- ಮೈ ಕೊರೆಯುವ ಚಳಿಯಲ್ಲೇ ಮತ್ತೊಂದು ರಾತ್ರಿ ಕಳೆದ ರೈತರು
ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆ ಭಾನುವಾರವೂ ಮುಂದುವರಿದೆ. ದೆಹಲಿ ಪ್ರವೇಶಿಸುವ ರಸ್ತೆಗಳನ್ನು ಮುಚ್ಚಿದ್ದರಿಂದ ದೆಹಲಿಯ ಗಡಿಭಾಗಗಳಾದ ಸಿಂಘ್ರು ಮತ್ತು ಟಿಕ್ರಿ ಪಾಯಿಂಟ್‌ಗಳಲ್ಲಿ ಪ್ರತಿಭಟನಾ ನಿರತ ರೈತರು ಚಳಿಯಲ್ಲೇ ಮತ್ತೊಂದು ರಾತ್ರಿ ಕಳೆದಿದ್ದಾರೆ.
ದೆಹಲಿ ಪ್ರವೇಶಕ್ಕೆ ಅನುಮತಿ ಹಾಗೂ ಸರ್ಕಾರ ಮಾತುಕತೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ, ತಮ್ಮ ಮುಂದಿನ ನಡೆ ಮತ್ತು ಯೋಜನೆಗಳ ಕುರಿತು ರೈತ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.
ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸುವುದಕ್ಕಾಗಿ ಇವತ್ತು ಮಹತ್ವದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಏನೇನು ವಿಚಾರ ಚರ್ಚೆಯಾಗಬೇಕೆಂಬುದನ್ನು ನಾವು ನಿರ್ಧರಿಸುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ‘ ಎಂದು ಪ್ರತಿಭಟನಾನಿರತ ರೈತ ಮುಖಂಡರಲ್ಲಿ ಒಬ್ಬರಾದ ಬ್ರಿಜ್ ಸಿಂಗ್ ಹೇಳಿದರು.
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ದೆಹಲಿ ಪ್ರವೇಶಿಸುವ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸಿದರೆ, ಶೀಘ್ರದಲ್ಲೇ ಪ್ರತಿಭಟನಾ ನಿರತರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಡಿ.3ರ ಮಾತುಕತೆಗೆ ಸರ್ಕಾರ ರೈತ ಸಂಘಟನೆಗಳ ನಿಯೋಗವೊಂದನ್ನು ಆಹ್ವಾನಿಸಿದೆ. ಆದರೆ, ಕೆಲವು ರೈತ ಸಂಘಟನೆಗಳು ಈಗಲೇ ಮಾತುಕತೆ ನಡೆಸಬೇಕೆಂದು ಒತ್ತಾಯಿಸುತ್ತಿವೆ. ಪ್ರತಿಭಟನೆಯನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸಿದರೆ, ಈಗಲೇ ಮಾತುಕತೆಗೆ ಸಿದ್ಧ ಎಂದು ಸರ್ಕಾರ ಹೇಳುತ್ತಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು , ‘ಕೃಷಿ ಸಮುದಾಯ ಮತ್ತು ರಾಷ್ಟ್ರದ ಹಿತ ದೃಷ್ಟಿಯಿಂದ ಅಮಿತ್ ಶಾ ಅವರು ತ್ವರಿತಗತಿಯಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಲು ಒಪ್ಪಿದ್ದಾರೆ‘ ಎಂದು ಹೇಳಿದರು. ಅವರು ಶನಿವಾರ ರೈತರಿಂದ ಮನವಿಯನ್ನು ಸ್ವೀಕರಿಸಿ, ಸರ್ಕಾರ ನಿಗದಿಗೊಳಿಸಿರುವ ಸ್ಥಳಕ್ಕೆ ತಮ್ಮ ಪ್ರತಿಭಟನೆಯನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.