ಬೆಂಗಳೂರು: ಬಿಜೆಪಿ ಪಕ್ಷವು ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜನಮರ್ದನ’ ಅಲ್ಲಲ್ಲ, `ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಕುಟುಕಿದ್ದಾರೆ.
ಸರಣಿ ಟ್ಟೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಧಮ್ ಎಂದರೆ ಧಮ್ ಬಿರಿಯಾನಿಯೆಂದು ಬೊಮ್ಮಾಯಿ ತಿಳಿದುಕೊಂಡ ಹಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಮಗೆ ಸವಾಲು ಹಾಕುವ ಧಮ್ ನಿಮಗಿಲ್ಲ ಎನ್ನುವುದು ಸ್ವತಃ ನಿಮಗೂ ಗೊತ್ತು, ನಿಮಗೆ ಧಮ್ ಇದ್ದರೆ ಮೊದಲು ನಿಮ್ಮ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿ ಬಿಡಿ. ಕನಿಷ್ಠ ಬಸವನಗೌಡ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಿ. ಆ ಮೇಲೆ ನಿಮ್ಮ ಧಮ್ ನೋಡೋಣ ಎಂದು ಸವಾಲು ಹಾಕಿದ್ದಾರೆ.
“ಧಮ್ ಇದ್ದರೆ ಬಿಜೆಪಿ ಯಾತ್ರೆ ಹಿಮ್ಮೆಟ್ಟಿಸಿ ಎಂದು ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗ್ಬೇಕು? ಸಮಾವೇಶದಲ್ಲಿ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ ‘ಜಾತ್ರೆ’ಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ?” ಎಂದಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ಬಯಲಿಗೆಳೆಯುವ ಮೊದಲು ನಿಮ್ಮ ನಾಯಕರುಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲು ಸಾಲು ಹಗರಣಗಳನ್ನು ಇತ್ಯರ್ಥಪಡಿಸಿಕೊಂಡು ಬನ್ನಿ. ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದಿದ್ದಾರೆ.
ನನ್ನ ಆಡಳಿತ ಕಾಲದ ಹಗರಣ ತನಿಖೆ ಬಯಲಿಗೆಳೆಯುತ್ತೇನೆ ಎಂದು ಹೇಳುತ್ತಿದ್ದಾರೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೋಟಿಸ್ ಕೊಟ್ಟಿದ್ದು ನೋಡಿದರೆ, ನೀವು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೆ ಎಂದು ಗೊಂದಲವಾಗುತ್ತಿದೆ ಅಂತ ವ್ಯಂಗ್ಯವಾಡಿರುವ ಸಿದ್ದರಾಮಯ್ಯ ಅವರು, ನನ್ನ ಅಧಿಕಾರವಧಿಯ ಹಗರಣಗಳು ಬಯಲಿಗೆಳೆಯುತ್ತೇವೆಂದು ಧಮ್ಕಿ ಹಾಕುವ ನಿಮಗೆ ಧಮ್ ಇದ್ದರೆ ಮೊದಲು ತನಿಖೆ ಮಾಡಿಸಿ. ಆ ಸವಾಲು ಸ್ವೀಕಾರ ಮಾಡಲು ನಾನು ಸಿದ್ಧವಾಗಿದ್ದೇನೆ. ಈ ಬ್ಲಾಕ್ ಮೇಲ್ ತಂತ್ರಗಳನ್ನ ನಿಮ್ಮವರು ಮೇಲೆ ಬಳಸಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಬಸವರಾಜ ಬೊಮ್ಮಾಯಿಯವರೇ? ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧ ಇದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ, ನಾನು ಬರ್ತೇನೆ. ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬೊಮ್ಮಾಯಿಯವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದು-ಮುಸ್ಲಿಮ್, ಮಂದಿರ ಮಸೀದಿ, ಹಿಜಾಬ್ –ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.