ಚಿಕ್ಕಬಳ್ಳಾಪುರ : ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಗ್ಗೊಲೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆಯೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತರಾಮ್ ಯೆಚೂರಿ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶನಿವಾರ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಡಾ.ಅನಿಲ್ ಕುಮಾರ್ ಪರ ನಡೆದ ರೋಡ್ ಶೋ ಬಳಿಕ ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಒಕ್ಕೂಟದ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಆತ್ಮನಿರ್ಭರ ಭಾರತ ಬದಲಾಗಿ ಆತ್ಮವನ್ನು ಸಾಯಿಸುವ ಕೆಲಸವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಯಾವುದೇ ಚುನಾವಣೆ ನಡೆಯಲಿ ಬಿಜೆಪಿ ತನ್ನ ಅಧಿಕಾರ, ಹಣ, ಇಡಿ, ಸಿಬಿಐನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರವೆಸಗುವ ರೀತಿಯಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸುತ್ತಿದೆಯೆಂದರು. ಮೋದಿ ಸರ್ವಾಧಿಕಾರಿ ಧೋರಣೆ ದೇಶದ ಆರ್ಥಿಕ, ಸಾಮಾಜಿಕ ನ್ಯಾಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆದರೆ ಅಂಬಾನಿ, ಅದಾನಿಗೆ 11 ಲಕ್ಷ ಕೋಟಿ ಸಾಲ ಮನ್ನ ಮಾಡಿ ಬ್ಯಾಂಕುಗಳನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಈ ಚುನಾವಣೆ ಮೂಲಕ ಜನ ವಿರೋಧಿ ಬಿಜೆಪಿ ಸರ್ಕಾರವನ್ನು ಕರ್ನಾಟಕದಿಂದ ಮುಕ್ತ ಮಾಡಬೇಕು, ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಅಭ್ಯರ್ಥಿ ಡಾ.ಅನಿಲ್ ಕುಮಾರ್‌ರನ್ನು ಗೆಲ್ಲಿಸಿ ಕೊಡುವಂತೆ ಯೆಚೂರಿ ಮನವಿ ಮಾಡಿದರು.
ಸಮಾವೇಶದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್, ಪಕ್ಷದ ಮುಖಂಡರಾದ ಬಿ.ವಿ.ಸಾವಿತ್ರಮ್ಮ, ಡಿ.ಸಿ.ಶ್ರೀನಿವಾಸ್, ರಘುರಾಮರೆಡ್ಡಿ, ಪಕ್ಷದ ರಾಜ್ಯ ನಾಯಕರು ಸೇರಿದಂತೆ ಮತ್ತಿತರರು ಇದ್ದರು.
ಎಲ್ಲೆಲ್ಲೂ ಕೆಂಬಾವುಟ : ಬಾಗೇಪಲ್ಲಿ ನಗರದ ತುಂಬ ಕೆಂಬಾವುಟ ರಾರಾಜಿಸಿತ್ತಿದ್ದವು. ಅಲ್ಲಲ್ಲಿ ಮಾಜಿ ಶಾಸಕ ಶ್ರೀರಾಮರೆಡ್ಡಿಯವರ ಭಾವಚಿತ್ರಗಳು ಕಾಣುತ್ತಿದ್ದವು. ಈ ಬಾರಿ ಕ್ಷೇತ್ರದಲ್ಲಿ ಸಿಪಿಐಎಂ ಗೆಲ್ಲಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಜೆಡಿಎಸ್ ಬೆಂಬಲ : ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಾಕದೆ ಸಿಪಿಐಎಂ ಗೆ ಬೆಂಬಲ ನೀಡಿದೆ. ಜೆಡಿಎಸ್ ಬಾವುಟಗಳು ಕೂಡ ಅಲ್ಲಲ್ಲಿ ಕಂಡು ಬಂದವು. ಜೆಡಿಎಸ್ ನಾಯಕರೂ ಹಾಗೂ ಕಾರ್ಯಕರ್ತರು ಮೆರವಣಿಗೆ ಮತ್ತು ಬಹಿರಂಗಸಭೆಯಲ್ಲಿ ಭಾಗಿಯಾಗಿದ್ದರು.
ಜನಪರ ವೈದ್ಯ ಡಾ ಎ. ಅನೀಲ್ ಕುಮಾರ್ : ಕೋವಿಡ್ ಸೋಂಕಿನ ಸಂಕಷ್ಟದ ಕಾಲದಲ್ಲಿ ಡಾ.ಅನಿಲ್ ಕುಮಾರ್ ಅವರು ಬಾಗೇಪಲ್ಲಿ ತಾಲೂಕಿನಲ್ಲಿ ಮುತುವರ್ಜಿ ವಹಿಸಿ ವಿಶೇಷ ಚಿಕಿತ್ಸಾ ವಿಧಾನದ ಮೂಲಕ ಜನ ಜಾಗೃತಿ ಮತ್ತು ಸುಮಾರು 160 ಹಳ್ಳಿಗಳಲ್ಲಿ ಸೋಂಕು ತಡೆ ಮತ್ತು ನಿರ್ಣಾಯಕ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ನೀಡುವ ಮೂಲಕ ದೇಶದ ಗಮನ ಸೆಳೆದಿದ್ದರು.
ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸಿದ್ದರು. ಅವರ ಈ ಕಾರ್ಯಕ್ಕೆ ಜನಮೆಚ್ಚುಗೆ ಜೊತೆಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ- ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಟಿತ ‘ಚಾಣಕ್ಯ ಪ್ರಶಸ್ತಿ’ಗೆ ಭಾಜನರಾಗಿದ್ದರು.
ಅನಿಲ್ ಕುಮಾರ್ ಅವರ ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿದ್ದವು. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟದಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ನಡುವೆಯೂ ವೈದ್ಯಕೀಯ ಸೇವೆ ನೀಡಿದ್ದಾರೆ.
ಇಂತವರು ವಿಧಾನಸೌಧದಲ್ಲಿ ಇದ್ದರೆ ರಾಜ್ಯದ ಶಿಕ್ಷಣ, ಆರೋಗ್ಯ, ಸಾರ್ವಜನಿಕ ವ್ಯವಸ್ಥೆ ಬಲಗೊಳ್ಳಲಿದೆ ಎಂದು ಸಿಪಿಐಎಂ ನಾಯಕರು ಅಭಿಮತ ವ್ಯಕ್ತಪಡಿಸಿದರು.