಡ ಜಿಲ್ಲೆಯ ನುಗ್ಗಿಕೇರಿ ಗ್ರಾಮದ ಆಂಜನೇಯ ದೇವಸ್ಥಾನದ ಹೊರಗಡೆ ಇರುವ ಮುಸ್ಲಿಮರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶನಿವಾರ ಶ್ರೀರಾಮ ಸೇನೆಯ ಸದಸ್ಯರು ಬಲವಂತವಾಗಿ ಮುಚ್ಚಿಸಿರುವ ಘಟನೆ ನಡೆದಿದೆ.
ಶ್ರೀರಾಮ ಸೇನೆಯ ಸಂಘಟನೆಯ ಸದಸ್ಯರು ಮುಸ್ಲಿಂ ಮಾರಾಟಗಾರರ ತಳ್ಳುಗಾಡಿಯನ್ನು ಧ್ವಂಸಗೊಳಿಸಿದ್ದು ವರ್ತಕರು ಮಾರಾಟಕ್ಕೆ ತಂದಿದ್ದ ಕಲ್ಲಂಗಡಿಗಳನ್ನು ನಾಶಪಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದೇವಸ್ಥಾನದ ಆವರಣದಲ್ಲಿರುವ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸುವಂತೆ ಹದಿನೈದು ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರು ದೇವಸ್ಥಾನದ ಪರ್ಯಾಯಸ್ಥರಿಗೆ ಎಚ್ಚರಿಕೆ ಪತ್ರ ನೀಡಿದ್ದರು. ಶನಿವಾರ ಬಂದ 8ರಿಂದ 10 ಜನರ ಗುಂಪು ಅಂಗಡಿಗಳಿಗೆ ನುಗ್ಗಿ ಹಣ್ಣು, ಕಾಯಿ, ಕಲ್ಲಂಗಡಿ ಹಣ್ಣುಗಳನ್ನು ಬೀದಿಗೆ ಚೆಲ್ಲಿ ದ್ವಂಸಗೊಳಿಸಿದರು.
ಧ್ವಂಸಕ್ಕೊಳಗಾದ ಗಾಡಿಯ ಮಾಲಿಕ ನಬಿಸಾಬಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ಏಕಾಏಕಿ ಬಂದ ಅವರು ನನಗೆ ಥಳಿಸತೊಡಗಿದರು. ಇಲ್ಲಿ ಅಂಗಡಿ ಇಡಬಾರದೆಂದು ಅವರು ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ, ಆದರೆ, ಅದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ತಂದಿದ್ದ ಕಲ್ಲಂಗಡಿಗಳನ್ನು ಪ್ಯಾಕ್ ಮಾಡಲೂ ನನಗೆ ಸಮಯ ನೀಡಿಲ್ಲ, ನಾನು ಕೊಂಡುಕೊಂಡಿದ್ದ ಎಲ್ಲಾ ಕಲ್ಲಂಗಡಿಗಳನ್ನು ಅವರು ನಾಶಪಡಿಸಿದರು. ಸುಮಾರು 8000 ರುಪಾಯಿ ನನಗೆ ನಷ್ಟವಾಗಿದೆ. ಇಲ್ಲಿ ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ, ಯಾರೂ ಇದುವರೆಗೂ ವಿರೋಧ ವ್ಯಕ್ತಪಡಿಸಿರಲಿಲ್ಲ, ಮುಸ್ಲಿಮರಿಂದ ಏನನ್ನೂ ಖರೀದಿಸಬೇಡಿ ಎಂದು ಅವರು ಕಿರುಚುತ್ತಿದ್ದರು’ ಎಂದು ನಬಿಸಾಬಿ ಹೇಳಿದ್ದಾರೆ.
ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಿಡಿಗೇಡಿಗಳು ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಕಲ್ಲಂಗಡಿಯನ್ನು ರಸ್ತೆಗೆಸೆದು ಹಾಳು ಮಾಡಿದ ಘಟನೆಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಎಚ್ಡಿಕೆ, ‘ರಾಮಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಉಗ್ರರಿಗಿಂತ ಕೀಳಾಗಿ ವರ್ತಿಸಿದ್ದಾರೆ. ಇವರ ವಿರುದ್ಧ ಉಗ್ರ ಕ್ರಮ ಜರುಗಿಸಬೇಕು’ ಎಂದು ಒತ್ತಾಯ ಮಾಡಿದ್ದಾರೆ.
ಶ್ರೀರಾಮ ಸೇನೆಯ ಈ ಕೃತ್ಯಕ್ಕೆ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಟಿಸಿದ್ದು, ಜನರನ್ನು ದಿಕ್ಕು ತಪ್ಪಿಸಲು ರಾಜ್ಯ ಸರಕರಾವೇ ತನ್ನ ಪರಿವಾರದ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಗಲಭೆ ಎಬ್ಬಿಸುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸೌಹಾರ್ದತೆ ಹಾಳು ಮಾಡುವ ಯಾವುದೇ ಸಂಘಟನೆಗಳು ಇರಲಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಹಣ್ಣಿನ ಅಂಗಡಿಯನ್ನು ಧ್ವಂಸ ಗೊಳಿಸಿದ ಕಿಡಿಗೇಡಿಗಳನ್ನು ಇಲ್ಲಿಯವರೆಗೆ ಬಂಧಿಸದ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.