ಮೂರು ದಶಕಗಳ ಕರಾವಳಿ ಪತನದ ಕಿರುಚರಿತ್ರೆ

ಕರಾವಳಿ ಕನಾಟಕದಲ್ಲಿ ಅಭಿವೃದ್ದಿಯ ಬದಲಿಗೆ ಧರ್ಮ, ಮತೀಯತೆ, ಭಾವುಕತೆಯ ಆಧಾರದ ರಾಜಕಾರಣ ಕಟ್ಟಿದ ಬಿಜೆಪಿ ಈಗ ಸತತ ಎಂಟು ಚುನಾವಣೆಗಳನ್ನು ಗೆದ್ದು 33 ವರ್ಷಗಳಿಂದ  ತನ್ನದೇ ರಾಜಕೀಯ ಸಾಮ್ರಾಜ್ಯವನ್ನು ಕಟ್ಟಿದೆ.  ಈ 33   ವರ್ಷಗಳ ದೀರ್ಘ ಅವಧಿಯನ್ನು ಹಿಂತಿರುಗಿ ನೋಡಿ ಈ ಅವಧಿಯಲ್ಲಿ ‘ಕರಾವಳಿಯ  ಪತನದ ಚರಿತ್ರೆ’ಯನ್ನು ಕಟ್ಟಿಕೊಟ್ಟಿದ್ದಾರೆ.  ಚಿಂತಕ-ಹೋರಾಟಗಾರ- ಲೇಖಕರಾದ ನವೀನ್ ಸೂರಿಂಜೆ ಮತ್ತು ಮುನೀರ್ ಕಾಟಿಪಳ್ಳ. ಕರಾವಳಿ ಪತನ

ಕರಾವಳಿಯ ಹೆಮ್ಮೆಯ ವಿಮಾನ ನಿಲ್ದಾಣ ಅದಾನಿಗೆ ಮಾರಾಟ, ಮಂಗಳೂರು ಬಂದರಿನ ಖಾಸಗೀಕರಣ, ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಕರಾವಳಿಯವರಿಗೆ ಸೀಟು ಸಿಗದ ಪರಿಸ್ಥಿತಿ, ಜೀಪಲ್ಲಿ ಓಡಾಡ್ತಿದ್ದ ಅಡಿಕೆ, ಕಾಳುಮೆಣಸು ಕೃಷಿಕರ ಆತ್ಮಹತ್ಯೆ, ಮೊಗವೀರರನ್ನು ಬೀದಿಗೆ ತಂದ ಆಮದಾದ ‘ಮೋದಿ ಮೀನು’,  ಕರಾವಳಿಯ ಉದ್ಯಮಶೀಲತೆಯ ಕುರುಹುಗಳಾದ ಹೆಮ್ಮೆಯ ವಿಜಯ ಮತ್ತು ಕಾರ್ಪೊರೇ಼ನ್ ಬ್ಯಾಂಕಗಳ ಮಾಯ, ಖಾಸಗಿ ಆಸ್ಪತ್ರೆ ಮಾಫಿಯಾದ ಬೆಳವಣಿಗೆ, ಈ ಪ್ರದೇಶದ ಹೆಂಚು, ಬೀಡಿ ಉದ್ಯಮಗಳ ಅವನತಿಯೊಂದಿಗೆ ಕಮರಿದ ಜನರ ಬದುಕು,  ಎಂ.ಆರ್.ಪಿ.ಎಲ್  ನಂತಹ ಹೊಸ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗದ ವಂಚನೆ – ಮುಂತಾದ  ಕಳೆದ ಮೂರು ದಶಕಗಳ ಆರ್ಥಿಕ ಅವನತಿಯ ಪ್ರಮುಖ ಆಯಾಮಗಳ ಬಗ್ಗೆ ಕಿರಿದಾದರೂ ಅರ್ಥಪೂರ್ಣ ಚರಿತ್ರೆಯ ಕಥನವಿದೆ ಈ ಕಿರು ಪುಸ್ತಕದಲ್ಲಿ. ಕರಾವಳಿ ಪತನ

ಇದೇ ಅವಧಿಯಲ್ಲಿ ಕೋಮುವಾದ-ಜಾತಿವಾದದ ವಿಷ ಹರಡುತ್ತಿದ್ದು, ಈ ಪ್ರದೇಶದ ದೇಶದ ಕೋಮುವಾದದ ಪ್ರಯೋಗಶಾಲೆಯಾಗಿರುವುದು, ಇದರ ಪರಾಕಾಷ್ಟೆ  ಮತ್ತು ಪ್ರತೀಕವಾದ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶ ನಿರಾಕರಿಸಿದ್ದರ ಕುರಿತ ಕಿರುಚಿತ್ರಣವಿದೆ.

