ಪದವೀಧರನಾಗಿ ಪ್ರಮಾಣಪತ್ರ ಪಡೆದಾಗ ಹೆಚ್ಚು ಸಂತೋಷಪಟ್ಟಿದ್ದೆ – ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಿಧಾನಸೌಧದ ಮುಂದೆ ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಯಾಗಿದ್ದಕ್ಕಿಂತ ಮೈಸೂರಿನಲ್ಲಿ ಪದವೀಧರನಾಗಿ ಪ್ರಮಾಣಪತ್ರ ಪಡೆದಾಗ ಹೆಚ್ಚು ಸಂತೋಷಪಟ್ಟಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಕೆಶಿ, ನಾನು ಇಂದು ಉಪಮುಖ್ಯಮಂತ್ರಿಯಾಗಿರಬಹುದು. ಆದರೆ ಒಂದು ಕಾಲದಲ್ಲಿ ನಾನು ಪದವೀಧರ ಆಗಲಿಲ್ಲ ಎಂಬ ಕೊರಗು ಇತ್ತು. ನಾನು ಮಂತ್ರಿಯಾದ ನಂತರ 48ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಪದವೀಧರನಾದೆ. ವಿಧಾನಸೌಧದ ಮುಂದೆ ಸಚಿವ ಸಂಪುಟ ಸಭೆಯಲ್ಲಿ ಮಂತ್ರಿಯಾಗಿದ್ದಕ್ಕಿಂತ ಮೈಸೂರಿನಲ್ಲಿ ಪದವೀಧರನಾಗಿ ಪ್ರಮಾಣಪತ್ರ ಪಡೆದಾಗ ಹೆಚ್ಚು ಸಂತೋಷವಾಗಿರುವುದಾಗಿ ಹೇಳಿದರು.

ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಸಧ್ಯ ದೇಶದಲ್ಲಿ ನೀಟ್, ಹಾಗೂ ಬೇರೆ ಬೇರೆ ಪರೀಕ್ಷೆಗಳ ಅಕ್ರಮದ ಬಗ್ಗೆ ಚರ್ಚೆಯಾಗುತ್ತಿದೆ.ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನೀವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದರು. ಪರಿಶ್ರಮ ಸಂಸ್ಥೆ ನಿಮಗೆ ದಾರಿ ದೀಪವಾಗಿ ಹೊಸ ಬೆಳಕು ನೀಡಲಿದೆ ಎಂದರು.

ಇದನ್ನೂ ಓದಿ: ವೈಎಸ್‌ಆರ್‌ಸಿಪಿಯ ಕೇಂದ್ರ ಕಚೇರಿ ನೆಲಸಮ-ಟಿಡಿಪಿ ಸೇಡಿನ ರಾಜಕೀಯದ ಆರೋಪ

ಪ್ರದೀಪ್ ಈಶ್ವರ್ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಅವರ ಮಾತು, ಆಚಾರ ವಿಚಾರ ಪ್ರಚಾರ ಮಾಡಿ ವಿಧಾನಸೌಧಕ್ಕೆ ಬಂದಿದ್ದಾರೆ. ಶಿವಶಂಕರ್ ಅವರು ಪ್ರದೀಪ್ ಈಶ್ವರ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಾಗ, ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದ್ದೀರಿ ಎಂದಿದ್ದೆ. ಆಗ ಅವರು ಇಲ್ಲ ಈತ ಉಪಯೋಗಕ್ಕೆ ಬರುತ್ತಾರೆ, ಒಂದು ಅವಕಾಶ ನೀಡಿ ಎಂದರು. ಅವರು ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ.

ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ ಒಬ್ಬ ವ್ಯಕ್ತಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ನಾಯಕರು ಎಂದರೆ ರಾಜಕಾರಣಿ ಮಾತ್ರವಲ್ಲ. ಎಲ್ಲಾ ವರ್ಗದಲ್ಲಿ ನಾಯಕತ್ವ ಗುಣ ಇರುವವರು. ಇಲ್ಲಿ ಅನೇಕ ವಿದ್ಯಾರ್ಥಿಗಳಿದ್ದೀರಿ. ಕೂಲಿ ಮಾಡುವವರು, ಚಾಲಕರ ಮಕ್ಕಳಿಗೂ ಇಂದು ನಾವು ಸನ್ಮಾನ ಮಾಡಿದ್ದೇವೆ. ಆ ಪೋಷಕರಿಗೆ ಇದಕ್ಕಿಂತ ಇನ್ನೇನು ಬೇಕು ಎಂದರು.

ಪ್ರಪಂಚವನ್ನು ಬದಲಿಸಲು ಶಿಕ್ಷಣ ಅತಿ ಶಕ್ತಿಶಾಲಿ ಅಸ್ತ್ರ. ಅದೇ ರೀತಿ ಈ ಮಕ್ಕಳು. ಈ ಸಂಸ್ಥೆಯವರು ಇಲ್ಲಿನ ಮಕ್ಕಳನ್ನು ಯಾವ ರೀತಿ ತಯಾರು ಮಾಡಿದ್ದಾರೆ ಎಂದರೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 250 ಸೀಟುಗಳಿದ್ದರೆ ಅದರಲ್ಲಿ 150ರಿಂದ 180 ಮಕ್ಕಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರೇ ಆಗಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಬದಲಾವಣೆ ಯಾರೂ ಮಾಡಲು ಸಾಧ್ಯವಿಲ್ಲ. ಪ್ರದೀಪ್ ಈಶ್ವರ್ ಈ ಸಂಸ್ಥೆಗಾಗಿ ಸ್ವಂತ ಕಟ್ಟಡ ಬೇಕು ಎಂದು ಮನವಿ ಮಾಡಿದ್ದಾರೆ.

ನೀವೆಲ್ಲ ಸೇರಿ ನನಗೆ ಅಧಿಕಾರ ಕೊಟ್ಟಿದ್ದು ನನ್ನ ಅವಧಿಯಲ್ಲಿ ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡುತ್ತೇನೆ. ನನ್ನ ಸ್ನೇಹಿತ ಪ್ರದೀಪ್ ಈಶ್ವರ್ ನಿಮ್ಮೆಲ್ಲರಿಗೂ ಶಿಕ್ಷಣ ನೀಡುತ್ತಿದ್ದಾರೆ. ನಿಂಬೆಗಿಂತ ಶ್ರೇಷ್ಠವಾದ ಹುಳಿ ಇಲ್ಲ, ದುಂಬಿ ಮೈಯಲ್ಲಿರುವ ಕಪ್ಪು ಬಣ್ಣಕ್ಕಿಂತ ಶ್ರೇಷ್ಠ ಕಪ್ಪು ಇಲ್ಲ, ಶಿವನಿಗಿಂತ ಅಧಿಕ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ. ನೀವೆಲ್ಲರೂ ಪ್ರದೀಪ್ ಈಶ್ವರ್ ಅವರ ಮೇಲೆ ನಂಬಿಕೆ ಇಟ್ಟು ನಿಮ್ಮ ಮಕ್ಕಳನ್ನು ಅವರ ಸಂಸ್ಥೆಗೆ ಸೇರಿಸಿದ್ದೀರಿ. ನಿಮ್ಮ ನಂಬಿಕೆಗೆ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ಡಿಕೆಶಿ ಹೇಳಿದರು.

ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಡಾ. ಎಂ ಸಿ ಸುಧಾಕರ್, ಮಧು ಬಂಗಾರಪ್ಪ, ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥರು ಹಾಗೂ ಶಾಸಕ ಪ್ರದೀಪ್ ಈಶ್ವರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ನೋಡಿ: ಇರುವುದೊಂದೇ ಭೂಮಿ; ನಮಗಾಗಿ ಸಂರಕ್ಷಿಸೋಣ, ನೆಮ್ಮದಿಯಿಂದ ಬಾಳೋಣJanashakthi Media

Donate Janashakthi Media

Leave a Reply

Your email address will not be published. Required fields are marked *