ದೇಶ ಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದಂತೆ ಆಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ಹರಕೆಯ ಕುರಿ – ಶಾಸಕ ಲಕ್ಷ್ಮಣ್ ಸವದಿ

ರಾಮದುರ್ಗ: ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಿದ್ದಾರೆ. ಅವರಿಂದ ನಾವು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು.

ರಾಮದುರ್ಗ ಪಟ್ಟಣದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ನಡೆದ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿಗರು ಮಾತು‌ ಆಡಿದರೆ ಸಾಕು ಬರೀ ಸುಳ್ಳೇ ಆಡುತ್ತಾರೆ. ಸುಳ್ಳಿನಿಂದಲೇ ಅರಮನೆ ಕಟ್ಟಿ, 2014ರಿಂದ ಅಧಿಕಾರ ನಡೆಸುತ್ತಿದ್ದಾರೆ ಎಂದು‌ ಆರೋಪಿಸಿದರು.

2014ರ ಚುನಾವಣೆ ವೇಳೆ ಮಾಜಿ ಪ್ರಧಾನಿ ವಾಜಪೇಯಿ ಕನಸು ನನಸಾಗಬೇಕು, ಗಂಗಾನದಿಯ ನೀರನ್ನು ಕಾವೇರಿಗೆ ತರಬೇಕು. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರ್ತಿವಿ. ಆ ಹಣ ತಂದರೆ ಎಲ್ಲರ ಅಕೌಂಟಿಗೆ 15 ಲಕ್ಷ ಹಾಕಬಹುದು. ನಮ್ಮೂರ ರಸ್ತೆಗಳು ಚಿನ್ನದ ರಸ್ತೆಗಳನ್ನಾಗಿ ಮಾಡಬಹುದು ಎಂದೆಲ್ಲಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೇರಿದರು ಎಂದು ಬಿಜೆಪಿ ವಿರುದ್ಧ ಲಕ್ಷ್ಮಣ್ ಸವದಿ ಟೀಕಾಪ್ರಹಾರ ನಡೆಸಿದರು.

ಇದನ್ನೂ ಓದಿ: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

ಬಿಜೆಪಿಯವರು ಹೇಳಿದ್ದನ್ನು ಯಾವುದನ್ನೂ ಮಾಡುವುದಿಲ್ಲ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೀವಿ ಎಂದು ಹೇಳಿದ್ದರು‌. ಆದರೆ ಈಗ ರೈತರ ಆದಾಯ ಡಬಲ್‌ ಆಗಲಿಲ್ಲ. ಬದಲಿಗೆ ಅವರು ಬಳಸುವ ರಾಸಾಯನಿಕ ಗೊಬ್ಬರದ ಮೊತ್ತ ಡಬಲ್ ಆಗಿದೆ ಎಂದು ಆರೋಪಿಸಿದರು. ಪೆಟ್ರೋಲ್, ಡಿಸೇಲ್, ಗ್ಯಾಸ್, ಸಿಲೆಂಡರ್ ಬೆಲೆ ಡಬಲ್ ಆಗಿದೆ. 2014ರಲ್ಲಿ ಅಮೆರಿಕ ಡಾಲರ್ ಗೆ 49 ರೂಪಾಯಿ ಆಗಿತ್ತು.  ಇವತ್ತು 86 ರೂಪಾಯಿ ಆಗಿದೆ ಎಂದು ಕುಟುಕಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಸಲುವಾಗಿಯೇ ಬೆಳಗಾವಿಗೆ ತಂದು ನಿಲ್ಲಿಸಲಾಗಿದೆ. ಜಗದೀಶ್ ಶೆಟ್ಟರ್ ಬಲಿಕಾ ಬಕ್ರ ಅಗಲಿದ್ದಾರೆ. ಇದೇ ರೀತಿ ಬಿಜೆಪಿ 4-5 ಕ್ಷೇತ್ರಗಳಲ್ಲಿ ಬಕ್ರಾಗಳನ್ನು ತಂದು ನಿಲ್ಲಿಸಿದೆ.‌ ನಮ್ಮ ಮಣ್ಣು ನಮ್ಮ ಹಕ್ಕು ಎಂದು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು‌. ಅದೇ ರೀತಿ ನಮ್ಮ ಜಿಲ್ಲೆಗೆ ಹೊರ ಜಿಲ್ಲೆಯ ಅಭ್ಯರ್ಥಿ ಬೇಡ. ಮೋದಿ, ಬಿಎಸ್ ವೈ ಪ್ರಚಾರ ಮಾಡಿದ ಜಾಗಗಳಲ್ಲಿ ಬಿಜೆಪಿ ಸೋತಿದೆ. ಬೆಳಗಾವಿಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದು ಭವಿಷ್ಯ ನುಡಿದರು.

ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಂದ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಗೆ ಕರೆ ತರಲಾಗಿದೆ. ಮೃಣಾಲ್‌ ಹೆಬ್ಬಾಳ್ಕರ್ ಯುವ ಶಕ್ತಿಯಾಗಿ ಕೆಲಸ ಮಾಡಲಿದ್ದಾನೆ. 25 ಜನ ಬಿಜೆಪಿ ಸಂಸದರಿದ್ದರೂ ಯಾರೊಬ್ಬರೂ ಕೂಡ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ನಮಗೆ ಬರಬೇಕಾದ ಬರ ಪರಿಹಾರ ಹಣವನ್ನು ಕೊಟ್ಟಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.

ಈ ವೇಳೆ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಮಾತನಾಡಿದರು.

ರಾಮದುರ್ಗದ ಬೆಳಗಾವಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೈಕ್ ರ್ಯಾಲಿಗೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಚಾಲನೆ ನೀಡಿದರು. ರಾಯಣ್ಣ ವೃತ್ತದಿಂದ ಆರಂಭಗೊಂಡ ರ್ಯಾಲಿ  ಸರ್ಕಾರಿ ಆಸ್ಪತ್ರೆ, ಜುನಿಪೇಠ, ಗಾಂಧಿ ನಗರ, ತಹಶಿಲ್ದಾರರ ಕಚೇರಿ, ನೇಕಾರ ಪೇಠ ಮೂಲಕ ಸುಮಾರು 3 ಕಿಲೋಮೀಟರ್‌ ಸಾಗಿ ಕಾರ್ ಸ್ಟ್ಯಾಂಡ್ ನಲ್ಲಿ ಅಂತ್ಯಗೊಂಡಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ವೇಳೆ ಜೊತೆಯಾದರು.

ಈ ವೇಳೆ ಶಾಸಕ ಅಶೋಕ್ ಪಟ್ಟಣ್, ಲಕ್ಷ್ಮಣ್ ಸವದಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಳಾ ದೇವರೆಡ್ಡಿ, ಪುರಸಭಾ ಸದಸ್ಯರಾದ ಸಲ್ಮಾ ಚೂರಿಖಾನ್, ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ್  ಸೇರಿದಂತೆ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದ್ದರು.

ಇದನ್ನೂ ನೋಡಿ: ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್‌

Donate Janashakthi Media

Leave a Reply

Your email address will not be published. Required fields are marked *