ಆದರೆ ಈ ಹತಾಶೆ ತರಬಹುದಾದ ಚಿತ್ರಣದ ನಂತರ ಇದನ್ನು ಮೆಟ್ಟಿ ನಿಲ್ಲುವ ‘ನಾವು ಕೊಲ್ಲುವವರೂ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು  ಆಳುವವರು’ ಆಗಬೇಕು ಎಂಬ ಸ್ಫೂರ್ತಿದಾಯಕ ಕರೆ ಮತ್ತು ದೃಢ ನಿರ್ಧಾರದೊಂದಿಗೆ ಈ ಕಿರುಪುಸ್ತಕ ಅರ್ಥಪೂರ್ಣವಾಗಿ ಕೊನೆಗೊಳ್ಳುತ್ತದೆ.

ಜನಕೇಂದ್ರಿತ ರಾಜಕಾರಣಕ್ಕೆ ಮತ್ತೊಮ್ಮೆ ಮುನ್ನುಡಿ ಬರೆಯುವುದು ಕರಾವಳಿಗರ ಆಧ್ಯತೆಯಾಗಬೇಕು. ಮುಂದಿನ ತಲೆಮಾರು ಒಳ್ಳೆಯ ಭವಿಷ್ಯವನ್ನು ಕಾಣವಂತಾಗಬೇಕು, ಕಡಲ ತಡಿಯ ಸುಂದರ, \ಸೌಹಾರ್ದದ ಕುಡ್ಲ ಮರು ನಿರ್ಮಾಣ ಆಗಬೇಕು ಅಂದರೆ ಜನ ಪ್ರಜ್ಞಾವಂತಿಕೆ ಪ್ರದರ್ಶಿಸಬೇಕು. ಆ ರೀತಿಯ ಪ್ರಜ್ಞಾವಂತಿಕೆಯನ್ನು ಸದಾ ಕಾಲ ಜಾಗೃತವಾಗಿಡಲು ಈ ಕಿರುಪುಸ್ತಕ ಪ್ರಯತ್ನಿಸಿದೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.

ಒಂದು ದೊಡ್ಡ ರಾಜಕೀಯ ಪಲ್ಲಟಕ್ಕೆ ಇಡೀ ದೇಶದಂತೆ ಕರಾವಳಿ ಕರ್ನಾಟಕ ತೆರೆದುಕೊಳ್ಳುತ್ತಿರುವ  ನಿರ್ಣಾಯಕ ಗಳಿಗೆಯಲ್ಲಿ  ಕಿರುಪುಸ್ತಕ ಓದಲೇಬೇಕಾದ, ದೊಡ್ಡ ಸಂಖ್ಯೆಯಲ್ಲಿ ಪ್ರಸಾರ ಮಾಡಬೇಕಾದ ಪುಸ್ತಕ. ‘ಕರಾವಳಿ ಪತನದ ಚರಿತ್ರೆ ಸ್ಯಾಂಪಲ್ ಆಗಿ ಎರಡು ಆಯ್ದ ಭಾಗಗಳು ಇಲ್ಲಿವೆ.

 ಇದನ್ನು ಓದಿ : ಎನ್.ಐ.ಎ ಹಾಗೂ ಕರ್ನಾಟಕ ಪೊಲೀಸ್ ಕಾರ್ಯ ಶ್ಲಾಘನೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬರದಲ್ಲೂ ಮನೆಮಠ ರಕ್ಷಿಸಿದ

