ಭಾರತದಲ್ಲಿ ಹೆಚ್ಚಾದ ಕೊರೊನಾ ಭೀತಿ: ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪ್ರಕರಣ

ನವದೆಹಲಿ: ದೇಶದಲ್ಲಿ 4ನೇ ಅಲೆ ಭೀತಿಯ ನಡುವೆ ಕೋವಿಡ್ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಇಂದು (12 ಜೂನ್) ಮುಂಜಾನೆ ವರದಿಯ ಪ್ರಕಾರ 8,582 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ತಿಂಗಳಲ್ಲೇ ಭಾರತದ ಅತ್ಯಧಿಕ ಪ್ರಮಾಣವಾಗಿದೆ ಎಂದು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 04 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,32,22,017ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿರುವವರು ಸಂಖ್ಯೆ 5,24,761ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಕೆಲ ದಿನಗಳ ಹಿಂದೆ ಇಳಿಕೆಯಾಗುತ್ತಿರುವ ವರದಿಯಾಗಿದ್ದವು. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 44,513ರಷ್ಟು ಇದೆ. 

ಈ ನಡುವೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,435 ಮಂದಿ ಗುಣಮುಖರಾಗುವುದರೊಂದಿಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,26,52,743ಕ್ಕೆ ತಲುಪಿದೆ. ಇನ್ನು ಕಳೆದ 24 ಗಂಟೆಯಲ್ಲಿ 3,44,994 ಮಂದಿಯನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗಿದ್ದು, ಇದರೊಂದಿಗೆ 85,45,43,282 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ 2021ರ ಜನವರಿ 16ರಂದು ಸ್ವದೇಶಿ ನಿರ್ಮಿತ ಕೋವಿಡ್ ಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರದ ಮಾಹಿತಿಯಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 195,07,08,541 ಡೋಸ್‌ ಲಸಿಕೆಯನ್ನು ನೀಡಲಾಗಿದೆ.

ಜೂನ್‌ 22ಕ್ಕೆ ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ ಸಾಧ್ಯತೆ

ಕರ್ನಾಟಕದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ(ಟಿಎಸಿ)ಯು ಐಐಟಿ ಕಾನ್ಪುರದ ಮುನ್ಸೂಚನೆಯಂತೆ ಜೂನ್ 22 ರೊಳಗೆ ಕೋವಿಡ್ ನಾಲ್ಕನೇ ಅಲೆಯು ಆರಂಭವಾಗಲಿದೆ ಎಂದು ಹೇಳಿದೆ. ನಾಲ್ಕನೇ ಅಲೆ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದನ್ನು ತಡೆಯಲು ಜನರು ಮುಂಜಾಗ್ರತಾ ಕ್ರಮಗಳ ಕೈಗೊಳ್ಳಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಭಾರತೀಯ ಸಾರ್ಸ್‌-ಕೋವ್‌-2 ಜೀನೋಮಿಕ್ ಕನ್ಸೋರ್ಟಿಯಾ ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ಇದೀಗ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ ಬಿ4 ಮತ್ತು ಬಿ5 ರೂಪಾಂತರಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರೂಪಾಂತರಿ ವೈರಸ್ ಗಳಿಂದ ರಾಜ್ಯದಲ್ಲಿ ನಾಲ್ಕನೇ ಅಲೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *