ಬೆಂಗಳೂರು: ಗುಣಮಟ್ಟದ ಕುರಿತು ದೂರುಗಳು ಅಧಿಕವಾಗಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿನ ಕಾಮಗಾರಿಗಳ ಮೂರನೇ ವ್ಯಕ್ತಿಯ ಪರಿಶೀಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ.
ಕುಡಿಯುವ ನೀರಿನ ಪರಿಸ್ಥಿತಿ ಮತ್ತು ಜೆಜೆಎಂ ಕುರಿತು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಸಚಿವ ಪ್ರಿಯಾಂಕ್ ಖರ್ಗೆ ಅವರು ಜೆಜೆಎಂ ಕಾಮಗಾರಿಗಳ ಮೂರನೇ ವ್ಯಕ್ತಿಯ ಪರಿಶೀಲನೆಗೆ ಆಗ್ರಹ ಮಾಡಿದ್ದು, ಅದನ್ನು ಸಿದ್ದರಾಮಯ್ಯ ಅನುಮೋದಿಸಿದ್ದಾರೆ.
ಪೈಪ್‌ಲೈನ್‌ಗಳ ಕಳಪೆ ಗುಣಮಟ್ಟದ ಮತ್ತು ನೀರು ಪೂರೈಕೆಗೆ ಸುಸ್ಥಿರ ನೀರಿನ ಮೂಲ ಕೊರತೆಯ ಬಗ್ಗೆ ಹಲವಾರು ಶಾಸಕರು ದೂರು ನೀಡಿದ್ದಾರೆ. 2019 ರಿಂದ ಕರ್ನಾಟಕವು 1.01 ಕೋಟಿ ಕುಟುಂಬಗಳನ್ನು (68% ವ್ಯಾಪ್ತಿ) ಒಳಗೊಳ್ಳುವ ಗುರಿಯ ಭಾಗವಾಗಿ ಒಟ್ಟು 10,380.78 ಕೋಟಿ ವೆಚ್ಚದಲ್ಲಿ 69.33 ಲಕ್ಷ ಟ್ಯಾಪ್ ವಾಟರ್ ಸಂಪರ್ಕಗಳನ್ನು ಒದಗಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ:ರಾಜ್ಯದ ಹಲವಡೆ ನೀರಿನ ಅಭಾವ : ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ
ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಎಂಟು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದಲ್ಲಿ ಜೂನ್ 10 ರಂದು ಮುಂಗಾರು ಪ್ರಾರಂಭವಾಯಿತು. ಜೂನ್ 1 ರಿಂದ 11 ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 67ರಷ್ಟು ಮಳೆಯ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ತಿಳಿಸಿದರು. ಆದರೆ ಕಳೆದ ಕೆಲ ದಿನಗಳಿಂದ ಮಳೆ ಕೊರತೆಯಿಂದ ಕೆಲ ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಸರ್ಕಾರದ ಗಮನಕ್ಕೆ ಬಂದಿದೆ. 15 ಜಿಲ್ಲೆಗಳ 322 ಗ್ರಾಮಗಳು ನೀರು ಪೂರೈಕೆಗೆ ಟ್ಯಾಂಕರ್ ಅವಲಂಬಿತವಾಗಿದ್ದು, 148 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ:ಕಲುಷಿತ ನೀರಿನ ದುರಂತ ಮರುಕಳಿಸಿದರೆ ಸಿಇಓ ಸಸ್ಪೆಂಡ್: ಮುಖ್ಯಮಂತ್ರಿ ಖಡಕ್ ಎಚ್ಚರಿಕೆ
ಎಲ್ಲ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಅಗತ್ಯವಿದ್ದರೆ ಅನುದಾನ ನೀಡಲಾಗುವುದು. ನೆಪ ಹೇಳಿ ಜವಾಬ್ದಾರಿಯಿಂದ ನುಣಿಚಿಕೊಳ್ಳಬೇಡಿ. ಮಳೆ ಬಂದು ಕುಡಿವ ನೀರಿನ ಸಮಸ್ಯೆ ಬಗೆಹರಿದರೆ ಒಳ್ಳೆಯದಾಗುತ್ತದೆ. ಇಲ್ಲವಾದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು. ನೀರು ಕಲುಷಿತಗೊಂಡು ಕೊಪ್ಪಳದಲ್ಲಿ ಇಬ್ಬರು ಹಾಗೂ ರಾಯಚೂರಿನಲ್ಲಿ ಒಬ್ಬರು ಮೃತಪಟ್ಟಿರುವ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಇಂತಹ ಘಟನೆಗಳು ಮರುಕಳಿಸಿದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ನೀರು ಕಲುಷಿತಗೊಂಡಿರುವ ಪ್ರಕರಣಗಳ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು. ಸ್ಥಳೀಯವಾಗಿ ತನಿಖೆ ನಡೆಯುತ್ತಿದೆ. ಬೆಂಗಳೂರಿನಿಂದ ತಂಡವನ್ನು ಕಳುಹಿಸಬೇಕು. ಎರಡೂ ವರದಿಗಳನ್ನು ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.