- ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಆಂಧ್ರ ಯುವಕರಿಂದ ಹಲ್ಲೆ
- ಹಲ್ಲೆ ಖಂಡಿಸಿ ಪ್ರಶ್ನಿಸಿದ ಸಾರಿಗೆ ನಿಯಂತ್ರಕರ ಮೇಲೂ ಹಲ್ಲೆ
ಶ್ರೀಶೈಲ: ಪವಿತ್ರ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಕಲ್ಯಾಣ ಕರ್ನಾಟಕದ ಈಶಾನ್ಯ ಸಾರಿಗೆ ಬಸ್ ಚಾಲಕ ನಿದ್ರೆಯಲ್ಲಿರುವಾಗ ಬಸ್ಸಿನ ಗಾಜುಗಳನ್ನು ಪುಡಿ-ಪುಡಿ ಮಾಡಿ, ಕಟ್ಟೆಯ ಮೇಲೆ ಮಲಗಿದ್ದ ಚಾಲಕ ಬಸವರಾಜ್ ಬಿರಾದರ್ ಮೇಲೆ 13 ರಿಂದ14 ಜನರಿದ್ದ ಗುಂಪೊಂದು ಶುಕ್ರವಾರ(ಜೂನ್ 03) ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
2022, ಮಾರ್ಚ್ 31ರ ಯುಗಾದಿ ಸಂದರ್ಭದಲ್ಲಿ ಹೋಟೆಲೊಂದರಲ್ಲಿ ನೀರಿನ ವಿಚಾರಕ್ಕೆ ಗಲಾಟೆಯಾಗಿ ಕರ್ನಾಟಕದ ಬಾಗಲಕೋಟೆ ಮೂಲದ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಈ ಘಟನೆಯ ನಂತರ ಇದೀಗ ಈ ಘಟನೆ ನಡೆದಿದ್ದು ಕನ್ನಡಪರ ಸಂಘಟನೆಗಳು, ಕನ್ನಡಿಗರು ತೀವ್ರ ವಿರೋಧ ಪ್ರಸ್ತಾಪಿಸಿದ್ದಾರೆ.
ವಿಜಯಪುರ ಘಟಕದ ಬಸ್ ಅನ್ನು ನಿಯಮಿತ ಶೆಡ್ಯೂಲ್‌ನಂತೆ ಶ್ರೀಶೈಲಕ್ಕೆ ಕೊಂಡೊಯ್ದಿದ್ದ ಬಸ್ ಚಾಲಕ ಬಸವರಾಜ ಬಿರಾದಾರ, ರಾತ್ರಿ ಊಟ ಮಾಡಿ ಮಲಗಿದ್ದರು. ಆಗ ಏಕಾಏಕಿ ಆಟೋದಲ್ಲಿ ಬಂದ 13-14 ಜನರಿದ್ದ ಗುಂಪೊಂದು ಅಶ್ಲೀಲ ಶಬ್ದಗಳಿಂದ ‘ಕರ್ನಾಟಕದವನು ಇಲ್ಲೇಕೆ?’ ಇದ್ದಿ ಎನ್ನುತ್ತ ಸಾರಿಗೆ ಬಸ್‌ನ ಗಾಜುಗಳನ್ನು ಕಲ್ಲಿನಿಂದ ಒಡೆದು ಪುಡಿ-ಪುಡಿ ಮಾಡಿದ್ದಲ್ಲದೆ ಚಾಲಕನ ಮುಖ ಹಾಗೂ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ.
ಬಸವರಾಜರವರಿಗೆ ತೀವ್ರವಾಗಿ ಗಾಯವಾಗಿದ್ದಿದ್ದರಿಂದ ಸಮೀಪದ ಸುನ್ನಿಪೇಠ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ಅಲ್ಲಿದ್ದ ಸಾರಿಗೆ ನಿಯಂತ್ರಕರಿಗೆ ದೂರು ನೀಡಿದಾಗ ದುಷ್ಕರ್ಮಿಗಳನ್ನು ಪ್ರಶ್ನಿಸಿದ ಸಾರಿಗೆ ನಿಯಂತ್ರಕರನ್ನೂ ಸಹ ದುಷ್ಕರ್ಮಿಗಳು ಥಳಿಸಿದ್ದಾರೆ. ಅಷ್ಟರಲ್ಲಿಯೇ ಎಲ್ಲ ಬಸ್‌ಗಳ ಚಾಲಕರು, ನಿರ್ವಾಹಕರು ಎದ್ದು ಬಂದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆಂಧ್ರದ ಶ್ರೀಶೈಲ ಠಾಣೆಯಲ್ಲಿ ದೂರು ದಾಖಲಾಗಿದೆ.