ಬೆಂಗಳೂರು: ನನ್ನ ಇಲಾಖೆಯಲ್ಲಿ ಮತ್ತೊಬ್ಬ ವ್ಯಕ್ತಿಯ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ, ನನ್ನ ಅಧಿಕಾರವನ್ನು ಮಗ ಚಲಾಯಿಸಬಾರದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ನಾನು ದೆಹಲಿಗೆ ಹೋಗಿದ್ದು ನಿಜ. ನಾನು ಯಾವಾಗಲೂ ದೆಹಲಿಗೆ ಹೋಗ್ತೀನಿ ಬರ್ತೀನಿ. ನನ್ನ ವೈಯಕ್ತಿಕ ಕಾರಣಕ್ಕಾಗಿ ನಾನು ದೆಹಲಿಗೆ ಹೋಗಿದ್ದೆ. ಯಾವ ವಿಚಾರಕ್ಕೆ ನಾನು ದೆಹಲಿಗೆ ಹೋಗಿದ್ದೆ ಎಂದು ಹೇಳಲು ಹೋಗಲ್ಲ. ಪಕ್ಷ ನನ್ನನ್ನು ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಮೂರು ಪಕ್ಷಗಳ ಸರ್ಕಾರ ಅಧಿಕಾರದಲ್ಲಿದೆ ಎಂದು ಹೇಳಿರುವ ಯೋಗೇಶ್ವರ್ ನನ್ನ ಖಾತೆಯಲ್ಲಿ ಯಾರೂ ಮೂಗು ತೂರಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.