ಕೊರೊನಾ ಪರಿಹಾರದ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿದ್ಧು ಸರಣಿ ಟ್ವೀಟ್‌

ಬೆಂಗಳೂರು : ಕೊರೊನಾದಿಂದ ಸಂಕಷ್ಟಕ್ಕೆ ನೂಕಲ್ಪಟ್ಟ ಕುಟುಂಬಗಳಿಗೆ ನೀಡಿದ ಪರಿಹಾರದ ಬಗ್ಗೆ ರಾಜ್ಯ ಸರಕಾರವು ತಕ್ಷಣವೇ ಶ್ವೇತಪತ್ರವನ್ನು ಹೊರಡಿಸಬೇಕು. ಆಗ ಮಾತ್ರ ಜನತೆಗೆ ನಿಜ ಸಂಗತಿ ತಿಳಿಯಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ಧರಾಮಯ್ಯ ಅವರು ‘ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ’. ಕೊರೊನಾ ಉಲ್ಭಣಗೊಳ್ಳಲು ರಾಜ್ಯದ ಬಿಜೆಪಿ ಸರ್ಕಾರದ ಅಸಾಮರ್ಥ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ ಎಂದು ಮೊದಲ ದಿನದಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆ ಪ್ರಕಾರ 2020ರ ಡಿಸೆಂಬರ್ ವರೆಗಿನ ಕೊರೊನಾ ಸಾವಿನ ಸಂಖ್ಯೆ- 12,090. ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ- 22,320 ಆಗಿದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು? ಎಂದೂ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಬಿಜೆಪಿಯು ಸುಳ್ಳು ಹೇಳಿರುವುದು ಕೊರೊನಾ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ, ಮಾಸ್ಕ್, ಸ್ಯಾನಿಟೈಸರ್ ಪಿಪಿ ಕಿಟ್ ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿ ವರೆಗೆ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸುಳ್ಳನ್ನು ಹೇಳುತ್ತಿದ್ದಾರೆ.

ತಪ್ಪನ್ನು ತಿದ್ದಿಕೊಳ್ಳದ ಸರಕಾರ ಎಲ್ಲವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಇಂತಹ  ಲಜ್ಜೆಗೇಡಿತನದ ಫಲವಾಗಿ ರಾಜ್ಯದ ಜನ ಕಷ್ಟಗಳನ್ನು ಅನುಭವಿಸಬೇಕಾಗಿದೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *