ವೇದರಾಜ ಎನ್ ಕೆ
ಹೊಸ ವರ್ಷ, ಕೊವಿಡ್ ರೂಪಾಂತರಿ, ಒಂದಾದ ಮೇಲೆ ಒಂದರಂತೆ ‘ಧರ್ಮ ಸಂಸದ್’ಗಳು ಸೃಷ್ಟಿಸಿದ ವಿವಾದಗಳು, ವಿದೇಶಿ ದೇಣಿಗೆಗಳು ಮತ್ತು ಚುನಾವಣಾ ಬಾಂಡುಗಳನ್ನು ಕುರಿತ ಸರಕಾರದ ನಡೆಗಳು ಈ ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ವಿಷಯಗಳು.
ಕೊವಿಡ್‍ನ ಮೊದಲ ರೂಪಾಂತರಿ ವೈರಸ್ಸಿನ ಅಟಾಟೋಪಗಳೊಂದಿಗೆ ‘ಥ್ಯಾಂಕ್ಯು ಮೋದೀಜಿ’ ಮತ್ತೆ-ಮತ್ತೆ ಕೇಳಬಂದ 2021 ಹೋಗಿ 2022 ಬಂದಿದೆ-ಬರಲು ಬಿಡಲಾಗಿದೆ, ಅದಕ್ಕೂ ಥ್ಯಾಂಕ್ಯು ಹೇಳಬೇಕೇನೋ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು, ಅದರ ಜೊತೆಗೇ ಹೊಸ ರೂಪಾಂತರಿ ಕೊವಿಡ್ ವೈರಸ್ ಕೂಡ ಪ್ರವೇಶ ಪಡೆದಿದೆ.
(ಶೀರ್ಷಿಕೆಯ ವ್ಯಂಗ್ಯಚಿತ್ರಗಳು: ಮಂಜುಲ್, ನ್ಯೂಸ್9 ಮತ್ತು ಫೇಸ್‍ಬುಕ್)
“ಅವರನ್ನು ಸಾಯಿಸಿ, ಮುಗಿಸಿ ಬಿಡಿ”, ದ್ವೇಷ ,ಮತಾಂತರ , ಜಿಹಾದ್ ಬೊಬ್ಬೆಗಳು ಮತ್ತು ಗಾಂಧೀಜಿಗೆ ಬೈಗುಳಗಳು, ಇವೆಲ್ಲದರ ಬಗ್ಗೆ ಪ್ರಧಾನ ಸೇವಕರುಗಳ ಮೌನ ಮತ್ತು 2014ರ “ವಿಕಾಸ”ದ ಘೋಷಣೆಯ ಬಗ್ಗೆ ಸಂದೇಹಗಳ ನಡುವೆ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ.
ಸತೀಶ ಆಚಾರ್ಯ, ಫೇಸ್‍ಬುಕ್ ಕಪ್ತಾನ್, ಫೇಸ್ ಬುಕ್
***
ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚುನಾವಣೆಗಳಿಗೆ ಅದಾಗಲೇ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಪ್ರಚಾರಗಳು ಆರಂಭವಾಗಿವೆ…
ಅವುಗಳ ಜತೆಗೇ ದ್ವೇಷ ಪ್ರಚಾರ’ಗಳೂ ಗಟ್ಟಿಗೊಳ್ಳುತ್ತಿರುವಂತೆ ಕಾಣುತ್ತಿದೆ.
ಜನಗಳ ಅಸಂತೃಪ್ತಿಯನ್ನು ಎದುರಿಸುತ್ತಿರುವ ಉತ್ತರಪ್ರದೇಶ ಮತ್ತು ಉತ್ತರಾಖಂಡದ ಆಳುವವರಿಗೆ ‘ಧರ್ಮಸಂಸದ್’ಗಳು ಬೂಸ್ಟರ್ ಡೋಸ್ ಗಳನ್ನು ಕಳಿಸಲಯ ಪ್ರಯತ್ನಿಸುತ್ತಿವೆಯಂತೆ
ಅಲೋಕ್ ನಿರಂತರ್, ಫೇಸ್‍ಬುಕ್
ಅಂದರೆ, ಈ ಚುನಾವಣೆಗಳು ಮುಗಿಯುವ ವರೆಗಂತೂ ಇವೆಲ್ಲ ನಿಲ್ಲುವ ಲಕ್ಷಣಗಳಿಲ್ಲ.