ಹಾಜಿ ಅಬ್ದುಲ್ಲರ ಬ್ಯಾಂಕ್ ಮಾಯ

ಹಾಜಿ ಅಬ್ದುಲ್ಲರು 1906ರಲ್ಲಿ ಉಡುಪಿಯಲ್ಲಿ ಕಾರ್ಪೊರೇಶನ್ ಬ್ಯಾಂಕನ್ನು ಹುಟ್ಟು ಹಾಕಿದರು. ಅದು ಬ್ರಿಟೀಷ್ ಆಳ್ವಿಕೆಯ ಕಾಲ. ತನ್ನಲ್ಲಿದ್ದ 700 ಎಕರೆ ಕೃಷಿ ಭೂಮಿಯನ್ನು ಭೂಮಿಯನ್ನು ಬಹುತೇಕ ಗೇಣಿದಾರ ರೈತರಿಗೆ ನಾವು ಊಹಿಸಲೂ ಸಾಧ್ಯವಾಗದ ಕಾಲದಲ್ಲಿ ಹಾಜಿ ಅಬ್ದುಲ್ಲರು ರೈತರಿಗೆ ಬಿಟ್ಟುಕೊಟ್ಟಿದ್ದರು. ಉಳಿದ ಬಹುತೇಕ ಭೂಮಿಗಳನ್ನು ಶಾಲೆ, ಆಸ್ಪತ್ರೆಗೆ ದಾನವಾಗಿ ನೀಡಿದ್ದರು. ಈಗಲೂ ಉಡುಪಿ ಸರಕಾರಿ ಆಸ್ಪತ್ರೆಯ ಜಾಗ ಹಾಜಿ ಅಬ್ದುಲ್ಲರ ಹೆಸರಿನಲ್ಲಿದೆ. ಮಧ್ವಾಚಾರ್ಯರು ಸ್ಥಾಪಿಸಿ ಹೊರಟ ಉಡುಪಿ ಅಷ್ಟಮಠ ಆಗ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದ ದಿನವದು. ಬರದ ಪರಿಣಾಮವಾಗಿ ಅಷ್ಟಮಠದ ಸ್ವಾಮೀಜಿಗಳಿಗೆ ದೀಪದ ಎಣ್ಣೆಗೂ ತಾತ್ವಾರ ಇತ್ತು. ಆಗ ಅಳಿವಿನಂಚಿನಲ್ಲಿದ್ದ ಅಷ್ಟಮಠಕ್ಕೆ ಎಣ್ಣೆ, ಅಕ್ಕಿ, ಹಣ ನೀಡಿ ಕಾಪಾಡಿದವರು ಇದೇ ಹಾಜಿ ಅಬ್ದುಲ್ಲ. ಆ ನಂತರ ಹಾಜಿ ಅಬ್ದುಲ್ಲರು ಅಷ್ಟಮಠದ ಲಕ್ಷದೀಪೋತ್ಸವಕ್ಕೆ ಖಾಯಂ ಅತಿಥಿಯಾಗಿದ್ದರು. ಹಾಜಿ ಅಬ್ದುಲ್ಲರನ್ನು ರಾಜ ಮಹಾರಾಜರನ್ನು ದೇವಸ್ಥಾನದೊಳಗೆ ಕರೆದೊಯ್ಯುವಾಗ ನೀಡಲಾಗುತ್ತಿದ್ದ ಹಗಲು ದೀವಿಟಿಗೆಯ ಮರ್ಯಾದೆಯನ್ನು ನೀಡಲಾಗುತ್ತಿತ್ತು. ಕೇವಲ ಮಠ ಮಾತ್ರವಲ್ಲ, ಕರಾವಳಿಯ ಜನ ಬರದಲ್ಲಿ ತತ್ತರಿಸುತ್ತಿದ್ದಾಗ ತನ್ನಲ್ಲಿದ್ದ ಅಕ್ಕಿ, ದಿನಸಿ ಸಾಮಾನುಗಳು ಇಡೀ ಕರಾವಳಿಗೆ ದಾನ ಮಾಡಿದ, ಹಾಗೆಯೇ ವಿದೇಶದಿಂದ ಅಕ್ಕಿಯನ್ನು ಆಮದು ಮಾಡಿಸಿಕೊಂಡು ಜನರಿಗೆ ಹಂಚಿದ್ದ ಮಹಾನುಭಾವರು ಇವರು.

