ಬೆಂಗಳೂರು: ವಿದ್ಯಾರ್ಥಿಗಳಿಗೆ ದೈಹಿಕವಾಗಿ ಶೈಕ್ಷಣಿಕ ತರಗತಿಗಳನ್ನು ನಡೆಸುವುದಕ್ಕಾಗಿ ಕಾಲೇಜುಗಳನ್ನು ತೆರೆಯಲು ಮತ್ತು ಇನ್ನಿತರೆ ತಯಾರಿ ನಡೆಸಲು, ಅನುದಾನಿತ ಮತ್ತು ಸರ್ಕಾರಿ ಕಾಲೇಜಿನ ಉಪನ್ಯಾಸಕರು ಕೆಲಸಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಉಪನ್ಯಾಸಕರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಕಚೇರಿಗಳಿಗೆ ಕಾರ್ಯಕ್ಷೇತ್ರಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿ ಸಾಮರ್ಥ್ಯವನ್ನು ಉಲ್ಲೇಖಿಸಿದ್ದು, ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಎಲ್ಲಾ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕಡ್ಡಾಯವಾಗಿ ಕಾಲೇಜು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ.
ಅಂತೆಯೇ ಈ ವೇಳೆ ಕೆಲಸದ ಸ್ಥಳದಲ್ಲಿ ಕಡ್ಡಾಯ ದೈಹಿಕ ಅಂತರ ಪಾಲಿಸಬೇಕು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಲು ನಿರ್ದಿಷ್ಠವಾಗಿ ಸೂಚನೆಗಳನ್ನು ನೀಡಲಾಗಿದೆ. ಇನ್ನು ದೈಹಿಕ ಅಂಗ ವೈಕಲ್ಯ ಹೊಂದಿರುವ ಸಿಬ್ಬಂದಿಗಳು ಮತ್ತು ಗರ್ಭಿಣಿಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ (ಕೆಜಿಸಿಟಿಎ) ಅಧ್ಯಕ್ಷ ಟಿ ಎಂ ಮಂಜುನಾಥ್ ತಿಳಿಸಿದ್ದಾರೆ.