ಜಾರ್ಖಂಡ್‌: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಹೇಮಂತ್‌ ಸೊರೆನ್​-ಬಿಜೆಪಿಗೆ ಮುಖಭಂಗ

ರಾಂಚಿ(ಜಾರ್ಖಂಡ್​): ಗಣಿಗಾರಿಕೆ ಗುತ್ತಿಗೆ ವಿವಾದದ ಆಗಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಇಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ‌ ವಿಶ್ವಾಸ ಮತಯಾಚಿಸಿದ್ದು, ಗೆಲುವು ಸಾಧಿಸಿದ್ದಾರೆ. ಅಧಿವೇಶನದ ಕಲಾಪಗಳ ಉದ್ದಕ್ಕೂ ಪ್ರತಿಭಟಿಸಿದ ಪ್ರತಿಪಕ್ಷ ಬಿಜೆಪಿ, ಮತದಾನಕ್ಕೂ ಮುನ್ನವೇ ವಿಧಾನಸಭೆಯಿಂದ ಹೊರನಡೆದಿದೆ.

ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಶಾಸಕರ ಕುದುರೆ ವ್ಯಾಪಾರ ಭೀತಿಯಿಂದ 5 ದಿನಗಳ ಹಿಂದೆ ಕಾಂಗ್ರೆಸ್‌ ಆಡಳಿತವಿರುವ ನೆರೆಯ ಛತ್ತೀಸ್‌ಗಢದ ರಾಯಪುರದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಜಾರ್ಖಂಡ್​ನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ವಿಶೇಷ ವಿಮಾನದ ಮೂಲಕ ಸೆಪ್ಟಂಬರ್‌ 04ರಂದು ರಾಜಧಾನಿ ರಾಂಚಿಗೆ ಆಗಮಿಸಿದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹೇಮಂತ್​ ಸೊರೆನ್ ತಮ್ಮ ಸರ್ಕಾರದ ಅಸ್ಥಿತ್ವವನ್ನು ಖಾತ್ರಿಪಡಿಸಲು ಇಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದರು.

ಸೊರೆನ್ ಪರವಾಗಿ 48 ಶಾಸಕರು ಮತ ಚಲಾವಣೆ ಮಾಡಿದ್ದಾರೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರ 49 ಶಾಸಕರನ್ನು ಹೊಂದಿದ್ದು, ಅತಿ ದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 18 ಮತ್ತು ರಾಷ್ಟ್ರೀಯ ಜನತಾ ದಳ ಒಬ್ಬರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ 26 ಶಾಸಕರನ್ನು ಹೊಂದಿದೆ.

ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೇಮಂತ್‌ ಸೊರೆನ್​, ದೇಶದಲ್ಲಿ ಬಟ್ಟೆ, ಪಡಿತರ, ದಿನಸಿ ಖರೀದಿಸುವವರ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಭಾರತೀಯ ಜನತಾ ಪಾರ್ಟಿ ಶಾಸಕರ ಖರೀದಿ ಮಾಡುತ್ತಿದ್ದಾರೆಂದು ಆರೋಪಿಸಿದರು. ಜಾರ್ಖಂಡ್​ ಸರ್ಕಾರ ಉರುಳಿಸುವ ಉದ್ದೇಶದಿಂದ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೇಮಂತ್‌ ಸೊರೆನ್ ಅವರ ಮೇಲಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯ ಮಾಡಿತ್ತು.

ಬಿಕ್ಕಟ್ಟಿನ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಪಕ್ಷವು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳ ಮಾದರಿಯನ್ನು ಅನುಸರಿಸುತ್ತಿರುವ ಚುನಾಯಿತ ಸರ್ಕಾರವನ್ನು ಉರುಳಿಸಲು ಆಡಳಿತಾರೂಢ ಸಮ್ಮಿಶ್ರ ಸರ್ಕಾದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *