ಇಂದಿನ ಭರತವರ್ಷದ (ಭಾರತದ) ಪರಿಸ್ಥಿತಿ ಚಿಂತಾಜನಕವಾಗಿದೆ. ಒಂದು ಧರ್ಮದ ಅನುಯಾಯಿಗಳು ಮತ್ತೊಂದು ಧರ್ಮದವರನ್ನು ದುಶ್ಮನಿಗಳಂತೆ ಭಾವಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತಮ್ಮದಲ್ಲದ ಧರ್ಮಕ್ಕೆ ಸೇರಿದವನು ಎಂಬ ಏಕೈಕ ಕಾರಣ ಆತನನ್ನು ದ್ವೇಷಿಸಲು ಮತ್ತೊಂದು ಧರ್ಮೀಯರಿಗೆ ಸರಕಾಗಿದೆ. ಇದನ್ನು ನಂಬಲು ನಿಮಗೆ ಕಷ್ಟವಾದರೆ, ಇತ್ತೀಚೆಗೆ ಲಾಹೋರಿನಲ್ಲಿ ನಡೆದ ದಂಗೆಗಳನ್ನು ನೋಡಬಹುದು. ಅಮಾಯಕ ಸಿಖ್ ಮತ್ತು ಹಿಂದೂಗಳನ್ನು ಮುಸಲ್ಮಾನರು ಹೇಗೆಲ್ಲಾ ಕೊಂದುಹಾಕಿದರು, ಅದೇರೀತಿ ಅವಕಾಶ ಸಿಕ್ಕಾಕ್ಷಣ ಸಿಖ್ಖರು ಕೂಡಾ ತಮ್ಮ ಕ್ರೌರ್ಯ ತೋರಿದರು. ಯಾರೋ ವ್ಯಕ್ತಿ ತಪ್ಪು ಮಾಡಿದನೆಂಬ ಕಾರಣಕ್ಕೆ ನಡೆಸಿದ ಕೊಲೆಗಳಲ್ಲ ಅವು, ಆ ವ್ಯಕ್ತಿ ಹಿಂದೂವೊ ಅಥವಾ ಸಿಖ್ಖನೋ ಅಥವಾ ಮುಸಲ್ಮಾನನೋ ಆಗಿದ್ದಾನೆಂಬ ಕಾರಣಕ್ಕೆ ನಡೆಸಿದ ಕೊಲೆಗಳು. ಒಬ್ಬ ಮನುಷ್ಯ ಹಿಂದೂ ಅಥವಾ ಸಿಖ್ ಧರ್ಮಕ್ಕೆ ಸೇರಿದವನೆಂಬ ಸಂಗತಿ ಸಾಕಾಯ್ತು ಮುಸಲ್ಮಾನರಿಗೆ ಆತನನ್ನು ಕೊಲ್ಲಲು; ಅದೇರೀತಿ ಆತ ಮುಸಲ್ಮಾನ ಎಂಬ ಒಂದೇ ಕಾರಣಕ್ಕೆ ಹಿಂದೂ ಅಥವಾ ಸಿಖ್ಖರು ಆತನನ್ನು ಕೊಂದುಹಾಕಿದರು. ಇದೇ ಪರಿಸ್ಥಿತಿ ಮುಂದುವರೆದರೆ, ಆ ಭಗವಂತನೇ ಹಿಂದೂಸ್ಥಾನವನ್ನು ಕಾಪಾಡಬೇಕು!
-ಭಗತ್ ಸಿಂಗ್
-ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ
ಇಂಥಾ ಪರಿಸ್ಥಿತಿಯಲ್ಲಿ ಹಿಂದೂಸ್ಥಾನದ ಭವಿಷ್ಯ ಮಸುಕಾಗಿ ಗೋಚರಿಸುತ್ತಿದೆ. ಧರ್ಮಗಳು ನಮ್ಮ ದೇಶವನ್ನು ನಾಶ ಮಾಡುತ್ತಿವೆ. ಇನ್ನೂ ಎಷ್ಟು ಕಾಲ ಈ ಕೋಮುವಾದಿ ದಂಗೆಯ ಮಹಾಮಾರಿಗಳು ನಮ್ಮ ದೇಶವನ್ನು ಪೀಡಿಸುತ್ತವೆಂಬುದು ಯಾರಿಗೂ ತಿಳಿಯದು. ಇವುಗಳಿಂದಾಗಿ ಇಡೀ ಪ್ರಪಂಚ ನಮ್ಮತ್ತ ಅನುಕಂಪದ ನೋಟ ಬೀರುತ್ತಿದೆ. ಧರ್ಮದ ಕುರುಡುಭಕ್ತಿಯ ಅಲೆಯಲ್ಲಿ ಎಲ್ಲರೂ ತೇಲುತ್ತಿದ್ದಾರೆ. ಇವುಗಳ ನಡುವೆ ತಮ್ಮ ಮನಸ್ಸನ್ನು ಸಮಚಿತ್ತದಿಂದ ಕಾಯ್ದುಕೊಂಡ ಹಿಂದೂ, ಮುಸ್ಲಿಂ, ಸಿಖ್ ವ್ಯಕ್ತಿಗಳ ಸಂಖ್ಯೆ ತುಂಬಾ ವಿರಳ; ಇನ್ನುಳಿದವರೆಲ್ಲ ತಮ್ಮ ಕೈಗೆ ಬಡಿಗೆ, ದೊಣ್ಣೆ, ತಲವಾರು, ಕತ್ತಿಗಳನ್ನೆತ್ತಿಕೊಂಡು ಒಬ್ಬರನ್ನೊಬ್ಬರು ಕೊಂದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ದಂಗೆಗಳಲ್ಲಿ ಸಾವಿನಿಂದ ಬದುಕುಳಿದವರು ಕೂಡಾ ಒಂದೋ ಗೆಲ್ಲಿಗೇರುತ್ತಿದ್ದಾರೆ ಅಥವಾ ಜೈಲು ಪಾಲಾಗುತ್ತಿದ್ದಾರೆ. ಇಷ್ಟೆಲ್ಲಾ ರಕ್ತಪಾತದಿಂದಾಗಿ ಈ ‘ಧರ್ಮಗೇಡಿಗಳು ಆಂಗ್ಲ ಸರ್ಕಾರದ ತೊತ್ತುಗಳಾಗಬೇಕಾಗುತ್ತದೆ; ಆಗಷ್ಟೇ ಅವರಿಗೆ ಬುದ್ದಿ ಬರೋದು ಅನ್ನಿಸುತ್ತೆ.
ನಮಗೆಲ್ಲ ಸ್ಪಷ್ಟವಾಗಿ ಗೋಚರಿಸುತ್ತಿರುವಂತೆ, ಕೋಮುವಾದಿ ನಾಯಕರು ಮತ್ತು ಮಾಧ್ಯಮಗಳ ಕೈವಾಡ ಈ ದಂಗೆಗಳ ಹಿಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ನಾಯಕರುಗಳು ಎಷ್ಟು ಲಜ್ಜೆಗೇಡಿಗಳಂತೆ ವರ್ತಿಸುತ್ತಿದ್ದಾರೆಂದರೆ, ಅದರ ಬಗ್ಗೆ ಹೇಳದಿರುವುದೇ ಒಳಿತು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಸವಾಲು ಕೈಗೆತ್ತಿಕೊಂಡ ಮತ್ತು ’ಒಗ್ಗಟ್ಟಿನ ರಾಷ್ಟ್ರೀಯತೆ’, ’ಸ್ವಯಂ ಆಳ್ವಿಕೆ’ಯಂತಹ ಘೋಷಣೆಗಳನ್ನು ದಣಿವಿರದೆ ಕೂಗುವಂತಹ ನಾಯಕರೇ ಧರ್ಮದ ಈ ಕುರುಡು ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದಾರೆ. ಈ ಅಲೆಯಿಂದ ಬಚಾವಾಗುತ್ತಿರುವವರ ಸಂಖ್ಯೆ ತುಂಬಾ ವಿರಳ. ಕೋಮುದಂಗೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಇಂತಹ ನೂರಾರು ನಾಯಕರು ಗೋಚರಿಸುತ್ತಾರೆ. ಜನರ ಒಳಿತಿಗಾಗಿ ಹೃದಯಾಂತರಾಳದಿಂದ ತವಕಿಸುತ್ತಿರುವ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಈ ಕೋಮುವಾದ ಎನ್ನುವುದು ಎಷ್ಟು ಪ್ರಳಯಸದೃಶವಾಗಿ ಅಪ್ಪಳಿಸುತ್ತಿದೆಯೆಂದರೆ ಅಂತಹ ಪ್ರಾಮಾಣಿಕ ನಾಯಕರಿಂದ ಪಾಪಾ ಪ್ರತಿರೋಧಿಸಲು ಸಾಧ್ಯವಾಗುತ್ತಿಲ್ಲ. ಭಾರತದ ನಾಯಕತ್ವ ದಿವಾಳಿಯಾಗಿದೆಯೇನೊ ಎಂಬ ಆತಂಕ ಆವರಿಸುತ್ತಿದೆ.