ಈಗಲೂ 80% ದಷ್ಟಿರುವ “ನಾವು ಅಪಾಯದಲ್ಲಿದ್ದೇವೆ”, “ನೀವು ಅವರಿಂದ ಅಪಾಯದಲ್ಲಿದ್ದೀರಿ” (ಎಲ್ಲಾ ಸೇರಿ 20%ದಷ್ಟಿರುವುವರಿಂದ!) ಎಂಬಿತ್ಯಾದಿ ಬೊಬ್ಬೆಗಳು ಮುಂದುವರೆಯುತ್ತವೆ….
ಅದುವರೆಗೆ ಈ ಹೊಸ ವರ್ಷದಲ್ಲೂ ಈ ‘ಧರ್ಮರಕ್ಷಕ’ರಿಂದ ಗಾಂಧೀಜಿಗೂ ಬಿಡುಗಡೆಯಿಲ್ಲ!
***
ಆದರೂ, ರಾಯಪುರ ‘ಧರ್ಮಸಂಸದ್’ನಲ್ಲಿ ಒಂದು ಭಿನ್ನಸುದ್ದಿ ಬಂದಿದೆ. ಗಾಂಧೀಜಿ ಬಗ್ಗೆ ಅಪಶಬ್ದಗಳು ಮತ್ತು ದ್ವೇಷ ಭಾಷಣಗಳನ್ನು ಪ್ರತಿಭಟಿಸಿ ಒಬ್ಬ ಹಿಂದೂ ಸ್ವಾಮಿಗಳು ಹೊರನಡೆದರಂತೆ…
“ಭಾಷಣಗಳು ಎಷ್ಟು ಜ್ಞಾನೋದಯಕಾರಿಯಾಗಿದ್ದವೆಂದರೆ,
ಅವರು ಬುದ್ಧನಾಗಿ ಬಿಟ್ಟು ವೇದಿಕೆಯಿಂದ ನಿರ್ಗಮಿಸಿದರು!
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಇತ್ತ ಕರ್ನಾಟಕದಲ್ಲಿಯೂ ಇಂತಹ ‘ಧರ್ಮದ’ ಮತ್ತು ‘ಧರ್ಮಾಂತರ’ದ ಕೆಲಸಕ್ಕೆ ಅಷ್ಟೇನೂ ಯಶಸ್ಸು ಸಿಕ್ಕಂತೆ ಕಾಣುತ್ತಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಸ್ವತಃ ಮುಖ್ಯಮಂತ್ರಿಗಳ ಕ್ಷೇತ್ರವೂ ಸೇರಿದಂತೆ ಹಲವೆಡೆ ಆಳುವ ಪಕ್ಷಕ್ಕೆ ಹಿನ್ನಡೆಯಾಗಿದೆ ಮತ್ತು ‘ಧರ್ಮಾಂತರ’ದ ಕೋಟಾ ನಿಗದಿ ಮಾಡಲು ಹೊರಟ ನಮ್ಮ ಯುವ ಪ್ರಚಾರಕ ಎಂಪಿ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕಾಗಿ ಬಂದಿದೆ…
***
ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಒಂದು ಆ್ಯಪ್ 2021ರ ವರ್ಷಾಂತ್ಯದಲ್ಲಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ಪ್ರತಿಷ್ಠಿತ ಮುಸ್ಲಿಂ ಮಹಿಳೆಯರನ್ನು ಹೆಸರಿಸಿ, ಅವರ ಭಾವಚಿತ್ರಗಳನ್ನು ವೆಬ್ ಸೈಟ್‌ನಲ್ಲಿ ಹಾಕುವುದಲ್ಲದೆ, ಅವರನ್ನು “ಹರಾಜು” ಮಾಡುವ ಬಗ್ಗೆಯೂ ಇದು ಹೇಳುತ್ತದೆ.
ಬೇಟಿ ಬಚಾವೊ!,,,…….ಬೇಟಿ ಪಢಾವೊ!
ಮುಸಲ್ಮಾನಳೋ? ಹರಾಜು ಹಾಕು!
(ಆಲ್ಮೋಸ್ಟ್ _ಬಾಬ್ಬಿ , ಟ್ವಿಟರ್)
ಇದೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪ್ರಚಾರದ ಭಾಗವೇ ಆಗಿದೆ, ಆಳುವವರ ನಿಷ್ಕ್ರಿಯತೆ ಅಥವ ಶಾಮೀಲಿನಿಂದಾಗಿ ಒಂದು ವರ್ಷದೊಳಗೆ ಎರಡನೇ ಬಾರಿಗೆ ಲಜ್ಜೆಗೆಟ್ಟ ಸ್ತ್ರೀದ್ವೇಷದ ಇಂತಹ ಅತ್ಯಂತ ಅಸಹ್ಯಕರ ಪ್ರದರ್ಶನವನ್ನು ಕಾಣುತ್ತಿದ್ದೇವೆ ಎಂದು ಮಹಿಳಾ ಸಂಘಟನೆಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿವೆ.
