ಕರಾವಳಿ ಲೆಕ್ಕಾಚಾರ ಮತ್ತದರ ಎಕ್ಸ್ಟ್ರಾಪೊಲೇಷನ್!

ರಾಜಾರಾಂ ತಲ್ಲೂರು

ಈ ಬಾರಿಯ ಕರಾವಳಿ ಚುನಾವಣಾ ಲೆಕ್ಕಾಚಾರಗಳು ಬಹಳ ಕುತೂಹಲಕರವಾಗಿರುವಂತಿವೆ. ಕಳೆದ 20-25 ವರ್ಷಗಳಿಂದ ಕೇಂದ್ರದಲ್ಲಿ ಆಳುವ ಬಿಜೆಪಿ ಪಕ್ಷದ ಭದ್ರ ಕೋಟೆ ಆಗಿರುವ ಕರಾವಳಿಯಲ್ಲಿ ತಮ್ಮ ಪಕ್ಷದಿಂದ ಯಾರೇ ಉಮೇದ್ವಾರರಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂಬಂತಹ ವಿಶ್ವಾಸ ಸಹಜವಾಗಿಯೇ ಆ ಪಕ್ಷದಲ್ಲಿತ್ತು. ಅವರದನ್ನು ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಿ ತೋರಿಸಿದ್ದಾರೆ ಕೂಡ.

2019ರಲ್ಲಿ ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 3.49 ಲಕ್ಷ, ಮಂಗಳೂರಿನಲ್ಲಿ 2.74 ಲಕ್ಷ. ಅಂದರೆ ಸುಮಾರು ಆರು ಲಕ್ಷ ಮತಗಳ ಅಂತರ! ಯಾವುದೇ ರಾಜಕೀಯ ಪಕ್ಷ ಅಸೂಯೆಪಡಬಹುದಾದ ಅಂತರ ಇದು. ಯಾವುದೇ ಪ್ರತಿಪಕ್ಷ ಇಲ್ಲಿ ಗೆಲ್ಲಬೇಕಾದರೆ, ಇವೆರಡು ಕ್ಷೇತ್ರಗಳಲ್ಲಿ ಕನಿಷ್ಠ ಮೂರು ಲಕ್ಷ ಮತಗಳ ಅಂತರವನ್ನು ದಾಟಬೇಕು. ಆ ಮೇಲೆ ಗೆಲುವಿನ ಮತಗಳು. ಸದ್ಯದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಕ್ಟಿಕಲಿ ಇದು ಅಸಾಧ್ಯ ಅಂತರ.

ಆದರೆ, ಈ ಬಾರಿ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಎರಡೂ ಕ್ಷೇತ್ರಗಳಲ್ಲಿ ಬಹುತೇಕ ರಾಜಕೀಯ ಪಂಡಿತರು ಗೆಲುವಿನ 50:50 ಸಾಧ್ಯತೆಗಳನ್ನು ತೋರಿಸುತ್ತಿದ್ದಾರೆ. ಆಳುವ ಪಕ್ಷದ ಪರ ಇರುವ ಮಾಧ್ಯಮಗಳಲ್ಲೇ ಈ ಬಗ್ಗೆ ಸುದ್ದಿಗಳು ಕಾಣಿಸಿಕೊಳ್ಳತೊಡಗಿವೆ, ಗ್ರೌಂಡ್‌ನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆಯೂ ಇದೇ ಧ್ವನಿ ಕೇಳಿಸುತ್ತಿದೆ. ಅರ್ಥಾತ್, ಯಾರೂ ಗೆಲ್ಲಬಲ್ಲ ಸ್ಥಿತಿ ಇದೆ ಅಂದರೆ, ಈ ಬಾರಿ ಪ್ರಮುಖ ವಿರೋಧ ಪಕ್ಷದ ಉಮೇದ್ವಾರರು ಬಿಜೆಪಿ ಸ್ಥಾಪಿಸಿದ್ದ, ದಾಟಲಸಾಧ್ಯವಾದ ಮೂರು ಲಕ್ಷ ಮತಗಳ ಅಂತರವನ್ನು ಬಹುತೇಕ ದಾಟುವ ಸಮೀಪಕ್ಕೆ ತಲುಪಿದ್ದಾರೆ! ಅದು ರಾಜಕೀಯ ಪಕ್ಷಗಳ, ಮಾಧ್ಯಮಗಳ ಗಮನಕ್ಕೂ ಬಂದಿದೆ.

ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಪ್ರಜ್ವಲ್ ಪ್ರಕರಣದ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ

ಉಡುಪಿ-ಚಿಕ್ಕಮಗಳೂರು; ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಈ ಬಾರಿ ಸಣ್ಣ ಅಂತರದಿಂದ ಯಾವುದೇ ಪಕ್ಷ ಗೆಲ್ಲಬಹುದು ಎಂಬುದು ಬಹುತೇಕ ಎಲ್ಲರ ಅನುಮಾನ. ಇರಲಿ. ಅದು ಜೂನ್ 04ಕ್ಕೆ ಗೊತ್ತಾಗಲಿದೆ.

ನನ್ನ ಆಸಕ್ತಿ ಅದಲ್ಲ. ಸಂಘ ಪರಿವಾರದ ಪ್ರಯೋಗಶಾಲೆ ಎನ್ನಿಸಿಕೊಂಡಿರುವ ಈ ಕ್ಷೇತ್ರಗಳಲ್ಲೇ ಪ್ರತಿಪಕ್ಷಗಳು ಈ ಪ್ರಮಾಣದಲ್ಲಿ ಮತಗಳಿಸಿಕೊಳ್ಳುವುದು ಸಾಧ್ಯ ಆಗಿರುವುದು ಹೌದು ಎಂದಾದರೆ, ಈ ಬಾರಿ ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶ ದೇಶದ ರಾಜಕೀಯಕ್ಕೆ ಮಹತ್ವದ ಏರುಪೇರು ತರುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬುದು ನನ್ನ ದೊರಗು ಊಹೆ! ಇದೇ ಸನ್ನಿವೇಶವನ್ನು ದೇಶಕ್ಕೆ ಎಕ್ಸ್ಟ್ರಾಪೊಲೇಟ್ ಮಾಡಿದರೆ, ಅದೂ ಕೂಡ ಹಾಲೀ ಆಳುವ ಪಕ್ಷಕ್ಕೆ ಒಳ್ಳೆಯ ಸುದ್ದಿ ಅನ್ನಿಸುತ್ತಿಲ್ಲ. ಕಳೆದ ಎರಡು ಬಾರಿಯ “ವೇವ್” ಈ ಬಾರಿ ಕಾಣಿಸುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಿದ್ದಾರೆ.

ಹಾಗಾಗಿ ಜೂನ್ 04 ಯಾರಿಗೆ ದಿಲ್ಲಿಯ ಬಾಗಿಲು ತೆರೆದೀತು?

ಇದನ್ನೂ ನೋಡಿ: ಚಿತ್ರದುರ್ಗ : ಒಳ ಏಟಿನ ಪೆಟ್ಟು ಬಿಜೆಪಿಗಾ? ಕಾಂಗ್ರೆಸ್‌ಗೆ Janashakthi Media

Donate Janashakthi Media

Leave a Reply

Your email address will not be published. Required fields are marked *