ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಜುಲೈ 31 ಮತ್ತು ಆಗಸ್ಟ್ 01ರಂದು ಲಾಕ್‌ಡೌನ್ ಇರುತ್ತದೆ ಎಂದು ಕೇರಳದ ಎಲ್‌ಡಿಎಳ್ ಸರಕಾರ ಪ್ರಕಟಿಸಿದೆ.
ಕೇರಳದಲ್ಲಿ ಬುಧವಾರವೂ ಹೊಸದಾಗಿ 22 ಸಾವಿರದಷ್ಟು ದೃಢೀಕೃತ ಕೋವಿಡ್ ಸೋಂಕಿತರ ಸಂಖ್ಯೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ಸರಕಾರ ಲಾಕ್‌ಡೌನ್‌ಗೆ ಆದೇಶ ನೀಡಿದೆ.
ಇದನ್ನು ಓದಿ: ಹಳ್ಳಿಗಳಿಗೆ ಕೊರೊನಾ ಹಬ್ಬಲು ಸರಕಾರದ ಲಾಕ್‌ಡೌನ್ ಕಾರಣವೆ?
ಕೇರಳ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಹೊಸ ಪ್ರಕರಣಗಳು ದಾಖಲಾಗುತ್ತಿರುವ ವರದಿಗಳಲ್ಲಿ ಶೇಕಡಾ 50ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲೇ ದಾಖಲಾಗುತ್ತಿವೆ.
ಕೇರಳದಲ್ಲಿ ಒಟ್ಟು 33,27,301 ಪ್ರಕರಣಗಳಿವೆ, ಇದುವರೆಗೂ 16,457 ಮಂದಿ ಮೃತಪಟ್ಟಿದ್ದಾರೆ, ಕಳೆದ 24 ಗಂಟೆಗಳಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ. ಕೇರಳ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ. ಅನಿಶ್ ಮಾತನಾಡಿ ಕೇರಳಕ್ಕೆ ಸಾಕಷ್ಟು ಕೊರೊನಾ ಲಸಿಕೆಯ ಅಗತ್ಯವಿದ್ದು, ಶೀಘ್ರವೇ ಲಸಿಕೆಯನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಕೇರಳಕ್ಕೆ ಕೇಂದ್ರ ತಜ್ಞರ ತಂಡ
ಕೋವಿಡ್ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಕೇಂದ್ರ ತಜ್ಞರ ತಂಡ ಭೇಟಿ ನೀಡುತ್ತಿದ್ದು, ನಾಲ್ಕು ಮಂದಿಯ ತಜ್ಞರ ತಂಡ ಶೀಘ್ರವೇ ಕೇರಳಕ್ಕೆ ಆಗಮಿಸಲಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯ ಆರೋಗ್ಯ ಸಚಿವಾಲಯಕ್ಕೆ ಸಲಹೆ ನೀಡಲಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಸುಮಾರು 12 ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡುವ ಸಾಧ್ಯತೆ ಇದೆ.
ಇದನ್ನು ಓದಿ: ಕೇರಳದಲ್ಲಿ ಮೇ 23ರ ವರೆಗೆ ಲಾಕ್‌ಡೌನ್ ವಿಸ್ತರಣೆ-ಆರ್ಥಿಕ ನೆರವು ಘೋಷಣೆ
ಗುರುವಾರದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 3,15,28,114 ಆಗಿದೆ. ಗುಣಮುಖ ಹೊಂದಿರುವವರ ಸಂಖ್ಯೆ 3,07,01,612 ಆಗಿದೆ. ದೇಶದಲ್ಲಿ ಇದುವರೆ 4,22,662 ಮಂದಿ ಸೋಂಕಿನಿಂದ ನಿಧನ ಹೊಂದಿದ್ದಾರೆ. ದೇಶದಲ್ಲಿ ಸದ್ಯ 4,03,840 ಸೋಂಕಿತರ ಸಕ್ರಿಯ ಪ್ರಕರಣಗಳು ಇವೆ. ಒಟ್ಟಾರೆ ಸೋಂಕಿತರಲ್ಲಿ ಶೇಕಡಾ 1.28ರಷ್ಟು ಪ್ರಕರಣಗಳು ಸಕ್ರಿಯವಾಗಿವೆ.