ಇದನ್ನೂ ಓದಿ: ಪೀಠೊಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ: ಕಾರ್ಮಿಕರು ಪಾರು
ಈ ಕೋಮುದಂಗೆಗಳನ್ನು ಪ್ರಚೋದಿಸುತ್ತಿರುವ ಮತ್ತೊಂದು ವರ್ಗವೆಂದರೆ ನಮ್ಮ ಪತ್ರಿಕಾ ಮಾಧ್ಯಮಗಳು.
ಒಂದು ಕಾಲಕ್ಕೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಇಂದು ಹೊಲಸೆದ್ದು ಹೋಗಿದೆ. ಈ ಪತ್ರಕರ್ತ ಜನ, ಪ್ರಚೋದನಕಾರಿ ತಲೆಬರಹಗಳ ಮೂಲಕ ಒಬ್ಬರನ್ನು ಮತ್ತೊಬ್ಬರು ದ್ವೇಷಿಸುವಂತೆ ಮಾಡುತ್ತಿದ್ದಾರೆ; ಅದರಿಂದ ದಂಗೆಗಳಾಗುತ್ತಿವೆ. ಎಲ್ಲೋ ಒಂದೆರಡು ಕಡೆ ಮಾತ್ರವಲ್ಲ, ಬಹುಪಾಲು ಎಲ್ಲಾ ಕಡೆ ಸ್ಥಳೀಯ ಪತ್ರಿಕೆಗಳ ಪ್ರಚೋದನಕಾರಿ ವರದಿಗಳ ನಂತರವೇ ದಂಗೆಗಳು ಭುಗಿಲೆದ್ದಿರೋದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಕೆಲವೇ ಕೆಲವು ಪತ್ರಕರ್ತರು ಮಾತ್ರ ಇಂತಹ ಸಂದರ್ಭಗಳಲ್ಲಿ ತಮ್ಮ ವೃತ್ತಿ ಪಾವಿತ್ರ್ಯತೆಗೆ ಬದ್ಧರಾಗಿ ಸಮಚಿತ್ತದಿಂದ ವರ್ತಿಸಿದ್ದಾರಷ್ಟೆ.
ಜನರಲ್ಲಿ ಅರಿವನ್ನು ಮೂಡಿಸಿ, ಸಂಕುಚಿತ ಭಾವನೆಗಳನ್ನು ತೊಡೆದುಹಾಕಿ, ಕೋಮುವಾದಿ ಮನಸ್ಥಿತಿಯನ್ನು ದೂರ ಮಾಡುವ ಮೂಲಕ ಪರಸ್ಪರ ಸೌಹಾರ್ದತೆಯನ್ನು ಬೆಸೆಯುವುದು ಹಾಗೂ ಒಗ್ಗಟ್ಟಿನ ರಾಷ್ಟ್ರೀಯತೆಯನ್ನು ಸೃಷ್ಟಿಸುವುದು ಪತ್ರಿಕೋದ್ಯಮದ ನಿಜವಾದ ವೃತ್ತಿಧರ್ಮ. ಆದರೆ ಇಂದು ಅವು ತಮ್ಮ ವೃತ್ತಿಧರ್ಮ ಮರೆತು ಅಜ್ಞಾನವನ್ನು ಪ್ರಚಾರ ಮಾಡುತ್ತಿವೆ, ಜನರಿಗೆ ಸಣ್ಣತನಗಳನ್ನು ಹೇಳಿಕೊಡುತ್ತಿವೆ, ಪೂರ್ವಗ್ರಹಗಳನ್ನು ಬೆಳೆಸಿ, ಒಗ್ಗಟ್ಟಿನ ರಾಷ್ಟ್ರೀಯತೆಯನ್ನು ನಾಶ ಮಾಡುತ್ತಿವೆ. ನಮ್ಮಂತಹ ನಿಜವಾದ ದೇಶಭಕ್ತರ ಕಣ್ಣಿನಲ್ಲಿ ರಕ್ತಕಣ್ಣೀರು ಹರಿಯುತ್ತಿರುವುದಕ್ಕೆ ಇದೇ ಕಾರಣ. ಇದನ್ನೆಲ್ಲ ನೋಡಿದಾಗ, “ನಮ್ಮ ಹಿಂದೂಸ್ಥಾನ ಎತ್ತ ಸಾಗುತ್ತಿದೆ?” ಎನ್ನುವ ಪ್ರಶ್ನೆ ನಮ್ಮ ಎದೆ ಹಿಂಡುತ್ತಿದೆ.
ಜನ ಒಬ್ಬರಿಗೊಬ್ಬರು ಕಚ್ಚಾಡುವುದು ನಿಲ್ಲಿಸಬೇಕೆಂದರೆ ಅವರಲ್ಲಿ ವರ್ಗ-ಪ್ರಜ್ಞೆ ತುಂಬಾ ಮುಖ್ಯ. ಬಂಡವಾಳಿಗರು ತಮ್ಮ ನಿಜವಾದ ಶತ್ರು ಎಂಬುದನ್ನು ಬಡ ಕಾರ್ಮಿಕರು ಮತ್ತು ರೈತರು ಅರ್ಥ ಮಾಡಿಕೊಳ್ಳಬೇಕು ಮತ್ತು ಅವರ ಬಲೆಗಳಲ್ಲಿ ಸಿಲುಕದಂತಹ ಎಚ್ಚರ ನಮ್ಮವರಲ್ಲಿ ಮೂಡಬೇಕಿದೆ. ಜಾತಿ, ಜನಾಂಗ, ಧರ್ಮ ಅಥವಾ ದೇಶ ಯಾವುದೇ ಇರಲಿ ಈ ಪ್ರಪಂಚದ ಎಲ್ಲಾ ಬಡವರಿಗೂ ಸಮಾನ ಹಕ್ಕುಗಳಿವೆ. ಧರ್ಮ, ವರ್ಣ, ಜನಾಂಗ ಮತ್ತು ರಾಷ್ಟ್ರೀಯತೆಯ ಆಧಾರದಲ್ಲಿನ ಎಲ್ಲಾ ತರಹದ ತಾರತಮ್ಯಗಳನ್ನು ತೊಡೆದುಹಾಕುವುದು ಮತ್ತು ಸರ್ಕಾರದ ಆಡಳಿತವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು ನಿಮ್ಮೆಲ್ಲರ ಹಿತದೃಷ್ಟಿಯಿಂದ ಅತಿಮುಖ್ಯ ಎಂಬುದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ಇಂತಹ ಪ್ರಯತ್ನಗಳಿಂದ ನಿಮಗೆ ಯಾವ ಹಾನಿಯೂ ಇಲ್ಲ, ಬದಲಿಗೆ ಮುಂದೊಂದು ದಿನ ಸಂಕಲೆಯನ್ನು ತುಂಡರಿಸಿ ನಿಮಗೆ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಲ್ಲವು.
ಇದನ್ನೂ ನೋಡಿ: ನೇಮಕಾತಿ | ವಯೋಮಿತಿ ಸಡಿಲಿಕೆಗೆ ಉದ್ಯೋಗಾಕಾಂಕ್ಷಿಗಳ ಆಗ್ರಹ Janashakthi Media
ರಷ್ಯಾ ಚರಿತ್ರೆಯ ಬಗ್ಗೆ ತಿಳಿವಳಿಕೆ ಇರುವವರಿಗೆ ಝಾರ್ ಆಳ್ವಿಕೆಯ ಕಾಲದಲ್ಲಿ ಇಂತದ್ದೇ ಪರಿಸ್ಥಿತಿಗಳಿದ್ದವು ಎಂಬುದರ ಪರಿಚಯವಿರುತ್ತದೆ. ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದ ಹಲವು ಗುಂಪುಗಳಿದ್ದವು. ಆದರೆ ಕಾರ್ಮಿಕರ ಕ್ರಾಂತಿ ಶುರುವಾದ ದಿನದಿಂದಲೇ ಎಲ್ಲವೂ ಬದಲಾಯಿತು. ಅಲ್ಲೀಗ ಯಾವುದೇ ದಂಗೆಗಳಿಲ್ಲ. ಅಲ್ಲೀಗ ಎಲ್ಲರನ್ನೂ ಮನುಷ್ಯರೆಂದು ಪರಿಗಣಿಸುತ್ತಿದ್ದಾರೆಯೇ ವಿನಾಃ ’ಧರ್ಮದ ಹಿನ್ನೆಲೆಯಿಂದ’ ಯಾರನ್ನೂ ಗುರುತಿಸಿ, ಪ್ರತ್ಯೇಕಿಸಿಕೊಳ್ಳುತ್ತಿಲ್ಲ. ಝಾರ್ ಆಳ್ವಿಕೆಯ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು. ಅದು ದಂಗೆಗೂ ದಾರಿಮಾಡಿಕೊಟ್ಟಿತು. ಆದರೆ ಈಗ ರಷ್ಯಾದ ಆರ್ಥಿಕ ಸ್ಥಿತಿ ಸುಧಾರಿಸಿದೆ, ಅಲ್ಲೀಗ ವರ್ಗ-ಪ್ರಜ್ಞೆ ಜಾಗೃತವಾಗಿದೆ, ಯಾವುದೇ ದಂಗೆಗಳ ಸುದ್ದಿಯಿಲ್ಲ.