ಇಷ್ಟೇ ಕಾರಣಕ್ಕೆ ನಮಗೆ ಈ ಕಾಲದಲ್ಲಿ ಹಾಜಿ ಅಬ್ದುಲ್ಲರು ಮುಖ್ಯರಾಗುವುದಲ್ಲ. ಈಗ ನಡೆಯುವ ಬ್ಯಾಂಕಿಂಗ್ ಬೆಳವಣಿಗೆಗಳ ಜೊತೆ ಹಾಜಿ ಅಬ್ದುಲ್ಲರು ಜಗಳ ಮಾಡುತ್ತಾರೆ. ಅಂದು ತನ್ನಲ್ಲಿದ್ದ ಭೂಮಿಯನ್ನು, ಹಣವನ್ನು ದೇವಸ್ಥಾನ, ಶಾಲೆ, ಆಸ್ಪತ್ರೆ, ಬ್ಯಾಂಕಿಗೆ ದಾನ ಮಾಡಿ ಅಬ್ದುಲ್ಲರು ದಿವಾಳಿಯಾಗುತ್ತಾ ಬರುತ್ತಾರೆ. ಆದರೆ ಅವರು ಕಟ್ಟಿ ಬೆಳೆಸುತ್ತಿದ್ದ ಬ್ಯಾಂಕ್ ದಿನದಿಂದ ದಿನಕ್ಕೆ ಉದ್ದಾರವಾಗುತ್ತಿರುತ್ತದೆ. ಕೊನೆಗೆ ಅಬ್ದುಲ್ಲರು ತನ್ನಲ್ಲಿದ್ದ ಮೂರು ಹಡಗುಗಳನ್ನು ಉಳಿಸಿಕೊಳ್ಳಲು ತಾನೇ ಸ್ಥಾಪಕ ಅಧ್ಯಕ್ಷನಾಗಿದ್ದ ಕಾರ್ಪೊರೇಷನ್ ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ. ಆದರೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನ ಸಿಬ್ಬಂದಿಗಳು ಬ್ಯಾಂಕ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ಲರ ಹಡಗನ್ನು ಜಪ್ತಿ ಮಾಡುತ್ತಾರೆ. 1935 ರಲ್ಲಿ ಅವರೇ ಮಾಲೀಕರು ಆಗಿದ್ದ ಕಾರ್ಪೋರೇಷನ್ ಬ್ಯಾಂಕಿನ ಒಬ್ಬ ಸಿಬ್ಬಂದಿ ಅವರ ಸಾಲ ವಸೂಲಿ ಮಾಡುತ್ತಾನೆ. ಆಗ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತೆಸೆಯುವ ಎಲ್ಲಾ ಅವಕಾಶಗಳು ಇದ್ದರೂ ಅಧಿಕಾರ ದುರುಪಯೋಗ ಮಾಡದೇ ಅವರು ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಾರೆ. ಬದುಕಲು ಸಾಧ್ಯವಾಗದೆ ಅಬ್ದುಲ್ಲರು 1935 ಆಗಸ್ಟ್ 12ರಂದು ಆತ್ಮಹತ್ಯೆ ಮಾಡಿಕೊಂಡರು. ಕಾನೂನು ಕಟ್ಟಳೆಗಳು ಇಲ್ಲದ ದಿನಗಳಲ್ಲೂ ತನ್ನ ಸಾಲಕ್ಕಾಗಿ, ತನ್ ಸಾವು ಬದುಕಿನ ಹೋರಾಟಕ್ಕಾಗಿ ಅವರು ಬ್ಯಾಂಕನ್ನು ಬಲಿಕೊಡುವುದಿಲ್ಲ. ಇಂತಹ ಮಹಾತ್ಮ ಕಟ್ಟಿದ್ದ ಕಾರ್ಫೋರೇಷನ್ ಬ್ಯಾಂಕನ್ನು ಕರಾವಳಿಯಿಂದ ಇಲ್ಲವಾಗಿಸಲಾಗಿದೆ.

ಕರಾವಳಿಯಲ್ಲಿ ಹಾಜಿ ಅಬ್ದುಲ್ಲರಿಂದ ಹುಟ್ಟಿಕೊಂಡ ಸಾರ್ವಜನಿಕ ವಲಯದ ಕಾರ್ಫೋರೇಷನ್ ಬ್ಯಾಂಕ್ ಭಾರತದಲ್ಲೇ ಎರಡನೇ ಅತೀ ದೊಡ್ಡ ಎಟಿಎಂ ಜಾಲವನ್ನು ಹೊಂದಿದ್ದ ಬ್ಯಾಂಕ್ ಎಂಬ ಗರಿಮೆ ಹೊಂದಿತ್ತು. ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ದೇಶದಾದ್ಯಂತ 2200 ಶಾಖೆಗಳನ್ನೂ 1800ಕ್ಕೂ ಹೆಚ್ಚು ಎಟಿಎಂ ಗಳನ್ನು ಹೊಂದಿತ್ತು. ಲಾಭದಲ್ಲಿ ನಡೆಯುತ್ತಿದ್ದ ಕರಾವಳಿಗರ ಹೆಮ್ಮೆಯ, ಸ್ವಾಭಿಮಾನದ ಪ್ರತೀಕವಾಗಿದ್ದ ಕಾರ್ಪೊರೇಶನ್ ಬ್ಯಾಂಕ್ ಅನ್ನು 2020 ಎಪ್ರಿಲ್‌ನಲ್ಲ ನಷ್ಟದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನ ಮಾಡಲಾಯಿತು. ಕರಾವಳಿಗರ ಆತ್ಮಾಭಿಮಾನವನ್ನು ಈ ಮೂಲಕ ಹೊಸಕಿ ಹಾಕಲಾಯಿತು. ಕರಾವಳಿ ಪತನ

 

ಖಾಸಗಿ ಆಸ್ಪತ್ರೆ ಮಾಫಿಯಾ

 ಬಿಜೆಪಿ ಪ್ರಥಮ ಭಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದದ್ದು 1991 ರಲ್ಲಿ. ಆ ನಂತರ ಬಿಜೆಪಿ ಎದುರಾಳಿಗಳೇ ಇಲ್ಲ ಎಂಬAತೆ ದ.ಕ. ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುತ್ತಲೇ ಬಂದಿದೆ. 1991 ರ ವರೆಗೆ ಜಿಲ್ಲೆಯಲ್ಲಿ ಇದ್ದದ್ದು ಕೇವಲ ಒಂದು ಖಾಸಗಿ ಮೆಡಿಕಲ್ ಕಾಲೇಜು ಮಾತ್ರ. ಈಗ ನೋಡಿದರೆ ಎಂಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ ! ಜಿಲ್ಲೆಯ ಆರೋಗ್ಯ ಕ್ಷೇತ್ರ ಪೂರ್ತಿಯಾಗಿ ಈಗ ಖಾಸಗಿ ಮೆಡಿಕಲ್ ಕಾಲೇಜು ಲಾಬಿಗಳ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಿದೆ. ಖಾಸಗಿ ಆರೋಗ್ಯ ಕ್ಷೇತ್ರ ಮಾತ್ರ ಅಲ್ಲ, ಸಾರ್ವಜನಿಕ (ಸರಕಾರಿ) ಆರೋಗ್ಯ ಕ್ಷೇತ್ರವನ್ನು ಖಾಸಾಗಿ ಮೆಡಿಕಲ್ ಕಾಲೇಜು ಲಾಭಿ ತಮ್ಮ ಹಿಡಿತಕ್ಕೆ ತೆಗೆದಕೊಂಡು, ಅವುಗಳ ಕತ್ತು ಹಿಸುಕುತ್ತಿವೆ. ಹೀಗಾಗಿ ಬಡವ ಬದುಕುವುದೇ ಕಷ್ಟವಾಗಿದೆ

ಬ್ರಿಟಿಷ್ ಆಡಳಿತದಲ್ಲಿ ನಿರ್ಮಾಣಗೊಂಡ ವೆನ್‌ಲಾಕ್ ಜಿಲ್ಲಾಸ್ಪತ್ರೆ 90 ರ ದಶಕದ ವರಗೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಸುತ್ತಲ ಐದಾರು ಜಿಲ್ಲೆಗಳ ಜನ ಸಾಮಾನ್ಯರಿಗೆ, ಬಡವರಿಗೆ ಸಂಜೀವಿನಿಯಂತೆ ಆರೋಗ್ಯ ಸೇವೆ ಒದಗಿಸುತ್ತಿತ್ತು. ಜಿಲ್ಲೆಯಲ್ಲಿ ಸ್ಥಾಪನೆಯಾದ ಪ್ರತಿಯೊಂದು ಖಾಸಗಿ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜುಗಳು ವೆನ್‌ಲಾಕ್ ಜಿಲ್ಲಾಸ್ಪತ್ರೆಯನ್ನು ತಮ್ಮ ಕ್ಲಿನಿಕಲ್ ಆಗಿ ಬಳಸಿಯೇ ಬೆಳವಣಿಗೆ ಹೊಂದಿದವು. ಆ ಕಾಲದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು,  ತಾಲೂಕು ಸರಕಾರಿ ಆಸ್ಪತ್ರೆಗಳೂ ಜನಸಾಮಾನ್ಯರ ಬಹುತೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು. ಕರಾವಳಿ ಪತನ

ಆದರೆ, ಈ ಮೂರು ದಶಕದ ಅವಧಿಯಲ್ಲಿ ವೆನ್‌ಲಾಕ್ ಜಿಲ್ಲಾಸ್ಪತ್ರೆಯ ಬಹುತೇಕ ವಿಭಾಗಗಳು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಒಪ್ಪಂದದ ಮೂಲಕ ಹಸ್ತಾಂತರಗೊಂಡವು. ಈಗ ವೆನ್‌ಲಾಕ್ ಭಾಗಶಃ ಖಾಸಗಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಕಲಿಕೆಗಷ್ಟೆ ಸೀಮಿತಗೊಂಡಿದೆ. ಪೋಸ್ಟ್ ಮಾರ್ಟಂ ನಿಂದ ಹಿಡಿದು ಸಾಮಾನ್ಯ ಪರೀಕ್ಷೆಗಳಿಗೂ ಖಾಸಗಿ ಮೆಡಿಕಲ್ ಕಾಲೇಜಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳನ್ನೇ ಅವಲಂಬಿಸಬೇಕಾದ ದುಸ್ಥಿತಿಗೆ ವೆನ್‌ಲಾಕ್ ತಲುಪಿದೆ.

ಜಿಲ್ಲಾಸ್ಪತ್ರೆ ವೆನ್‌ಲಾಕ್ ಮಾತ್ರವಲ್ಲದೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳೂ ಬಹುತೇಕ ಖಾಸಗಿ ಮೆಡಿಕಲ್ ಕಾಲೇಜುಗಳ ವೈದ್ಯ ವಿದ್ಯಾರ್ಥಿಗಳ ಕಲಿಕೆಯ ಕೇಂದ್ರಗಳಾಗಿ ಬಳಕೆಯಾಗುತ್ತಿವೆ. ಆ ನಿಟ್ಟಿನಲ್ಲಿ ಒಪ್ಪಂದಗಳು ಆಗುತ್ತಿವೆ.

ದರಿಂದಾಗಿ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಸೇವೆಯ ಸ್ಥಿತಿ ಶೋಚನೀಯವಾಗಿದೆ. ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸುವ, ಅಲ್ಲಿನ ದುಬಾರಿ ದರಗಳನ್ನು ಪಾವತಿಸಲಾಗದೆ ಪರದಾಡುವ ಅಸಹನೀಯ ಸ್ಥಿತಿ ಎದ್ದು ಕಾಣುತ್ತಿದೆ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಯ ಬೇಡಿಕೆ ಕನಸಾಗಿಯೇ ಉಳಿದಿದೆ. ಇಂದು ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ, ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲಾಗದೆ ಇಡೀ ಕುಟುಂಬವೇ ಬೀದಿಗೆ ಬರುವ ಸ್ಥಿತಿ ಉಂಟಾಗಿದೆ.

33 ವರ್ಷಗಳ ಕಾಲ ನಿರಂತರವಾಗಿ ಗೆದ್ದು ಆಡಳಿತ ನಡೆಸಿದ ಬಿಜೆಪಿ ಜಿಲ್ಲೆಯ ಆರೋಗ್ಯ ಕ್ಷೇತ್ರವನ್ನು ತಂದು ನಿಲ್ಲಿಸಿರುವುದು ಇಲ್ಲಿಗೆ. ಸದಾ ಉನ್ಮಾದದ ವಾತಾವರಣವನ್ನು ನಿರ್ಮಿಸಿ ಅದರ ಮರೆಯಲ್ಲಿ ಜನ ಸಾಮಾನ್ಯರ ಆರೋಗ್ಯದ ಹಕ್ಕು ಕಸಿದು ಕೊಳ್ಳಲಾಯಿತು. ಖಾಸಗಿ ಮೆಡಿಕಲ್ ಕಾಲೇಜು, ವಕಾರ್ಪೊರೇಟ್ ಆಸ್ಪತ್ರೆಗಳ ಏಕಸ್ವಾಮ್ಯ ಸ್ಥಾಪಿಸಲಾಯಿತು.

ಇದನ್ನು ನೋಡಿ : ನಾವು ಬಿಜೆಪಿಗೆ ಓಟು ಹಾಕುವುದಿಲ್ಲ – ಕಟ್ಟಡ ಕಾರ್ಮಿಕರ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *