ಕೋಲಾರ: ದಲಿತ-ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಲಕ್ಕೂರು ಆನಂದ ಮೇ 20ರಂದು ನಿಧನ ಹೊಂದಿದ್ದಾರೆ. ಅವರ ಸ್ವಗ್ರಾಮ ಲಕ್ಕೂರಿನಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
44ರ ಹರೆಯದ ಲಕ್ಕೂರು ಸಿ. ಆನಂದ ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾಗಿದ್ದಾರೆ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಲಕ್ಕೂರು ಆನಂದ ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.
ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದೆ. ಲಕ್ಕೂರು ಆನಂದ ಅವರೇ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಲಕ್ಕೂರು ಆನಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಲಭಿಸಿದೆ. ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು. ಸದ್ಯ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದರು.
ಇದನ್ನೂ ನೋಡಿ: ಮೃಣಾಲ್ ಸೆನ್ 100 ವೆಬಿನಾರ್ ಸರಣಿ -08 | ಮೃಣಾಲ್ ಸೆನ್ ಅವರ ಸಿನೆಮಾಗಳಲ್ಲಿ ಕೋರ್ಟು ದೃಶ್ಯಗಳು