ಮರಣದಂಡನೆ ಶಿಕ್ಷೆ ತಗ್ಗಿಸುವಿಕೆ ಮಾರ್ಗಸೂಚಿ ಪ್ರಕರಣ ಸಂವಿಧಾನ ಪೀಠಕ್ಕೆ ವರ್ಗ

ನವದೆಹಲಿ: ಮರಣದಂಡನೆಯಂತಹ ಪ್ರಕರಣಗಳಲ್ಲಿ ಆರೋಪಿಗೆ ನೈಜ ಮತ್ತು ಅರ್ಥಪೂರ್ಣ ವಿಚಾರಣೆ ಒದಗಿಸುವ ಉದ್ದೇಶದಿಂದ ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಶಿಫಾರಸ್ಸು ಮಾಡಲಾಗಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಮರಣದಂಡನೆ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳು ಶಿಕ್ಷೆ ತಗ್ಗಿಸುವ ಬಗ್ಗೆ ಮತ್ತು ಯಾವಾಗ ನಿರ್ಧರಿಸಬೇಕು ಎನ್ನುವ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಾಂವಿಧಾನಿಕ ಪೀಠಕ್ಕೆ ಶಿಫಾರಸ್ಸು ಮಾಡಿದೆ.

ವಿಚಾರಣಾ ನ್ಯಾಯಾಲಯವೊಂದು ತನಗೆ ಮರಣದಂಡನೆ ವಿಧಿಸಿದ್ದನ್ನು ಮತ್ತು ಮಧ್ಯಪ್ರದೇಶ ಹೈಕೋರ್ಟ್ ಅದನ್ನು ದೃಢಪಡಿಸಿದ್ದನ್ನು ಪ್ರಶ್ನಿಸಿ ಇರ್ಫಾನ್ ಅಲಿಯಾಸ್‌ ಭಯು ಮೇವಾಟಿ ಎಂಬಾತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿತ್ತು. ಮರಣದಂಡನೆ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳು ಶಿಕ್ಷೆ ತಗ್ಗಿಸುವಾಗ ಆರೋಪಿಗಳು ಮತ್ತು ಅಪರಾಧದ ಬಗ್ಗೆ ಸಮಗ್ರ ವಿಶ್ಲೇಷಣೆ ಹೇಗೆ ಪಡೆಯಬಹುದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು.

ಆಗಸ್ಟ್‌ 17ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ‘ಮರಣ ದಂಡನೆ ಶಿಕ್ಷೆಯು ಬದಲಾಯಿಸಲು ಆಗದ್ದು. ಹೀಗಾಗಿ ಶಿಕ್ಷೆಯನ್ನು ತಗ್ಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಎಲ್ಲಾ ಅವಕಾಶಗಳನ್ನೂ ಅಪರಾಧಿಗೆ ನೀಡಬೇಕು’ ಎಂದು ಹೇಳಿತ್ತು.

ಮರಣದಂಡನೆ ಶಿಕ್ಷೆಯನ್ನು ವಿಧಿಸುವಾಗ ಪರಿಗಣಿಸಬೇಕಾದ ಸಂಭಾವ್ಯ ಶಿಕ್ಷೆ ತಗ್ಗಿಸುವ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುವುದು ಎಂದು ಈ ಪ್ರಕರಣಕ್ಕೆ ಹೆಸರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *