ಸಿಒಪಿ31 ಶೃಂಗಸಭೆ: ಪ್ರಮುಖ ಹವಾಮಾನ ವಿಚಾರಗಳಲ್ಲಿ ಪ್ರಗತಿಗೆ ಶ್ರೀಮಂತ ರಾಷ್ಟ್ರಗಳ ಅಡ್ಡಿ

Please follow and like us:
ಹವಾಮಾನ ಹಣಕಾಸು, ಹೊಂದಾಣಿಕೆ ಮತ್ತು ನ್ಯಾಯಯುತ ಇಂಧನ ಪರಿವರ್ತನೆ ವಿಚಾರಗಳಲ್ಲಿ ಒಮ್ಮತ ಮೂಡಿಸುವಲ್ಲಿ ವಿಫಲ; ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಬಹಿರಂಗ
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ 31ನೇ ಶೃಂಗಸಭೆ (COP31) ಟರ್ಕಿಯ ಅಂಟಲ್ಯದಲ್ಲಿ ನವೆಂಬರ್ 22ರಂದು ಯಾವುದೇ ಅಂತಿಮ ಒಮ್ಮತಕ್ಕೆ ಬರದೆ ಮುಕ್ತಾಯಗೊಂಡಿದೆ. ಹವಾಮಾನ ಹಣಕಾಸು, ಹವಾಮಾನ ಬದಲಾವಣೆಗೆ ಹೊಂದಾಣಿಕೆ, ನ್ಯಾಯಯುತ ಇಂಧನ ಪರಿವರ್ತನೆ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿತದ ವಿಚಾರಗಳಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಆಳವಾದ ಭಿನ್ನಾಭಿಪ್ರಾಯಗಳು ಶೃಂಗಸಭೆಯಲ್ಲಿ ಬಹಿರಂಗವಾಗಿವೆ ಎಂದು ದೆಹಲಿ ಮೂಲದ ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ತಿಳಿಸಿದೆ. ಸಿಒಪಿ31

ಟರ್ಕಿ ಮತ್ತು ಆಸ್ಟ್ರೇಲಿಯಾದ ಸಹ ಅಧ್ಯಕ್ಷತೆಯಲ್ಲಿ ಪ್ರಸ್ತಾಪಿಸಲಾಗಿದ್ದ ‘ಅಂಟಲ್ಯ ಒಪ್ಪಂದ’ಕ್ಕೆ (Antalya Pact) ಎರಡು ವಾರಗಳ ಮಾತುಕತೆಯ ನಂತರವೂ ಒಮ್ಮತ ದೊರೆತಿಲ್ಲ. ಆದರೆ ಹವಾಮಾನ ಹಣಕಾಸು ಕಾರ್ಯಯೋಜನೆ ಮತ್ತು ನ್ಯಾಯಯುತ ಇಂಧನ ಪರಿವರ್ತನೆ ಕಾರ್ಯಯೋಜನೆ ಸೇರಿದಂತೆ ಕೆಲವು ವಿಚಾರಗಳಲ್ಲಿ ನಿರ್ಧಾರಗಳನ್ನು ಅಂಗೀಕರಿಸಲಾಗಿದೆ. ಹೊರಸೂಸುವಿಕೆ ಕಡಿತಕ್ಕೆ ಸಂಬಂಧಿಸಿದ ಮಾತುಕತೆಗಳು ಯಾವುದೇ ನಿರ್ಧಾರಕ್ಕೆ ಬರದೆ ಅಂತ್ಯಗೊಂಡಿವೆ.

ಶೃಂಗಸಭೆಯ ಫಲಿತಾಂಶವನ್ನು ಟೀಕಿಸಿರುವ ವಿಜ್ಞಾನ ಮತ್ತು ಪರಿಸರ ಕೇಂದ್ರದ ಹವಾಮಾನ ಬದಲಾವಣೆ ಮತ್ತು ಹಸಿರು ಆರ್ಥಿಕತೆ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕಿ ಅವಂತಿಕಾ ಗೋಸ್ವಾಮಿ, ಅಧ್ಯಕ್ಷತೆಯು ಗೊಂದಲಮಯ, ವಿಭಜಿತ ಮತ್ತು ಕಡಿಮೆ ಮಹತ್ವಾಕಾಂಕ್ಷೆಯ ಅಂತಿಮ ಕರಡು ಸಿದ್ಧಪಡಿಸುವುದರಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದೆ ಎಂದು ಹೇಳಿದ್ದಾರೆ. ಇದರಿಂದ ಹವಾಮಾನ ಹೊಂದಾಣಿಕೆ ಹಣಕಾಸು ಮತ್ತು ನ್ಯಾಯಯುತ ಇಂಧನ ಪರಿವರ್ತನೆಯಂತಹ ಪ್ರಮುಖ ವಿಚಾರಗಳ ಮೇಲಿನ ಮಾತುಕತೆಗಳಿಗೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಹಣಕಾಸಿನಲ್ಲಿ ನಿರೀಕ್ಷಿತ ಪ್ರಗತಿಯಿಲ್ಲ

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣಕಾಸು ನೆರವು ಒದಗಿಸುವ ವಿಚಾರ ಶೃಂಗಸಭೆಯ ಪ್ರಮುಖ ಚರ್ಚೆಯಾಗಿತ್ತು. ಪ್ಯಾರಿಸ್ ಹವಾಮಾನ ಒಪ್ಪಂದದ 9.1ನೇ ವಿಧಿಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಹಣಕಾಸು ನೆರವು ನೀಡಬೇಕಾದ ಹೊಣೆಗಾರಿಕೆಯನ್ನು ಉಲ್ಲೇಖಿಸುತ್ತದೆ. ಈ ಬದ್ಧತೆಯನ್ನು ಆಧರಿಸಿ ಎರಡು ವರ್ಷಗಳ ಕಾರ್ಯಯೋಜನೆ ರೂಪಿಸಬೇಕೆಂದು ಅಭಿವೃದ್ಧಿಶೀಲ ರಾಷ್ಟ್ರಗಳು ಒತ್ತಾಯಿಸಿದ್ದವು.

ಯುರೋಪಿಯನ್ ಒಕ್ಕೂಟ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿರೋಧದ ನಡುವೆಯೂ ಹವಾಮಾನ ಹಣಕಾಸು ಕಾರ್ಯಯೋಜನೆ ಅಧಿಕೃತ ಚರ್ಚೆಯ ವಿಷಯವಾಗಿ ಸೇರ್ಪಡೆಯಾಯಿತು. ಆದರೆ ಅಂತಿಮವಾಗಿ ಕೈಗೊಂಡ ನಿರ್ಧಾರಗಳು ಬಹುತೇಕ ಕಾರ್ಯವಿಧಾನಕ್ಕೆ ಸೀಮಿತವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಸಿಇಎಸ್ ತಿಳಿಸಿದೆ.

ಇದೇ ವೇಳೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕ್ರಮಗಳಿಗೆ ನೆರವು ನೀಡುವ ಅಡಾಪ್ಟೇಶನ್ ಫಂಡ್‌ಗೆ ಸುಮಾರು 5 ಕೋಟಿ ಅಮೆರಿಕನ್ ಡಾಲರ್ ನೆರವು ಘೋಷಿಸಲಾಗಿದೆ. ಆದರೆ 2026ರಿಂದ 2029ರ ಅವಧಿಗೆ ಈ ನಿಧಿಯ ಗುರಿ ಕನಿಷ್ಠ 120 ಕೋಟಿ ಡಾಲರ್ ಆಗಿದೆ. ಇದಕ್ಕೆ ಹೋಲಿಸಿದರೆ ಘೋಷಣೆಯಾದ ನೆರವು ಅತ್ಯಂತ ಕಡಿಮೆಯಾಗಿದೆ.

2035ರ ವೇಳೆಗೆ ಹವಾಮಾನ ಹೊಂದಾಣಿಕೆ ಹಣಕಾಸನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಕುರಿತಂತೆಯೂ ಶೃಂಗಸಭೆಯಲ್ಲಿ ಒಮ್ಮತ ಮೂಡಿಲ್ಲ. ಈ ಗುರಿಯನ್ನು ತಲುಪಲು ಅಗತ್ಯವಿರುವ ಮೂಲ ಹಣಕಾಸಿನ ಪ್ರಮಾಣ ಅಥವಾ ಅನುಷ್ಠಾನದ ಮಾರ್ಗಸೂಚಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಜಾಗತಿಕ ಹೊಂದಾಣಿಕೆ ಗುರಿಯ ಅಂತಿಮ ಪಠ್ಯದಿಂದ ಹಣಕಾಸು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾಪವನ್ನೂ ಕೈಬಿಡಲಾಗಿದೆ.

ನ್ಯಾಯಯುತ ಇಂಧನ ಪರಿವರ್ತನೆಗೆ ಅಡೆತಡೆ

ನ್ಯಾಯಯುತ ಇಂಧನ ಪರಿವರ್ತನೆ ಕಾರ್ಯಯೋಜನೆಯನ್ನು (Just Transition Work Programme) ಇನ್ನೂ ಮೂರು ವರ್ಷಗಳ ಕಾಲ ವಿಸ್ತರಿಸಲು ಶೃಂಗಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಈ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ನ್ಯಾಯಯುತ ಪರಿವರ್ತನೆ ವ್ಯವಸ್ಥೆಯ (Just Transition Mechanism) ಸಾಂಸ್ಥಿಕ ರಚನೆ, ಅಧಿಕಾರ ವ್ಯಾಪ್ತಿ ಮತ್ತು ಹಣಕಾಸಿನ ವಿಚಾರಗಳಲ್ಲಿ ಒಮ್ಮತ ಮೂಡಿಲ್ಲ.

ಈ ಕುರಿತು ಮುಂದಿನ ಚರ್ಚೆಯನ್ನು 2027ರ ಜೂನ್‌ನಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ನ್ಯಾಯಯುತ ಇಂಧನ ಪರಿವರ್ತನೆಗೆ ಸಂಬಂಧಿಸಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.

ಇದನ್ನೂ ಓದಿ : ಮುಲಾಯಂ ರಾಜಕೀಯ ಪರಂಪರೆಯ ಮೊರೆ ಹೋದ ಅಖಿಲೇಶ್ ಯಾದವ್: 2027ರಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು PDA ಅಸ್ತ್ರ!

ಹೊರಸೂಸುವಿಕೆ ಕಡಿತದ ಮಾತುಕತೆಯೂ ವಿಫಲ

ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಕುರಿತ ಮಾತುಕತೆಗಳಲ್ಲಿಯೂ ಒಮ್ಮತ ಸಾಧ್ಯವಾಗಿಲ್ಲ. ಸೌದಿ ಅರೇಬಿಯಾ ಮತ್ತು ರಷ್ಯಾ ಕರಡು ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹೊರಸೂಸುವಿಕೆ ಕಡಿತ ಕಾರ್ಯಯೋಜನೆ (Mitigation Work Programme) ಯಾವುದೇ ನಿರ್ಧಾರವನ್ನು ಅಂಗೀಕರಿಸದೆ ಅಂತ್ಯಗೊಂಡಿದೆ.

ಇನ್ನೊಂದೆಡೆ, 2035ರ ವೇಳೆಗೆ ಜಾಗತಿಕ ಅಂತಿಮ ಇಂಧನ ಬಳಕೆಯಲ್ಲಿ ವಿದ್ಯುತ್‌ನ ಪಾಲನ್ನು ಶೇ 35ಕ್ಕೆ ಹೆಚ್ಚಿಸುವ 35×35 ವಿದ್ಯುದೀಕರಣ ಗುರಿಯನ್ನು ಶೃಂಗಸಭೆಯ ಅಧ್ಯಕ್ಷತೆ ಪ್ರಸ್ತಾಪಿಸಿತ್ತು. ಆದರೆ ಈ ಗುರಿ ಕಡ್ಡಾಯ ಜಾಗತಿಕ ನಿರ್ಧಾರವಾಗದೆ ಸ್ವಯಂಪ್ರೇರಿತ ಕಾರ್ಯಸೂಚಿಯ ಭಾಗವಾಗಿ ಉಳಿದಿದೆ.

ಅಂಟಲ್ಯ ಶೃಂಗಸಭೆಯ ಫಲಿತಾಂಶಗಳು ಜಾಗತಿಕ ಹವಾಮಾನ ಸಹಕಾರದಲ್ಲಿ ಹೆಚ್ಚುತ್ತಿರುವ ವಿಭಜನೆಯನ್ನು ತೋರಿಸಿವೆ ಎಂದು ಸಿಇಎಸ್ ಅಭಿಪ್ರಾಯಪಟ್ಟಿದೆ. ಪ್ಯಾರಿಸ್ ಹವಾಮಾನ ಒಪ್ಪಂದದ ಅನುಷ್ಠಾನದ ಮುಂದಿನ ಹಂತಕ್ಕೆ ಸಾಗಲು ಹೆಚ್ಚಿನ ಒಗ್ಗಟ್ಟು, ಸಹಕಾರ, ಸಮನ್ವಯ ಮತ್ತು ಪರಸ್ಪರ ಹೊಂದಾಣಿಕೆ ಅಗತ್ಯವಿದೆ ಎಂದು ಅವಂತಿಕಾ ಗೋಸ್ವಾಮಿ ಹೇಳಿದ್ದಾರೆ.

ಇದನ್ನೂ ನೋಡಿ : ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳಿಗೆ ಜಾಮೀನು, ನ್ಯಾಯದ ಮೇಲೆಯೇ ಮತ್ತೆ ಪ್ರಶ್ನೆ! Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *