ಬೆಂಗಳೂರು: ಆಯ್ದ ಪತ್ರಕರ್ತರಿಗೆ ಎರಡೂವರೆ ಲಕ್ಷ ರೂಪಾಯಿ ದೀಪಾವಳಿ ಗಿಫ್ಟ್ ಕಳುಹಿಸಿರುವ ವದಂತಿ ಹಬ್ಬಿದೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಕಛೇರಿ ಭ್ರಷ್ಟಾಚಾರಕ್ಕೆ ಮುಂದಾಗಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ರಾಜ್ಯದ ಜನತೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಶಕ್ತಿ ಕೇಂದ್ರವಾಗಬೇಕಾದ ಮುಖ್ಯಮಂತ್ರಿಗಳ ಕಛೇರಿ ಭ್ರಷ್ಟಾಚಾರದ ಕೇಂದ್ರವಾಗಿರುವುದು ಆತಂಕಕಾರಿಯಾಗಿದೆ. ಲೋಕಾಯುಕ್ತ ಸಂಸ್ಥೆ ಇತ್ತ ಗಮನ ಹರಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ರಾಜ್ಯದ ಹಲವು ಪತ್ರಕರ್ತರಿಗೆ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬುದನ್ನು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜವಾಗಿ ಘಟಿಸಿದ್ದಲ್ಲಿ ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಡಿವೈಎಫ್ಐ ಭಾವಿಸಿದೆ.
ಈ ಬಗ್ಗೆ ತಕ್ಷಣ ಕುಲಂಕೂಷವಾಗಿ ತನಿಖೆ ನಡೆಸಬೇಕು ಮತ್ತು ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ ಆ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯದ ಆಡಳಿತ ಚುಕ್ಕಾಣಿಯ ಕೇಂದ್ರದ ಈ ನಡೆಯನ್ನು ರಾಜ್ಯದ ಜನತೆ ತೀವ್ರವಾಗಿ ಪ್ರತಿರೋಧಿಸಬೇಕೆಂದು ಕರೆ ನೀಡಿದ್ದಾರೆ.