ಸಮವಸ್ತ್ರದ ಹೆಸರಿನಲ್ಲಿ ತಾರತಮ್ಯ ಸಲ್ಲ; ಸರ್ಕಾರದ ಸುಧಾರಿತ ಆದೇಶವನ್ನು ಸಿಪಿಐ(ಎಂ) ಸ್ವಾಗತ

ಬೆಂಗಳೂರು: ಶಾಲೆ – ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರದ ಹೆಸರಿನಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ, ಮುಸ್ಲಿಂ ಹೆಣ್ಣುಮಕ್ಕಳ ತಲೆವಸ್ತ್ರವನ್ನು ವಿವಾದದ ವಸ್ತುವಾಗಿಸಿದ್ದ ಹಿಂದಿನ ಸರ್ಕಾರದ ಆದೇಶ ಸಂಖ್ಯೆ ಇಪಿ 14 ಎಸ್‌ಎಚ್‌ಎಚ್ 2022 (05-02-2022) ಅನ್ನು ಹಿಂಪಡೆಯಲು ಪ್ರಸ್ತುತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿ ಡಾ. ಕೆ‌ ಪ್ರಕಾಶ್ ತಿಳಿಸಿದರು.

ಸಮವಸ್ತ್ರ ನೀತಿಯ ಹೆಸರಿನಲ್ಲಿ ವಿದ್ಯಾರ್ಥಿನಿಯರ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಅನುಚಿತವಾಗಿತ್ತು. ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ತಮ್ಮ ಆಯ್ಕೆಯ ಉಡುಪನ್ನು ಅನುಸರಿಸುವ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದು ಸರಿಯಲ್ಲ ಎಂಬುದು ಸಿಪಿಐ(ಎಂ)ನ ಸ್ಪಷ್ಟ ನಿಲುವು ಎಂದರು.

ಒಂದು ಶಿಕ್ಷಣ ಸಂಸ್ಥೆಯಲ್ಲಿ ವಿನಾಕಾರಣ ಶುರುವಾದ ಹಿಜಾಬ್ ವಿವಾದವನ್ನು ಸಮಯೋಚಿತವಾಗಿ ಪರಿಹರಿಸುವ ಬದಲು ಬೆಂಕಿಯೂ ಹಚ್ಚಿ ತುಪ್ಪ ಸುರಿದ ಹಾಗೆ ರಾಜ್ಯವ್ಯಾಪಿ ಗಲಭೆ ಹಚ್ಚಲಾಯಿತು. ಇದಕ್ಕೆ ಕಾರಣರಾದ ಬಿಜೆಪಿ ಮತ್ತು ಅದರ ಅಂಗ ಸಂಘಟನೆಗಳ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿಜಾಬ್ ವಿವಾದ ಸಾವಿರಾರು ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನೇ ಕಿತ್ತುಕೊಂಡಿತು ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ; ಇತರೆ ಧಾರ್ಮಿಕ ವಸ್ತ್ರಕ್ಕೂ ಅವಕಾಶ: ಸಚಿವ ಮಧು ಬಂಗಾರಪ್ಪ ಘೋಷಣೆ

ಪ್ರಕರಣವೀಗ ಸುಪ್ರೀಂ ಕೋರ್ಟ್‌ನಲ್ಲಿದೆ

ಪ್ರಸಕ್ತ ಆದೇಶವು ಸಮವಸ್ತ್ರದ ಗೊಂದಲವನ್ನು ಕೊನೆಗಾಣಿಸಿದೆ ಎಂಬ ಸಮಾಧಾನವಿದೆ‌. ಆದರೆ, ಈ ಆದೇಶ ಸಾಂಪ್ರದಾಯಿಕ ಮತ್ತು ಮತೀಯ ಆಚರಣೆಗಳನ್ನು ಗಟ್ಟಿಗೊಳಿಸಲು ಎಡೆಮಾಡಿಕೊಡಬಾರದು. ಶಾಲೆ-ಕಾಲೇಜುಗಳು ವೈಚಾರಿಕತೆ, ಜಾತ್ಯಾತೀತತೆ ಮತ್ತು ಸಮಾನತೆಯ ತಾಣಗಳಾಗಿರಬೇಕು. ಯಾವುದೇ ಧಾರ್ಮಿಕ ಸಂಕೇತವನ್ನು ಕಡ್ಡಾಯಗೊಳಿಸುವುದು ಅಥವಾ ನಿಷೇಧಿಸುವುದು ಎರಡೂ ತಪ್ಪೇ.

ಬಿಜೆಪಿ ಈಗ ಮತ್ತೆ ವಿವಾದ ಎಬ್ಬಿಸಿ ವಿದ್ಯಾರ್ಥಿನಿಯರ ಶಿಕ್ಷಣದ ಅವಕಾಶವನ್ನು ಕಸಿಯಲು ಪ್ರಯತ್ನಿಸಬಾರದು. ಹಾಗೆ ಪ್ರಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಸಿಪಿಐ(ಎಂ), ಜಾತ್ಯಾತೀತ, ಪ್ರಗತಿಶೀಲ, ಕಾರ್ಮಿಕ-ಶ್ರಮಜೀವಿ ಪರ ನಿಲುವಿನಿಂದಲೇ ಮುನ್ನಡೆಯುತ್ತದೆ. ಮುಸ್ಲಿಂ ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಸಮಾನ ಶಿಕ್ಷಣದ ಹಕ್ಕನ್ನು ರಕ್ಷಿಸಬೇಕು – ಇದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ನೋಡಿ: “ತಮಿಳುನಾಡು | ವಿಜಯ್‌ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *