ಬೆಂಗಳೂರು: ಪ್ರತಿಯೊಂದು ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಹುನಿರೀಕ್ಷಿತ ಗೃಹ ಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದೇ ಆಗಸ್ಟ್ 5 ರಂದು ಕಲಬುರ್ಗಿಯ ಎನ್‌ವಿ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಇದನ್ನೂ ಓದಿ:ಗೃಹ ಜ್ಯೋತಿ ಯೋಜನೆ : ನೋಂದಣಿಗೆ 20 ರೂ.ಗಿಂತ ಹೆಚ್ಚುವರಿ ಹಣ ಪಡೆದರೆ ಕಠಿಣ ಕ್ರಮ
ಕಾರ್ಯಕ್ರಮದ ಬಗ್ಗೆ ವಿವರ ನೀಡಲು ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೊಷ್ಠಿ ನಡೆಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಕರ್ನಾಟಕ ಸರ್ಕಾರದ 5 ಪ್ರಮುಖ ಭರವಸೆಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿಯವರು ಕಲಬುರ್ಗಿಯಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಮಧ್ಯಮ ವರ್ಗದ ಜನರ ಜೀವನ ಸುಧಾರಣೆ ಮಾಡುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದ್ದು,200ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಯೋಜನೆ ಕೇವಲ ವಿದ್ಯುತ್ ಶುಲ್ಕ ಕಡಿಮೆ ಮಾಡುತ್ತಿಲ್ಲ, ಬದಲಾಗಿ ಕುಟುಂಬದ ಆರ್ಥಿಕ ಪ್ರಗತಿಯ ಮೂಲಕ ಸಾಮಾಜಿಕ ಭದ್ರತೆ ನೀಡಲಿದ್ದು, ಗೃಹಜ್ಯೋತಿ ಯೋಜನೆಯ ಅನುಷ್ಠಾನದ ಮೊದಲ ತಿಂಗಳಿನಲ್ಲೇ ಸುಮಾರು 1.42 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಜುಲೈ-27 ರಂದು ಮೊದಲು ಅರ್ಜಿ ಸಲ್ಲಿಸಿದವರು ಮಾತ್ರ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‌ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟೆಂಬರ್‌ನಲ್ಲಿ ಬಿಲ್ಲಿಂಗ್‌ನಲ್ಲಿ ಪ್ರಯೋಜನೆ ಪಡೆಯುತ್ತಾರೆ ಎಂದರು.
200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಅರ್ಹತೆ ಮಿತಿಯಲ್ಲಿರುವ ಎಲ್ಲಾ ಫಲಾನುಭವಿಗಳಿಗೂ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಜುಲೈ-27 ರೊಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯುತ್ತಾರೆ. ತದ ನಂತರ ಯೋಜನೆಗೆ ಅರ್ಜಿ ಸಲ್ಲಿಸಿದವರು ಮುಂಬರುವ ತಿಂಗಳುಗಳಲ್ಲಿ ಯೋಜನೆಯ ಲಾಭ ಪಡೆಯಲಿದ್ದಾರೆ. ಗೃಹಜ್ಯೋತಿ ಯೋಜನೆಗೆ ನೋಂದಾಣಿ ಮಾಡಲು ಯಾವುದೇ ಕಡೆ ದಿನಾಂಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಸಮಯದಲ್ಲಿ ನೋಂದಾಯಿಸಿಕೊಂಡರೂ ಅದರ ನಂತರದ ತಿಂಗಳಿನಿಂದ ಪ್ರಯೋಜನ ಪಡೆಯಬಹುದು. 1.42 ಲಕ್ಷ ಮಂದಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ್ ಜ್ಯೋತಿಯಂತಹ ಹಾಲಿ ಯೋಜನೆಗಳ ಫಲಾನುಭವಿಗಳು ಎಂದು ಅವರು ಹೇಳಿದ್ದಾರೆ.