ಕೇಂದ್ರ ಸರಕಾರ ಮತ್ತು ಫೋಲಿಸರು ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ ಕಳೆದ ಜುಲೈನಲ್ಲಿ ಇದೇ ತೆರನ ‘ಸುಲ್ಲಿ ಡೀಲ್ಸ್ ಎಂಬ ಆ್ಯಪ್ ಬಂದಾಗ ಅದರ ವಿರುದ್ಧ ಪೋಲೀಸರಿಗೆ ದೂರುಗಳನ್ನು ಸಲ್ಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
“ಈ ವಿಷಯದಲ್ಲಿ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ”
ಸ್ಯಾನಿಟರಿ ಪ್ಯಾನಲ್ಸ್, ಫೇಸ್ ಬುಕ್
ದ್ವೇಷ-ಭಾಷಣವಾಗಲಿ, ದೈಹಿಕ ದಾಳಿಯಾಗಲಿ ಅಥವಾ ಪ್ರಾರ್ಥನಾ ಸಭೆಗಳನ್ನು ತಡೆಯುವಲ್ಲಾಗಲೀ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಂತಹ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಬಲಿಪಶುಗಳಾಗಿದ್ದಲ್ಲಿ, ಪೊಲೀಸರು, ಆಡಳಿತ ಮತ್ತು ನ್ಯಾಯಾಲಯಗಳು ಸಹ ಮೌನವಾಗಿರುತ್ತವೆ. ಸಾಮಾನ್ಯವಾಗಿ ಪೊಲೀಸರು ದೈಹಿಕವಾಗಿ ಉಪಸ್ಥಿತರಿರುತ್ತಾರೆ ಆದರೆ ಮಧ್ಯಪ್ರವೇಶಿಸುವುದಿಲ್ಲ. ಅಥವಾ ಹಾಗೆ ಮಾಡಿದಾಗ, ಅದು ಅಪರಾಧಿಗಳಿಗೆ ಸಹಾಯ ಮತ್ತು ಕುಮ್ಮಕ್ಕು ನೀಡುವುದಕ್ಕಾಗಿಯೇ ಆಗಿರುತ್ತದೆ.. ಪರಿಣಾಮವಾಗಿ, ದ್ವೇಷ ಮತ್ತು ಹಿಂಸಾಚಾರವನ್ನು ಬೋಧಿಸುವವರು ಮತ್ತಷ್ಟು ದೌರ್ಜನ್ಯಗಳನ್ನು ಎಸಗುವ ಧೈರ್ಯಮಾಡುತ್ತಾರೆ” ಎಂದು ಮಹಿಳಾ ಸಂಘಟನೆಗಳ ಮನವಿ ರಾಷ್ಟ್ರಪತಿಗಳ ಗಮನಕ್ಕೆ ತಂದಿದೆ.
“ನಾವೀಗ ಆಧುನಿಕ ಯುಗಲ್ಲಿದ್ದೇವೆ, ದುಃಶ್ಶಾಸನ!
ಇದನ್ನು ನೀನೀಗ ಆನ್‍ಲೈನ್ ನಲ್ಲಿ ಮಾಡಬಹುದು”
ಮಂಜುಲ್, ನ್ಯೂಸ್9
ಮಹಿಳಾ ಸಂಘಟನೆಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿರುವಂತೆ, ಪಿತೃಪ್ರಧಾನ ವ್ಯವಸ್ಥೆ ಪ್ರಬಲವಾಗಿರುವ ದೇಶದಲ್ಲಿ, ಇಂತಹ ಸಾರ್ವಜನಿಕ ಪ್ರಚೋದನೆಯ ಅತ್ಯಂತ ಕೆಟ್ಟ ರೀತಿಯ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
“ಗಟ್ಟಿಯಾಗಿ ನಿಲ್ಲು, ಮಗಳೇ” “ನೀನೂ ಕೂಡ ಅಮ್ಮಾ!
ಸತೀಶ ಆಚಾರ್ಯ, ಫೇಸ್ ಬುಕ್
ಮುಸ್ಲಿಂ ಮಹಿಳೆರಿಗೆ ಮಾತ್ರವಲ್ಲ, ನ್ಯಾಯದೇವಿಗೂ ಅವಮಾನ!
***
ಕೇಂದ್ರ ಗೃಹ ಮಂತ್ರಾಲಯ ವಿದೇಶಿ ದೇಣಿಗೆಗಳ ನಿಯಮಗಳನ್ನು ಬದಲಿಸಿ ಸುಮಾರು 6000 ಸರ್ಕಾರೇತರ ಸಂಘಟನೆ(ಎನ್ ಜಿ ಒ)ಗಳು ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವ ಅನುಮತಿಯನ್ನು ರದ್ದು ಮಾಡಿದೆ.
ಆತ್ಮನಿರ್ಭರ್, ಅಂದರೆ ಸ್ವಾವಲಂಬನೆಯ ಉನ್ನತ ಮೌಲ್ಯ ಇದರ ಹಿಂದಿದೆ ಎಂದು ಆಳುವವರು ಮತ್ತು ಅವರ ಬೆಂಬಲಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ.
ಅದೇ ವೇಳೆಗೆ ಚುನಾವಣಾ ಬಾಂಡುಗಳ ಮತ್ತೊಂದು ಸರಣಿ ಸದ್ಯಕ್ಕೇ ತೆರೆಯಲಿದೆ ಎಂದೂ ವರದಿಯಾಗಿದೆ.
ನೈತಿಕ ಔನ್ನತ್ಯದ ಈ ಪರಿ…
ಚುನಾವಣಾ ಬಾಂಡುಗಳು ಮತ್ತು ವಿದೇಶಿ ನೆರವಿನ ನಿಯಮಗಳು
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಈ 6000 ಎನ್.ಜಿ.ಒ.ಗಳಲ್ಲಿ ರಾಜಕೀಯಾತೀತ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಹೆಸರಿಲ್ಲ….
ಪಿ.ಮಹಮ್ಮದ್, ವಾರ್ತಾಭಾರತಿ
ಆದರೆ, ಮದರ್ ಥೆರೆಸಾರವರ ಮಿಷನರೀಸ್ ಆಫ್ ಚಾರಿಟಿ ಸೇರಿದೆ. ಈ ಸುದ್ದಿ ಕ್ರಿಸ್ಮಸ್ ದಿನದಂದೇ ಬಂದಿದೆ.
“ನಾವು ಎಷ್ಟು ಕೊಡುತ್ತೇವೆ ಎಂಬುದಲ್ಲ,
ಕೊಡುವುದರಲ್ಲಿ ಎಷ್ಟು ಪ್ರೀತಿಯನ್ನು ತುಂಬುತ್ತೇವೆ ಎಂಬುದು ಮುಖ್ಯ”
ಎಂದೊಮ್ಮೆ ಮದರ್ ಥೆರೆಸಾ ಹೇಳಿದ್ದರಂತೆ.
(ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯಾ)
ಚುನಾವಣಾ ಬಾಂಡುಗಳ ನಿಯಮಗಳಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ಯಾರು ಕೊಡುತ್ತಾರೆ, ದೇಶೀಯರೋ ,ವಿದೇಶೀಯರೋ ಎಂಬುದು ಗೊತ್ತಾಗುವುದಿಲ್ಲ. ಇದು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಸುಪ್ರಿಂ ಕೋರ್ಟಿನಲ್ಲಿ ಸವಾಲನ್ನು ಎದುರಿಸುತ್ತಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
***
ಕೊವಿಡ್ ಕಾಲದಲ್ಲಿ , ಅದರಲ್ಲೂ ಈ ವರ್ಷದ ಆರಂಭದ ಎರಡನೇ ಅಲೆಯ ಅತ್ಯಂತ ಕಠಿಣ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ದುಡಿದ ರೆಸಿಡೆಂಟ್ ಡಾಕ್ಟರುಗಳ ಮೇಲೆ ದಿಲ್ಲಿ ಪೋಲೀಸರ ಹಲ್ಲೆ ಸಹಜವಾಗಿಯೇ ದೊಡ್ಡ ಸುದ್ದಿಯಾಯಿತು.
“ಮುಲಾಜು ಬೇಡ! ಚೆನ್ನಾಗಿ ತದಕಿ!!
ಅವರು ಡಾಕ್ಟರುಗಳು, ಏನೂ ಆಗುವುದಿಲ್ಲ!!
