ಬೆಂಗಳೂರು : ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳಲ್ಲಿನ ವಿವಿಧ ಕಾರ್ಯಗಳ ನಿರ್ವಹಣೆಗಾಗಿ ಕರೆದಿದ್ದ ಟೆಂಡರ್ ಪ್ರಕ್ರಿಯೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜಾತಿ ಆಧಾರಿತ ಲೆಕ್ಕಾಚಾರದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಜನಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳು ಟೆಂಡರ್ ಕಂ ಬಹಿರಂಗ ಹರಾಜು ಕರೆದಿದ್ದು, ಮೀಸಲಾತಿ ಆಧಾರಿತವಾಗಿ ಈ ಟೆಂಡರ್ ಕರೆಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ದೇವಾಲಯದ ಪಾದರಕ್ಷೆ ಕಾಯುವ ಮೀಸಲಾತಿ ನೀಡಿ, ದೇವಾಲಯಗಳ ಆಡಳಿತ ಮಂಡಳಿ ಟೆಂಡರ್ ಕರೆದಿತ್ತು.
ಟೆಂಡರ್‌ನಲ್ಲಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಪೂಜಾ ಕೈಂಕರ್ಯಗಳಿಗೆ ಅನುಕೂಲಕ್ಕಾಗಿ ಪೂಜಾ ಸಾಮಾಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕು, ಈಡುಗಾಯಿ ಆಯ್ದುಕೊಳ್ಳುವ ಸ್ಥಳದ ಹಕ್ಕು, ಎಳನೀರು ಮಾರಾಟ, ಖಾಲಿ ಜಾಗದಲ್ಲಿ ಮೆರಿಗೋ ರೌಂಡ್ ಮತ್ತು ಸುಂಕ ವಸೂಲಾತಿ ಹಕ್ಕುಗಳನ್ನು ಸಾಮಾನ್ಯ ವರ್ಗದವರಿಗೆ ಮೀಸಲಿಡಲಾಗಿದೆ.
ದೊಡ್ಡ ಗಣಪತಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ ಹಾಗೂ ಕಾರಂಜಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡದವರಿಗೆ ಪಾದರಕ್ಷೆ ಕಾಯ್ದಕೊಳ್ಳುವ ಟೆಂಡರ್ ಕಂ ಬಹಿರಂಗ ಹರಾಜು ಕರೆಯಲಾಗಿದೆ. ಜಾತಿ ಆಧಾರಿತ ಲೆಕ್ಕದಲ್ಲಿ ಟೆಂಡರ್ ಕರೆದಿರುವುದು ಅಮಾನವೀಯ, ದಲಿತರೆಂದರೆ ಚಪ್ಪಲಿ ಕಾಯುವವರು ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಕೂಡಲೇ ಈ ಟೆಂಡರ್ ರದ್ದು ಪಡಿಸಬೇಕು ಎಂದು ಡಿಎಚ್ಎಸ್ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶವ್ಯಕ್ತವಾಗುತ್ತಿದೆ. ದಲಿತ ಶಾಸಕರೇ ಎಲ್ಲಿದ್ದೀರಿ? ಇದಕ್ಕಿಂತ ಅವಮಾನ ಬೇಕೆ? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಈ ಟೆಂಡರ್ ರದ್ದು ಪಡಿಸಬೇಕು. ದಲಿತರನ್ನು ಕೀಳಾಗಿ ಕಾಣುವುದು ನಿಲ್ಲಬೇಕು ಎಂದು ಆಗ್ರಹಿಸಲಾಗಿದೆ.