ಹೈದರಾಬಾದ್ : ತೆಲಂಗಾಣದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸರ್ಕಾರ ಮಾಧ್ಯಮಕ್ಕೆ ನೀಡುತ್ತಿರುವ ಸಂಖ್ಯೆಯಲ್ಲೂ ತುಂಬಾ ವ್ಯತ್ಯಾಸಗಳಿವೆ ಎಂದು ಆರೋಪಿಸಲಾಗುತ್ತಿದೆ.
ಮಾಧ್ಯಮಕ್ಕೆ ನೀಡಿರುವ ಸಂಖ್ಯೆಗಿಂತ ಎರಡು ಪಟ್ಟು ಪ್ರಕರಣಗಳು ಹೆಚ್ಚಿವೆ, ಜಿಲ್ಲಾ ಆರೋಗ್ಯಾಧಿಕಾರಿಗಳು ನೀಡಿರುವ ವರದಿ ಸಂಖ್ಯೆಯನ್ನು ಸರ್ಕಾರವು ಮಾಧ್ಯಮಗಳಿಗೆ ನೀಡುವ ಮುನ್ನ ಕಡಿತಗೊಳಿಸುತ್ತಿದೆ ಎಂಬುದು ತಿಳಿದುಬಂದಿದೆ.
ಈ ಕುರಿತು ‘ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿರುವ ರಿಯಾಲಿಟಿ ಚೆಕ್‌ನಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಏಪ್ರಿಲ್ 17 ರಂದು 13 ಜಿಲ್ಲೆಗಳಲ್ಲಿ ವರದಿಯಾಗಿರುವ ಕೋವಿಡ್ 19 ಪ್ರಕರಣಗಳಿಗೆ ಹೋಲಿಸಿದರೆ, ಅದೇ ಜಿಲ್ಲೆಗಳಲ್ಲಿ ನೀಡಿರುವ ಜಿಲ್ಲಾಧಿಕಾರಿಗಳು ಹೇಳಿರುವ ಮಾಹಿತಿಗಿಂತ ಶೇ.66ರಷ್ಟು ಪ್ರಕರಣಗಳನ್ನು ಕಡಿಮೆ ಮಾಡಿರುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.
13 ಜಿಲ್ಲೆಗಳಲ್ಲಿ ಏಪ್ರಿಲ್ 17ರಂದು ವರದಿಯಾದ ಪ್ರಕರಣಗಳು ಒಟ್ಟು 4,868ರಷ್ಟಿದೆ. ಆದರೆ ಸರ್ಕಾರ ನೀಡಿರುವ ಮಾಹಿತಿ ಕೇವಲ 1,627 ರಷ್ಟಾಗಿತ್ತು.ಹಾಗೆಯೇ ಪ್ರತಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಪ್ರತಿ ಜಿಲ್ಲೆಗಳ ಕೊರೊನಾ ಸೋಂಕಿತರ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡದಿರಲು ಹೇಳಿದೆ.
ಸ್ವಲ್ಪ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಗಳ ಕೊರೊನಾ ಸೋಂಕಿತರ ಮಾಹಿತಿಯನ್ನು ಮಾಧ್ಯಮದ ಮುಂದೆ ಪ್ರತ್ಯೇಕವಾಗಿ ಹಂಚಿಕೊಳ್ಳುತ್ತಿದ್ದರು ಈಗ ಅದನ್ನು ತಡೆಹಿಡಿಯಲಾಗಿದೆ.