ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ವಿರೋಧ

ಕಾರವಾರ: ಜನತೆಯ ಮತ್ತು ಪರಿಸರದ ಹಿತದೃಷ್ಟಿಯಿಂದ ಜಿಲ್ಲೆಗೆ ಲಾಭದಾಯಕವಲ್ಲದ, ಉದ್ಯೋಗ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನವಿಲ್ಲದ, ಪರಿಸರ ಸಂಬಂಧಿ ಸಮಸ್ಯೆ ಉಲ್ಬಣಿಸುವ ಈ ಯೋಜನೆಯನ್ನು ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿಯು ವಿರೋಧಿಸುತ್ತದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಯಮುನಾ ಗಾಂವ್ಕರ್ ಹೇಳಿದ್ದಾರೆ. ಶರಾವತಿ

ಮಾತ್ರವಲ್ಲ ಈ ಯೋಜನೆಯ ಸಾಧಕ ಬಾಧಕಗಳ ವೈಜ್ಞಾನಿಕ ಅಧ್ಯಯನ ಮಾಹಿತಿಗಳುಳ್ಳ ವರದಿಯನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಬೇಕೆಂದು ಸೆಪ್ಟೆಂಬರ್‌ 18ರಂದು ಗೇರುಸೊಪ್ಪದಲ್ಲಿ ಜರುಗುತ್ತಿರುವ ಸಾರ್ವಜನಿಕ ಅಹವಾಲು ಸಭೆಗೆ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳೊಂದಿಗೆ ಹಾಜರಾಗಿ ಒತ್ತಾಯಿಸುತ್ತಿದ್ದೇವೆ ಎಂದರು. ಶರಾವತಿ

ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ವಿಶ್ವಪರಂಪರಾ ತಾಣದಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟ ಕುರಿತು ಕಸ್ತೂರಿರಂಗನ್ ವರದಿಯ ಹೃದಯ ಭಾಗವಾಗಿದೆ. ಜೀವವೈವಿಧ್ಯತೆಯ ಕುರಿತು ಜಾಗತಿಕವಾಗಿ ಗುರ್ತಿಸಲ್ಪಟ್ಟ ಪ್ರದೇಶವಾಗಿದೆ. ಕಾಳಿ ಜಲವಿದ್ಯುತ್, ಕೈಗಾ ಅಣು ವಿದ್ಯುತ್ ಗೆ, ರಕ್ಷಣಾ ಇಲಾಖೆಯ ನೇವಲ್ ಬೇಸ್ (ಸೀಬರ್ಡ) ಗೆ, ಕೊಂಕಣ ರೈಲಿಗೆ, ಹೆದ್ದಾರಿಗೆ, ಹುಲಿ, ಆನೆ, ಹಾರ್ನಬಿಲ್ ಒಳಗೊಂಡು ವನ್ಯಜೀವಿ ಸಂರಕ್ಷಿತಾರಣ್ಯವನ್ನು ಹೊಂದಿದೆ. ಪರಿಸರ ಸೂಕ್ಷ್ಮ ವಲಯವಾಗಿದೆ. ಶರಾವತಿ

ಇದನ್ನೂ ಓದಿ: ಮದ್ದೂರ | ಸೆ.22ಕ್ಕೆ ಸೌಹಾರ್ದ – ಸಾಮರಸ್ಯ ನಡಿಗೆ

ಈ ಕಾರಣಕ್ಕಾಗಿ ಜನಜೀವನ ಅದರಲ್ಲೂ ಮುಖ್ಯವಾಗಿ ಅರಣ್ಯವಾಸಿಗಳ ಬದುಕು, ಕೃಷಿಯನ್ನೇ ನಂಬಿ ಜಿಲ್ಲೆಯ ಆದಾಯ ಹೆಚ್ಚಿಸುತ್ತಿರುವ ರೈತಾಪಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಗುವಳಿ ಯೋಗ್ಯ ಅರಣ್ಯ ಭೂಮಿಯಲ್ಲಿ ಅತಿಕ್ರಮಣ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಅರಣ್ಯ ಅತಿಕ್ರಮಣದಾರರ ಸಂಕಷ್ಟ ಕರುಣಾಜನಕವಾಗಿದೆ ಎಂದು ಹೇಳಿದರು.

ಅಭಿವೃದ್ಧಿಯ ವಿಷಯ ಮುಂದಿಟ್ಟು ಈ ಯೋಜನೆಯ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸರಿಯಾದ ಅಭಿವೃದ್ಧಿ ಮಾನದಂಡಗಳೇ ಇಲ್ಲದಂತಾಗಿದೆ. ಮೂಲಸೌಕರ್ಯಕ್ಕಾಗಿ ಜಿಲ್ಲೆಯ ಜನತೆ ಒತ್ತಾಯಿಸಿದಾಗೆಲ್ಲ ಸರ್ಕಾರದ ವಿವಿಧ ಯೋಜನೆಗಳ ನೆಪ ಮುಂದಿಡಲಾಗುತ್ತಿದೆ. ಆದರೆ ಅದೆಲ್ಲಾ ಮಾನದಂಡಗಳು ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ಪರವಾನಿಗೆ ನಿಡುವಲ್ಲಿ ಅಡ್ಡಬರಲಿಲ್ಲವೇ?
ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಅನುಷ್ಠಾನಗೊಳಿಸುತ್ತಿರುವ ಹತ್ತು ಸಾವಿರ ಕೋಟಿ ರೂ. ವೆಚ್ಚದ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಷರತ್ತು ಬದ್ಧ ಅನುಮೋದನೆ ನೀಡಿರುವುದು ಕೇಂದ್ರ ಸರ್ಕಾರದ ಹಂತದಲ್ಲೂ ಒಪ್ಪಿಗೆ ಆಗಿರುವುದರ ಬೆನ್ನಲ್ಲೇ ವಿವಿಧ ಚರ್ಚೆಗಳಾಗುತ್ತಿರುವುದನ್ನು ಸಿಪಿಐಎಂ ಪಕ್ಷವು ಗಮನಿಸಿ ಈ ಮುಂದಿನ ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇವೆ.

1) ಈ ಯೋಜನೆ ಗೇರುಸೊಪ್ಪದಿಂದ ಹೊನ್ನಾವರದ ನಡುವೆ ಬರುವ ಹೊಳೆಸಾಲಿನ ಗ್ರಾಮಗಳ ಪಾಲಿಗೆ ಮಾರಕವಾಗಲಿದೆ. ಮಾತ್ರವಲ್ಲ ಈ ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿ ಬೇರೆ ಊರಿಗೆ ನುಗ್ಗಲಿದೆ. ಈ ಭಾಗದ ಸುತ್ತಲಿನ ಎಲ್ಲಾ ಸೂಕ್ಷ್ಮ ಪ್ರದೇಶಗಳಿಗೂ ಪರಿಣಾಮವಾಗಲಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಕೂಡು ಭಾಗಗಳಿಗೆ ವ್ಯತಿರಿಕ್ತ ಪರಿಣಾಮ ಬೀರುವುದು.

2) ಎರಡೂ ಜಿಲ್ಲೆಗಳ ನದಿಪಾತ್ರಗಳ ಮತ್ತು ಈ ಘಟ್ಟ ಗುಡ್ಡಗಳ ಮೇಲ್ಗಡೆ ಮತ್ತು ತಳಭಾಗದ ಸ್ಥಳೀಯರ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಎಲ್ಲಾ ಕಡೆ ಒಂದೇ ಸಮಸ್ಯೆ ಇಲ್ಲ. ಆದ್ದರಿಂದ ಸಣ್ಣ ಸಣ್ಣ ಹಿಡುವಳಿದಾರರ ಸಮಸ್ಯೆಯನ್ನು, ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನೂ, ಪರಿಸರ ಸಮಸ್ಯೆಯನ್ನೂ ಪ್ರತ್ಯೇಕವಾಗಿ ಅಡ್ರೆಸ್ ಮಾಡಬೇಕಿದೆ.

3) ಪರಿಸರಕ್ಕೆ ಜೀವವೈವಿಧ್ಯಕ್ಕೆ ಹಾನಿಯಾಗದ ರೀತಿಯ ಬಗ್ಗೆ ಹೇಗೆಂದು ಈ ಯೋಜನೆಯಲ್ಲಿ ಎಲ್ಲೂ ಹೇಳಿಲ್ಲ. ಮರು ಅರಣ್ಯೀಕರಣವಂತೂ ಈವರೆಗಿನ ಯೋಜನೆಗಳಲ್ಲಿ ಎಲ್ಲಿಯೂ ಸರಿಯಾಗಿ ಆಗಿಲ್ಲ. ಮಾನವನಿರ್ಮಿತ ವಿಕೋಪಗಳಿಗೆ ಕಾರಣವಾಗುವುದನ್ನು ಮುಚ್ಚಿಡಲಾಗಿದೆ.

4) ವನ್ಯ ಜೀವಿ ರಕ್ಷಣೆಗಳ ಕಾಯ್ದೆ ಮತ್ತು ಇತರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಜಿಲ್ಲೆಯಲ್ಲಿ ಜೋಯಿಡಾ, ದಾಂಡೇಲಿ ಕಾರವಾರ, ಯಲ್ಲಾಪುರ, ಮುಂತಾದೆಡೆ ವಿಶೇಷವಾಗಿ ಜೋಯಿಡಾದಲ್ಲಿ ರಸ್ತೆ, ವಿದ್ಯುತ್ ಮುಂತಾದ ಮೂಲಸೌಕರ್ಯ ಮಾಡಿಕೊಳ್ಳಲಿಕ್ಕೂ ತಡೆಯೊಡ್ಡುವ ಸರ್ಕಾರ ಈಗ ಸಿಂಗಳೀಕ ಸಂರಕ್ಷಿತಾರಣ್ಯದ ಬಹುಮುಖ್ಯ ಭಾಗ ೧೩೦ ಎಕರೆಯನ್ನು ಹೇಗೆ ಬಿಟ್ಟುಕೊಡಲು ಒಪ್ಪಿದೆ ಎಂಬುದನ್ನು ಬಹಿರಂಗ ಪಡಿಸಲಿ.

5) ಘಟ್ಟದ ಮೇಲ್ಭಾಗದಿಂದ ಹರಿದು ಬರುವ ವಿವಿಧ ಜೀವನಾಂಶಗಳನ್ನು ಪೋಷಕಾಂಶಗಳನ್ನು ಒಳಗೊಂಡ ಸಿಹಿನೀರು ಸಮುದ್ರಕ್ಕೆ ಸೇರುವಲ್ಲಿ ವ್ಯತ್ಯಾಸ ಆಗುವುದರಿಂದ ಸಾಗರೋತ್ಪನ್ನಗಳಿಗೆ ಹಾನಿಯಾಗಲಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ ಕೂಡ. ಶರಾವತಿ ಜಲಮೂಲಕ್ಕೆ ಹಾನಿಯಾದರೆ ಪ್ರಾಣಿಗಳಿಗೆ ಕೂಡ ಸಿಹಿನೀರಿನ ಪ್ರಮಾಣ ಸಿಗದಿರಬಹುದು. ಜನ ಜಾನುವಾರು ಪ್ರಾಣಿಪಕ್ಷಿಗಳಿಗೆ ಹಾನಿಯಾಗಬಹುದು. ಕೃಷಿಕರಿಗೆ ಹಂದಿ ಮತ್ತು ಮಂಗಗಳು, ನವಿಲು, ಉಭಯವಾಸಿಗಳನ್ನೂ ಒಳಗೊಂಡು ಇತರೇ ಕಾಡುಪ್ರಾಣಿಗಳ ಉಪಟಳ ಹೆಚ್ಚುತ್ತದೆ.

6) ಪಶ್ಚಿಮ ಘಟ್ಟವು ವಿರಳ ಜೀವವೈವಿಧ್ಯದ ಕೇಂದ್ರವೆAದೂ ಮತ್ತು ಈಗಾಗಲೇ ಅನೇಕ ಯೋಜನೆಗಳಿಂದ ಕೂಡಿದ್ದು ಸೂಕ್ಷ್ಮ ಪ್ರದೇಶವೆಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ತಲೆಮಾರಿನಿಂದ ವಾಸಿಸಿದ ರೈತ ಕಾರ್ಮಿಕರು ಉಪಜೀವನಕ್ಕಾಗಿ ಅರಣ್ಯ ಭೂಮಿ ಸಾಗುವಳಿಯನ್ನು ಮಾಡುತ್ತಿದ್ದು ಸಕ್ರಮ ಮಾಡಿಕೊಡಿ ಎಂದರೆ ಹಲವು ತೊಡಕುಗಳನ್ನು ಸರ್ಕಾರ ಮುಂದಿಟ್ಟಿದೆ. ದಿನವೂ ಒಂದಿಲ್ಲೊAದು ಕಡೆ ರೈತರನ್ನು ಸಾಗುವಳಿ ಅಥವಾ ವಸತಿ ಭೂಮಿಯಿಂದ ತೆಗೆಯುತ್ತಿದ್ದಾರೆ. ಹೀಗಿರುವಾಗ ಈ ಭೂಗತ ಯೋಜನೆಯ ಸಾಧ್ಯತೆ ಹೇಗಾಯಿತು ಎಂಬುದು ಪ್ರಶ್ನಾರ್ಹ. ಹೊನ್ನಾವರ ನದಿಪಾತ್ರದಲ್ಲಿ ಭೂ ದಾಖಲೆಗಳಿಲ್ಲದ ಅರಣ್ಯ ಅತಿಕ್ರಮಣ ಸಾಗುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲರಿಗೂ ಈ ಯೋಜನೆಯ ಪರಿಣಾಮ ತಟ್ಟಲಿದೆ.

7) ಅಭಿವೃದ್ಧಿ ಎಂಬುದು ಎಲ್ಲಿ, ಯಾವ ಕಡೆ ಹೇಗೆ ಆಗಬೇಕೆಂಬ ಬಗ್ಗೆ ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮಾನದಂಡಗಳೇ ಇಲ್ಲ. ಪರಿಸರ ತಜ್ಞರ ಅಭಿಪ್ರಾಯದಂತೆ ಈ ವಿಶಾಲವಾದ ಘಟ್ಟ ಪ್ರದೇಶದ ಭೂಕುಸಿತ ಪದೇಪದೇ ಸಂಭವಿಸುತ್ತಲೇ ಇದೆ. ಇನ್ನು ಸುರಂಗ ಮಾರ್ಗಗಳು ಆದರೆ ಕಷ್ಟ. ಜಿಲ್ಲೆಯ ವಿಪತ್ತು ನಿರ್ವಹಣಾ ಸಾಮರ್ಥ್ಯವೂ ಕಡಿಮೆ ಎಂದೇ ಹೇಳಬಹುದು.

8) ಜಿಲ್ಲೆಗೆ ಲಾಭದಾಯಕವಲ್ಲದ, ಉದ್ಯೋಗ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನವಿಲ್ಲದ, ಪರಿಸರ ಸಂಬಂಧಿ ಸಮಸ್ಯೆ ಉಲ್ಬಣಿಸುವ ಈ ಯೋಜನೆ ಒತ್ತಾಯಪೂರ್ವಕ ಜನರ ಮೇಲೆ ಜಿಲ್ಲೆಯ ಮೇಲೆ ಹೇರಬಾರದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಹೊಣೆ ಹೊತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ನೈಜ ಸಮಸ್ಯೆಗಳನ್ನು ಆಲಿಸಿ ಜನಾಭಿಪ್ರಾಯಕ್ಕೆ ಮನ್ನಣೆ ದೊರಕಿಸಲೆಂದು ಬಯಸುತ್ತೇವೆ.

ಕಾ. ತಿಮ್ಮಪ್ಪ ಗೌಡ, ಮೇಘನಾ ಇತರ ಸಂಗಾತಿಗಳು, ಸ್ಥಳೀಯ ಸ್ನೇಹಿತರುಗಳೊಂದಿಗೆ ಭಾಗವಹಿಸಲಾಗಿತ್ತು.

ಇದನ್ನೂ ನೋಡಿ: ಸೌಹಾರ್ದ ವಾತಾವರಣ ನೆಲೆಸುವಲ್ಲಿ ಸಮುದಾಯದ ಕೊಡುಗೆ ಅಪಾರ – ಜಸ್ಟೀಸ್ ನಾಗಮೋಹನ್ ದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *