ನವದೆಹಲಿ: ಸುಕೇಶ್ ಚಂದ್ರಶೇಖರ್ ಎಂಬಾತ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿದ್ದು, ಜೈಲಿನಲ್ಲಿಯೂ ತನ್ನ ಅವ್ಯವಹಾರಗಳನ್ನು ಸಹಕರಿಸಲಿಕ್ಕಾಗಿ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಲಂಚ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗ ರೋಹಿಣಿ ಜೈಲಿನ 81 ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಅಧಿಕಾರಿಗಳು ಸುಕೇಶ್ ಚಂದ್ರಶೇಖರ್ ಅವರಿಂದ ತಿಂಗಳಿಗೆ ಸುಮಾರು 1.5 ಕೋಟಿ ರೂಪಾಯಿ ಲಂಚ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಮೊಬೈಲ್ ಫೋನ್ ಬಳಕೆ ಸೇರಿದಂತೆ ಪ್ರತ್ಯೇಕ ಬ್ಯಾರಕ್ ಸೆಲ್ ಹಾಗೂ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸುಕೇಶ್ ಚಂದ್ರಶೇಖರ್ ಅಧಿಕಾರಿಗಳಿಗೆ ಇಷ್ಟು ಮೊತ್ತದ ಹಣ ನೀಡುತ್ತಿದ್ದನು ಎಂದು ವರದಿಯಾಗಿದೆ.
ಫೋರ್ಟಿಸ್ ಹೆಲ್ತ್‌ಕೇರ್ ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಕೆಲವು ಶ್ರೀಮಂತರನ್ನು ವಂಚಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಅವರನ್ನು ರೋಹಿಣಿಯ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಈ ವೇಳೆ ಆತನಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿದ್ದ 7 ಮಂದಿ ಜೈಲು ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
ಸುಕೇಶ್ ಚಂದ್ರಶೇಖರ್ ಈ ಹಿಂದೆ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡು 200 ಕೋಟಿ ವಂಚನೆ ಮಾಡಿರುವ ಪ್ರಕರಣವೂ ಬಹಿರಂಗಗೊಂಡಿದ್ದವು. ಸುಕೇಶ್ ಸ್ವತಃ ತಾನು ಗೃಹ ಸಚಿವಾಲಯದ ಅಧಿಕಾರಿ ಎನ್ನುವ ಮೂಲಕ ಜೈಲಿನಿಂದಲೇ ವಂಚಿಸಿರುವುದು ಕಂಡು ಬಂದಿದೆ. ಧ್ವನಿ ಬದಲಿಸುವ ಮೂಲಕ ಜನರನ್ನು ಬಲೆಗೆ ಕೆಡವಿದ್ದ. ಸುಕೇಶ್ ಜೈಲು ಅಧಿಕಾರಿಗಳಿಗೆ ಲಕ್ಷಕ್ಕೂ ಹೆಚ್ಚಿನ ಮೊತ್ತ ನೀಡುವ ಮೂಲಕ ಮೊಬೈಲ್ ಬಳಸಿದ್ದ ಎನ್ನಲಾಗಿದೆ. ತನಿಖೆಯ ನಂತರ ಹಲವಾರು ಜೈಲು ಅಧಿಕಾರಿಗಳನ್ನು ಬಂಧಿಸಲಾಗಿತ್ತು.
ಇದಲ್ಲದೇ, ಸುಕೇಶ್ ಚಂದ್ರಶೇಖರ್ ಜೈಲಿನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದನು. ಜೈಲಿನ ಹೊರಗೆ ಸುಕೇಶ್ ಸಂದೇಶ ಕಳುಹಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ತಿಹಾರ್ ಜೈಲಿನ ನರ್ಸಿಂಗ್ ಸಿಬ್ಬಂದಿಗೆ ಪತ್ರ ಕಳುಹಿಸಿ ಹೊರಗೆ ಕಳುಹಿಸುತ್ತಿದ್ದರು. ಈ ಪ್ರಕರಣದಲ್ಲಿ ನರ್ಸಿಂಗ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೈಲು ಆಡಳಿತ ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ.
ಸುಕೇಶ್ ಚಂದ್ರಶೇಖರ್ ಬಹುಕೋಟಿ ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಹಲವರಿಗೆ ವಂಚಿಸಿದ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿದ್ದಾನೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ, ದೊಡ್ಡ ಸುದ್ದಿಯಾಗಿತ್ತು.