ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಅವ್ಯವಹಾರಕ್ಕೆ ಸಂಬಂಧಿಸಿ ಹೆಚ್ಚಿನ ಲಾಭ ನೀಡುತ್ತೇವೆಂದ ಆರೋಪಿಗಳು ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದ ಪ್ರಕರಣವನ್ನು ಬೇಧಿಸಿರುವ ಸೈಬರ್ ಕ್ರೈಮ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ, 15 ಕೋಟಿ ನಗದು ಸೇರಿದಂತೆ ಒಟ್ಟು 17 ಕೋಟಿ ಮೊತ್ತದ ವಿನಿಮಯವನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣ ಸುಶಿಕ್ಷಿತ ಹಾಗೂ ವಿದ್ಯಾವಂತ ವರ್ಗದಲ್ಲೇ ನಡೆದಿದ್ದು, ಸಾರ್ವಜನಿಕರನ್ನು ಹೊಸ ಹೊಸ ವಿಧಾನಗಳ ಮೂಲಕ ವಂಚಿಸುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. 2021ನೇ ಸಾಲಿನಲ್ಲಿ ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಜನರಿಗೆ ವಾಟ್ಸಪ್ ಗ್ರೂಪ್‍ಗೆ ಹಾಗೂ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶಗಳನ್ನು ಕಳುಹಿಸಿ ಶರೆಹಾಶ್ ಮೊಬೈಲ್ ಅಪ್ಲಿಕೇಷನ್‍ನ್ನು ಡೌನ್‍ಲೋಡ್ ಮಾಡಿಕೊಂಡರೆ ಎಚ್‍ಎನ್‍ಟಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಪಟ್ಟಂತೆ ಹೆಚ್ಚಿನ ಲಾಭಾಂಶ ನೀಡುವ ನಂಬಿಸಿದ್ದರು.
ಇದನ್ನು ಓದಿ: ಕ್ರಿಪ್ಟೊ ಕರೆನ್ಸಿ ಕಾನೂನುಬದ್ಧವೋ ಕಾನೂನುಬಾಹಿರವೋ?
ಕಂಪನಿಯ ಹೇಳಿಕೆಗಳ ಮೇಲೆ ವಿಶ್ವಾಸವಿರಿಸಿದ್ದ ಸಾರ್ವಜನಿಕರು ಶರೆಹಾಶ್ ಮೊಬೈಲ್ ಅಪ್ಲಿಕೇಷನ್‍ನ್ನು ಉಪಯೋಗಿಸತೊಡಗಿದರು. ಅಲ್ಲಿ ಖಾತೆ ತೆರೆದು ಲಾಗಿನ್ ಆಗಿ ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್‍ಗಳ ಮೂಲಕ ಕೊಟಾಟ ಟೆಕ್ನಾಲಜಿ, ಸಿರಲೀನ್ ಟೆಕ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ನಿಲೇನ್ ಇನೋಟೆಕ್ ಪ್ರೈವೆಟ್ ಲಿಮಿಟೆಡ್, ಮೋಲ್‍ಟ್ರೆಸ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್, ಕ್ರಾಂಪಿಂಗ್ಟನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‍ಗೆ ಕೋಟ್ಯಂತರ ಹಣವನ್ನು ಹಾಕಿದ್ದಾರೆ.
ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ನೊಂದಾವಣಿಯಾಗಿರುವ ಈ ಕಂಪನಿಗಳು ಕೋಟಿಗಟ್ಟಲೇ ಹಣ ಹೂಡಿಕೆ ಮಾಡಿಸಿಕೊಂಡು, ನಂತರದಲ್ಲಿ 2022ರ ಜನವರಿ 11ರಂದು ಶರೆಹಾಶ್ ಮೊಬೈಲ್ ಅಪ್ಲಿಕೇಷನ್ ದೋಷಯುಕ್ತವಾಗಿದೆ ಅದನ್ನು ಸರಿಪಡಿಸಿ ಹೊಸ ವೈಶಿಷ್ಟ್ಯಗಳೊಂದಿಗೆ ಅಪ್‍ಗ್ರೇಡ್ ಮಾಡಲಾಗುವುದು ಎಂದು ಘೋಷಿಸಿವೆ.
ಈ ಕಾರಣಕ್ಕಾಗಿ ತಮ್ಮಲ್ಲಿನ ಖಾತೆದಾರರ ಹಣ ಮತ್ತು ರಿಟರ್ನ್‍ಗಳನ್ನು ಅಪ್ಲಿಕೇಷನ್‍ನ ಒಳಾಂತರದ (ಇನ್‍ಆಪ್ ವ್ಯಾಲೆಟ್) ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಜವರಿ 18 ಮತ್ತು 19ರಂದು ಶರೆಹಾಶ್ ಮೊಬೈಲ್ ಅಪ್ಲಿಕೇಷನ್-2.0 ಬಿಡುಗಡೆಯಾಗಲಿದೆ. ಬಳಿಕ ಸಾರ್ವಜನಿಕರು ತಮ್ಮ ಹೂಡಿಕೆ ಹಾಗೂ ರಿಟರ್ನ್ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಅನುಕೂಲವಾಗುವಂತೆ ಸಕ್ರಿಯಗೊಳಿಸುವುದಾಗಿ ತಿಳಿಸಲಾಗಿತ್ತು.
ಇದನ್ನು ಓದಿ: ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ : ಕಲಾಪ ಕಾವೇರುವ ಸಾಧ್ಯತೆ
ಆದರೆ ಜನವರಿ 19ರಂದು ಖಾತೆದಾರರು ಲಾಗಿನ್ ಆಗಲು ಪ್ರಯತ್ನಿಸಿದರೆ ಅದು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಗೂಗಲ್ ಪ್ಲೇಸ್ಟೋರ್ ನಿಂದ ಶರೆಹಾಶ್ ಮೊಬೈಲ್ ಅಪ್ಲಿಕೇಷನ್‍ನ್ನು ತೆಗೆದು ಹಾಕಲಾಗಿತ್ತು. ಸಾರ್ವಜನಿಕರು ತಮಗೆ ವಂಚನೆಯಾಗುತ್ತಿರುವುದನ್ನು ಅರಿತು ಬೆಂಗಳೂರುನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದರು.
ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸಾರ್ವಜನಿಕರ ಹಣ 44 ವಿವಿಧ ಬ್ಯಾಂಕ್‍ಗಳಿಗೆ ವಂಚನೆಗೊಳಗಾಗಿ ವರ್ಗಾವಣೆಯಾಗಿದ್ದು, ಖಾತೆಯಲ್ಲಿ ಉಳಿದಿದ್ದ 15 ಕೋಟಿ ರೂಪಾಯಿಗಳನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಗಿದೆ. ಜೊತೆಗೆ 1 ಕೆಜಿ 650 ಗ್ರಾಂ ಚಿನ್ನ, 78 ಲಕ್ಷ ರೂ. ನಗದು, ಡಿಜಿಟಲ್ ಸಹಿ ಪ್ರಮಾಣ ಪತ್ರ ಇರುವ 44 ಟೋಕನ್‍ಗಳು, ಕಂಪನಿಗಳ ಐದು ಸೀಲ್‍ಗಳು, ಮೊಬೈಲ್ ಫೋನ್ ಹಾಗೂ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ಮಾರ್ಗದರ್ಶನದಲ್ಲಿ, ಡಿಸಿಪಿ ಡಾ.ಶರಣಪ್ಪ .ಎಸ್.ಡಿ ನೇತೃತ್ವದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಎಸ್.ಅಶೋಕ್ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದಾರೆ.