ಬೆಂಗಳೂರು: ರಾಜ್ಯದಲ್ಲಿ ಇಳಿಕೆ ಕಂಡಿದ್ದ ಕೊರೊನಾ ಸೋಂಕು ಕಳೆದ ಒಂದು ವಾರದಿಂದ ಏರಿಕೆ ಕಂಡಿದೆ. ಅದರಲ್ಲೂ ಬೆಂಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಚಿಕ್ಕಮಗಳೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರಕರಣಗಳು ಏರಿಕೆ ಕಂಡಿರುವುದು ಸಾಕಷ್ಟು ಆತಂಕ ಮೂಡಿಸಿದೆ.
ಈ ಹಿನ್ನೆಯಲ್ಲಿ ಇಂದು ತುರ್ತಾಗಿ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಧಿಕಾರಿಗಳು, ಸಿಇಓಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಸಭೆಯ ನಂತರ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻʻಎಂಟು ಜಿಲ್ಲೆಗಳಲ್ಲಿ ಕೊವಿಡ್ ಸ್ಥಿತಿಗತಿ ಬಗ್ಗೆ ಸಭೆ ನಡೆಸಲಾಗಿದೆ. 2ನೇ ಅಲೆಯಲ್ಲೂ ಕೇರಳದಿಂದಲೇ ಸೋಂಕು ಹೆಚ್ಚಾಗಿತ್ತು. ಹೀಗಾಗಿ ಕೇರಳ ಗಡಿಯಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. ಎಂಟು ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಸೂಚಿಸಿದ್ದೇನೆ. ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಲಾಗಿದೆ ಎಂದು ಹೇಳಿಕೆ ನೀಡಿದರು.
ಇದನ್ನು ಓದಿ: ಕೋವಿಡ್ ಆತಂಕ: ಗಡಿ ಭಾಗದ ಜಿಲ್ಲಾಡಳಿತದೊಂದಿಗೆ ಸಿಎಂ ಬೊಮ್ಮಾಯಿ ಸಭೆ
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬಿಬಿಎಂಪಿ ಆಯುಕ್ತರು, ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಸೋಂಕು ಹೆಚ್ಚಾಗುತ್ತಿರುವ ಕಾರಣ ಕುರಿತು ಚರ್ಚಿಸಿ, ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.
ಇಂದಿನ ಸಭೆಯಲ್ಲಿ ರಾಜ್ಯದ ಎಂದು ಜಿಲ್ಲಾಡಳಿತಗಳ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಲ್ಲಾ ಪಂಚಾಯತ್ ಸಿಇಒಗಳು ಹಾಜರಾಗಿದ್ದರು. ಬಿಬಿಎಂಪಿ ಸೇರಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಉಡುಪಿ ಸೇರಿ ಎಂಟು ಜಿಲ್ಲಾಡಳಿತಗಳ ಜತೆ ಸಭೆ ನಡೆಸಲಾಗಿದೆ.
ಕೊರೊನಾ ಎರಡನೇ ಅಲೆಯ ಅಬ್ಬರದಿಂದ ರಾಜ್ಯದ ಜನತೆ ಈಗಾಗಲೇ ತತ್ತರಿಸಿದ್ದು ಇದೀಗ ಒಂದು ಹಂತಕ್ಕೆ ಸೋಂಕು ಸಹಜ ಸ್ಥಿತಿಗೆ ಬರುತ್ತಿದೆ. ಈ ನಡುವೆ ಮತ್ತೆ ಏಂಟು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವುದು ಸಾಕಷ್ಟು ಆತಂಕ ಮೂಡಿಸಿದೆ. ಈ ಹಿನ್ನಲೆ ಸೋಂಕು ಹೆಚ್ಚಾಗದಂತೆ ಬಿಗಿ ನಿಯಂತ್ರಣ ಕ್ರಮ ವಹಿಸುವುದು ಅನಿವಾರ್ಯವಾಗಿದೆ.
ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಲು ಸೂಚನೆ ನೀಡಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡ ಕೊರೊನಾ ಕೇಸ್ಗಳು ಮೂರಂಕಿಗೆ ಕಡಿಮೆ ಇಳಿಕೆಯಾಗಿಲ್ಲ. ಇನ್ನೂ ನೂರಕ್ಕಿಂತ ಅಧಿಕ ಕೇಸ್ಗಳು ದಿನನಿತ್ಯ ದಾಖಲಾಗುತ್ತಿದೆ.
ಇದನ್ನು ಓದಿ: ಲಸಿಕೆ ನೀಡಲು ನಿಗದಿಯಾದ ಕಾಲಮಿತಿ ವಿವರ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಇಂದಿನಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ನಾಳೆಯಿಂದಲೇ ಎರಡನೇ ಡೋಸ್ ತೆಗೆದುಕೊಂಡಿದ್ದು, ರಾಜ್ಯಕ್ಕೆ ಆಗಮಿಸುವ 72 ಗಂಟೆ ಮುಂಚಿತವಾಗಿ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಾಜರು ಪಡಿಸಬೇಕಿದೆ. ನೆಗಟಿವ್ ವರದಿ ಇದ್ದವರಿಗೆ ಮಾತ್ರ ಒಳ ಪ್ರವೇಶಕ್ಕೆ ಅನುವು ಮಾಡಿ. ಪ್ರತಿನಿತ್ಯ ಹೆಚ್ಚಿನ ಜನ ಅಲ್ಲಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಗಮನವಿಡಿ. ಸೋಂಕು ಹೆಚ್ಚಾಗಲು ಅವಕಾಶ ಕೊಡಬೇಡಿ. ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.
ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಕುರಿತು ಪ್ರಶ್ನಿಸಿದ ಅವರು, ಇದೇ ವೇಳೆ ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ನಿರ್ದೇಶಿಸಿದ್ದಾರೆ. ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನಗಮನಕ್ಕೆ ತನ್ನಿ. ಹೆಚ್ಚಿನ ನೆರವು ಬೇಕಾದರೂ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇಂದಿನ ಕೋವಿಡ್ ಸೋಂಕಿತರ ವರದಿ ಬಿಡುಗಡೆ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಪ್ರಕಾರ ರಾಜ್ಯದಲ್ಲಿ 1, 987 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 450 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 1. 43ರಷ್ಟಿದೆ. ರಾಜ್ಯದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣ 23,796 ಇದೆ.