ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಹತ್ಯೆ

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಸುಭಾಷ್ ಮುಂಡಾ

ರಾಂಚಿ: ಜಾರ್ಖಂಡ್‌ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ, ಡಿವೈಎಫ್‌ಐ ನಾಯಕ ಸುಭಾಷ್ ಮುಂಡಾ (30) ಅವರನ್ನು ರಾಂಚಿಯ ದಲಾದಲಿ ಪ್ರದೇಶದಲ್ಲಿ ಬುಧವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಇದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆಯನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ದಳದಲಿ ಮುಖ್ಯ ರಸ್ತೆಯನ್ನು ತಡೆದು ತಕ್ಷಣ ಪ್ರತಿಭಟನೆ ನಡೆಸಿದ್ದು, ಹಂತಕನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಘಟನೆಯನ್ನು ಗ್ರಾಮಾಂತರದ ರಾಂಚ್‌ನ ಎಸ್‌.ಪಿ. ನೌಶಾದ್ ಆಲಂ ದೃಡಪಡಿಸಿದ್ದು, ‘ರಾಂಚಿಯ ದಲದಾಲಿ ಪ್ರದೇಶದಲ್ಲಿ ಸಿಪಿಐ(ಎಂ) ಮುಖಂಡ ಸುಭಾಷ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎನ್‌. ಸಂಕರಯ್ಯ @102 | ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಿಪಿಐಎಂ ನಾಯಕನಿಗೆ ಗೌರವ ಡಾಕ್ಟರೇಟ್

“ಬುಧವಾರ ಸಂಜೆ ಸುಮಾರು ರಾತ್ರಿ 8 ಗಂಟೆಗೆ ಬೈಕ್‌ಗಳಲ್ಲಿ ಮೂವರು ಮುಂಡಾ ಕಚೇರಿಗೆ ಬಂದಿದ್ದರು. ದಾಳಿಕೋರರಲ್ಲಿ ಇಬ್ಬರು ಕಚೇರಿಯೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಮುಂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ” ಎಂದು ರಾಂಚಿಯ ಎಸ್‌ಎಸ್‌ಪಿ ಕಿಶೋರ್ ಕೌಶಲ್ ಹೇಳಿದ್ದಾರೆ.

“ನಾವು ಈಗಾಗಲೇ ಎಸ್‌ಐಟಿಯನ್ನು ರಚಿಸಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನು ಎಲ್ಲಾ ಸಂಭಾವ್ಯ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸುತ್ತೇವೆ” ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಖಾಸಗೀಕರಣಗೊಂಡರೆ ಉಚಿತ ವಿದ್ಯುತ್ ಯೋಜನೆಗೆ ಉಳಿವಿಲ್ಲ: ಸಿಪಿಐಎಂ ನಾಯಕ ಕೆ.ಪ್ರಕಾಶ್ ಎಚ್ಚರಿಕೆ

”ಇದೀಗ ಶಾಂತಿಯುತ ವಾತಾವರಣವಿದ್ದು, ಜನರು ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿದ್ದರು. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ನಾವು ಜನರೊಂದಿಗೆ ಮಾತನಾಡುತ್ತಿದ್ದು, ಅಪರಾಧಿಗಳನ್ನು ಶೀಘ್ರ ಬಂಧಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ” ಎಂದು ರಾಂಚಿಯ ಎಡಿಎಂ (ಕಾನೂನು ಮತ್ತು ಸುವ್ಯವಸ್ಥೆ) ರಾಜೇಶ್ವರನಾಥ್ ಅಲೋಕ್ ತಿಳಿಸಿದ್ದಾರೆ.

ಬುಡಕಟ್ಟು ಸಮುದಾಯದ ಜನಪ್ರಿಯ ನಾಯಕರಾಗಿದ್ದ ಸುಭಾಷ್  ಮುಂಡಾ, ಹಲವಾರು ಸ್ಥಳೀಯ ಮಾಫಿಯಾಗಳು ಮತ್ತು ಪ್ರತಿಸ್ಪರ್ಧಿ ರಾಜಕಾರಣಿಗಳನ್ನು ಎದುರು ಹಾಕಿಕೊಂಡಿದ್ದರು. ಹತಿಯಾ ಅಸೆಂಬ್ಲಿಯಿಂದ ಎರಡು ಬಾರಿ ಮತ್ತು ಮಂದರ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ  ಸ್ಪರ್ಧಿಸಿದ್ದರು. ಮುಂಡಾ ಅವರು ಪತ್ನಿ, ಒಂದೂವರೆ ವರ್ಷದ ಮಗ, ಪೋಷಕರು, ನಾಲ್ವರು ಸಹೋದರರನ್ನು ಅಗಲಿದ್ದಾರೆ.

“ಹೇಡಿತನದ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಂಚಿ ಪೊಲೀಸರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಎಸ್‌ಐಟಿ ರಚಿಸಿ ಮುಂಡಾ ಹಂತಕರನ್ನು ತಡಮಾಡದೆ ಬಂಧಿಸಬೇಕು. ಹುತಾತ್ಮ ಯೋಧ ಮುಂಡಾ ಅವರ ತ್ಯಾಗ ಬಲಿದಾನ ಜಾರ್ಖಂಡ್‌ ಆದಿವಾಸಿಗಳು ಮತ್ತು ಬಡವರ ದಾರಿದೀಪದಂತೆ ಹೋರಾಟದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಲಿದೆ. ಈ ದುಃಖದ ಸಮಯದಲ್ಲಿ ಪಕ್ಷವೂ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ” ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ವಿಡಿಯೊ ನೋಡಿ: “ಸ್ವಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಸ್ಟರ ಪಾತ್ರ ಮತ್ತು ಕೊಡುಗೆ”

Donate Janashakthi Media

Leave a Reply

Your email address will not be published. Required fields are marked *