ಇಂತಹ ಕೋಮುದಂಗೆಗಳಿಂದ ಎದೆ ಇರಿಯುವಂತಹ ಸುದ್ದಿಗಳು ಬರುತ್ತಿರುವ ಸಮಯದಲ್ಲೇ, ಅತ್ತ ಕೊಲ್ಕೊತ್ತಾದ ದಂಗೆಯಿಂದ ಸಮಾಧಾನಕರವೆನ್ನಬಹುದಾದ ಸುದ್ದಿಗಳೂ ಬರುತ್ತಿವೆ. ಕಾರ್ಮಿಕ ಸಂಘಟನೆಯ ಸಿಬ್ಬಂದಿಗಳು ದಂಗೆಗಳಿಂದ ದೂರ ಉಳಿದಿದ್ದಾರೆ ಮತ್ತು ಒಬ್ಬರನ್ನೊಬ್ಬರು ಹೊಡೆದುಕೊಳ್ಳುವ ಕೃತ್ಯಕ್ಕು ಮುಂದಾಗಿಲ್ಲ; ಗಿರಣಿ ಕಾರ್ಖಾನೆಯ ಹಿಂದೂ ಮುಸ್ಲಿಂ ಕಾರ್ಮಿಕರು ಸಹಬಾಳ್ವೆಯ ಕೈಜೋಡಿಸಿದ್ದಾರೆ ಮತ್ತು ದಂಗೆ ನಿಲ್ಲಿಸುವ ಪ್ರಯತ್ನಗಳಿಗೂ ಮುಂದಾಗಿದ್ದಾರೆ. ಇದು ಅವರಿಗೆ ಸಾಧ್ಯವಾದದ್ದು, ಅವರೊಳಗಿನ ವರ್ಗ-ಪ್ರಜ್ಞೆಯಿಂದಾಗಿ. ವರ್ಗಪ್ರಜ್ಞೆಯಿಂದ ತಮಗೆಲ್ಲ ಎಷ್ಟು ಅನುಕೂಲವಿದೆ ಎಂಬ ಸಂಪೂರ್ಣ ಅರಿವು ಅವರಿಗಿದೆ. ವರ್ಗ-ಪ್ರಜ್ಞೆಯ ಈ ಸುಂದರ ಹಾದಿ ಮಾತ್ರವೇ ಕೋಮುದಂಗೆಗಳನ್ನು ನಿಲ್ಲಿಸಲ್ಲದು.
(ಸ್ವಾತಂತ್ರ್ಯದ ಸೇನಾನಿ ಶಹೀದ್ ಭಗತ್‌ಸಿಂಗ್ ಅವರ ಜನ್ಮದಿನದ (ಸೆ.27) ನೆನಪಿನಲ್ಲಿ 1927ರಲ್ಲಿ ’ಕಿರ್ತಿ ಪಂಜಾಬಿ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನದ ಅನುವಾದ ಇಲ್ಲಿದೆ. ಕೋಮುವಾದಿ ರಾಜಕಾರಣ ಮತ್ತು ಇದರಲ್ಲಿ ಮೀಡಿಯಾಗಳ ಅಧಃಪತನದ ಪಾಲುದಾರಿಕೆಯ ಕುರಿತು ಸರಿಸುಮಾರು 100 ವರ್ಷಗಳ ಹಿಂದೆ ಅವರು ಬರೆದ ಈ ಲೇಖನ ಇವತ್ತಿಗಾಗಿಯೇ ಬರೆದಂತಿದೆ. ಇದು ದೀರ್ಘ ಲೇಖನದ ಆಯ್ದ ಭಾಗ ಮಾತ್ರ.)
