ಮಳವಳ್ಳಿ: ಹಸುವಿನ ಕಳವು ಆರೋಪ ಹೊರಿಸಿ ದಲಿತ ಸಮುದಾಯದ ಯುವಕನೊಬ್ಬನ ಕೈಯನ್ನು ಕಟ್ಟಿ ಊರ ತುಂಬ ಮೆರವಣಿಗೆ ಮಾಡಿದ ಅಮಾನುಷ ಘಟನೆ ಜರುಗಿದೆ.
ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ ಹಲ್ಲೆಗೊಳಗಾದ ಯುವಕ. ದುಗ್ಗನಹಳ್ಳಿಯಲ್ಲಿ ವಾರದ ಹಿಂದೆ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದುಗ್ಗನಹಳ್ಳಿಯಲ್ಲಿ ರಾಜು ಎಂಬುವವರಿಂದ ಸುರೇಶ್ ಹಸುವನ್ನು ಖರೀದಿಸಿದ್ದ, ಹಣಕಾಸಿನ ವ್ಯವಹಾರವು ಮುಗದಿತ್ತು. ರಾಜು ಅವರು ತಮ್ಮ ಸಂಬಂಧಿಯ ಹಸುವನ್ನು ತಂದು ಸುರೇಶ್ ಅವರಿಗೆ ನೀಡಿದ್ದಾರೆ. ಸುರೇಶ್ ಹಣ ನೀಡಿ ಹಸುವನ್ನು ತಮ್ಮ ಊರಿಗೆ ಕರೆದೊಯ್ಯುವ ವೇಳೆ ಹಸು ಕದ್ದಿದ್ದಾನೆ ಎಂಬ ಆರೋಪ ಹೊರಿಸಿ, ಆತನ ಕೈಗಳನ್ನು ಹಿಮ್ಮುಖವಾಗಿ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಹಸುವಿನ ಕೊರಳಿಗೆ ಕಟ್ಟಿ ಊರ ತುಂಬ ಮೆರವಣಿಗೆ ಮಾಡಿದ್ದಾರೆ. ಕೆಲ ಹೊತ್ತು ಹಸು ಜೊತೆ ಮರಕ್ಕೆ ಕಟ್ಟಿ ಹಾಕಿದ್ದರು ಎಂಬ ಆರೋಪವು ಕೇಳಿ ಬಂದಿದೆ. ಸುರೇಶ್ ಹಾಗೂ ದಲಿತ ಸಮುದಾಯಕ್ಕೆ ಅವಮಾನ ಮಾಡಲು ರಾಜು ಎಂಬ ವ್ಯಕ್ತಿ ಮಾಡಿದ ಪೂರ್ವನಿಯೋಜಿತ ಕೃತ್ಯ ಎಂದು ಹೇಳಲಾಗುತ್ತಿದೆ.
” ಇದು ಕದ್ದ ಹಸು ಅಲ್ಲ, ಹಣ ಕೊಟ್ಟು ಪಡೆದ ಹಸು ನಿಮ್ಮೂರಿನ ರಾಜು ಎಂಬುವವರಿಂದ ಹಣ ಪಡೆದು ಖರೀದಿಸಿದ ಹಸು ಎಂದು” ಅಂಗಲಾಚಿದ ನಂತರ ಊರ ಜನರಿಗೆ ಸತ್ಯ ಗೊತ್ತಾಗಿದೆ.
ನಂತರ ಗ್ರಾಮದ ಮುಖಂಡರು ಸಭೆ ಸೇರಿ ರಾಜಿ ಸಂಧಾನ ಮಾಡಿದ್ದರು ಎನ್ನಲಾಗಿದೆ.
ನಂತರ ಹಲ್ಲೆಗೊಳಗಾದ ಯುವಕ ತನ್ನ ಸಮುದಾಯದ ಮುಖಂಡರೊಂದಿಗೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ
ದುಗ್ಗನಹಳ್ಳಿಯ ರಾಜು, ಹಣಕೊಳ ಗ್ರಾಮದ ಸುಂದರಮ್ಮ, ಮಳವಳ್ಳಿಯ ಮಲ್ಲಯ್ಯ, ಗಿರೀಶ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಾದ್ಯಂತ ದಲಿತರನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಗು ದೇಗುಲ ಪ್ರವೇಶಿಸಿತು ಎಂದು ದಂಡ ಹಾಕಿದ್ದರು. ಬಿಜಾಪುರದಲ್ಲಿ ಬೈಕ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯನ್ನು ಥಳಿಸಲಾಗಿತ್ತು, ಹೀಗೆ ದಿನ ನಿತ್ಯ ದಲಿತ ಸಮುದಾಯವನ್ನು ಅವಮಾನಿಸುವ, ಅಮಾನುಷವಾಗಿ ನಡೆದು ಕೊಳ್ಳುವ ಘಟನೆಗಳು ಹೆಚ್ಚಾಗುತ್ತಲೆ ಇವೆ. ಇದು ದಲಿತರಿಗೆ ರಕ್ಷಣೆ ಎಲ್ಲ ಎಂಬುದನ್ನು ತೋರಿಸಿಕೊಡುತ್ತಿದೆ. ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಇಂತಹ ಅಮಾನುಷಗಳನ್ನು ತಡೆಯಲು ಸರಕಾರ ಮುಂದಾಗಬೇಕಿದೆ.