(ಮಂಜುಲ್, ನ್ಯೂಸ್9)
ಡಾಕ್ಟರುಗಳು ಪಿಜಿ-ನೀಟ್ ಮೂಲಕ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿಪರೀತ ವಿಳಂಬದಿಂದ ತಮ್ಮ ಮೇಲೆ ಹೆಚ್ಚುತ್ತಿರುವ ಹೊರೆಯನ್ನು ಪ್ರತಿಭಟಿಸುತ್ತಿದ್ದರು. ಒಂದು ವರ್ಷದ ಹಿಂದೆ ಆಕಾಶದಿಂದ ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿ, ತಟ್ಟೆ ಬಾರಿಸಿ ಸ್ವತಃ ಪ್ರಧಾನ ಮಂತ್ರಿಗಳಿಂದ ಪ್ರಶಂಸೆ ಪಡೆದ ಈ ಡಾಕ್ಟರುಗಳು ಈಗ ದಿಲ್ಲಿ ಪೋಲಿಸರ ಲಾಠಿಯೇಟುಗಳನ್ನು ತಿನ್ನಬೇಕಾಗಿದೆ, ಅದೂ ಡಿಸೆಂಬರ್ 25ರ ‘ಉತ್ತಮ ಆಳ್ವಿಕೆ’ಯ ದಿನಾಚರಣೆಯ ಎರಡೇ ದಿನಗಳ ನಂತರ – ಉತ್ತಮ ಆಳ್ವಿಕೆ ಕೇಳಿದ್ದಕ್ಕಾಗಿ…
2020-2021 ಪ್ರಚಾರ ವಾಸ್ತವತೆ
ಕೊನೆಯದಾಗಿ, ಪ್ರಧಾನಿಗಳು ಭಂಡತನದಿಂದ ವರ್ತಿಸಿದರು ಎಂಬ ಮಣಿಪುರದ ರಾಜ್ಯಪಾಲರ ಹೇಳಿಕೆ ಮತ್ತು ಹೆಣ್ಣಮಕ್ಕಳ ಮದುವೆ ವಯಸ್ಸನ್ನು 21 ಕ್ಕೆ ಏರಿಸುವ ಕುರಿತಂತೆ ಸಂಸದೀಯ ಸಮಿತಿಯ 31 ಸದಸ್ಯರಲ್ಲಿ ಇರುವುದು ಏಕೈಕ ಮಹಿಳಾ ಸದಸ್ಯೆ ಎಂಬ ಸುದ್ದಿಯ ಬಗ್ಗೆ.
ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿದಾಗ ಅದರ ಮೊದಲ ಉಪರಾಜ್ಯಪಾಲರಾಗಿ ನೇಮಕಗೊಂಡಿದ್ದ, ನಂತರ ಮಣಿಪುರ ರಾಜ್ಯಪಾಲರಾಗಿ ವರ್ಗವಾದ ಸತ್ಪಾಲ್ ಮಲಿಕ್ ಪ್ರಧಾನಿಯವರನ್ನು ರೈತರ ಹೋರಾಟ ಕುರಿತಂತೆ ಭೇಟಿ ಮಾಡಿದಾಗ ಅವರು ಭಂಡತನ ತೋರಿದರು, 500 ರೈತರು ಪ್ರಾಣ ಕಳಕೊಂಡಿದ್ದಾರೆ ಎಂದಾಗ ಅವರೇನು ನನಗಾಗಿ ಸತ್ತರೇ ಎಂದು ಕೇಳಿದರು ಎಂದು ಹೇಳಿರುವುದಾಗಿ ವರದಿಯಾಗಿದೆ.. ಒಂದೆಡೆ, ಒಂದು ವೇಳೆ ಉದ್ಯೋಗವಿಲ್ಲದವರ ಸಂಖ್ಯೆ ಏರುತ್ತಿದೆ ಎಂದರೆ ಪ್ರಧಾನಿಗಳು ಏನು ಹೇಳಬಹುದು ಎಂಬ ಕುತೂಹಲವಾದರೆ, ಇನ್ನೊಂದೆಡೆ ಕೆಲವರು ಭಾರತದ ನಿಜವಾದ ಸಂವಿಧಾನ ಬೇಕಿತ್ತು ಎನ್ನುವ ‘ಮನುಸ್ಮೃತಿ’ಯ ನೆನಪು ಈ ವ್ಯಂಗ್ಯಚಿತ್ರಕಾರರುಗಳಿಗೆ.