ತುರ್ತಾಗಿ ಆಕ್ಸಿಜನ್ ಖಾತ್ರಿಪಡಿಸಿ-ಉಚಿತ ಲಸಿಕೆಗಳನ್ನು ಒದಗಿಸಿ ಬಿಕ್ಕಟ್ಟು ಸುನಾಮಿಯಾಗುತ್ತಿದೆ: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ದೇಶದೆಲ್ಲೆಡೆಗಳಲ್ಲೂ ಎಲ್ಲ ಆಸ್ಪತ್ರೆಗಳಿಗೂ, ರೋಗಿಗಳಿಗೂ ವೈದ್ಯಕೀಯ ಆಕ್ಸಿಜನ್‌ನ ಅಬಾಧಿತ ಪೂರೈಕೆಯನ್ನು ಖಾತ್ರಿಪಡಿಸುವುದು ಮತ್ತು ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಒದಗಿಸುವುದು ಸದ್ಯ ಅತ್ಯಂತ ತುರ್ತಿನ ಆವಶ್ಯಕತೆಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಎಪ್ರಿಲ್ 24ರಂದು ಪತ್ರ ಬರೆದಿದ್ದಾರೆ. ಇದನ್ನು ದುಂದುವೆಚ್ಚಗಳನ್ನೆಲ್ಲ ರದು ಮಾಡಿ ಮಾಡಬಹುದಾಗಿದೆ, ಎಷ್ಟೇ ಬೆಲೆ ತೆತ್ತಾದರೂ ಮಾಡಲೇಬೇಕಾಗಿದೆ ಎಂದು ಅತ್ಯಂತ ಯಾತನೆಯಿಂದ, ಕಳಕಳಿಯಿಂದ ಹೇಳುತ್ತ, ಇಲ್ಲವಾದರೆ “ನಿಮ್ಮ ಸರಕಾರ ಮುಂದುವರೆಯುವ ನೈತಿಕ ಅಧಿಕಾರವನ್ನು ಕಳಕೊಳ್ಳುತ್ತದೆ” ಎಂದು ತಮ್ಮ ಪತ್ರದಲ್ಲಿ ಯೆಚುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಪತ್ರದ ಪೂರ್ಣ ಒಕ್ಕಣಿಕೆಯನ್ನು ಈ ಮುಂದೆ ಕೊಡಲಾಗಿದೆ:

ಪ್ರಿಯ ಪ್ರಧಾನ ಮಂತ್ರಿಗಳೇ,

ನಾನು ಅಪಾರ ನೋವು, ಯಾತನೆ ಮತ್ತು ಕಳವಳದಿಂದ ನಿಮಗೆ ಬರೆಯುತ್ತಿದ್ದೇನೆ. ಕೊವಿಡ್-19ರ ಎರಡನೇ ಅಲೆ ಸೃಷ್ಟಿಸಿರುವ ಅಭೂತಪೂರ್ವ ಆರೋಗ್ಯ ಮತ್ತು ಮಾನವ ಹಿತದ ಬಿಕ್ಕಟ್ಟು ಒಂದು ಸುನಾಮಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಸನ್ನಿವೇಶ ಕೇಂದ್ರ ಸರಕಾರದ ನಿಲುವು ಮತ್ತು ನಡೆಯಿಂದಾಗಿ ಉಲಣ್ಬಗೊಳ್ಳುತ್ತಿದೆ. ಇದರ ವಿವರಗಳಿಗೆ ಹೋಗುವ ಸಮಯವಿದಲ್ಲ, ಏಕೆಂದರೆ, ನಾವೀಗ ನಮ್ಮ ಸಾವಿರಾರು ನಲ್ಮೆಯ ದೇಶಬಾಂಧವರ ಸಾವುಗಳಿಗೆ ಸಂತಾಪ ಪಡುತ್ತಿದ್ದೇವೆ. ಇವು ಖಂಡಿತ ತಡೆಯಬಹುದಾಗಿದ್ದ ಸಾವುಗಳು.

ನಾನು, ತುರ್ತಾಗಿ ಎರಡು ವಿಷಯಗಳನ್ನು ಅತ್ಯಂತ ಆದ್ಯತೆಯಿಂದ ಖಾತ್ರಿಪಡಿಸಬೇೆಕೆಂದು ನಿಮಗೆ ಬರೆಯುತ್ತಿದ್ದೇನೆ: ದೇಶಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಮತ್ತು ರೋಗಿಗಳಿಗೆ ವೈದ್ಯಕೀಯ ಆಕ್ಸಿಜನ್‌ನ ಅಬಾಧಿತ ಪೂರೈಕೆಯನ್ನು, ಯಾವುದೇ ಬೆಲೆ ತೆತ್ತಾದರೂ ಪಡೆದು ಖಾತ್ರಿಪಡಿಸಬೇಕು; ಮತ್ತು ಎಲ್ಲ ರಾಜ್ಯ ಸರಕಾರಗಳಿಗೆ ಒಂದು ಉಚಿತ ಮತ್ತು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕಾಗಿ ಲಸಿಕೆಗಳನ್ನು ಒದಗಿಸಬೇಕು, ಇದಕ್ಕಾಗಿ ಇನ್ನಷ್ಟು ಸಾವುಗಳನ್ನು ತಡೆಯಲು ಭಾರತೀಯ ಲಸಿಕೆಗಳ ಉತ್ಪಾದನೆಯನ್ನು ತುರ್ತು ಉಪಬಂಧಗಳ ಅಡಿಯಲ್ಲಿ ತರಬೇಕು ಮತ್ತು ಎಲ್ಲ ಲಭ್ಯ ಮೂಲಗಳಿಂದ ಆಮದು ಮಾಡಬೇಕು.

ಈ ನಿರ್ಧಾರಗಳನ್ನು ಕೈಗೊಳ್ಳಲು ಹಣಕಾಸು ಪರಿಗಣನೆಗಳು ಇರಬಹುದು ಎಂಬುದು ನನಗೆ ತಿಳಿಯುತ್ತದೆ. ತಕ್ಷಣವೇ ಲಸಿಕೆ ಕಾರ್ಯಕ್ರಮಕ್ಕೆ ಬಜೆಟಿನಲ್ಲಿ ನೀಡಿರುವ ರೂ.35,000 ಕೋಟಿ ಯನ್ನು ವೆಚ್ಚ ಮಾಡಬೇಕು. ಈಗಿಂದೀಗಲೇ ದಿಲ್ಲಿಯಲ್ಲಿ ಹೊಸ ಸೆಂಟ್ರಲ್ ವಿಸ್ತಾದ ಪರಿಯೋಜನೆಯನ್ನು ಮತ್ತು ಎಲ್ಲ ದುಂದು ವೆಚ್ಚಗಳನ್ನು ರದ್ದು ಮಾಡಬೇಕು ಮತ್ತು ಪಿಎಂ-ಕೇರ್ಸ್ ನಿಧಿಯ ಅಡಿಯಲ್ಲಿ ಸಂಗ್ರಹಿಸಿರುವ ಎಲ್ಲ ಹಣವನ್ನು ಪಾರದರ್ಶಕವಾಗಿ ಬಿಡುಗಡೆ ಮಾಡಬೇಕು ಹಾಗು ಅದನ್ನು ಆಕ್ಸಿಜನ್ ಮತ್ತು ಲಸಿಕೆಗಳ ಪೂರೈಕೆಗೆ ವರ್ಗಾಯಿಸಬೇಕು ಎಂದು ನಾನು ಅತ್ಯಂತ ಕಳಕಳಿಯಿಂದ ನಿಮ್ಮನ್ನು ಕೋರುತ್ತೇನೆ.

ಒಂದು ವೇಳೆ ನೀವು ನಮ್ಮ ದೇಶಬಾಂಧವರಿಗೆ ಆಕ್ಸಿಜನ್ ಮತ್ತು ಲಸಿಕೆಗಳನ್ನು ಒದಗಿಸಿ ಇನ್ನಷ್ಟು ಸಾವುಗಳನ್ನು ತಡೆಯಲು ಅಸಮರ್ಥರಾದರೆ, ನಿಮ್ಮ ಸರಕಾರ ಮುಂದುವರೆಯುವ ನೈತಿಕ ಅಧಿಕಾರವನ್ನು ಕಳಕೊಳ್ಳುತ್ತದೆ. ಈ ಆರೋಗ್ಯ ಮತ್ತು ಮಾನವ ಹಿತಕ್ಕೆ ಬಂದಿರುವ ವಿಪತ್ತನ್ನು ತಡೆಯಲು ಸಾಧ್ಯವಿದೆ ಮತ್ತು ಅದನ್ನು ತಪ್ಪಿಸಲೇ ಬೇಕು. ಇದು ನಿಮ್ಮ ಸರಕಾರ ನೆರವೇರಿಸಲೇ ಬೇಕಾದ ಮೂಲ ಜವಾಬ್ದಾರಿ. ಇದುವರೆಗೆ ನಿಮ್ಮ ಸರಕಾರ ಇದರಲ್ಲಿ ವಿಫಲವಾಗಿದೆ.

Donate Janashakthi Media

Leave a Reply

Your email address will not be published. Required fields are marked *