_ 5 ದಿನಲ್ಲಿ ಆರೋಪಿ ಬಂಧನ: ಪ್ರತಿಭಟನಾಕಾರರಿಗೆ ಎಸ್‍ಪಿ ಭರವಸೆ
ಕೆಜಿಎಫ್: ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಕಸಿರೆಡ್ಡಿ ಗಾಂಡ್ಲಹಳ್ಳಿಯ ದಲಿತ ಜನಾಂಗದ ಶಿವರಾಮಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಮಂಜುನಾಥರೆಡ್ಡಿ ಮತ್ತು ಚಂದ್ರಾರೆಡ್ಡಿಯನ್ನು ಬಂಧಿಸುವಂತೆ ಒತ್ತಾಯಿಸಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ವಿವಿಧ ದಲಿತಪರ ಸಂಘಟನೆಗಳಿಂದ ಮಂಗಳವಾರ ಧರಣಿ ನಡೆಸಿದರು.
ಜಿಲ್ಲೆಯಲ್ಲಿ ದಲಿತರಿಗೆ ರಕ್ಷಣೆ ಇಲ್ಲವಾಗಿದ್ದು ದಲಿತರು ದೂರು ನೀಡಿದರೂ ಸ್ವೀಕರಿಸದ ಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ. ಕಸಿರೆಡ್ಡಿ ಗಾಂಡ್ಲಹಳ್ಳಿಯಲ್ಲಿ ಆಗಸ್ಟ್ 29, ರಂದು ದಲಿತ ಸಮುದಾಯಕ್ಕೆ ಸೇರಿದ ಶಿವರಾಮಪ್ಪ ಮತ್ತು ಕುಟುಂಬದವರು ತಮಗೆ ಸೇರಿದ ಖಾಲಿ ನಿವೇಶನದಲ್ಲಿ ಕಲ್ಲು ಚಪ್ಪಡಿಗಳನ್ನು ನೆಟ್ಟು ಕಾಂಪೌಂಡ್ ನಿರ್ಮಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ರಘುರಾಮರೆಡ್ಡಿ ಎಂಬುವರ ಮಕ್ಕಳಾದ ಮಂಜುನಾಥರೆಡ್ಡಿ ಮತ್ತು ಚಂದ್ರಾರೆಡ್ಡಿ ಎಂಬುವವರು ವಿನಾಕಾರಣ ಶಿವರಾಮಪ್ಪನನ್ನು ಜಾತಿ ನಿಂದನೆ ಮಾಡಿ, ಜಗಳಕ್ಕಿಳಿದು ಥಳಿಸಿ, ಸೈಜು ಕಲ್ಲಿನಿಂದ ಹೊಡೆದು, ಮಾರಣಾಂತಿಕ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದರ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ನಂತರ ಶಿವರಾಮಪ್ಪನ ಸಹೋದರರು ಶಿವರಾಮಪ್ಪನನ್ನು ಕೆಜಿಎಫ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ದೂರು ನೀಡಲು ಅಂಡರ್ಸನ್ ಪೇಟೆಯ ಪೋಲೀಸ್ ಸ್ಟೇಷನ್ನಿಗೆ ಹೋದಾಗ ಅಲ್ಲಿನ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ದೂರು ನೀಡಲು ಹೋದವರ ಮೇಲೆಯೇ ದೂರು ದಾಖಲಿಸುವುದಾಗಿ ಬೈದು ಹೆದರಿಸಿ ಕಳುಹಿಸಿರುತ್ತಾರೆ. ಕನಿಷ್ಠ ಆಸ್ಪತ್ರೆಗೆ ಹೋಗಿ ಹಲ್ಲೆಗೊಳಗಾದ ಶಿವರಾಮಪ್ಪನ ಹೇಳಿಕೆಯನ್ನು ಪಡೆದುಕೊಳ್ಳುವುದಿಲ್ಲ ಎಂದರೆ ಕಾನೂನು ಯಾರ ಪರವಾಗಿದೆ ಎಂದು ಪ್ರಶ್ನಿಸಿದರು.
ಈ ಘಟನೆಗಳು ನಡೆದ ನಂತರ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪೋಲೀಸ್ ಸ್ಟೇಷನ್ನಿಗೆ ಭೇಟಿ ನೀಡಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯವನ್ನು ಅವರ ಗಮನಕ್ಕೆ ತಂದಾಗ ಒತ್ತಡಕ್ಕೆ ಮಣಿದು ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ಅವತ್ತು ಸಂಜೆ ಪೋಲಿಸ್ ಪೇದೆಗಳನ್ನು ಆಸ್ಪತ್ರೆಗೆ ಕಳುಹಿಸಿ ಶಿವರಾಮಪ್ಪನಿಂದ ಹೇಳಿಕೆಯನ್ನು ಪಡೆದುಕೊಂಡು ಅಂದು ರಾತ್ರಿ 10 ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಕೋಲಾರ ಜಿಲ್ಲಾ ದಲಿತರ ಮೇಲಿನ ದೌರ್ಜನ್ಯಗಳ ತಡೆ ಸಮಿತಿಯ ಸದಸ್ಯರು ಕಸಿರೆಡ್ಡಿ ಗಾಂಡ್ಲಹಳ್ಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ, ದೌರ್ಜನ್ಯಕ್ಕೆ ಒಳಗಾದ ಶಿವರಾಮಪ್ಪನ ಕುಟುಂಬದವರಿಗೆ ಧೈರ್ಯವನ್ನು ತುಂಬಿರುತ್ತಾರೆ. ಆದರೆ ದೂರು ದಾಖಲಾಗಿ ಹತ್ತು ದಿನಗಳಾದರೂ ಇದುವರೆಗೂ ಪೊಲೀಸರು ಯಾವೊಬ್ಬ ಆರೋಪಿಯನ್ನು ಬಂಧಿಸದೆ ಮೃದು ಧೋರಣೆ ಅನುಸರಿಸುತ್ತಾ, ಅವರಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ ಎಂದರು.
ಈ ಕೂಡಲೇ ದಲಿತ ಶಿವರಾಮಪ್ಪನಿಗೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಮಾಡಿರುವ ಆರೋಪಿಗಳಾದ ಮಂಜುನಾಥರೆಡ್ಡಿ ಮತ್ತು ಚಂದ್ರಾರೆಡ್ಡಿಯನ್ನು ಬಂಧಿಸಬೇಕು ಮತ್ತು ವಿಳಂಬವಾಗಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದೆ ಅವರಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ಹಲ್ಲೆಗೊಳಗಾದ ಶಿವರಾಮಪ್ಪನ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಗಳಿಗೆ ಮುಂದಾಗಲಿದ್ದೇವೆ ಎಂದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕೆಜಿಎಫ್ ಪೋಲಿಸ್ ವರಿಷ್ಠಾಧಿಕಾರಿ ಮನವಿಯನ್ನು ಸ್ವೀಕರಿಸಿ ಮಾತನಾಡಿ ಆರೋಪಿಗಳನ್ನು 5 ದಿನಗಳ ಒಳಗೆ ಬಂಧಿಸುವುದಾಗಿ ಮತ್ತು ದೂರು ದಾಖಲಿಸಲು ವಿಳಂಬ ಮಾಡಿ ನಿರ್ಲಕ್ಷ್ಯಿಸಿದ ಸಬ್ ಇನ್ಸ್ಪೆಕ್ಟರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. 5 ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕಸಿ ರೆಡ್ಡಿ ಗಾಂಡ್ಲಹಳ್ಳಿಯಿಂದ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪಾದಯಾತ್ರೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ನೇತೃತ್ವವನ್ನು ಕೆಜಿಎಫ್ ನಗರಸಭೆ ಸದಸ್ಯ, ಸಿಪಿಐಎಂ ಮುಖಂಡರಾದ ಪಿ.ತಂಗರಾಜ್, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಎಪಿಎಲ್ ರಂಗನಾಥ್, ಕರ್ನಾಟಕ ಬಹುಜನ ಸಂಘ ರಾಜ್ಯ ಅಧ್ಯಕ್ಷ ಹೂಹಳ್ಳಿ ನಾಗರಾಜ್, ಡಿಎಚ್ ಎಸ್ ರಾಜ್ಯ ಮುಖಂಡ ವಿ.ಅಂಬರೀಷ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ವಿಜಯಕೃಷ್ಣ, ವಿವಿಧ ಸಂಘಟನೆಯ ಮುಖಂಡರಾದ ಸುಶೀಲಾ, ಆಶಾ, ಸುಗಟೂರು ಮಂಜುನಾಥ್, ಆರ್ ವೇಣು, ಮೈಅಳಗನ್, ಅನ್ಬರಸನ್, ಲೀಯೋ ಜೋಸೆಫ್, ಪ್ರಭಾಕರನ್, ಪೊನ್ನು ಆನಂದ ರಾಜ್, ನಿರೇಶ್ ಬಾಬು, ಕುಮಾರ್, ನೋಯೆಲ್ ಇದ್ದರು.